ಡಾ.ಕೆ ರಾಜು ನಿರ್ಮಾಣದ ‘ಲೌಡ್ ಸ್ಪೀಕರ್’ ಆನ್ ಆಗಿದೆ. ಇದೀಗ ಎಲ್ಲರನ್ನೂ ಆವರಿಸಿಕೊಂಡಿರುವ ಮೊಬೈಲೆಂಬ ಮಾಯೆಯ ಸುತ್ತಾ ಮನುಷ್ಯ ಸಂಬಂಧದ ಬಗೆಗಿನ ಕಥೆ ಹೇಳುವ, ಅದನ್ನು ಬೋರು ಹೊಡೆಸದಂಥಾ ಹಾಸ್ಯ ಶೈಲಿಯೊಂದಿಗೆ ನಿರೂಪಿಸುವ ಈ ಚಿತ್ರ ಪ್ರೇಕ್ಷಕರಲ್ಲೊಂದು ಹೊಸಾ ಬಗೆಯ ಚಿತ್ರ ನೋಡಿದ ಅನುಭೂತಿ ಹುಟ್ಟಿಸುವಲ್ಲಿ ಸಫಲವಾಗಿದೆ.

ಶಿವತೇಜಸ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಹೊಸತನದ ಹೊಳಹಿನೊಂದಿಗೇ ಸದ್ದು ಮಾಡುತ್ತಾ ಬಂದಿತ್ತು. ಸಿಂಪಲ್ ಆದೊಂದು ಕಥೆಯನ್ನಿಟ್ಟುಕೊಂಡು ತಾಂತ್ರಿಕವಾಗಿಯೂ ಗಮನ ಸೆಳೆಯುವಂತೆ ಕಟ್ಟಿ ಕೊಡುತ್ತಲೇ, ಹೆಚ್ಚಾಗಿ ಮನೆಯೊಳಗಿನ ಸನ್ನಿವೇಶಗಳೇ ಇದ್ದರೂ ಎಲ್ಲಿಯೂ ಬೋರಾಗದಂತೆ ಇಡೀ ಚಿತ್ರವನ್ನು ಕಟ್ಟಿಕೊಡುವ ಮೂಲಕ ನಿರ್ದೇಶನವೂ ಗುರಿ ಮುಟ್ಟಿದೆ.

ಈವತ್ತಿಗೆ ವಯಸ್ಸಿಗೆ ಬಂದಿರೋ ಹುಡುಗ ಹುಡುಗೀರಿಂದ ಮೊದಲ್ಗೊಂಡು ವಯಸ್ಸಾದವರ ವರೆಗೂ ಎಲ್ಲರನ್ನೂ ಆವರಿಸಿಕೊಂಡಿರೋ ಮಾಯೆ ಮೊಬೈಲು. ಅದೀಗ ಕೇವಲ ಸಂವಹನ ಮಾಧ್ಯಮವಾಗುಳಿದಿಲ್ಲ. ಅದರೊಳಗೆ ಅವರವ ಸೀಕ್ರೆಟ್ಟುಗಳಿರುತ್ತವೆ. ತೀರಾ ಹತ್ತಿರದ ಬಂಧಗಳಾದ ಗಂಡ ಹೆಂಡಿರ ನಡುವೆಯೂ ಮರೆಮಾಚಲ್ಪಟ್ಟ ಅದೆಷ್ಟೋ ವಿಚಾರಗಳ ಕಟಾಂಜನದಂತಿರೋ ಪುಟ್ಟ ಸಾಧನ ಮೊಬೈಲ್. ಹೀಗಿರೋವಾದ ದಿನವೊಂದರಲ್ಲಿನ ಎಲ್ಲ ಮೊಬೈಲ್ ವ್ಯವಹಾರವನ್ನೂ ಲೌಡ್ ಸ್ಪೀಕರ್ ಆನ್ ಮಾಡಿಯೇ ಮಾಡಬೇಕಾಗಿ ಬರೋದು ನಿಜಕ್ಕೂ ಮೋಸ್ಟ್ ಡೇಂಜರಸ್ ಮ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ!

ಅಂಥಾ ಡೇಂಜರ್ ಮ್ಯಾಟರಿನ ಸುತ್ತಲೇ ಈ ಕಥೆ ಸುತ್ತುತ್ತದೆ. ಮೂರು ಜೋಡಿಗಳು ಮತ್ತು ಓರ್ವ ವ್ಯಕ್ತಿಯ ನಡುವೆ ಇಡೀ ಕಥೆ ಸಾಗುತ್ತದೆ. ಆ ಏಳು ಜನ ಸೇರಿ ಲೌಡ್ ಸ್ಪೀಕರ್ ಎಂಬ ಡೇಂಜರಸ್ ಗೇಮ್ ಆಡುತ್ತಾರೆ. ಇವರಲ್ಲಿ ಯಾರಿಗೇ ಫೋನು ಬಂದರೂ ಲೌಡ್ ಸ್ಪೀಕರ್ ಆನ್ ಮಾಡಿಯೇ ಮಾತಾಡಬೇಕು, ಮೆಸೇಜುಗಳನ್ನೂ ಜಾಹೀರು ಮಾಡಬೇಕು. ಈ ಟಾಸ್ಕು ಇವರೆಲ್ಲರ ಬದುಕುಗಳನ್ನೇ ಬದಲಿಸಿ ಹಾಕುತ್ತೆ. ಆದರೆ ಈ ಗಂಭೀರವಾದ ವಿಚಾರವನ್ನಿಲ್ಲಿ ಹಾಸ್ಯದ ಮೂಲಕವೇ ಹೇಳಲಾಗಿದೆ. ಆದ್ದರಿಂದಲೇ ಪಾತ್ರಗಳೆಲ್ಲವೂ ಭರ್ಜರಿಯಾಗಿಯೇ ನಗಿಸುತ್ತವೆ. ಈ ಪಾತ್ರಗಳಲ್ಲಿ ಕಾರ್ತಿಕ್ ರಾವ್, ಅನುಷಾ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ಅಭಿಷೇಕ್ ಮುಂತಾದವರು ಚೆಂದಗೆ ನಟಿಸಿದ್ದಾರೆ.

ಈ ಮೂಲಕವೇ ಮೊಬೈಲಿನಿಂದಾಗೋ ಅನಾಹುತಗಳನ್ನು ಅರಿವಾಗಿಸುತ್ತಾ ಕೌಟುಂಬಿಕ ಮೌಲ್ಯಗಳತ್ತಲೂ ಬೆಳಕು ಚೆಲ್ಲಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಇಡೀ ಚಿತ್ರವನ್ನು ಎಲ್ಲಿಯೂ ಜಾಳಾಗದಂತೆ ಅಚ್ಚುಕಟ್ಟಾಗಿ ರೂಪಿಸಲಾಗಿದೆ. ಛಾಯಾಗ್ರಾಹಕ ಕಿರಣ್ ಹಂಪಾಪುರ ಎಂಥಾ ಸಬ್ಜೆಕ್ಟಿನ ಸಿನಿಮಾವಾದರೂ ಸರಿ, ಅದಕ್ಕೆ ತಕ್ಕಂತೆ ಕ್ಯಾಮೆರಾವನ್ನು ನಿಭಾಯಿಸಬಲ್ಲರು ಅನ್ನೋದು ‘ಲೌಡ್ ಸ್ಪೀಕರ್’ ಮೂಲಕ ಮನದಟ್ಟಾಗಿದೆ. ಯಾಕೆಂದರೆ, ಇಡೀ ಸಿನಿಮಾ ಕಣ್ಮುಂದೆಯೇ ನಡೆಯುತ್ತಿರುವ ದೃಶ್ಯಗಳಂತೆ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆ ಲೌಡ್ ಸ್ಪೀಕರ್ ಪ್ರೇಕ್ಷಕನ ನಂಬಿಕೆಗೆ ಮೋಸ ಮಾಡದೆ ಹೊಸಾ ಅನುಭವವೊಂದನ್ನು ತುಂಬಿ ಕಳಿಸುತ್ತದೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಲಂಡನ್ ಲಂಬೋದರನಿಗೆ ಫಿದಾ ಆದಳು ಶೃತಿ ಪ್ರಕಾಶ್!

Previous article

ಚಾಲಾಕಿ ಮನಸಿನ ಪಾದರಸ ಸಂಚಾರ!

Next article

You may also like

Comments

Leave a reply

Your email address will not be published. Required fields are marked *