ನಾಯಕನಟ ಆಜೇಯ್‌ ರಾವ್‌, ನಿರ್ಮಾಪಕ ಗುರು ದೇಶಪಾಂಡೆ ನಡುವಿನ ಶರಂಪರ ಜಗಳ, ರಚಿತಾ ರಾಮ್‌ ಹಾಟ್‌ ಲುಕ್ಕು, ಟ್ರೇಲರ್‌ ಸೃಷ್ಟಿಸಿದ್ದ ಸಂಚಲನಗಳೆಲ್ಲಾ ʻಲವ್‌ ಯೂ ರಚ್ಚುʼ ಸಿನಿಮಾದತ್ತ ಕುತೂಹಲದ ನೋಟ ಬೀರಲು ಕಾರಣವಾಗಿದ್ದವು.

ಈಗ ರಚ್ಚು ತೆರೆಗೆ ಬಂದಿದೆ. ಬಹುತೇಕ ಸಿನಿಮಾಗಳಂತೆ ನಾಯಕ, ನಾಯಕಿ ಎಲ್ಲೋ ಸಂಧಿಸಿ, ಪ್ರೇಮಾಂಕುರವಾಗಿ, ಮನೆಯವರ ವಿರೋಧದ ನಡುವೆ ಮದುವೆಯಾಗುವ ಥರದ ಸ್ಟೋರಿ ಇಲ್ಲಿಲ್ಲ. ನೆಚ್ಚಿನ ಹೆಂಡತಿಗೆ ವಜ್ರದೊಡವೆ ಖರೀದಿಸುವ ದೃಶ್ಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಮದುವೆಯಾದ ನಂತರ ಮಡದಿಯ ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಖುಷಿಯಿಂದ ದೂರದೂರಿಂದ ಬೆಂಗಳೂರಿಗೆ ತಲುಪುತ್ತಾನೆ. ವಿಮಾನ ನಿಲ್ದಾಣದಲ್ಲಿ ರಿಸೀವ್‌ ಮಾಡಿಕೊಳ್ಳಬೇಕಿದ್ದ ಡ್ರೈವರ್‌ ನಾಪತ್ತೆ. ಟ್ಯಾಕ್ಸಿ ಹಿಡಿದು ಮನೆ ತಲುಪಿದವನಿಗೆ ಹೆಂಡತಿ ಕಾಣುತ್ತಾಖಳೆ. ಅವಳ ಎದುರು ಅದೇ ಡ್ರೈವರ್‌ ಹೆಣವಾಗಿ ಬಿದ್ದಿರುತ್ತಾನೆ. ಆಕೆ ಡ್ರೈವರನ್ನು ಯಾಕೆ ಕೊಂದಳು? ಇಬ್ಬರೂ ಸೇರಿ ಶವವನ್ನು ಹೇಗೆ ವಿಲೇವಾರಿ ಮಾಡುತ್ತಾರೆ? ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ? ಕೊಲೆ ವಿಚಾರ ಬಯಲಾಗಿ ದಂಪತಿ ಸಿಕ್ಕಿಬೀಳುತ್ತಾರಾ? ಅಸಲಿಗೆ ಕೊಲೆಗೆ ನಿಖರವಾದ ಕಾರಣವಾದರೂ ಏನು?  ನಿಜಕ್ಕೂ ಆಕೆಯೇ ಕೊಲೆ ಮಾಡಿದ್ದಾ? ಅಥವಾ ಇದರ ಹಿಂದೆ ಬೇರೊಬ್ಬರ ನೆರಳಿದೆಯಾ? ಅನ್ನೋದೆಲ್ಲಾ ಕಟ್ಟಕಡೆಯ ದೃಶ್ಯದ ತನಕ ಕಾಡುತ್ತದೆ.

ಸ್ನೇಹದ ಗೆರೆ ದಾಟಿದರೆ ಅದು ಹೇಗೆ ಅನೈತಿಕತೆಗೆ ತಿರುಗುತ್ತದೆ. ಕ್ಷಣ ಮಾತ್ರ ʻಮೈʼ ಮರೆತರೆ ಬದುಕಲ್ಲಿ ಏನೆಲ್ಲಾ ದುರಂತಗಳು ಘಟಿಸಬಹುದು? ಒಳ್ಳೇ ಸಂಬಂಧ ಸಿಕ್ಕಿದ್ದೇ ತಡ ಪೋಷಕರು ಮಕ್ಕಳ ಇಷ್ಟ-ಕಷ್ಟ ಕೇಳದೆ ಮದುವೆ ಮಾಡಿಬಿಡ್ತಾರಲ್ಲಾ? ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚಿಸುವುದೇ ಇಲ್ಲವಾ? ಬೇರೊಬ್ಬನೊಂದಿಗೆ ಮದುವೆಯಾದ ಹಳೇ ಗೆಳತಿಯನ್ನು ಮತ್ತೆ ಬೆನ್ನತ್ತುವುದು ಸರಿಯೇ? ಯಾರದ್ದೋ ತಪ್ಪನ್ನು ಬಂಡವಾಳ ಮಾಡಿಕೊಂಡು ತಮ್ಮ ಬದುಕಿನ ತೂತು ಮುಚ್ಚಿಕೊಳ್ಳೋದು ಬೇಕಾ? ಎಂಬಿತ್ಯಾದಿ ಪ್ರಶ್ನೆಗಳು ನೋಡುಗರ ಮನಸ್ಸಿನಲ್ಲಿ ಕದಲುತ್ತವೆ. ʻನಾನುʼ ಅಂತಾ ಮೆರೆಯುವ, ಅನಾಚಾರವನ್ನೇ ಬದುಕಾಗಿಸಿಕೊಂಡವನು ಕಡೆಗೊಮ್ಮೆ ಮುಖ ಮುಚ್ಚಿಕೊಂಡು ತಿರುಗಬೇಕಾದ ದಿನ ಬಂದೇ ಬರುತ್ತದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು – ಹೀಗೆ ಕರ್ಮ ಸಿದ್ದಾಂತರ ಆಧಾರದ ಮೇಲೆ ಈ ಚಿತ್ರದ ಕತೆಯನ್ನು ಹೆಣೆದಿದ್ದಾರೆ. ʻಅವನ ಕರ್ಮ ಅವನನ್ನ ಕೊಂದಿದೆ. ನೀನು ನೆಪ ಮಾತ್ರʼ ಎನ್ನುವ ಡೈಲಾಗು ಆ ಥಿಯರಿಗೆ ಪುಷ್ಟಿ ನೀಡುತ್ತದೆ.

ʻಐ ಫೋನ್‌ ಸಿಕ್ಕಿದ ಮೇಲೆ ಹಳೇ ಬೇಸಿಕ್‌ ಸೆಟ್‌ ಮರೆತುಬಿಟ್ಯಾ?ʼ ಎನ್ನುವಾಗ ಮಾಜಿ ಪ್ರಿಯಕರನ ಒಳವೇದನೆ, ʻಎಲ್ಲ ತಪ್ಪು ಒಪ್ಪುಗಳನ್ನು ದಾಟೋದು ನಿಜವಾದ ಪ್ರೀತಿʼ, ʻಗಂಡು ತಪ್ಪು ಮಾಡಿದಾಗ ಹೆಣ್ಣು ಕ್ಷಮಿಸೋದಿಲ್ಲವಾ? ನಾವೂ ಒಂದು ಸಲ ಮನ್ನಿಸಿ ದೇವರಾಗೋಣʼ ಎನ್ನುವ ನಾಯಕನ ಉದಾರ ಮನೋಭಾವಗಳೆಲ್ಲಾ ಅನಾವರಣವಾಗಿದೆ.

ಯಾವ ರೋಲನ್ನು ಸ್ವೀಕರಿಸಿದರೆ ಇಮೇಜು ಹೆಚ್ಚುತ್ತದೆ? ಯಾವುರಲ್ಲಿ  ಕಾಣಿಸಿಕೊಂಡರೆ ಇಮೇಜು  ಡ್ಯಾಮೇಜಾಗುತ್ತದೆ ಅಂತಾ ಲೆಕ್ಕ ಹಾಕುವವರ ನಡುವೆ ರಚಿತಾರಾಮ್‌ ಥರದ ಸ್ಟಾರ್‌ ನಟಿ ಇಂಥದ್ದೊಂದು ಪಾತ್ರವನ್ನು ಒಪ್ಪಿ, ಲೀಲಾಜಾಲವಾಗಿ ನಟಿಸಿರೋದೇ ಆಶ್ಚರ್ಯಕರ. ಎಂದಿನಂತೆ ಅಜಯ್‌ ರಾವ್‌ ಇಲ್ಲೂ ಕಡಿಮೆ ನಟಿಸಿ ಸಹಜತೆಗೆ ಒತ್ತು ನೀಡಿದ್ದಾರೆ. ನಿಜಕ್ಕೂ ಗಮನ ಸೆಳೆಯುವುದು ಅರುಗೌಡ ಮತ್ತು ಡ್ರೈವರ್‌ ಪಾತ್ರದಲ್ಲಿ ನಟಿಸಿರುವ ರಾಘು ಶಿವಮೊಗ್ಗ. ಆಕ್ಟ್‌ 1947 ಸಿನಿಮಾದಲ್ಲಿ ಕಚಗುಳಿ ಇಟ್ಟು ನಗಿಸಿದ್ದ ರಾಘು ಇಲ್ಲಿ ಭಯ ಹುಟ್ಟಿಸುತ್ತಾರೆ. ಕಥೆಯನ್ನು ವಿಸ್ತರಿಸುವ ಮತ್ತು ನಾಯಕಿಯ ಪರೋಪಕಾರ ಗುಣವನ್ನು ಎತ್ತಿ ಹಿಡಿಯಲಷ್ಟೇ ಬಿ ಸುರೇಶರ ಪಾತ್ರವನ್ನು ಸೃಷ್ಟಿಸಿದಂತಿದೆ. ರೋಚಕವಾಗಬೇಕಿದ್ದ ಅರವಿಂದ್‌ ರಾವ್‌ ಅವರ ಎಪಿಸೋಡುಗಳು ಯಾಕೋ ಡಲ್‌ ಆಗಿವೆ. ಬಹುಶಃ ನಿರ್ದೇಶನದಲ್ಲಿನ ಗೊಂದಲ ಇವಕ್ಕೆಲ್ಲಾ ಕಾರಣವಾಗಿರಬಹುದು. ಕಥೆಗಾರರಾಗಿ ಶಶಾಂಕ್‌ ಇಷ್ಟವಾಗುತ್ತಾರೆ. ನಿರೂಪಣೆಯಲ್ಲಿ ಇನ್ನೊಂದಿಷ್ಟು ಬದಲಾವಣೆ ಬೇಕಿತ್ತು.

ಇಡೀ ಸಿನಿಮಾದಲ್ಲಿನ ಕೊರತೆಗಳನ್ನೆಲ್ಲಾ ನೀಗಿಸುವಂತೆ ಮಾಡುವುದು ಕದ್ರಿ ಮಣಿಕಾಂತ್‌ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ. ಥ್ರಿಲ್ಲಿಂಗ್‌ ದೃಶ್ಯಗಳಿಗೆ ಮಾಮೂಲಿ ಶೈಲಿಯನ್ನು ಬಳಸದೇ, ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿಸಿದ್ದಾರೆ. ರಚಿತಾ ಅಭಿಮಾನಿಗಳು ಮಾತ್ರವಲ್ಲದೆ, ಕ್ರೈಂ ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವ ಎಲ್ಲರೂ ನೋಡಬಹುದಾದ ಚಿತ್ರ ಲವ್‌ ಯೂ ರಚ್ಚು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೋಟಿ ರಾಮು ಬಿಟ್ಟು ಹೋದ ಆಸ್ತಿ ಇದು!

Previous article

2021 ಏಳು ಬೀಳು: ಕೆಲವು ಸುಮಾರು ಹಲವು ಢಮಾರು!

Next article

You may also like

Comments

Leave a reply

Your email address will not be published.