ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ಯುವ ನಿರ್ದೇಶಕರ ಸಾಲಿಗೆ ಈಗ ಮತ್ತೊಬ್ಬ ಪ್ರತಿಭಾವಂತ ಡೈರೆಕ್ಟರ್ ಸೇರಿಕೊಂಡಿದ್ದಾರೆ. ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಸುಮಾರು ಜನ ನಿರ್ದೇಶಕರ ಬಳಿ ಕೆಲಸ ಮಾಡಿರುವ ಉದಯ ಪ್ರಸನ್ನ ಮಹಿಷಾಸುರ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ತ್ರಿಕೋನ ಪ್ರೇಮಾಕಥಾ ಅಂದರವನ್ನು ಹೊಂದಿರುವ ಈ ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಅನಾವರಣ ಸಮಾರಂಭ ಸ್ವಾತಂತ್ರೋತ್ಸವ ದಿನದಂದು ನೆರವೇರಿತು. ಶ್ರೀಮತಿ ಲೇಲಾವತಿ ಸುರೇಶ್ ಕುಮಾರ್ ಹಾಗೂ ಪ್ರೇಮ ಚಂದ್ರಯ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಮಂಜು, ಸುದರ್ಶನ್ ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದು, ಬಿಂದುಶ್ರೀ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಉದಯ್ ಪ್ರಸನ್ನ ಸಿನಿಮಾ ನಿರ್ದೇಶನ ನನ್ನ ಬಹುದಿನಗಳ ಕನಸು. ಈಗ ನನಸಾಗಿದೆ, ಮಹಿಷಾಸುರ ನನ್ನ ಮೊದಲ ಹೆಚ್ಚೆ, ಮನುಷ್ಯ ಒಳ್ಳೆಯವನೇ ಆಗಿದ್ದರೂ ಆತ ತನ್ನ ತಾಳ್ಮೆ, ಸಹನೆ ಕಳೆದುಕೊಂಡಾಗ ಅಂತರಂಗದಲ್ಲಿರುವ ಅಸುರ ಮಹಿಷಾಸುರ ರೂಪತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ನಾಯಕರು ಒಬ್ಬ ಹುಡುಗಿಗೋಸ್ಕರ ಯಾವ ರೀತಿ ಅಸುರ ರೂಪ ತಾಳುತ್ತಾರೆ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ, ನನ್ನ ತಾಯಿ ಊರಿನ ಬಳಿ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಚಿತ್ರ ಮಾಡಿದ್ದೇನೆ. ದೊಡ್ಡಬಳ್ಳಾಪುರದ ಬಳಿ ಮೇಲುಕೋಟೆ, ಮಂಡ್ಯ, ಮೈಸೂರು ರಾಮನಗರ ಸೇರಿದಂತೆ ಒಟ್ಟು 60 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು 3 ಜನ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ ಎಂದು ಹೇಳಿದ್ದರು.
ನಾಯಕಿ ಬಿಂದುಶ್ರೀ ಮಾತನಾಡಿ ಬಾಲಕಲಾವಿದೇಯಾಗಿ ಚಿತ್ರರಂಗಕ್ಕೆ ಬಂದೆ, ಚಿತ್ರದಲ್ಲಿ ಒಬ್ಬ ಶ್ರೀಮಂತನ ಮಗಳಾಗಿದ್ದೇನೆ. ಮುಗ್ದೆ, ನನ್ನ ಪ್ರೀತಿಗಾಗಿ ಸ್ನೇಹಿತರಾಗಿದ್ದರೂ ನಾಯಕರು ವಿರೋಧಿಗಳಾಗುತ್ತಾರೆ. ಕದನದಲ್ಲಿ ನಾನು ಯಾರಿಗೆ ದಕ್ಕುತ್ತೇನೆ ಎನ್ನುವುದೇ ಕ್ಲೈಮ್ಯಾಕ್ಸ್ ಎಂದು ಹೇಳಿದರು.