ಯೋಗರಾಜಭಟ್ಟರ ಸಹಾಯಕ ವೃಂದದ ಪ್ರಮುಖ ಸದಸ್ಯನಾಗಿದ್ದು, ನಂತರ ಅಯೋಗ್ಯ ಅನ್ನೋ ಸಿನಿಮಾವನ್ನು ನಿರ್ದೇಶಿಸಿ, ಅದು ಗೆಲುವು ಕಂಡು, ಆ ಮೂಲಕ ಹೆಸರು ಮಾಡಿದ ಹುಡುಗ ಮಹೇಶ್. ತಳಮಟ್ಟದಿಂದ ಮೇಲೆದ್ದುಬಂದ ಹುಡುಗರನ್ನು ಹೊಸಕಿ ಹಾಕಲು ಸಾಕಷ್ಟು ಜನ ಕಾದು ಕುಂತಿರುತ್ತಾರೆ. ಅಯೋಗ್ಯ ಚಿತ್ರದ ಕಾರಣಕ್ಕೆ ಮಹೇಶ್ ಏಕಾಏಕಿ ವರ್ಚಸ್ಸು ಪಡೆದಿದ್ದೇನೋ ನಿಜ. ಅದಾಗುತ್ತಿದ್ದಂತೇ ಶ್ರೀಮುರಳಿಗೆ ಕತೆ ಒಪ್ಪಿಸಿ, ಮದಗಜ ಟೈಟಲ್ ಅನೌನ್ಸ್ ಮಾಡಿದ್ದೂ ಆಗಿದೆ. ಆದರೆ ಮದಗಜ ಇನ್ನೂ ಶುರುವಾಗುವ ಮುಂಚೆಯೇ ಅದರ ಬಗ್ಗೆ ದಿನಕ್ಕೊಂದು ಗಾಳಿಸುದ್ದಿ ಹಬ್ಬುತ್ತಿದೆ. ಮದಗಜ ಸಿನಿಮಾಗೆ ಮಹೇಶ್ ಬರೆದ ಕಥೆಯನ್ನು ಮುರಳಿ ಒಪ್ಪಿಲ್ಲವಂತೆ, ಅದಕ್ಕೇ ಪ್ರಶಾಂತ್ ನೀಲ್ ಕುಂತು ಬೇರೆ ಕತೆ ರಚನೆಯಲ್ಲಿ ತೊಡಗಿದ್ದಾರಂತೆ… ಅನ್ನೋದರಿಂದ ಹಿಡಿದು ‘ಮದಗಜ ಶುರುವಾಗೋದೇ ಟೌಟು’, ‘ಮದಗಜ ನಿಂತೇ ಹೋಯ್ತಂತೆ…’ ಅನ್ನುವ ತನಕ ಗಂಟೆಗೊಂದು, ಘಳಿಗೆಗೊಂದು ಬ್ರೇಕಿಂಗ್ ನ್ಯೂಸು ಮೀಡಿಯಾದವರ ಕಿವಿಗೆ ಅಪ್ಪಳಿಸುತ್ತಲೇ ಇವೆ!

ಮಹೇಶನ ಹಣೇಬರಹವೋ ಏನೋ? ಅಯೋಗ್ಯ ಸಿನಿಮಾಗೆ ಕೂಡಾ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಸುರೇಶ್ ಅನ್ನೋ ನಿರ್ಮಾಪಕರು ಆರಂಭದಲ್ಲಿ ಮುಹೂರ್ತ ಮಾಡಿ ನಿಲ್ಲಿಸಿಬಿಟ್ಟರಲ್ಲಾ? ಆಗಲೂ ‘ಅಯೋಗ್ಯನ ಕತೆ ಫಿನಿಷ್…’ ಅಂತಾ ಜನ ತೀರ್ಮಾನಿಸಿಬಿಟ್ಟಿದ್ದರು. ಮೇಲ್ನೋಟಕ್ಕೆ ಪರಿಸ್ಥಿತಿ ಕೂಡಾ ಹಾಗೇ ಆಗಿತ್ತು. ಆದರೆ, ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ಎನ್ನುವ ಮಹಾನುಭಾವರೊಬ್ಬರು ಮಹೇಶ್ ಕೈ ಹಿಡಿದು ಸಿನಿಮಾ ಮುಂದುವರೆಸಿದರು. ಬಹದ್ದೂರ್ ಚೇತನ್ ಬರೆದ ‘ಏನಮ್ಮಿ ಏನಮ್ಮಿ’ ಅನ್ನೋ ಭರ್ಜರಿ ಹಾಡು, ಅರ್ಜುನ್ ಜನ್ಯಾ ಮ್ಯೂಸಿಕ್ಕು ಎರಡೂ ಸೇರಿ ಮ್ಯಾಜಿಕ್ಕು ಮಾಡಿತ್ತು. ಇದರ ಜೊತೆಗೆ ಅಭಿನಯ ಚತುರ ಸತೀಶ್ ಅವರ ಅದ್ಭುತವಾದ ನಟನೆ, ಗುಳಿಕೆನ್ನೆ ಚೆಲುವೆಯ ಬಿನ್ನಾಣಗಳೆಲ್ಲಾ ಸೇರಿ ‘ಅಯೋಗ್ಯ’ ಸೂಪರ್ ಹಿಟ್ ಸಿನಿಮಾ ಅನ್ನಿಸಿಕೊಂಡಿತು.

ಈಗ ಮದಗಜನ ಸುತ್ತ ಗಾಸಿಪ್ಪುಗಳ ಹುತ್ತ ಬೆಳೆದುಕೊಂಡಿದೆ. ಸ್ವತಃ ಮಹೇಶ್ ಹೇಳುವ ಪ್ರಕಾರ ಕಥೆ, ಚಿತ್ರಕತೆ ಎಲ್ಲವನ್ನೂ ತಾವೇ ಬರೆದಿದು, ಪ್ರಶಾಂತ್ ನೀಲ್ ಅವರು ಬೆನ್ನೆಲುಬಾಗಿ ನಿಂತು ಚಿತ್ರಕತೆ ಬಿಗಿಯಾಗಲು ಬೇಕಿರುವ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದಾರಂತೆ. ಈ ಅಸಲಿ ವಿಚಾರಕ್ಕೆ ಸುಳ್ಳುಸುಳ್ಳೇ ರೆಕ್ಕೆ ಪುಕ್ಕ ಸೇರಿಸಿ ಮದಗಜನನ್ನು ಮಲಗಿಸುವ ಕುತುಂತ್ರದ ಕೆಲಸವನ್ನು ಕೆಲವರು ಭಾಳಾ ನಿಯತ್ತಾಗಿ ಮಾಡುತ್ತಿದ್ದಾರೆ.

ಮಹೇಶ್ ಅಗತ್ಯಕ್ಕಿಂತಾ ವಸಿ ಹೆಚ್ಚು ಪಬ್ಲಿಸಿಟಿ ಬಯಸುತ್ತಾರೆ ಅನ್ನೋದೇನೋ ನಿಜ. ಆದರೆ ಸಿನಿಮಾರಂಗ ಎದುರಿಸುತ್ತಿರುವ ಕಡುಗಷ್ಟದ ದಿನಗಳಲ್ಲಿ ಅಂತಾ ಪ್ರಚಾರದ ಅಗತ್ಯ ಕೂಡಾ ಇದೆ. ಉಪೇಂದ್ರ, ಪ್ರೇಮ್, ಚಂದ್ರು – ಇವರೆಲ್ಲಾ ಆರಂಭದ ದಿನಗಳಲ್ಲಿ ತಾವೇ ಸುದ್ದಿ ಸೃಷ್ಟಿಸಿ ತಾನೆ ಹೆಸರು ಮಾಡಿದ್ದು, ಮಾರ್ಕೆಟ್ಟು ಕ್ರಿಯೇಟ್ ಮಾಡಿಕೊಂಡಿದ್ದು? ಈಗ ಮಹೇಶ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಅದರಲ್ಲಿ ತಪ್ಪೇನಿದೆ? ಪಾಪ… ಈಗಷ್ಟೇ ಒಂದು ಸಿನಿಮಾವನ್ನು ಗೆಲ್ಲಿಸಿ, ಮತ್ತೊಂದು ಕನಸು ಕಾಣುತ್ತಿರುವ ಹುಡುಗನ ಮೇಲೆ ಮಂದಿಗ್ಯಾಕಿಷ್ಟು ಅಸೂಯೆ ಅಂತಾನೇ ಗೊತ್ತಾಯ್ತಾಇಲ್ಲ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮನೋಜ್ ಮುಂದಿನ ಹಾದಿ ಏನು?

Previous article

ಕಾರು-ಚಿನ್ನ ಯಾರ ಪಾಲಾಗಲಿದೆಯೋ?

Next article

You may also like

Comments

Leave a reply