ಪ್ರೇಮಿಗಳ ದಿನದ ಪ್ರಯುಕ್ತ ಪ್ರೆಸೆಂಟ್ ಪ್ರಪಂಚ – ೦% ಲವ್ ಚಿತ್ರದ ಪೋಸ್ಟರು ರಿಲೀಸಾಗಿದೆ. ತೀರಾ ಬೋಲ್ಡ್ ಎನಿಸುವ ಈ ಪೋಸ್ಟರಿನ ವಿನ್ಯಾಸವೇ ಶ್ರೀಮಂತವಾಗಿದೆ.
ನಿರ್ಮಾಪಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಅದರ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದವರು ಅರ್ಜುನ್ ಮಂಜುನಾಥ್. ನಿರ್ಮಿಸಿದ ಮೊದಲ ಸಿನಿಮಾಗೇ ದೊಡ್ಡ ಮಟ್ಟದ ಪ್ರಚಾರ ಪಡೆದು ಕ್ರಮೇಣ ಹೀರೋ ಆಗಿ ಕೂಡಾ ಲಾಂಚ್ ಆಗುತ್ತಿದ್ದಾರೆ. ಸಂಯುಕ್ತ-೨ ಚಿತ್ರವನ್ನು ನಿರ್ಮಿಸಿದ್ದಲ್ಲದೆ ಅದರಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸಿದ್ದವರು ಅರ್ಜುನ್. ಸಂಯುಕ್ತ-೨ ಚಿತ್ರ ರಿಲೀಸಾದಾಗ ಥಿಯೇಟರುಗಳ ಮುಂದೆ ಸಂಪೂರ್ಣ ಹಿಂಬದಿಯ ಲುಕ್ಕಿನ ಕಟೌಟು ನೋಡಿ ಎಲ್ಲರೂ ಬೆರಗಾಗಿದ್ದರು. ಸಿನಿಮಾಗಾಗಿ ದೇಹವನ್ನು ಹುರಿಕೊಳಿಸಿ ಕಟ್ಟುಮಸ್ತಾದ ಆಕಾರ ಪಡೆದು ವಿಲನ್ ಆಗಿ ಅಬ್ಬರಿಸಿದ್ದರು. ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಎನ್ನುವ ೨೦೧೯ರ ಸೂಪರ್ ಹಿಟ್ ಸಿನಿಮಾವನ್ನು ನಿರ್ಮಿಸಿ, ಅದರಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.
ಇಂಥಾ ಅರ್ಜುನ್ ಈಗ ಪ್ರೆಸೆಂಟ್ ಪ್ರಪಂಚ – ೦% ಲವ್ ಎನ್ನುವ ವಿನೂತನ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ೧೦೦% ತೊಡಗಿಸಿಕೊಳ್ಳುವ ಅರ್ಜುನ್ ಅವರ ಸಿನಿಮಾ ಪ್ರೀತಿ ನಿಜಕ್ಕೂ ದೊಡ್ಡದು. ತಮ್ಮದೇ ಆದ ಉದ್ಯಮಗಳನ್ನು ಹೊಂದಿರುವ ಅರ್ಜುನ್ ಈಗ ಪೂರ್ತಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೆ ಒಂದು ಸಿನಿಮಾವನ್ನಾದರೂ ನಿರ್ಮಿಸಿ ಅದರ ಜೊತೆಗೆ ನಟಿಸುವ ಇರಾದೆ ಹೊಂದಿದ್ದಾರೆ. ತಾವು ನಟಿಸುವ ಸಿನಿಮಾಗಳ ಜೊತೆಗೆ ಸ್ಟಾರ್ ಹೀರೋಗಳ ಸಿನಿಮಾಗಳನ್ನು ಮತ್ತು ಸ್ಪೆಷಲ್ ಎನಿಸಿದಾಗ ಹೊಸ ಬಗೆಯ ಚಿತ್ರಗಳನ್ನು ರೂಪಿಸುವುದು ಅರ್ಜುನ್ ಅವರ ಗುರಿ. ಪ್ರೆಸೆಂಟ್ ಪ್ರಪಂಚ – ೦% ಲವ್ ಚಿತ್ರದಲ್ಲಿ ನಟಿಸುವ ಜವಾಬ್ದಾರಿಯನ್ನು ಮಾತ್ರ ಅರ್ಜುನ್ ವಹಿಸಿಕೊಂಡಿದ್ದು, ಕೃಷ್ಣಮೂರ್ತಿ ಎಲ್ ಮತ್ತು ರವಿಕುಮಾರ್ ಹೆಚ್.ಪಿ. ಎಂಬ ನವ ನಿರ್ಮಾಪಕರು ಹಣ ಹೂಡಿದ್ದಾರೆ.
ಸದ್ಯ ಪ್ರೇಮಿಗಳ ದಿನದ ಪ್ರಯುಕ್ತ ಪ್ರೆಸೆಂಟ್ ಪ್ರಪಂಚ – ೦% ಲವ್ ಚಿತ್ರದ ಪೋಸ್ಟರು ರಿಲೀಸಾಗಿದೆ. ತೀರಾ ಬೋಲ್ಡ್ ಎನಿಸುವ ಈ ಪೋಸ್ಟರಿನ ವಿನ್ಯಾಸವೇ ಶ್ರೀಮಂತವಾಗಿದೆ. ಹಾಗೆ ನೋಡಿದರೆ ಇದೇ ದಿನದಂದು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಿರ್ಮಾಪಕರದ್ದಾಗಿತ್ತು. ಆದರೆ ಚಿತ್ರದ ತಾಂತ್ರಿಕ ಕೆಲಸಗಳು ಇನ್ನೂ ಪ್ರಗತಿಯಲ್ಲಿರುವುದರಿಂದ, ಇರುವ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ನಿರಾಳವಾಗಿ ರಿಲೀಸು ಮಾಡುವ ಪ್ಲಾನು ಮಾಡಿಕೊಂಡಿದ್ದಾರೆ.
ಕೃಷ್ಣಮೂರ್ತಿ ಎಲ್ ಮತ್ತು ರವಿಕುಮಾರ್ ಹೆಚ್.ಪಿ ನಿರ್ಮಿಸಿರುವ ಈ ಸಿನಿಮಾವನ್ನು ಅಭಿರಾಮ್ ರಚಿಸಿ ನಿರ್ದೇಶಿಸಿದ್ದಾರೆ. ಸಂಯುಕ್ತ-೨ ಚಿತ್ರದ ನಿರ್ಮಾಣ ಹಂತದಲ್ಲೇ ಅಭಿರಾಮ್ ಅರ್ಜುನ್ ಮಂಜುನಾಥ್ ಅವರ ಬಳಿ “ನಿಮಗೇ ಅಂತಲೇ ಒಂದು ಕಥೆ ಮಾಡಿದ್ದೀನಿ” ಅಂದಿದ್ದರಂತೆ. ‘ಹೌದಾ’ ಅಂತಾ ಕೇಳಿ ಸುಮ್ಮನಾಗಿದ್ದ ಮಂಜುನಾಥ್ ನಂತರ ಸಾಕಷ್ಟು ಸಲ ಸದ್ಯಕ್ಕೆ ಬೇಡ ಅಂತಲೇ ಮುಂದೆ ಹಾಕಿದ್ದರಂತೆ. ಕಡೆಗೊಂದು ದಿನ ಸಿನಿಮಾದಲ್ಲಿ ನಟಿಸುತ್ತೀನಿ ಆದರೆ ನಾನು ನಿರ್ಮಾಣ ಮಾಡಲು ಆಗೋದಿಲ್ಲ ಅಂದಿದ್ದರಂತೆ. ಅಷ್ಟಕ್ಕೂ ಸುಮ್ಮನಾಗದ ಅಭಿರಾಮ್ ನಿರ್ಮಾಪಕರನ್ನೂ ಕರೆತಂದು ಮಂಜುನಾಥ್ ಅವರ ಮುಂದೆ ನಿಲ್ಲಿಸಿದರಂತೆ. ಅಲ್ಲಿಗೆ ಇದು ನಿಜಕ್ಕೂ ತಮಗಾಗಿಯೇ ರೂಪಿಸಿದ ಕತೆ ಅನ್ನೋದು ಮಂಜುನಾಥ್ ಅವರಿಗೆ ಮನದಟ್ಟಾಗಿತ್ತು. ಆ ಮೂಲಕ ಶುರುವಾದ ಚಿತ್ರ ೦% ಲವ್ ಪ್ರಸೆಂಟ್ ಪ್ರಪಂಚ!
ಬೆಂಗಳೂರು, ಮೈಸೂರಿನಲ್ಲಿಯೇ ಹೆಚ್ಚಾಗಿ ಚಿತ್ರೀಕರಣಗೊಂಡಿರೋ ಈ ಸಿನಿಮಾ ಗಂಡ ಹೆಂಡತಿಯ ನಡುವೆ ನಡೆಯೋ ಕಥೆ ಹೊಂದಿದೆ. ಗಂಡ ಹೆಂಡಿರಿಬ್ಬರೂ ಸಾಫ್ಟ್ ವೇರ್ ವಲಯದಲ್ಲಿ ಕೆಲಸ ಮಾಡುವಾಗ ಆಗೋ ವಿದ್ಯಮಾನಗಳ ಸುತ್ತಾ ರೋಚಕವಾಗಿ ಸಾಗೋ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಮಂಜುನಾಥ್ ಅವರಿಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಲಿದ್ದಾರೆ. ರೋಚಕವಾದ ಫೈಟುಗಳೂ ಇದರಲ್ಲಿರಲಿವೆ. ಮಂಜುನಾಥ್ ಅವರ ಎಂಟ್ರಿ ಫೈಟು ಎಲ್ಲರೂ ಬೆಚ್ಚಿ ಬೀಳುವಂತೆ ಮೂಡಿಬಂದಿದೆಯಂತೆ. ಕುಂಗ್ಫು ಚಂದ್ರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನು ಹಾಡುಗಳ ವಿಚಾರದಲ್ಲಿಯೂ ಕೂಡಾ ಈ ಚಿತ್ರ ಅಲೆಯೆಬ್ಬಿಸೋದು ಗ್ಯಾರೆಂಟಿ. ಯಾಕೆಂದರೆ, ಶ್ರೇಯಾ ಘೋಷಾಲ್, ಸೋನುನಿಗಮ್, ಶಂಕರ್ ಮಹದೇವನ್ ಅವರಂಥಾ ಮೇರು ಗಾಯಕರಿಂದ ಇದರ ಹಾಡನ್ನು ಹಾಡಿಸಲಾಗಿದೆ.