ಅಯೋಗ್ಯ ಸಿನಿಮಾದ ಗೆಲುವು ಒಂಥರಾ ಪವಾಡ. ನೀನಾಸಂ ಸತೀಶ್ ಇದ್ದಿದ್ದಕ್ಕಷ್ಟೇ ಅಯೋಗ್ಯ ಗೆಲುವು ಕಂಡಿದ್ದು. ಏನಮ್ಮಿ ಹಾಡು, ಸತೀಶ್, ರಚಿತಾ ಜೋಡಿ ಕಾರಣಕ್ಕೆ ಜನ ಆ ಸಿನಿಮಾ ನೋಡಿದರು. ಅಯೋಗ್ಯ ಡೈರೆಕ್ಟರ್ ಮಹೇಶ್ʼಗೆ ಶ್ರೀಮುರಳಿ ಹೇಗಾದರೂ ಕಾಲ್ ಶೀಟ್ ಕೊಟ್ಟರೋ? ಯೋಗರಾಜ ಭಟ್ಟರ ಆಫೀಸಲ್ಲಿ ಕಾಫಿ ಲೋಟ ತೊಳೀತಿದ್ದವನು ಇವತ್ತು ಬಿಗ್ ಬಜೆಟ್ ಸಿನಿಮಾಗೆ ಡೈರೆಕ್ಟರ್ ಆಗ್ಬಿಟ್ಟ – ಇಂಥ ನೂರು ಮಾತುಗಳು ಕಳೆದ ಮೂರು ವರ್ಷಗಳಲ್ಲಿ ಚಿತ್ರರಂಗದ ಪಡಸಾಲೆಯಲ್ಲಿ ಕೇಳಿಬಂದಿವೆ.
ತಟ್ಟೆ ಲೋಟ ತೊಳೆಯುತ್ತಲೇ ಮೇಲೇರಿದವರು ಇಂದು ಎಷ್ಟೋ ಕ್ಷೇತ್ರಗಳಲ್ಲಿ ವಿಶ್ವ ವಿಖ್ಯಾತಿ ಪಡೆದವರಿದ್ದಾರೆ. ಹಿಂದೆ ಮಾಡಿದ ಕೆಲಸಕ್ಕೂ ಇವತ್ತಿನ ಬದುಕಿಗೂ ತಾಳೆ ಹಾಕಬಾರದು. ಅರ್ಹತೆ ಅನ್ನೋದು ಯಾರನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯುತ್ತದೆ.
ಆದರೆ ನಿರ್ದೇಶಕ ಮಹೇಶ್ ಬಗ್ಗೆ ಗಾಂಧೀನಗರದ ಜನ ಕಣ್ಣಿಡಲೂ ಕಾರಣಗಳಿವೆ. ಉಪೇಂದ್ರ, ಜೋಗಿ ಪ್ರೇಂ ಮತ್ತು ಆರ್. ಚಂದರು ಥರದ ಡೈರೆಕ್ಟರುಗಳು ಸಿನಿಮಾ ನಿರ್ದೇಶನದ ಜೊತೆಗೆ ಪಬ್ಲಿಸಿಟಿಗೂ ಹೆಚ್ಚು ಪ್ರಾಧಾನ್ಯತೆ ಕೊಟ್ಟವರು. ವಿಜಯ ಪ್ರಸಾದ್, ಸಿಂಪಲ್ ಸುನಿ, ಗುರುಪ್ರಸಾದ್ ರಂಥ ಡೈರೆಕ್ಟರುಗಳು ಕೂಡಾ ತಮ್ಮದೇ ಆದ ಸ್ಟೈಲಲ್ಲಿ ಪಬ್ಲಿಸಿಟಿ ಪ್ಲಾನ್ ಮಾಡುತ್ತಿರುತ್ತಾರೆ. ಇವರೆಲ್ಲರನ್ನೂ ನಿವಾಳಿಸಿ ಬಿಸಾಕುವ ಮಟ್ಟಿಗೆ ಮಹೇಶ್ ಪಬ್ಲಿಸಿಟಿ ಗಿಮಿಕ್ ಮಾಡೋದು ನಿಜ. ಸದಾ ಸುದ್ದಿಯಲ್ಲಿರಬೇಕು ಅಂತಾ ಬಯಸೋದು ಸಿನಿಮಾ ಮಂದಿಯ ಸಹಜ ಗುಣ.
ಯೋಗರಾಜಭಟ್ಟರ ಸಹಾಯಕ ವೃಂದದ ಪ್ರಮುಖ ಸದಸ್ಯನಾಗಿದ್ದು, ನಂತರ ಅಯೋಗ್ಯ ಅನ್ನೋ ಸಿನಿಮಾವನ್ನು ನಿರ್ದೇಶಿಸಿ, ಅದು ಗೆಲುವು ಕಂಡು, ಆ ಮೂಲಕ ಹೆಸರು ಮಾಡಿದ ಹುಡುಗ ಮಹೇಶ್. ತಳಮಟ್ಟದಿಂದ ಮೇಲೆದ್ದುಬಂದ ಹುಡುಗರನ್ನು ಹೊಸಕಿ ಹಾಕಲು ಸಾಕಷ್ಟು ಜನ ಕಾದು ಕುಂತಿರುತ್ತಾರೆ. ಅಯೋಗ್ಯ ಚಿತ್ರದ ಕಾರಣಕ್ಕೆ ಮಹೇಶ್ ಏಕಾಏಕಿ ವರ್ಚಸ್ಸು ಪಡೆದಿದ್ದೇನೋ ನಿಜ. ಮದಗಜ ಶುರುವಾಗುವ ಮುಂಚೆಯೇ ಅದರ ಬಗ್ಗೆ ದಿನಕ್ಕೊಂದು ಗಾಳಿಸುದ್ದಿ ಹಬ್ಬಿತ್ತು. ಮದಗಜ ಸಿನಿಮಾಗೆ ಮಹೇಶ್ ಬರೆದ ಕಥೆಯನ್ನು ಮುರಳಿ ಒಪ್ಪಿಲ್ಲವಂತೆ, ಅದಕ್ಕೇ ಪ್ರಶಾಂತ್ ನೀಲ್ ಕುಂತು ಬೇರೆ ಕತೆ ರಚನೆಯಲ್ಲಿ ತೊಡಗಿದ್ದಾರಂತೆ… ಅನ್ನೋದರಿಂದ ಹಿಡಿದು ‘ಮದಗಜ ಶುರುವಾಗೋದೇ ಟೌಟು’, ‘ಮದಗಜ ನಿಂತೇ ಹೋಯ್ತಂತೆ…’ ಅನ್ನುವ ತನಕ ಗಂಟೆಗೊಂದು, ಘಳಿಗೆಗೊಂದು ಬ್ರೇಕಿಂಗ್ ನ್ಯೂಸು ಮೀಡಿಯಾದವರ ಕಿವಿಗೆ ಅಪ್ಪಳಿಸುತ್ತಲೇ ಇದ್ದವು. ಇವೆಲ್ಲವನ್ನೂ ಮೀರಿ ಮದಗಜ ತಯಾರಾಗಿ ಇವತ್ತು ರಿಲೀಸಾಗುತ್ತಿದೆ.
ಮಹೇಶನ ಹಣೇಬರಹವೋ ಏನೋ? ಅಯೋಗ್ಯ ಸಿನಿಮಾಗೆ ಕೂಡಾ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಸುರೇಶ್ ಅನ್ನೋ ನಿರ್ಮಾಪಕರು ಆರಂಭದಲ್ಲಿ ಮುಹೂರ್ತ ಮಾಡಿ ನಿಲ್ಲಿಸಿಬಿಟ್ಟರಲ್ಲಾ? ಆಗಲೂ ‘ಅಯೋಗ್ಯನ ಕತೆ ಫಿನಿಷ್…’ ಅಂತಾ ಜನ ತೀರ್ಮಾನಿಸಿಬಿಟ್ಟಿದ್ದರು. ಮೇಲ್ನೋಟಕ್ಕೆ ಪರಿಸ್ಥಿತಿ ಕೂಡಾ ಹಾಗೇ ಆಗಿತ್ತು. ಆದರೆ, ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ಎನ್ನುವ ಮಹಾನುಭಾವರೊಬ್ಬರು ಮಹೇಶ್ ಕೈ ಹಿಡಿದು ಸಿನಿಮಾ ಮುಂದುವರೆಸಿದರು. ಬಹದ್ದೂರ್ ಚೇತನ್ ಬರೆದ ‘ಏನಮ್ಮಿ ಏನಮ್ಮಿ’ ಅನ್ನೋ ಭರ್ಜರಿ ಹಾಡು, ಅರ್ಜುನ್ ಜನ್ಯಾ ಮ್ಯೂಸಿಕ್ಕು ಎರಡೂ ಸೇರಿ ಮ್ಯಾಜಿಕ್ಕು ಮಾಡಿತ್ತು. ಇದರ ಜೊತೆಗೆ ಅಭಿನಯ ಚತುರ ಸತೀಶ್ ಅವರ ಅದ್ಭುತವಾದ ನಟನೆ, ಗುಳಿಕೆನ್ನೆ ಚೆಲುವೆಯ ಬಿನ್ನಾಣಗಳೆಲ್ಲಾ ಸೇರಿ ‘ಅಯೋಗ್ಯ’ ಸೂಪರ್ ಹಿಟ್ ಸಿನಿಮಾ ಅನ್ನಿಸಿಕೊಂಡಿತು.
ಈಗ ಮದಗಜನ ಸುತ್ತ ಗಾಸಿಪ್ಪುಗಳ ಹುತ್ತ ಬೆಳೆದುಕೊಂಡಿದೆ. ಸ್ವತಃ ಮಹೇಶ್ ಹೇಳುವ ಪ್ರಕಾರ ಕಥೆ, ಚಿತ್ರಕತೆ ಎಲ್ಲವನ್ನೂ ತಾವೇ ಬರೆದಿದು, ಪ್ರಶಾಂತ್ ನೀಲ್ ಅವರು ಬೆನ್ನೆಲುಬಾಗಿ ನಿಂತು ಚಿತ್ರಕತೆ ಬಿಗಿಯಾಗಲು ಬೇಕಿರುವ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರಂತೆ.
ಇವೆಲ್ಲ ಏನೇ ಆಗಲಿ, ಮಹೇಶ್ ಗೆ ನಿಜಕ್ಕೂ ಸ್ಟಾರ್ ಸಿನಿಮಾ ರೂಪಿಸುವ ತಾಕತ್ತಿದೆಯಾ? ಈ ಹುಡುಗನನ್ನು ನಂಬಿ ದೊಡ್ಡ ಹೀರೋಗಳು ಸಿನಿಮಾ ಒಪ್ಪಿಸಬಹುದಾ? ಎನ್ನುವ ಪ್ರಶ್ನೆಗಳಿಗೆಲ್ಲಾ ಕೆಲವೇ ಹೊತ್ತಿನಲ್ಲಿ ಉತ್ತರ ಸಿಗಲಿದೆ!
Comments