ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿರುವ ಸಿನಿಮಾ ಗಂಡುಗಲಿ ಮದಕರಿ ನಾಯಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಚಿತ್ರಕ್ಕೆ ಇಂದು ಬೆಳಿಗ್ಗೆ ಗವೀಪುರ ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.
ರಾಕ್ ಲೈನ್ ವೆಂಟಕೇಶ್, ಮುನಿರತ್ನ, ಸುಮಲತಾ ಅಂಬರೀಶ್, ನಿರ್ದೇಶಕ ಸಿಂಗ್ ಬಾಬು, ನಟ ಶ್ರೀನಿವಾಸ ಮೂರ್ತಿ, ದರ್ಶನ್ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಅನೇಕ ಗಣ್ಯರು ಈ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.
ಕೆಲವು ದಿನಗಳ ಹಿಂದಷ್ಟೇ ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯದಲ್ಲಿರುವ ಮದಕರಿ ನಾಯಕನ ಆರಾಧ್ಯ ದೇವರುಗಳಾದ ಏಕನಾಥೇಶ್ವರಿ, ಹಚ್ಚೆಂಗಮ್ಮ ಮತ್ತು ಬರಗೇರಮ್ಮರಿಗೆ ಪೂಜೆ ಸಲ್ಲಿಸುವ ಮೂಲಕ ಮದಕರಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಇವತ್ತು ಗವೀಪುರದ ಗವಿಗಂಗಾಧರ ಸ್ವಾಮಿ ದೇವಾಲಯದಲ್ಲಿ ಅಧಿಕೃತ ಮುಹೂರ್ತ ನೆರವೇರಿದೆ.
ವೀರ ಸೇನಾನಿ ಮದಕರಿ ನಾಯಕನ ಬದುಕನ್ನು ಆಧರಿಸಿ ಖ್ಯಾತ ಸಾಹಿತಿ, ಕಾದಂಬರಿಕಾರ ಬಿ.ಎಲ್. ವೇಣು ಬರೆದಿರುವ ಕಥೆಯನ್ನಿಟ್ಟುಕೊಂಡು ಅವರಿಂದಲೇ ಸಂಭಾಷಣೆಯನ್ನೂ ಬರೆಸಿ ಮದಕರಿಯನ್ನು ರೂಪಿಸಲಾಗುತ್ತಿದೆ. ಯುವ ನಿರ್ದೇಶಕರಾಗಿದ್ದಾಗಲೇ ಕನ್ನಡ ಚಿತ್ರರಂಗದಲ್ಲಿ ತಾಂತ್ರಿಕ ಶ್ರೀಮಂತಿಕೆಯ ಚಿತ್ರಗಳನ್ನು ನೀಡಿದವರು ಎಸ್.ವಿ. ರಾಜೇಂದ್ರ ಸಿಂಗ್ ಬಾಬು. ಅವರೀಗ ಸೀನಿಯರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದರೂ ಇವತ್ತಿನ ಕಾಲದ ತಂತ್ರಜ್ಞಾನಕ್ಕೆ ಅಪ್ಡೇಟ್ ಆಗಿದ್ದಾರೆ. ಹೊಸ ಟೆಕ್ನಾಲಜಿಗೆ ಬಹುಬೇಗ ಒಗ್ಗಿಕೊಳ್ಳುವ ಕೆಲವೇ ಹಿರಿಯ ನಿರ್ದೇಶಕರಲ್ಲಿ ಸಿಂಗ್ ಬಾಬು ಪ್ರಮುಖರು. ಕನ್ನಡ ನಾಡಿನ ಚರಿತ್ರೆ, ಈ ನೆಲದ ಮಹಾನ್ ವ್ಯಕ್ತಿಯ ಬದುಕನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಸಾಮರ್ಥ್ಯ ಸಿಂಗ್ ಬಾಬು ಹೊಂದಿದ್ದಾರೆ. ಇನ್ನು ಮದಕರಿ ನಾಯಕನಾಗಿ ಅವತಾರವೆತ್ತಲು ದರ್ಶನ್ ಹೇಳಿಮಾಡಿಸಿದ ನಟ. ಹೀಗಾಗಿ ರಾಕ್ ಲೈನ್ ವೆಂಕಟೇಶ್ ಅಷ್ಟದಿಕ್ಕುಗಳಿಂದಲೂ ಯೋಚಿಸಿ ಗಂಡುಗಲಿ ಮದಕರಿ ಸಿನಿಮಾವನ್ನು ಆರಂಭಿಸಿದ್ದಾರೆ.
ಈ ಸಿನಿಮಾಗಾಗಿ ಕಳೆದೊಂದು ವರ್ಷದಿಂದ ಪೂರ್ವತಯಾರಿ ಮಾಡಿಕೊಂಡಿರುವ ರಾಕ್ ಲೈನ್ ಮತ್ತವರ ತಂಡ ಕಾಸ್ಟೂಮ್ಸ್ನಿಂದ ಹಿಡಿದು, ತಾಂತ್ರಿಕ ರೂಪುರೇಷೆಯನ್ನೂ ಈಗಾಗಲೇ ಸಿದ್ದಪಡಿಸಿದ್ದಾರೆ. ದರ್ಶನ್ ಹೀರೋ ಆಗಿ ನಟಿಸುತ್ತಿರುವ ಸಿನಿಮಾ ಇದಾಗಿರುವುದರಿಂದ ಮದಕರಿ ತೆರೆಗೆ ಬರುವ ದಿನದ ತನಕ ಒಂದಲ್ಲಾ ಒಂದು ಸುದ್ದಿ ಚಾಲನೆಯಲ್ಲಿರಲಿದೆ.
No Comment! Be the first one.