ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರ ಈ ವಾರ ಭರ್ಜರಿಯಾಗಿ ತೆರೆಕಾಣುತ್ತಿದೆ. ಹೆಸರಿಗೆ ತಕ್ಕುದಾದ ಟ್ರೈಲರ್, ಮಾಧುರ್ಯ ತುಂಬಿರೋ ಹಾಡುಗಳ ಮೂಲಕವೇ ಪ್ರೇಕ್ಷಕರಿಗೆ ಹತ್ತಿರಾಗಿರೋ ಈ ಸಿನಿಮಾ ವಿನೋದ್ ಪ್ರಭಾಕರ್ ಅವರ ದೈಹಿಕ ಕಸರತ್ತಿನ ಕಾರಣದಿಂದಲೂ ಗಮನ ಸೆಳೆದಿದೆ. ಒಂದು ಯಶಸ್ವೀ ಸಿನಿಮಾ ಬಿಡುಗಡೆ ಪೂರ್ವದಲ್ಲಿ ಯಾವ ರೀತಿಯಲ್ಲಿ ಸಂಚಲನ ಸೃಷ್ಟಿಸುತ್ತೋ ಅಂಥಾ ಎಲ್ಲವನ್ನೂ ರಗಡ್ ಚಾಲ್ತಿಯಲ್ಲಿಟ್ಟಿದೆ.
ಹೀಗೆ ರಗಡ್ ಈ ಪಾಟಿ ಟಾಕ್ ಕ್ರಿಯೇಟ್ ಮಾಡಿರೋದರ ಹಿಂದೆ ಒಟ್ಟಾರೆ ತಂಡದ ಪರಿಶ್ರಮವಿದೆ. ಅದರಲ್ಲೂ ವಿಶೇಷವಾಗಿ ಇಡೀ ಸಿನಿಮಾದ ಸಾರಥ್ಯ ವಹಿಸಿಕೊಂಡಿರೋ ಮಹೇಶ್ ಗೌಡರ ಅದೆಷ್ಟೋ ವರ್ಷಗಳ ಕನಸು, ಪರಿಶ್ರಮ ಮತ್ತು ಎರಡು ದಶಕಗಳ ಅನುಭವವೂ ಈ ಗೆಲುವಿನ ಸುಳಿವಿನ ಹಿಂದಿದೆ!
ಸಿನಿಮಾವೊಂದು ರೆಡಿಯಾಗೋದು, ಥೇಟರಿಗೆ ಬರೋದೆಲ್ಲ ರಾತ್ರಿ ಹಗಲಿನಷ್ಟೇ ಸಲೀಸಾದ ವಿಚಾರ ಎಂದೇ ಹೊರ ಜಗತ್ತಿಗೆ ಅನ್ನಿಸೋದು ಸಹಜವೇ. ಆದರೆ ಅದರ ಹಿಂದೆ ಎಲ್ಲಿಂದಲೋ ಕನಸು ಕಟ್ಟಿಕೊಂಡು ಬಂದವರ, ಅದೇನೇ ಕಷ್ಟ ನಷ್ಟಗಳು ಎದುರಾದರೂ ಹಲವಾರು ವರ್ಷಗಳಿಂದ ಚಿತ್ರಂರಂಗದಲ್ಲಿ ಅವುಡುಗಚ್ಚಿ ದುಡಿದವರ ಬೆವರಿನ ಕಥೆ ಇರುತ್ತದೆಂದು ಹಲವರಿಗೆ ಗೊತ್ತಿರುವುದಿಲ್ಲ. ಬಹುಶಃ ಮಹೇಶ್ ಗೌಡರ ಕಠಿಣ ಹಾದಿಯ ಹೆಜ್ಜೆ ಗುರುತುಗಳು ಅದನ್ನು ಪರಿಚಯ ಮಾಡೀಸೀತೇನೋ…
ಹಾಸನ ಜಿಲ್ಲೆಯ ಚಿಕ್ಕ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಮಹೇಶ್ ಗೌಡರ ಪಾಲಿಗೆ ಬುದ್ಧಿ ಬಲಿತಾಗಿಂದಲೂ ಸಿನಿಮಾವೇ ಪ್ರಪಂಚ. ಓದು ಮುಗಿಯೋ ಹೊತ್ತಿಗೆಲ್ಲ ತಾನು ನಿರ್ದೇಶಕನಾಗಬೇಕೆಂಬ ನಿರ್ಧಾರ ಮಾಡಿಕೊಂಡಿದ್ದ ಅವರು ತೊಂಭತ್ತರ ದಶಕದ ಕಡೇಯ ವರ್ಷಗಳಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು. ಅಲ್ಲಿಂದ ಗಾಂದಿನಗರದ ಸರಹದ್ದಿಗೆ ಬಂದ ಮಹೇಶ್ ಅವರ ಪಾಲಿಗೆ ಶ್ರದ್ಧೆಯಿಂದ ಎಲ್ಲವನ್ನೂ ಕಲಿಯೋ ಉತ್ಸಾಹ ಮತ್ತು ಸುಪ್ತವಾಗಿದ್ದ ಪ್ರತಿಭೆಯ ಹೊರತಾಗಿ ಮತ್ಯಾವ ಬಂಡವಾಳವೂ ಇರಲಿಲ್ಲ.
ಅಲ್ಲಿಂದ ಇಲ್ಲೀವರೆಗೂ ಕೂಡಾ ಅವರು ಕನ್ನಡದ ಬಹುತೇಕ ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ಹಲವಾರು ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ. ಹೀಗೆಯೇ ನಿರ್ದೇಶನ ವಿಭಾಗದಲ್ಲಿ ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಮಹೇಶ್ ಗೌಡ ಕಾರ್ಯ ನಿರ್ವಹಿಸಿದ್ದರು. ಹಾಗೆ ಅವರು ಕಾಲೂರಿ ನಿಂತು ಕೆಲಸ ಮಾಡಲು ಕಾರಣವಾಗಿದ್ದದ್ದು ನಿರ್ದೇಶಕನಾಗಬೇಕೆಂಬ ಹಂಬಲ. ಮಾಡಿದರೆ ಮೊದಲ ಸಿನಿಮಾದಲ್ಲಿಯೇ ಸದ್ದು ಮಾಡಬೇಕೆಂಬ ಹಂಬಲದಿಂದ ಅವರು ಅಚ್ಚುಕಟ್ಟಾದ ಕಥೆಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಅದಕ್ಕೆ ನಿರ್ಮಾಪಕರನ್ನು ಹುಡುಕೋ ಸಲುವಾಗಿಯೇ ವರ್ಷಗಟ್ಟಲೆ ಹುಡುಕಿದ್ದರು. ಕಡೆಗೂ ಅರುಣ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀಗ ಹಳೇ ಸಂಗತಿ.
ಆದರೆ ಈ ಕಥೆಯನ್ನು ಮಹೇಶ್ ಗೌಡರು ಎಲ್ಲರೂ ಅಚ್ಚರಿಯಾಗುವಂತೆ ರೂಪಿಸಿದ್ದಾರಂತೆ. ಏನೇ ತಪ್ಪಿದ್ದರೂ ನೇರವಾಗಿ ಹೇಳಿ ಎಂಬಂಥಾ ವಿನಮ್ರತೆ ಹೊಂದಿರೋ ಅವರು ಯಾವ ತಪ್ಪೂ ಆಗದಂತೆ ಎಚ್ಚರ ವಹಿಸಿದ್ದಾರೆ. ರಗಡ್ ಅನ್ನೋ ಟೈಟಲ್ಲು ಉತ್ತರ ಕರ್ನಾಟಕದ ಖದರ್ ಮೆತ್ತಿಕೊಂಡಿರೋ ಪದ. ಇದನ್ನು ಕೇಳಿದಾಕ್ಷಣವೇ ಇದು ಆಕ್ಷನ್ ಮೂವಿ ಅಂತ ಯಾರಾದರೂ ತೀರ್ಮಾನಿಸಿ ಬಿಡುತ್ತಾರೆ. ಆದರೆ ಈ ಚಿತ್ರ ನೋಡಿದ ಪ್ರತಿಯೊಬ್ಬರೂಈ ಅಚ್ಚರಿಗೀಡಾಗುತ್ತಾರೆ. ಅಂಥಾ ಸರ್ಪ್ರೈಸ್ ಗಳು ಈ ಸಿನಿಮಾದಲ್ಲಿವೆಯಂತೆ. ಅಂತೂ ಎರಡು ದಶಕಗಳ ಧ್ಯಾನದ ಫಲವೆಂಬಂತೆ ರಗಡ್ ಮೂಲಕ ಮಹೇಶ್ ಗೌಡರ ಕನಸು ನನಸಾಗಿದೆ. ಅವರಿಚ್ಚೆಯಂತೆಯೇ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋ ವಾತಾವರಣವೇ ಎಲ್ಲೆಡೆ ತುಂಬಿಕೊಂಡಿದೆ.
No Comment! Be the first one.