ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ಅವರದ್ದು. ಈ ಮಾತಿಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಟೈಟಲ್ ವಿವಾದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ!
ನೀನಾಸಂ ಸತೀಶ್ ಅಭಿನಯದ ಅಯೋಗ್ಯ ನಿರ್ದೇಶನ ಮಾಡಿದ್ದ ಮಹೇಶ್ ಶ್ರೀಮುರಳಿಗೂ ಒಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಜಾಹಗೀರಾಗಿತ್ತು. ಅದರ ಬೆನ್ನಿಗೇ ಅದರ ಟೈಟಲ್ ಮದಗಜ ಎಂಬುದೂ ಜಾಹೀರಾಗಿತ್ತು. ಇದಾಗುತ್ತಲೇ ವಿವಾದವೂ ಎದ್ದು ಬಿಟ್ಟಿತ್ತು. ಯಾಕೆಂದರೆ ನಿರ್ಮಾಪಕರಾದ ರಾಮಮೂರ್ತಿ ಈ ಟೈಟಲ್ ಅನ್ನು ದರ್ಶನ್ ಅವರಿಗೆಂದೇ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಆದರೆ ಶ್ರೀಮುರಳಿ ಚಿತ್ರದ ಇಡೀ ಕಥೆ ಈ ಶೀರ್ಷಿಕೆಯ ಬೇಸಿನ ಮೇಲೇ ಜೀವ ತಳೆದಿತ್ತು.
ದರ್ಶನ್ ಜಾಗದಲ್ಲಿ ಬೇರ್‍ಯಾರಾದರೂ ಇದ್ದಿದ್ದರೆ ಅದೇನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಅವರು ಮಾತ್ರ ಉದಾರ ಮನಸಿನಿಂದ ನಿರ್ಮಾಪಕರ ಮನವೊಲಿಸಿ ಈ ಟೈಟಲ್ ಅನ್ನು ಶ್ರೀಮುರಳಿಗೆ ಬಿಟ್ಟು ಕೊಟ್ಟಿದ್ದರು. ಇದೀಗ ಅವರೇ ಟೈಟಲ್ ಅನ್ನು ಲಾಂಚ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮುರಳಿ ಬಗ್ಗೆ, ಅವರಿಗೆ ನೇಮು ಫೇಮು ತಂದುಕೊಟ್ಟಿದ್ದ ಉಗ್ರಂ ಚಿತ್ರದ ಬಗ್ಗೆಯೂ ಮನಬಿಚ್ಚಿ ಮಾತಾಡಿದ್ದಾರೆ. ಸಾಮಾನ್ಯವಾಗಿ ಯಾರ ಚಿತ್ರವನ್ನೂ ನೋಡಿ ಹೊಟ್ಟೆ ಉರಿದುಕೊಳ್ಳದ ತನಗೆ ಉಗ್ರಂ ನೋಡಿ ಅಂಥಾ ಅನುಭವವಾಗಿತ್ತು. ತಾನೂ ಕೂಡಾ ಉಗ್ರಂ ಥರದ ಚಿತ್ರದಲ್ಲಿ ನಟಿಸಬೇಕೆನ್ನಿಸಿದ್ದರಿಂದ ಈ ಬಗ್ಗೆ ಶ್ರೀಮುರಳಿಗೂ ಫೋನು ಮಾಡಿದ್ದದ್ದಾಗಿ ದರ್ಶನ್ ಹೇಳಿಕೊಂಡಿದ್ದಾರೆ.
ಈಗ ತಾವೇ ಖುದ್ದಾಗಿ ಮದಗಜ ಟೈಟಲ್ ಲಾಂಚ್ ಮಾಡಿದ್ದಲ್ಲದೆ ಇಡೀ ಚಿತ್ರತಂಡಕ್ಕೆ ಹುರುಪು ತುಂಬಿರೋ ದರ್ಶನ್ ಉಗ್ರಂನಂಥಾದ್ದೇ ಗೆಲುವು ಸಿಗಲೆಂದು ಹಾರೈಸಿದ್ದಾರೆ.
#
No Comment! Be the first one.