ಎರಡು ವರ್ಷಗಳ ನಂತರ ಶ್ರೀಮುರಳಿ ನಟನೆಯ ಸಿನಿಮಾ ತೆರೆಗೆ ಬರುತ್ತಿದೆ. ದರ್ಶನ್ ಅವರ ವಿಚಾರದಲ್ಲಿ ಎದ್ದ ವಿವಾದದಿಂದಲೇ ಫೇಮಸ್ಸಾಗಿರುವ ರಾಬರ್ಟ್ ನಿರ್ಮಾಪಕ ಉಮಾಪತಿ ನಿರ್ಮಾಣ, ರವಿ ಬಸ್ರೂರ್ ಮ್ಯೂಸಿಕ್ಕು, ಅಯೋಗ್ಯ ಎನ್ನುವ ಏಕ ಮಾತ್ರ ಸಿನಿಮಾದಿಂದ ಹೆಸರು ಮಾಡಿರುವ ಎಸ್. ಮಹೇಶ್ ಕುಮಾರ್ ನಿರ್ದೇಶನ ಈ ಚಿತ್ರಕ್ಕಿರುವುದರಿಂದ ʻಮದಗಜ ಏನಾಗಬಹುದು?ʼ ಎನ್ನುವ ಸಹಜ ಕುತೂಹಲ ಎಲ್ಲರಲ್ಲಿತ್ತು. ಎಲ್ಲ ಕೌತುಕಗಳ ನಡುವೆ ಮದಗಜ ಬೆಳ್ಳಿಪರದೆಗೆ ಅಪ್ಪಳಿಸಿದೆ.
ಎರಡು ಊರು, ಮಧ್ಯೆ ಹರಿಯುವ ನಾಲೆ. ಅದರಲ್ಲಿ ಹರಿಯುವ ನೀರಿನ ಹಂಚಿಕೆಗಾಗಿ ಊರೂರುಗಳ ನಡುವೆ ಮಾರಾಮಾರಿ. ಆಗಷ್ಟೇ ಹುಟ್ಟಿದ ಮಗುವನ್ನೂ ಕೊಲ್ಲಲು ಬರುವಷ್ಟು ಕ್ರೂರತನ. ಹೆತ್ತ ಮಗುವನ್ನು ಉಳಿಸಿಕೊಳ್ಳಲು ತಾಯಿಯ ಹೆಣಗಾಟ. ಕರುಳಿನ ಕುಡಿ ತನ್ನ ಎದೆಹಾಲನ್ನು ಕುಡಿಯದಿದ್ದರೂ ಪರವಾಗಿಲ್ಲ, ಅದರ ಕೈಗೆ ರಕ್ತ ಅಂಟಬಾರದೆನ್ನುವ ನಿಲುವು. ಮಗು ಬೇರೊಬ್ಬರಿಗೆ ಹಸ್ತಾಂತರವಾಗುತ್ತದೆ. ಯಾವುದೋ ಮೂಲೆಗೆ ಪಯಣ ಬೆಳೆಸುತ್ತದೆ. ಎಲ್ಲೋ ಹುಟ್ಟಿದವನು ಇನ್ನೆಲ್ಲೋ ಬಾಳುವಂತಾ ಸ್ಥಿತಿ ಇರ್ಮಾಣವಾಗುತ್ತದೆ.
ವಾರಣಾಸಿಯ ಸ್ಮಶಾನದಲ್ಲಿ ಬೇಯುವ ಹೆಣಗಳ ನಡುವೆ ಮೈತುಂಬ ಬೆಂಕಿ ತುಂಬಿಕೊಂಡು ಬೆಳೆದವನು. ಹೆತ್ತವರು ಯಾರು ಅನ್ನೋದೂ ಗೊತ್ತಿರೋದಿಲ್ಲ. ಇವನೇ ನನ್ನ ಮಗ ಅಂತಾ ಕಂಡುಹಿಡಿಯಲು ತಾಯಿಗೆ ಹೆಚ್ಚು ಸಮಯ ಬೇಕಾಗೋದಿಲ್ಲ. ಜಮೀನಿನ ವ್ಯಾಜ್ಯ ಬಗೆಹರಿಸಲು ಬಂದವನನ್ನು ಸಂದರ್ಭ ಸನ್ನಿವೇಶಗಳು ಜೀವ ಕೊಟ್ಟವರೊಂದಿಗೆ ಬಂಧ ಬೆಸೆದುಕೊಳ್ಳುವಂತೆ ಮಾಡುತ್ತದೆ. ನೀರಿಗಾಗಿ ರಕ್ತ ಹರಿಸುವವರ ಕ್ರೌರ್ಯ ಮಿತಿ ಮೀರುತ್ತದೆ. ಒಲವಿನ ಹುಡುಗಿ ಗಿಡುಗನ ಪಾಲಾಗುವ ಆತಂಕ ಸೃಷ್ಟಿಯಾಗುತ್ತದೆ…
ಇದು ಮದಗಜ ಚಿತ್ರದ ಮುಖ್ಯ ಎಳೆ. ಚಿತ್ರದ ನಿರೂಪಣೆ ಸಲೀಸಾಗಿದ್ದರೂ, ಯಥೇಚ್ಚವಾದ ಕ್ರೌರ್ಯ, ರಕ್ತದ ಹರಿವುಗಳು ನೋಡುವ ಕಣ್ಣು, ಮನಸುಗಳಿಗೆ ಆಯಾಸ ಮಾಡಿಸುತ್ತದೆ. ತೀರಾ ಸಣ್ಣ ಎಳೆಗೆ ವಿಪರೀತ ಬಿಲ್ಡಪ್ಪು ನೀಡಲಾಗಿದೆ. ಪ್ರತಿಯೊಂದು ಮಾತಿಗೂ ಪಂಚ್ ನೀಡಲು ಹೋಗಿ, ಕಥೆ ಪಂಚರ್ ಆದಂತಿದೆ. ಏನೋ ಹೇಳಬೇಕು ಅಂತಾ ಹೊರಟು ಏನೇನೂ ಹೇಳಲಾಗದ ಪರಿಸ್ಥಿತಿಯಲ್ಲಿ ಚಿತ್ರ ಅಂತ್ಯಗೊಳ್ಳುತ್ತದೆ. ಯಾರೊಟ್ಟಿಗೂ ಹೊಡೆದಾಟ ಮಾಡಬೇಡ ಅಂತಾ ಆಣೆ ಮಾಡಿಸಿಕೊಂಡು ಮಗನ ಕೈಗೆ ಕಂಕಣ ಕಟ್ಟುವ ಕಾನ್ಸೆಪ್ಟು ಪುರಾತನವಾದದ್ದು. ಇದನ್ನು ಹೊಸದೆನ್ನುವಂತೆ ಹೇಳಹೊರಟ ನಿರ್ದೇಶಕ ಮಹೇಶ್ ಸವಕಲು ಕ್ರಿಯೇಟಿವಿಟಿಯನ್ನು ಕಂಡು ನಗಬೇಕಷ್ಟೇ!
ರವಿ ಬಸ್ರೂರು ಹಿನ್ನೆಲೆ ಸಂಗೀತ ಮತ್ತು ನವೀನ್ ಕುಮಾರ್ ಕ್ಯಾಮೆರಾ ಕೆಲಸಗಳಷ್ಟೇ ಸಿನಿಮಾವನ್ನು ಸಹಿಸಿಕೊಳ್ಳುವಂತೆ ಮಾಡಿದೆ. ಉಗ್ರಂ ಮತ್ತು ಮಫ್ತಿ ಚಿತ್ರದಲ್ಲಿನ ಗಾಂಭೀರ್ಯತೆಯನ್ನೇ ಶ್ರೀಮುರಳಿ ಇಲ್ಲೂ ಮುಂದುವರೆಸಿದ್ದಾರೆ. ಮಾಜಿ ನಾಯಕನಟಿ ದೇವಯಾನಿ ಇಲ್ಲಿ ಮದಗಜನ ಮದರ್ ರೋಲ್ ಪ್ಲೇ ಮಾಡಿದ್ದಾರೆ. ಜಗಪತಿ ಬಾಬು ಅವರನ್ನು ಕಾಸ್ಟೂಮ್ ಸಮೇತ ತೆಲುಗು ಸಿನಿಮಾ ಸೆಟ್ ನಿಂದ ನೇರವಾಗಿ ಇಲ್ಲಿಗೆ ಕರೆತಂದಂತಿದೆ. ನಟ ಅನಿಲ್ ಮತ್ತು ಗರುಡ ರಾಮ್ ಅಪ್ಪ-ಮಗ ಅಂತಾ ಯಾವ ಕೋನದಿಂದಲೂ ಒಪ್ಪಲು ಸಾಧ್ಯವಿಲ್ಲ. ಆಶಿಕಾ ರಂಗನಾಥ್ ನಿಜಕ್ಕೂ ಚೆಂದದ ನಟನೆ ಮಾಡಿದ್ದಾಳೆ. ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಪಾತ್ರಗಳು ನಗಿಸಿ ಮರೆಯಾಗುತ್ತವೆ. ಪಂದ್ಯ ಗೆಲ್ಲೋನು ಪಾಯಿಂಟ್ ಗಾಗಿ ಹೊಡೀತಾನೆ, ಪಟ್ಟ ಗೆಲ್ಲಬೇಕು ಅನ್ನೋನು ಪಾಯಿಂಟಲ್ಲೇ ಹೊಡೀತಾನೆ ಎನ್ನುವಂತಾ ಕೆಲವಾರು ಮಾತುಗಳು ಖುಷಿ ಕೊಡುತ್ತವೆ.
ತಾಯಿ-ಮಗನ ಸೆಂಟಿಮೆಂಟು, ಹುಡುಗಿಯ ಪ್ರೀತಿ, ʻನೀನು ಸಿಗಲಿಲ್ಲ ಅಂತಾ ಸೂಸೈಡ್ ಮಾಡಿಕೊಂಡು ಸಾಯೋದಿಲ್ಲ. ಬೇರೊಬ್ಬನ ಜೊತೆ ಮಂಚ ಮುರಿಯುವಂತೆ ಸಂಸಾರ ನಡೆಸಿ, ಹತ್ತು ಮಕ್ಕಳನ್ನು ಹೆರುತ್ತೀನಿʼ ಎನ್ನುವ ನೇರವಂತಿಕೆಗಳೆಲ್ಲಾ ಇಷ್ಟವಾಗುವ ಅಂಶಗಳು. ಇದನ್ನು ಹೊರತುಪಡಿಸಿ ಮದಗಜ ಅಂತಾ ಮಜಾ ಕೊಡುವುದಿಲ್ಲ.
Comments