ಅವರು ಮೂವರು. ತೀರಾ ಸಣ್ಣ ವಯಸ್ಸಿನಿಂದಲೂ ಒಟ್ಟಿಗೇ ಆಡಿ ಬೆಳೆದವರು. ಜೊತೆಯಲ್ಲೇ ಓದಿದವರು ಕೂಡಾ. ಇಬ್ಬರು ಹುಡುಗರ ನಡುವೆ ಅವಳೊಬ್ಬಳು ಹುಡುಗಿ. ಅಲ್ಲೀತನಕ ಬದುಕಿನಲ್ಲಿ ಒಬ್ಬರನ್ನೊಬ್ಬರು ಬಿಡದಂತೆ ಅಂಟಿಕೊಂಡೇ ತಿರುಗಿರುತ್ತಾರೆ. ಒಬ್ಬನಿಗೆ ಮನೆಯಲ್ಲಿ ಹುಡುಗಿ ನೋಡಿ ಮದುವೆ ಮಾಡುತ್ತಾರೆ. ತಾಯಿ ಇಲ್ಲದೆ ಬೆಳೆದ ಇವಳಿಗೂ ಮದುವೆ ಮಾಡಲು ಅಪ್ಪ ನಿರ್ಧರಿಸಿರುತ್ತಾರೆ. ಗೊತ್ತೂ ಗುರಿ ಇಲ್ಲದ, ಸ್ನೇಹ ಸಲುಗೆ ಇಲ್ಲದ, ಅಸಲಿಗೆ ಪರಿಚಯವೇ ಇಲ್ಲದ, ಎಲ್ಲಿಂದಲೋ ಬಂದವನ ಜೊತೆ ಬದುಕು ಆರಂಭಿಸೋದು ಅವಳಿಗೆ ಬಿಲ್ ಕುಲ್ ಇಷ್ಟವಿಲ್ಲ. ತನ್ನ ಇಷ್ಟ-ಕಷ್ಟಗಳನ್ನು ಬಲ್ಲ, ಜೀವಕ್ಕಂಟಿದ ಸ್ನೇಹಿತನನ್ನೇ ಮದುವೆಯಾಗಬಹುದಲ್ಲಾ ಅನ್ನೋದು ಅವಳ ಬಯಕೆ. ಆದರೆ, ಅವನಿಗೆ ಇವಳ ಮೇಲೆ ಅಂಥಾ ಫೀಲೇ ಇಲ್ಲ. ಅವನ ಪಾಲಿಗೆ ಅವಳು ಬೆಸ್ಟ್ ಫ್ರೆಂಡ್ ಅಷ್ಟೇ.
ಅವಳೇ ಪ್ರಪೋಸ್ ಮಾಡಿದ ಮೇಲೆ, ಮನೆಯವರ ಸಮ್ಮತಿಯ ಮೇರೆಗೆ ಮದುವೆಯಾಗಿಬಿಡುತ್ತಾನೆ. ಮದುವೆಗೆ ಮುಂಚೆ ಇದ್ದ ಅನ್ಯೋನ್ಯತೆ, ಪ್ರೀತಿ, ವಿಶ್ವಾಸಗಳೆಲ್ಲಾ ಒಂದೇ ಏಟಿಗೆ ಉಲ್ಟಾ ಹೊಡೆಯುತ್ತದೆ. ಗಂಡ-ಹೆಂಡತಿ ನಾಯಿ ನರಿಗಳಂತೆ ಕಿತ್ತಾಟ ಆರಂಭಿಸುತ್ತಾರೆ. ಇವರ ಶರಂಪರ ಜಗಳ ಕೋರ್ಟು ಮೆಟ್ಟಿಲೇರುತ್ತದೆ….
ಕತೆ ಇಷ್ಟೇನಾ? ಇವರಿಬ್ಬರ ಲೈಫು ಮುಗೀತಾ? ನೋ ಛಾನ್ಸ್…. ಆಗ ಎಂಟ್ರಿ ಕೊಡುತ್ತಾರೆ ನೋಡಿ ಸಾಕ್ಷಾತ್ ದೇವ್ರು. ಅಲ್ಲೀತನಕ ನಡೆದ ಘಟನೆಗಳನ್ನೆಲ್ಲಾ ಅಳಿಸಿ ಮತ್ತೆ ಹಿಂದಕ್ಕೆ ಕರೆದುಕೊಂಡು ಹೋಗಿಬಿಡುತ್ತಾರೆ. ಹುಡುಗ ತನ್ನ ಬದುಕಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕೋ ಅಷ್ಟಕ್ಕೂ ಅವಕಾಶ ಕೊಡುತ್ತಾರೆ. ಇದಾದ ನಂತರವೂ ತನ್ನ ಬಹುಕಾಲದ ಗೆಳತಿಯನ್ನು ಆತ ಮದುವೆಯಾಗುತ್ತಾನಾ? ಇಲ್ಲವಾ ಅನ್ನೋದು ಕುತೂಹಲ ಉಳಿಸುವ ವಿಚಾರ.
ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಸಖತ್ ಕ್ಯೂಟಾಗಿ ಪರ್ಫಾರ್ಮ್ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ತೆರೆಮೇಲೆ ನೋಡುವಾಗ ಯಾರಿಗಾದರೂ ಮನಸ್ಸು ಭಾರವಾಗುತ್ತದೆ. ಅದೂ ಬದುಕಿನಲ್ಲಿ ಎರಡನೇ ಛಾನ್ಸು ಕೊಡುವ ದೇವರಾಗಿ, ನಾಯಕನನ್ನು ಬದುಕಿಸಲು ನರಕದಲ್ಲಿ ಗುದ್ದಾಡುವ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿರುವುದು ಎಲ್ಲರನ್ನೂ ಭಾವುಕತೆಗೆ ದೂಡುತ್ತದೆ. ಇಂಥಾ ವ್ಯಕ್ತಿ ನಮ್ಮ ಜೊತೆಗಿಲ್ಲವಾ? ಅಂತಾ ಅನುಮಾನ ಮೂಡುತ್ತದೆ. ಕಡೆಯಲ್ಲಿ ಪ್ರಭುದೇವಾ ಜೊತೆಗೆ ಸರಿಸಮವಾಗಿ ಕುಣಿಯುವ ಅಪ್ಪುವನ್ನು ನೋಡೋದೇ ಚೆಂದ…
ತಮಿಳಿನ ಓ ಮೈ ಕಡವುಳೇ ಚಿತ್ರದ ರಿಮೇಕ್ ಇದಾದರೂ, ಇಲ್ಲಿನ ವಾತಾವರಣಕ್ಕೂ ಅನ್ವಯವಾಗುವ ಕಥೆ ಲಕ್ಕಿಮ್ಯಾನ್ ಚಿತ್ರದ್ದು. ಪ್ರತಿಯೊಬ್ಬರೂ ನೋಡಬಹುದಾದ, ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ರೂಪಿಸಿದ ಚಿತ್ರ ಇದಾಗಿದೆ…
No Comment! Be the first one.