ಉತ್ತರ ಕರ್ನಾಟಕದ ಸೊಗಡಿನ ಸಿನಿಮಾಗಳಿಗೇ ಹೆಸರಾದ ಗೋಪಿ ಕೆರೂರ್ ನಿರ್ದೇಶನದ ಮದುವೆ ಮಾಡ್ರಿ ಸರಿ ಹೋಗ್ತಾನೆ ಚಿತ್ರ ಈಗ ತೆರೆಗೆ ಬಂದಿದೆ. ಅಪ್ಪನಿಲ್ಲದೆ, ಅಮ್ಮನ ನೆರಳಲ್ಲಿ ಬೆಳೆದ ಹುಡುಗನಿಗೆ ಭಜನೆ ಮಾಡಿಕೊಂಡು ತಿರುಗೋ ಕಸುಬು. ಇಂಥ ಹುಡುಗ ಅದ್ಯಾವ ಘಳಿಗೆಯಲ್ಲಿ ಊರಗೌಡನ ಹೆಂಡತಿಯ ಜೊತೆಗೆ ಮಾತಾಡುತ್ತಾನೆ. ಇದೇ ದೊಡ್ಡ ಅಪರಾಧವೆನ್ನುವಂತೆ ಬಿಂಬಿಸುತ್ತಾರೆ. ಈ ಹುಡುಗನಿಗೆ ಮದುವೆ ಮಾಡಿದರೆ ಮಾತ್ರ ಊರಲ್ಲಿ ಉಳಿಯಲು ಸಾಧ್ಯ ಎನ್ನುವ ತೀರ್ಮಾನವಾಗಿಬಿಡುತ್ತದೆ. ಅಮ್ಮನಿಗೆ ಮಗನಿಗೆ ಮದುವೆ ಮಾಡದಿದ್ದರೆ ಎಲ್ಲಿ ಊರಿಂದ ಹೊರಕ್ಕೆ ಹೋಗಬೇಕೋ ಎನ್ನುವ ಚಿಂತೆ. ಆ ಹೊತ್ತಿಗೇ ಅದೇ ಊರಿನ ಶಾಲೆಯ ಶಿಕ್ಷಕಿಯ ಜೊತೆಗೆ ಹೀರೋ ಲವ್ವಿಗೆ ಬೀಳುತ್ತಾನೆ. ಮೇಡಮ್ಮು ಪ್ರೇಮಪಾಠದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುತ್ತಾರೆ. ಭಜನೆ ಮಾಡುತ್ತಿದ್ದ ಹುಡುಗ ಹಾಡುಗಾರನಾಗುವ ಪ್ರಯತ್ನ ಮಾಡುತ್ತಾನೆ. ಅದೇ ಹಾದಿಯಲ್ಲಿ ಸಾಗಿ ಬೆಂಗಳೂರಿಗೆ ಬರುವ ಹುಡುಗ ಗಾಯಕನಾಗುತ್ತಾನಾ? ಮತ್ತೆ ಊರಿನ ಕಡೆ ಮುಖ ಮಾಡುತ್ತಾನಾ? ಹಾಗೊಮ್ಮೆ ಆತ ಊರಿಗೆ ಹಿಂತಿರುಗಿದಾಗ ಅಲ್ಲಿನ ಚಿತ್ರಣ ಏನಾಗಿರುತ್ತದೆ? ಇಂಥ ಕೆಲವಾರು ಕುತೂಹಲಗಳನ್ನು ಉಳಿಸುವ ಚಿತ್ರ ಮದುವೆ ಮಾಡ್ರಿ ಸರಿ ಹೋಗ್ತಾನೆ.
ಉತ್ತರ ಕರ್ನಾಟಕದ ಮಂದಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಹೊಸೆದ ಹಾಸ್ಯ, ಸಂಭಾಷಣೆಗಳು ಬೇರೆ ಭಾಗದವರಿಗೆ ಅಷ್ಟಾಗಿ ರುಚಿಸೋದಿಲ್ಲ. ತಾಂತ್ರಿಕತೆಯಲ್ಲಿ ಇನ್ನೊಂದಿಷ್ಟು ಗುಣಮಟ್ಟ ಬೇಕಿತ್ತು. ಇಡೀ ಸಿನಿಮಾದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಬೇಕಿರುವ ಒಂದಿಷ್ಟು ಅಂಶಗಳಿವೆ. ಬೆಳೆಯೋ ಯುವಕರನ್ನು ಏನೇನೂ ಅಲ್ಲ, ಕೆಲಸಕ್ಕೆ ಬಾರದವನು, ನಿಷ್ಪ್ರಯೋಜಕ ಅಂತಾ ಜನ ನಿರ್ಧರಿಸಿಬಿಡುತ್ತಾರಲ್ಲಾ? ಬುದ್ದಿವಂತ ಹೆಣ್ಣುಮಗಳ ಸಹವಾಸ ಅಂಥಾ ಹುಡುಗರ ಬದುಕಿನ ದಿಕ್ಕನ್ನೇ ಹೇಗೆ ಬದಲಿಸಬಲ್ಲದು ಅನ್ನೋದು ಕೂಡಾ ಈ ಚಿತ್ರದಲ್ಲಿ ಅನಾವರಣಗೊಂಡಿದೆ. ರಮೇಶ್ ಭಟ್ ಮತ್ತು ಅರುಣಾ ಬಾಲರಾಜ್ ಈ ಚಿತ್ರದ ಶಕ್ತಿಕೇಂದ್ರಗಳಂತೆ ಪಾತ್ರ ನಿರ್ವಹಿಸಿದ್ದಾರೆ. ನಾಯಕ-ನಾಯಕಿ ಅಭಿನಯದಲ್ಲಿ ಇನ್ನಷ್ಟು ಪಳಗಿದ್ದೇ ಆದಲ್ಲಿ ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಬಹುದು. ಕಡಿಮೆ ಸಮಯ, ಸಲಕರಣೆಗಳನ್ನೇ ಬಳಸಿಕೊಂಡು ನೋಡಬಹುದಾದ ಸಿನಿಮಾ ರೂಪಿಸಿರುವ ಗೋಪಿ ಕೆರೂರ್ ಉತ್ತರ ಕರ್ನಾಟಕದ ಡೈರೆಕ್ಟರ್ ಆಗಿ ಪರ್ಮನೆಂಟು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗುಳೇದಗುಡ್ಡದ ಹುಡುಗಿ ಸೇರಿದಂತೆ ಹಾಡುಗಳು ಇಷ್ಟಪಟ್ಟು ಕೇಳುವಂತಿವೆ. ಛಾಯಾಗ್ರಹಣ ಪರವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಮನರಂಜನೆಯ ಜೊತೆಗೆ ಸಣ್ಣದೊಂದು ಸಂದೇಶವನ್ನೂ ಬೆಸೆದುಕೊಂಡು ಬಂದಿರುವ ಮದುವೆ ಮಾಡ್ರಿ ಸರಿಹೋಗ್ತಾನೆ ಚಿತ್ರವನ್ನು ಒಮ್ಮೆ ನೋಡಿ ಎಂಜಾಯ್ ಮಾಡಬಹುದು.
No Comment! Be the first one.