ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ವಂಚಿಸೋರಿಗೇನು ಇಲ್ಲಿ ಕೊರತೆಯಿಲ್ಲ. ಕಾಲಾನುಕಾಲದಿಂದಲೂ ಇಂಥ ಐನಾತಿಗಳು ಗಾಂಧಿನಗರದ ಗಲ್ಲಿಗಳಲ್ಲಿ ಅಂಡಲೆಯುತ್ತಿದ್ದರು. ಅದೇ ಸಂತತಿ ಈಗ ನಾಗರಬಾವಿ ಕಡೆ ತಿರುಪೆ ಎತ್ತಲು ಶುರು ಮಾಡಿದೆ!

ಅವನ್ಯಾರೋ ಮಾಸ್ಕ್‌ ಮಲ್ಲೇಶ್‌ ಅಲಿಯಾಸ್‌ ಪ್ರದೀಪ ಅಂತೆ… ಶ್ರೀಯುತರಿಗೆ ರಕ್ಷಿತ್‌ ಎನ್ನುವ ನಾಮಧೇಯವೂ ಉಂಟಂತೆ… ಹೆಣ್ಣುಮಕ್ಕಳೇ ಇವನ ಟಾರ್ಗೆಟ್ಟು. ಮೊದಲಿಗೆ ತಾನೊಬ್ಬ ನಿರ್ಮಾಪಕ ಅಂತಾ ಪರಿಚಯಿಸಿಕೊಳ್ಳುತ್ತಾನೆ. ʻʻದೊಡ್ಡ ಬಜೆಟ್ಟಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ. ರಕ್ಷಿತ್‌ ಶೆಟ್ಟಿ ಹೀರೋ. ಇನ್ನು ಒಂದು ತಿಂಗಳ ಒಳಗಾಗಿ ಸಿನಿಮಾ ಮುಹೂರ್ತ ನಡೆಯಲಿದೆʼʼ ಎಂದು ತಲೆ ಮೇಲೆ ಹೊಡೆದಂಗೆ ಸುಳ್ಳು ಹೇಳಿ ನಂಬಿಸುತ್ತಾನೆ. ಪಾಪದ ಹೆಣ್ಣುಮಕ್ಕಳು ಈತನ ಮಾತು ನಂಬಿದ್ದೇ ಆದಲ್ಲಿ, ಹಳ್ಳಕ್ಕೆ ಬೀಳೋದು ಖಚಿತ.

ಮೊದಲಿಗೆ ʻನನ್ನ ಸಿನಿಮಾದಲ್ಲಿ ನಿಮಗೆ ಛಾನ್ಸು ಫಿಕ್ಸ್‌ʼ ಅಂತಾ ಮರ ಹತ್ತಿಸುತ್ತಾನೆ. ನಂತರ,  ʻವಿಪರೀತ ಟ್ರಾನ್ಸಾಕ್ಷನ್‌ ಮಾಡಿ ನನ್ನ ಬ್ಯಾಕ್‌ ಅಕೌಂಟ್‌ ಲಾಕ್‌ ಆಗಿಬಿಟ್ಟಿದೆ. ಅರ್ಜೆಂಟಾಗಿ ಕ್ಯಾಷ್‌ ಬೇಕಿತ್ತು . ಸ್ವಲ್ಪ ಅರೇಂಜ್‌ ಮಾಡ್ತೀರಾ?ʼ ಅಂಥಾ ಜಾಕ್‌ ಹಾಕುತ್ತಾನೆ. ʻಹೇಗೂ ಸಿನಿಮಾದಲ್ಲಿ ಅವಕಾಶ ಸಿಕ್ಕಿತಲ್ಲಾʼ ಅಂತಾ ನಂಬಿದವರು ಇವನ ಕೈಗೆ ಕಾಸು ಕೊಟ್ಟರೆ ಕತೆ ಮುಗಿದಂತೆ. ಇವಿಷ್ಟೂ ವ್ಯವಹಾರ ಮುಗಿಯೋತನಕ ಯಾವ ಕಾರಣಕ್ಕೂ ಮಲ್ಲೇಶ ಮಾಸ್ಕ್‌ ತೆಗೆಯೋದಿಲ್ಲ ಅನ್ನೋದೇ ಇಲ್ಲಿ ವಿಶೇಷ. ಕೊರೋನಾ ವೈರಸ್ಸು ಹಬ್ಬಬಾರದು ಅಂತಾ ಸರ್ಕಾರ ಮಾಸ್ಕ್‌ ಧರಿಸೋದನ್ನು ಕಡ್ಡಾಯ ಮಾಡಿದೆ. ವೈರಸ್ಸಿಗಿಂತಾ ಡೇಂಜರಾಗಿರುವ ಈ ಕಪಟಿ ಮಲ್ಲೇಶ ಅದೇ ಮಾಸ್ಕನ್ನು ತನ್ನ ವಂಚನಾ ಕೃತ್ಯಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾನೆ.

ಆಶಾರಾಣಿ (ಹೆಸರು ಬದಲಿಸಿದೆ) ಎನ್ನುವ ಹೆಣ್ಣುಮಗಳು ಸೇರಿದಂತೆ ಅನೇಕರು ಈತನ ಖೆಡ್ಡಾಗೆ ಬಿದ್ದು ನಷ್ಟ ಅನುಭವಿಸಿದ್ದಾರೆ. ಈ ಹಿಂದೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯಿಸಿದ್ದ ರಾಜಧಾನಿ ಸಿನಿಮಾವನ್ನು ಅರ್ಧ ಭಾಗ ನಿರ್ದೇಶನ ಮಾಡಿದ್ದ ವ್ಯಕ್ತಿ ರಘುಜಯ. ನಂತರ ಗೋಲಿಸೋಡಾ ಸಿನಿಮಾವನ್ನು ಕೂಡಾ ಇದೇ ರಘುಜಯ ಡೈರೆಕ್ಟ್‌ ಮಾಡಿದ್ದರು. ಗುಣಮಟ್ಟದ ಸಿನಿಮಾವಾಗಿದ್ದರೂ ಕಲೆಕ್ಷನ್‌ ಕಂಡಿರಲಿಲ್ಲ. ನಂತರ ರಘು ಜಯ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ ಅಂತಾ ತಿರುಗಾಡಿದ್ದು ನಿಜ. ಆದರೆ ಈ ವರೆಗೆ ಯಾವ ಚಿತ್ರ ಕೂಡಾ ಆರಂಭಿಸಿದ ಕುರುಹು ಕಾಣುತ್ತಿಲ್ಲ. ಸಿನಿಮಾ ಇಲ್ಲದ ದಿನಗಳಲ್ಲಿ ಆಟೋ ಓಡಿಸಿ ಜೀವನ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ರಘು ಜಯನ ಬಗ್ಗೆ ಕೆಲವಾರು ಮಂದಿ ಗೌರವ ಇಟ್ಟುಕೊಂಡಿದ್ದೂ ಹೌದು.

ಈ ರಘುಜಯ ಆಶಾರಾಣಿಗೆ ಮಾಸ್ಕ್‌ ಮಲ್ಲೇಶನನ್ನು ಪರಿಚಯಿಸಿದರಂತೆ. ಪರಿಚಯವಾದ ಮೇಲೆ ಯಥಾ ಪ್ರಕಾರ ಮಲ್ಲೇಶ ಹುಡುಗಿಯ ಬಳಿ ಕಾಸು ಪೀಕಿದ್ದಾನೆ. ಯಾವಾಗ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ಆಶಾರಾಣಿಗೆ ಗೊತ್ತಾಯ್ತೋ ʻದುಡ್ಡು ವಾಪಾಸು ಕೊಡಿʼ ಅಂತಾ ದುಂಬಾಲು ಬಿದ್ದಿದ್ದಾಳೆ. ಕಾರ್ಯಸಾಧನೆಯ ನಂತರ ಮಲ್ಲೇಶ ಮೊಬೈಲ್‌ ಸ್ವಿಚಾಫ್‌ ಮಾಡಿದ್ದಾನೆ. ರಘು ಜಯನನ್ನು ಕೇಳಿದರೆ ʻನನಗೂ ಆತ ಕೈಗೆ ಸಿಗ್ತಾ ಇಲ್ಲ. ಬೇಕಿದ್ದರೆ ನಾನೇ ಹಣ ವಾಪಾಸು ಕೊಡ್ತೀನಿʼ ಅಂತಾ ಒಪ್ಪಿದ್ದಾರೆ. ಆದರೆ ದಿನಗಳು ಉರುಳಿದರೂ ರಘು ದಿನಕ್ಕೊಂದು ನೆಪ ಹೇಳಿ ಬಚಾವಾಗಿದ್ದು ಬಿಟ್ಟರೆ ಈ ವರೆಗೆ ಹಣ ಕಳೆದುಕೊಂಡ ಹುಡುಗಿಗೆ ಬಿಡಿಗಾಸೂ ದಕ್ಕಿಲ್ಲ!

ನಾಗರಬಾವಿಯ ನಮ್ಮೂರ ತಿಂಡಿಯ ಆಸುಪಾಸಿನಲ್ಲಿ ಓಡಾಡಿಕೊಂಡು ವಂಚಿಸುತ್ತಿರುವ ಮಾಸ್ಕ್‌ ಮಲ್ಲೇಶನನ್ನು ಹಿಡಿದು ವಂಚನೆಗೊಳಗಾದ ಹೆಣ್ಣುಮಕ್ಕಳು ಕಿತ್ತುಹೋದ ಚಪ್ಪಲೀಲಿ ಹೊಡೆದರೆ ಬಹುಶಃ ಇವನ ಉಪಟಳ ತಪ್ಪಬಹುದು. ಅಥವಾ ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ತದುಕಿದರೆ ಇವನ ಹಾವಳಿ ಕೊನೆಯಾಗಬಹುದು!

ಮಾಸ್ಕ್‌ ಮಲ್ಲೇಶನಂಥಾ ಗಿರಾಕಿಗಳು ಅವಕಾಶ ಕೊಡುವ ನೆಪದಲ್ಲಿ ಯಾರನ್ನು ಬೇಕಾದರೂ ಯಾಮಾರಿಸಬಹುದು ಎಚ್ಚರ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಇದು ಪ್ರಣವ ಸೂರ್ಯ ಪ್ರಯೋಗ!

Previous article

Demystifying Cross Border Business Events PingPong Payments

Next article

You may also like

Comments

Leave a reply

Your email address will not be published.