ಕ್ರೇಜಿಬಾಯ್ ಅನ್ನೋ ಹೊಸಬರ ಸಿನಿಮಾದಿಂದ ಆರಂಭಿಸಿ, ನಂತರ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ-2, ಗರುಡ, ತಾಯಿಗೆ ತಕ್ಕ ಮಗ ಹೀಗೆ ಸ್ಟಾರ್ ನಟರು ಮತ್ತು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಲೇ, ನಂತರ ಪೂರ್ಣ ಪ್ರಮಾಣದ ನಾಯಕಿಯಾದ ಹುಡುಗಿ ಆಶಿಕಾ ರಂಗನಾಥ್. ಚೂರು ಚಿಗುರುತ್ತಿದ್ದಂತೇ ಈಕೆ ಸಂಭಾವನೆಯನ್ನು ಕೂಡಾ ಗಣನೀಯವಾಗಿ ಏರಿಸಿಕೊಂಡಳು. ಮಾರ್ಕೆಟ್ಟಿದ್ದಾಗ ಕಾಸು ಮಾಡಿಕೊಳ್ಳೋದು ಸಿನಿಮಾ ಸ್ಟಾರುಗಳ ನಿಯಮ. ಅದು ಅಪರಾಧವೂ ಅಲ್ಲ!
ಇವೆಲ್ಲದರ ನಡುವೆ ಆಶಿಕಾ ಶ್ಯಾನೆ ಕಿರಕ್ಕು ಹುಡುಗಿ ಅಂತಾ ಕನ್ನಡ ಚಿತ್ರರಂಗಕ್ಕೆ ಯಾವತ್ತೋ ಗೊತ್ತಾಗಿಹೋಗಿದೆ. ಈಕೆಗಿಂತಾ ಈಕೆಯ ತಾಯಿ ಸುಧಾ ಮೇಡಮ್ಮು ಸೆಟ್ಟಲ್ಲಿ ಕುಂತು ತೆಗೆಯೋ ಖ್ಯಾತೆನೇ ಜಾಸ್ತಿ ಅನ್ನೋ ಮಾತಿದೆ. ಹಿಂದೆ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ಅಮ್ಮ ಮಗಳು ಕೊಟ್ಟ ಕಿರುಕುಳಕ್ಕೆ ಚಿತ್ರತಂಡ ತತ್ತರಿಸಿತ್ತು. ಕೊಡೋದೆಲ್ಲಾ ಕೊಟ್ಟು ದಿನವೊಂದಕ್ಕೆ ಸಾವಿರಾರು ರುಪಾಯಿಗಳ ಎಕ್ಸ್ಟ್ರಾ ಟ್ಯಾಕ್ಸು ಕಟ್ಟಬೇಕು ಅಂತಾ ಈಕೆ ಈ ಹಿಂದೆ ಕೆಲಸ ಮಾಡಿದ ಸಿನಿಮಾ ಮಂದಿ ಆರೋಪಿಸಿದ್ದಿದೆ. “ಇಂಥಾ ಹೊಟೇಲಿನ ಇಂಥದ್ದೇ ಫಿಶ್ಶು ಬೇಕು, ಫ್ರೂಟ್ಸು ಬೇಕು ಅದು ಬೇಕು ಇದು ಬೇಕು” ಅಂತಾ ಆಶಿಕಾಳ ತಾಯಿ ಸುಧಾ ಬೇಕುಗಳ ಪಟ್ಟಿಯನ್ನೇ ನೀಡುತ್ತಾರೆ. ಶೂಟಿಂಗು ಮುಗಿಯೋ ಹೊತ್ತಾದರೂ ಆರ್ಡರ್ ಮಾಡಿ ಮನೆಗೆ ಪಾರ್ಸಲ್ ಕೊಂಡೊಯ್ಯುತ್ತಾರೆ ಎನ್ನುವ ಆರೋಪಗಳು, ಗಾಳಿ ಸುದ್ದಿಗಳು ಹಬ್ಬಿದ್ದವು.
ಪರಿಸ್ಥಿತಿ ಹೀಗಿದ್ದಾಗಲೇ ಈಕೆಯ ಕಾಲ್ ಶೀಟ್ ಪಡೆಯುವುದೋ ಬೇಡವೋ ಅಂತಾ ಸಿನಿಮಾ ಜನ ಯೋಚಿಸುವಂತಾಗಿತ್ತು. ಅದೇ ವೇಳೆಗೆ ಮದಗಜ ಸಿನಿಮಾ ಅನೌನ್ಸ್ ಆಗಿತ್ತು. ಕೆಜಿಎಫ್ ಹೀಯೋಯಿನ್ ಶ್ರೀನಿಧಿ ಶಟ್ಟಿ ಅಥವಾ ರಚಿತಾ ರಾಮ್ ಇಬ್ಬರಲ್ಲಿ ಒಬ್ಬರನ್ನು ನಾಯಕಿಯನ್ನಾಗಿಸಬೇಕು ಅಂತಾ ಚಿತ್ರತಂಡ ಪ್ಲಾನ್ ಕೂಡಾ ನಡೆಸಿತ್ತು. ಆ ಹೊತ್ತಿಗೆ ಸ್ವತಃ ಆಶಿಕಾ ರಿಕ್ವೆಸ್ಟ್ ಮಾಡಿ ಈ ಸಿನಿಮಾದಲ್ಲಿ ಛಾನ್ಸು ಪಡೆದಳು ಎನ್ನುತ್ತದೆ ಮೂಲ. “ಸಂಭಾವನೆ ಕೊಡದಿದ್ದರೂ ಪರವಾಗಿಲ್ಲ, ನನ್ನ ಮಗಳಿಗೆ ಛಾನ್ಸು ಕೊಡಿ ಸಾಕು” ಅಂತಾ ಅವರಮ್ಮ ಪೀಡಿಸಿದ್ದಾಗಿ ಆಗಲೇ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಆಗಿ, ಅವಕಾಶ ಪಡೆದ ನಂತರ ಆಶಿಕಾ ಯಥಾಪ್ರಕಾರ ಕಿತಾಪತಿ ಮುಂದುವರೆಸಿದಳು ಅನ್ನೋದು ಲೇಟೆಸ್ಟ್ ನ್ಯೂಸ್. ಅದೇನೆಂದರೆ, ಕಳೆದ ತಿಂಗಳು ಮಂಡ್ಯದಲ್ಲಿ ಮದಗಜ ಚಿತ್ರದ ಶೂಟಿಂಗ್ ನೆರವೇರಿತ್ತು. ದೃಶ್ಯವೊಂದರಲ್ಲಿ ನಾಯಕಿ ಆಶಿಕಾ ಟ್ರ್ಯಾಕ್ಟರ್ ಓಡಿಸಬೇಕಿತ್ತು. ಬಿಸಿಲಿನ ತಾಪ ಸ್ವಲ್ಪ ಹೆಚ್ಚೇ ಇತ್ತಲ್ಲಾ? ಶಾಟ್ ಮುಗಿಸೋ ಹೊತ್ತಿಗೇ ಟ್ರ್ಯಾಕ್ಟರಿನ ಬ್ರೇಕು ಬಿಸಿಯಾಗುತ್ತಿತ್ತಂತೆ. ʻಅಯ್ಯೋ ನನ್ನ ಪಾದಗಳು ಸುಡುತ್ತಿವೆʼ ಅಂತಾ ಆಶಿಕಾ ವರಾತ ತೆಗೆದಳಂತೆ. ಆಕೆ ಶಾಟ್ ಮುಗಿಸಿ ಓಡಿಬರುತ್ತಿದ್ದಂತೇ ಅಲ್ಲಿದ್ದ ಅಸಿಸ್ಟೆಂಟುಗಳು, ಸೆಟ್ ಹುಡುಗರು ಓಡೋಡಿ ಬಂದು ಈಕೆ ಪಾದಕ್ಕೆ ನೀರು ಸುರಿದು ತಣ್ಣಗೆ ಮಾಡುತ್ತಿದ್ದರಂತೆ.
ಅವರಮ್ಮ ಬಂದು ʻಕೆಳಗೆ ಬಿಟ್ಟರೆ ಪಾದ ಸವೆಯುತ್ತದೆ ಅಂತಾ ನಮ್ಮ ಮಗಳನ್ನ ಕಂಕುಳಲ್ಲೇ ಕೂರಿಸಿಕೊಂಡು ಸಾಕಿದ್ದೀವಿ.. ನೀವು ಇಷ್ಟೊಂದು ಕಷ್ಟದ ಸೀನ್ ಮಾಡಿಸ್ತೀರಲ್ಲಾ?ʼ ಅಂತಾ ಜಗಳಕ್ಕೆ ನಿಂತರಂತೆ. ಇದೊಂದು ದೃಶ್ಯದಲ್ಲಾಗಿದ್ದರೆ ಪರವಾಗಿಲ್ಲ, ಸಿನಿಮಾದ ಉದ್ದಕ್ಕೂ ಈ ಸೀನು ಸರಿ ಇಲ್ಲ, ಆ ಡೈಲಾಗು ಹೇಳಕ್ಕಾಗಲ್ಲ, ಹಾಗೆ ಡ್ಯಾನ್ಸು ಮಾಡಕ್ಕಾಗಲ್ಲ, ಬಟ್ಟೆ ಫಿಟ್ಟಿಂಗ್ ಸರಿಯಿಲ್ಲ, ಊಟದಲ್ಲಿ ಟೇಸ್ಟಿಲ್ಲ… ಅಂತಾ ಯದ್ವಾತದ್ವಾ ನಖರಾ ಮಾಡೋದು ಆಶಿಕಾಗೆ ಅಭ್ಯಾಸವಾಗಿಬಿಟ್ಟಿದೆಯಂತೆ.
ನೋಡೋತನಕ ನೋಡಿದ ಹೀರೋ ಶ್ರೀಮುರಳಿ ಅದೊಂದು ದಿನ ಆಶಿಕಾಳ ತಾಯಿ ಸುಧಾಗೆ ಸರಿಯಾಗಿ ಬೆವರಳಿಸಿದರು ಎನ್ನುವ ಗಾಸಿಪ್ಪು ಗಾಂಧಿನಗರದ ತುಂಬಾ ಸ್ಪೀಡಾಗಿ ಸ್ಪ್ರೆಡ್ ಆಗುತ್ತಿದೆ. ಆ ಪ್ರಕಾರ ಹೇಳುವುದಾದರೆ, ಮಂಡ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಆಶಿಕಾಳ ಕೂಗಾಟ ಕೇಳಿಸಿಕೊಂಡ ಶ್ರೀಮುರಳಿ ಕ್ಯಾರವಾನು ಇಳಿದು ಬಂದವರೇ ʻನೋಡಿ ಅಮ್ಮಾ…. ಶೂಟಿಂಗ್ ಶುರು ಆಗುವ ಮುಂಚೆಯೇ ಚಿತ್ರದಲ್ಲಿ ಯಾವ್ಯಾವ ದೃಶ್ಯಗಳಿವೆ ಅಂತಾ ಹೇಳಿರ್ತಾರಲ್ವಾ? ಅದನ್ನೆಲ್ಲಾ ತಿಳಿದು, ಒಪ್ಪಿದ ಮೇಲೆ ಇದು ಆಗಲ್ಲ, ಅದು ಆಗಲ್ಲ ಅಂತೆಲ್ಲಾ ಸೆಟ್ಟಲ್ಲಿ ಸೆಟೆದುಕೊಳ್ಳಬಾರದುʼ ಅಂತಾ ನಯವಾಗೇ ತಿವಿದರಂತೆ!
ತಿಮಿರು ತೋರಿದ ಎಷ್ಟೋ ಜನ ನಟಿಯರು ಚಿತ್ರರಂಗದಲ್ಲಿ ಬೋರ್ಡಿಗಿಲ್ಲದಂತೆ ಮಾಯವಾಗಿದ್ದಾರೆ. ಆಶಿಕಾ ಚಿತ್ರರಂಗದಲ್ಲಿ ಇನ್ನೂ ದೊಡ್ಡ ಎತ್ತರಕ್ಕೆ ಬೆಳೆಯಬೇಕಿರುವ ಹುಡುಗಿ. ಕಿರಿಕಿರಿ ಬುದ್ದಿಯ ಕಾರಣಕ್ಕೆ ಆಕೆಯ ಪಾಲಿನ ಅವಕಾಶಗಳು ಕಳೆದುಹೋಗೋದು ಬೇಡ. ಸದ್ಯ ಚಲಾವಣೆಯಲ್ಲಿರುವ ಉಮಾಪತಿ ಶ್ರೀನಿವಾಸ್ ಗೌಡರಂಥ ನಿರ್ಮಾಪಕರ ಸಿನಿಮಾದಲ್ಲೇ ಹೆಸರು ಕೆಡಿಸಿಕೊಂಡರೆ ಬೇರೆ ಯಾರು ತಾನೆ ಕರೆದು ಕೆಲಸ ಕೊಟ್ಟಾರು? ಈ ಚಿತ್ರದ ನಿರ್ದೇಶಕ ಮಹೇಶ್ ಇಡೀ ಕನ್ನಡ ಚಿತ್ರರಂಗವೇ ನನ್ನದು ಎನ್ನುವ ಮಟ್ಟಕ್ಕೆ ಓಡಾಡಿಕೊಂಡಿರುವ ಉತ್ಸಾಹಿ ಯುವಕ. ಇಂಥವರೆಲ್ಲಾ ನೊಂದು, ಮುನಿದರೆ ಭವಿಷ್ಯದ ಏಳಿಗೆ ಕಷ್ಟ ಕಷ್ಟ..!
No Comment! Be the first one.