‘ಮೆಜೆಸ್ಟಿಕ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ. ದಶಕಗಳ ನಂತರ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ‘ಮೆಜೆಸ್ಟಿಕ್-2’ ಹೆಸರಿನಡಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಆಗಿನ ಮೆಜೆಸ್ಟಿಕ್ ನಲ್ಲಿ ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ಹೇಳಿದ್ದರೆ, ಈಗಿನ ಮೆಜೆಸ್ಟಿಕ್-2, ಮೂಲಕ ಅಲ್ಲಿ ನಡೆಯುವ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ನಿರ್ದೇಶಕ ರಾಮು ಹೇಳ ಹೊರಟಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ನಿರ್ಮಿಸುತ್ತಿರುವ ಈ ಚಿತ್ರದ ಐಟಂ ಸಾಂಗ್ ವೊಂದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಕಲರ್ಫುಲ್ ಸೆಟ್ ನಲ್ಲಿ ನಡೆದಿದೆ. ಚಿತ್ರದಲ್ಲಿ ನಾಯಕ ದರ್ಶನ್ ಅವರ ಫ್ಯಾನ್ ಆಗಿ ಕಾಣಿಸಿಕೊಂಡಿದ್ದು, ಅವರ ಮೇಲಿನ ಅಭಿಮಾನದಿಂದ ಮಾಡುತ್ತಿರುವ, ಈಗಿನ ಟ್ರೆಂಡ್ ಗೆ ತಕ್ಕಂತೆ ಲಿರಿಕ್ ಹೆಣೆದಿರುವ ಹಾಡು ಇದಾಗಿದೆ, ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಎಂದು ನಿರ್ದೇಶಕ ರಾಮು ಅವರು ಬರೆದ ಸಾಹಿತ್ಯಕ್ಕೆ ಗಾಯಕಿ ಮೇಘನಾ ಹಳ್ಳಿಹಾಳ ದನಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಹಾಡಿನ ಚಿತ್ರೀಕರಣದಲ್ಲಿ ಐಟಂ ಡಾನ್ಸರ್ ಹಾಗೂ ನಾಯಕನ ಜೊತೆಗೆ ಸಹ ಕಲಾವಿದರುಗಳೂ ಸಹ ಭಾಗವಹಿಸಿದ್ದರು. ಸಂತೋಷ್ ಈ ಹಾಡಿಗೆ ಕೊರಿಯಾಗ್ರಾಫ್ ಮಾಡಿದ್ದಾರೆ.
ಈಗಾಗಲೇ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬೆಂಗಳೂರು ಸುತ್ತಮುತ್ತ ಶೇ.50ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ.
ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ “ಮೆಜೆಸ್ಟಿಕ್ 2” ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Reply
You must be logged in to post a comment.