ವಿಕ್ರಂ ನಟನೆಯ ಮಹತ್ವಾಕಾಂಕ್ಷೆಯ ಸಿನಿಮಾ ’ಮಹಾವೀರ ಕರ್ಣ’ ತಂಡ ಹೈದರಾಬಾದ್ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದೆ. ಆರ್.ಎಸ್.ವಿಮಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಅಂದಾಜು ಬಜೆಟ್ ೩೦೦ ಕೋಟಿ ರೂಪಾಯಿ. ಇಂಗ್ಲೆಂಡ್ ಮೂಲದ ನಿರ್ಮಾಣ ಸಂಸ್ಥೆಯ ಐತಿಹಾಸಿಕ ಚಿತ್ರ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ಹಾಲಿವುಡ್ ಮತ್ತು ಬಾಲಿವುಡ್ನ ಹಲವು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರತಂಡದಲ್ಲಿ ಕಾರ್ಯನಿರ್ವಹಿಸಲಿದ್ದು, ಚಿತ್ರಕ್ಕೆ ಸಂಬಂಧಿಸಿದ ಇತರೆ ಸಂಗತಿಗಳನ್ನು ಗೋಪ್ಯವಾಗಿಡಲಾಗಿದೆ.
ಫಿಲ್ಮ್ಸಿಟಿಯಲ್ಲಿ ಪ್ರಸ್ತುತ ಯುದ್ಧದ ಸನ್ನಿವೇಶಗಳನ್ನು ಚಿತ್ರಿಸಲಾಗುತ್ತಿದೆ ಎಂದಿದ್ದಾರೆ ನಿರ್ದೇಶಕ ವಿಮಲ್. ಸಾವಿರಾರು ಸಂಖ್ಯೆಯ ಸ್ಟಂಟ್ಮ್ಯಾನ್ ಮತ್ತು ಜ್ಯೂನಿಯರ್ ಆರ್ಟಿಸ್ಟ್ಗಳು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕರ್ಣನನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸುತ್ತಿರುವ ಚಿತ್ರ ಹಲವು ಐತಿಹಾಸಿಕ ಸಂಗತಿಗಳನ್ನು ಬಿಚ್ಚಿಡಲಿದೆ. 2020ರ ಜೂನ್ ವೇಳೆಯಲ್ಲಿ ಚಿತ್ರವನ್ನು ತೆರೆಗೆ ತರುವುದು ನಿರ್ಮಾಣ ಸಂಸ್ಥೆಯ ಯೋಜನೆ. ’ಎನ್ನು ನಿಂತೆ ಮೊಯಿದೀನ್’ ಮಲಯಾಳಂ ಚಿತ್ರದೊಂದಿಗೆ ನಿರ್ದೇಶಕರಾದ ವಿಮಲ್ ಅವರ ಈ ಐತಿಹಾಸಿಕ ಸಿನಿಮಾ ದಕ್ಷಿಣ ಭಾರತದ ಚಿತ್ರರಂಗಗಳ ಗಮನ ಸೆಳೆದಿದೆ.
#