ಸ್ಯಾಂಡಲ್ ವುಡ್ ಗೆ ಮತ್ತೊಂದು ಹೊಸಾ ತಂಡದ ಆಗಮನವಾಗಿದೆ. `ಮಾರಿಗೆ ದಾರಿ’ ಶೀರ್ಷಿಕೆಯ ಈ ಸಿನಿಮಾವೀಗ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು, ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸತೇನನ್ನೋ ಹೇಳ ಹೊರಟಿರುವಂತೆ ಭಾಸವಾಗುವ ಈ ಟೀಸರ್ನಲ್ಲಿ ಕಥೆಯ ಸುಳಿವನ್ನು ಬಿಟ್ಟು ಕೊಡದೆ, ಹೀರೋ ಕ್ಯಾರೆಕ್ಟರಿನ ಒಂದಷ್ಟು ಚಹರೆಗಳನ್ನು ಪ್ರೇಕ್ಷಕರ ಮುಂದಿಡಲಾಗಿದೆ. ಸದರಿ ಫಸ್ಟ್ ಲುಕ್ ಟೀಸರ್ ಮೂಲಕ ಮಾರಿಗೆ ದಾರಿ ಪಕ್ಕಾ ಮಾಸ್ ಕಂಟೆಂಟ್ ಹೊಂದಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಚಿತ್ರವನ್ನು ಅಗಸ್ತ್ಯ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಅವರ ಒಂದಷ್ಟು ಲುಕ್ಕುಗಳ ಝಲಕ್ಕುಗಳು ಫಸ್ಟ್ ಲುಕ್ ಟೀಸರ್ ಮೂಲಕ ಜಾಹೀರಾಗಿವೆ. ನೆಲಮೂಲದ ಕಥೆ, ಮಾಸ್ ದೃಷ್ಯಾವಳಿಗಳ ಸುಳಿವಿನೊಂದಿಗೆ ಮೂಡಿ ಬಂದಿರೋ ಈ ಫಸಟ್ ಲುಕ್ ಟೀಸರ್ ಒಂದಷ್ಟು ಆಲೋಚೆನೆಗೆ ಹಚ್ಚುವಂತಿದೆ. ಈ ಮೂಲಕ ಹೊಸಬರೇ ಸೇರಿಕೊಂಡು ರೂಪಿಸಿರುವ ಮಾರಿಗೆ ದಾರಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಅನ್ನಿಸುವಂಥಾ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕುದಾದ ಒಂದಷ್ಟು ಅಂಶಗಳು ಈ ಟೀಸರಿನಲ್ಲಿ ಕಾಣಿಸಿವೆ. ಇನ್ನುಳಿದಂತೆ, ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ಕಳೆಗಟ್ಟಿಕೊಂಡಿದೆ. ಜಗದೀಶ್ ಗೌಡ ಛಾಯಾಗ್ರಹಣ, ಸ್ವಾಮಿನಾಥನ್ ಆರ್.ಕೆ ಸಂಗೀತ ನಿರ್ದೇಶನ, ಜಗದೀಶ್ ಗೌಡ ಸಂಕಲನ ಈ ಚಿತ್ರಕ್ಕಿದೆ.
No Comment! Be the first one.