ಅದು ಉಲ್ಲಾಸ ತಂದುಕೊಟ್ಟ ಗೆಲುವು!

ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಸಿನಿಮಾ ಮೆಜೆಸ್ಟಿಕ್‌. ಈ ಚಿತ್ರದ ಮೂಲಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎನ್ನುವ ಶಕ್ತಿ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಯಾಯಿತು. ಇವತ್ತಿಗೆ ಸರಿಯಾಗಿ ಹತ್ತೊಂಬತ್ತು ವರ್ಷಗಳ ಹಿಂದೆ ಮೆಜೆಸ್ಟಿಕ್‌ ರಿಲೀಸ್‌ ಆಗಿತ್ತು. ಉಲ್ಲಾಸ್‌ ಎಂಟರ್‌ ಪ್ರೈಸಸ್‌ ಸಂಸ್ಥೆಯ ಬಾ.ಮಾ. ಹರೀಶ್‌ ಮೆಜೆಸ್ಟಿಕ್‌ ಸಿನಿಮಾವನ್ನು ನಿರ್ಮಿಸಿದ್ದರು. ಎಂಜಿ ರಾಮಮೂರ್ತಿ ಮುಂತಾದವರು ಈ ಚಿತ್ರಕ್ಕೆ ಹಣಕಾಸಿನ ನೆರವು ನೀಡಿದ್ದರು.

2001ರ ಆಗಸ್ಟ್‌ 21ರಂದು ನಿರ್ಮಾಪಕ ಬಾ.ಮಾ. ಹರೀಶ್‌ ಅವರ ಹುಟ್ಟುಹಬ್ಬದ ದಿನ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಸುವುದರೊಂದಿಗೆ ʻಮೆಜೆಸ್ಟಿಕ್‌ʼಗೆ ಅಧಿಕೃತ ಚಾಲನೆ ದೊರೆತಿತ್ತು. ತಿರುಮಲಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರು ಕ್ಲಾಪ್‌ ಮಾಡುವ ಮೂಲಕ ಮುಹೂರ್ತ ಕೂಡಾ ನೆರವೇರಿತು. 2002ರ ಫೆಬ್ರವರಿ 8ರಂದು ಚಿತ್ರ ತೆರೆಗೆ ಬಂದಿತ್ತು. ಸಿನಿಮಾ ಬಿಡುಗಡೆಯಾಗುವ ತನಕ ತೂಗುದೀಪ ಶ್ರೀನಿವಾಸ್‌ ಅವರ ಮಗ ದರ್ಶನ್‌ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ ಅನ್ನೋದನ್ನು ಬಿಟ್ಟರೆ ಮುಂದೊದು ದಿನ ಇದೇ ನಟ ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಸ್ಟಾರ್‌ ಆಗಿ ಎದ್ದುನಿಲ್ಲುತ್ತಾರೆ ಅಂತಾ ಯಾರೂ ಊಹಿಸಿರಲಿಲ್ಲ. ಚಿತ್ರ ತೆರೆಮೇಲೆ ಬಂದಾಗ ದರ್ಶನ್‌ ಅವರ ಹಾವ ಭಾವ, ಕಣ್ಣುಗಳಲ್ಲಿನ ತೀಕ್ಷ್ಣತೆ, ಎತ್ತರ ಎಲ್ಲವೂ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸಿತು.

ಈ ಸಿನಿಮಾ ತಯಾರಾಗುವಲ್ಲಿ ಗೀತರಚನೆಕಾರ ಡಾ.ವಿ . ನಾಗೇಂದ್ರ ಪ್ರಸಾದ್‌ ಅವರ ಪಾತ್ರ ದೊಡ್ಡದು. ನಿರ್ದೇಶಕ ಪಿ.ಎನ್.‌ ಸತ್ಯ ಅವರೊಂದಿಗೆ ಎಲ್ಲ ವಿಭಾಗಗಳಲ್ಲೂ ನಾಗೇಂದ್ರ ಪ್ರಸಾದ್‌ ಶ್ರಮಿಸಿದ್ದರು. ‘ನಾನೇ ನಾನೇ ರಾಜಾದಿರಾಜ ಎಂದೆಂದಿಗೂ…’ ಅಂತಾ ನಾಗೇಂದ್ರ ಪ್ರಸಾದ್‌ ಅದ್ಯಾವ ಘಳಿಗೆಯಲ್ಲಿ ಬರೆದರೋ? ದರ್ಶನ್‌ ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ರಾಜಾದಿರಾಜನಂತೇ ಮೆರೆಯುತ್ತಿದ್ದಾರೆ.

ಮೆಜೆಸ್ಟಿಕ್‌ ನಂತರ ನಿರ್ಮಾಪಕ ಬಾ.ಮಾ. ಹರೀಶ್‌ ತಮ್ಮ ಉಲ್ಲಾಸ್‌ ಎಂಟರ್‌ ಪ್ರೈಸಸ್‌  ಮೂಲಕ ಶಿಷ್ಯ, ಅಯ್ಯೋ ಪಾಂಡು, ಮಾಗಡಿ. ಏಕ್‌ ದಿನ್‌ ಕಾ ಸುಲ್ತಾನ್‌ ಮತ್ತು ಈಗ ನಿರ್ಮಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆವತ್ತು ಬಾಮಾ ಹರೀಶ್‌ ಮನಸ್ಸು ಮಾಡಿ ʻಮೆಜೆಸ್ಟಿಕ್‌ʼ ಮಾಡಲು ಮನಸ್ಸು ಮಾಡದಿದ್ದರೆ, ʻಹೊಸಾ ಹುಡುಗನನ್ನು ನಂಬಿ ಹೇಗೆ ಹಣ ಹಾಕೋದುʼ ಅಂತಾ ಯೋಚಿಸಿದ್ದಿದ್ದರೂ ದರ್ಶನ್‌ ಹೀರೋ ಆಗಿ ನಿಲ್ಲುತ್ತಿದ್ದರಾ? ಈ ಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದರಾ? ಗೊತ್ತಿಲ್ಲ. ಆದರೆ, ಮೆಜೆಸ್ಟಿಕ್‌ ದರ್ಶನ್‌ ಸೇರಿದಂತೆ ಎಲ್ಲರಿಗೂ ಬ್ರೇಕ್‌ ನೀಡಿದ್ದಂತೂ ನಿಜ.

ಇವತ್ತು ಈ ಸಿನಿಮಾ ರಿಲೀಸಾಗಿ ಹತ್ತೊಂಬತ್ತು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನಿರ್ದೇಶಕ ಪಿ.ಎನ್.‌ ಸತ್ಯ ಕಣ್ಮರೆಯಾಗಿದ್ದಾರೆ. ಮೆಜೆಸ್ಟಿಕ್‌ ನಂತರ ಸತ್ಯ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದರು. ಈ ಸಿನಿಮಾ ಹಿಟ್‌ ಆದ ನಂತರ ಇದೇ ಕಾಂಬಿನೇಷನ್ನಿನಲ್ಲಿ ದಾಸ ಕೂಡಾ ರೂಪುಗೊಂಡಿತು. ಇವತ್ತು ಸತ್ಯ ಇಲ್ಲದಿದ್ದರೂ ದರ್ಶನ್‌ ಅವರಿಗಾಗಿ ನಿರ್ದೇಶಿಸಿದ ಸಿನಿಮಾಗಳು ಅವರ ಹೆಸರನ್ನು ಉಳಿಸಿವೆ.

ಮೆಜೆಸ್ಟಿಕ್‌ ನಂಥಾ ದಾಖಲೆ ಬರೆದ ಸಿನಿಮಾವನ್ನು ನಿರ್ಮಿಸಿದ ಉಲ್ಲಾಸ್‌ ಎಂಟರ್‌ ಪ್ರೈಸಸ್‌ ಮತ್ತು ಆ ಮೂಲಕ ಎದ್ದು ನಿಂತ ದರ್ಶನ್‌ ಅವರಿಗೂ ಈ ಸಂದರ್ಭದಲ್ಲಿ ಶುಭಾಶಯ ತಿಳಿಸೋಣ.


Posted

in

by

Tags:

Comments

Leave a Reply