ಮೋಷನ್ ಪೋಸ್ಟರ್ ಮೂಲಕವೇ ಥ್ರಿಲ್ ಮೂಡಿಸಿದ್ದ ಮನರೂಪ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟರ್ ಮೂಲಕ ಗಮನಸೆಳೆದಿದೆ. ಐವರು ತಮ್ಮನ್ನೇ ತಾವು ಚಿತ್ರಿಸಿಕೊಂಡಂತೆ ಅಥವಾ ಇನ್ಯಾರೋ ಚಿತ್ರಿಸುತ್ತಿರುವಂತೆ ಭಾಸವಾಗುವ ಪೋಸ್ಟರ್ ಭಯ, ಆತಂಕ ಮತ್ತು ಕುತೂಹಲದ ಭಾವಗಳನ್ನು ಒಳಗೊಂಡಿದ್ದು, ಸಿನಿಮಾಸಕ್ತರ ಗಮನ ಸೆಳೆಯುವಂತಿದೆ. ಗುಮ್ಮ ಇಸ್ ವಾಚಿಂಗ್ ಎಂಬ ಘೋಷವಾಕ್ಯದೊಂದಿಗೆ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ನಲ್ಲಿರುವ ಐವರು ವ್ಯಕ್ತಿಗಳಲ್ಲೇ ಯಾರೊ ಗುಮ್ಮ ಇರಬಹುದೇ ಅಥವಾ ಇನ್ಯಾರೋ ಬೇರೆ ಇದ್ದಾರೆಯೇ ಎಂಬ ಕುತೂಹಲವನ್ನು ಮೂಡಿಸುತ್ತಿದೆ.
“ಪಶ್ಚಿಮಘಟ್ಟ ಎಂದಾಕ್ಷಣ ನಮ್ಮ ಮನಸ್ಸಿನ ಮೂಲೆಯಲ್ಲಿ ಹಾದುಹೋಗುವುದು ಮನುಷ್ಯರು ಇಂದಿಗೂ ಪ್ರವೇಶಿಸಲು ಸಾಧ್ಯವಾಗದ ಹಲವು ಕಾನನಗಳು. ಇಂದಿಗೂ ನಿಗೂಢವಾಗಿಯೇ ಉಳಿದಿರುವ, ಯಾರ ಕಣ್ಣಿಗೂ ಕಂಡಿರದ ಕರಡಿ ಗುಹೆಯನ್ನು ಅನ್ವೇಷಿಸಲು ಹೊರಟ ಐವರು ಸ್ನೇಹಿತರು, ದಟ್ಟ ಕಾನನದಲ್ಲಿ ಅವರ ಎದುರು ಅನಾವರಣಗೊಳ್ಳುವ ಮನುಷ್ಯನ ವಿವಿಧ ಮುಖಗಳು, ಅವರ ಕದಡಿದ ಮನಃಸ್ಥಿತಿ, ಅವರಿಗಿರುವ ಸ್ವಮೋಹ (ನಾರ್ಸಿಸೀಸಮ್), ಮಾಸ್ಕೊಫೋಬಿಯಾ (ಮುಖವಾಡದ ಭಯ)….ಹೀಗೆ ಸಾಗುತ್ತದೆ ಮನರೂಪದ ಕಥನ. ಇಂದಿಗೂ ನಿಗೂಢವಾಗಿರುವ ಕರಡಿ ಗುಹೆಯ ಹುಡುಕಾಟದ ಕಥೆಯಂತೆ ಸಾಗುತ್ತದೆ ಈ ಸಿನಿಮಾ ಕಥನ. ಈ ಚಿತ್ರದ ಮುಖ್ಯ ಪಾತ್ರದ ಪೋಸ್ಟರ್ ಈ ಸ್ನೇಹಿತರ ಹೋರಾಟ, ಅವರ ಮುಖದಲ್ಲಿ ಹೊರ ಹೊಮ್ಮುವ ಭಾವನೆಗಳನ್ನು ಸೆರೆಹಿಡಿದಿದೆ. ಇದು ಗುಮ್ಮದ ಅಸ್ತಿತ್ವ ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ಇರುವಿಕೆಯ ಸಾಧ್ಯತೆಯನ್ನು ತೋರಿಸುತ್ತದೆ,” ಎಂದು ಮನರೂಪ ಸಿನಿಮಾದ ನಿರ್ದೇಶಕ ಕಿರಣ್ ಹೆಗಡೆ ವಿವರಿಸಿದ್ದಾರೆ.
ಮನರೂಪದ ಕತೆ ತನ್ನ ಎಳೆಗಳನ್ನು ಬಿಚ್ಚುತ್ತಾ ಹೋದಂತೆ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಯಾರಿದು ಗುಮ್ಮ? ಆ ದಟ್ಟ ಕಾನನದಲ್ಲಿ ಗುಮ್ಮ ಮಾಡುತ್ತಿರುವುದಾದರೂ ಏನು? ಅಲ್ಲಿ ಗುಮ್ಮ ಇರುವುದಾದರೂ ಏಕೆ? ಒಟ್ಟು ಅಲ್ಲಿ ಎಷ್ಟು ಗುಮ್ಮಗಳಿವೆ? ಈ ಪೋಸ್ಟರ್ನಲ್ಲಿರುವ ಐವರೇ ಗುಮ್ಮಗಳೇ? ಈ ಕ್ಯಾಮೆರಾ ರೆಕಾರ್ಡಿಂಗ್ ಅರ್ಥವೇನು? ಬೇರೆ ಯಾರೋ ಗುಮ್ಮಗಳಿದ್ದರೆ, ಐದು ಜನ ಗೆಳೆಯರಿಗೆ ಏನಾದರು ಕೆಡುಕು ಬಗೆಯುತ್ತವೆಯೇ? ಅಥವಾ ಭಯಾನಕವಾಗಿರುವ, ಜನರ ಸುಳಿವೇ ಇಲ್ಲದ ಕಾಡಿನಲ್ಲಿ ಈ ಗೆಳೆಯರು ಮನಸ್ಸಿನಲ್ಲಿ ಹುದುಗಿದ ಭಯವೇ ಗುಮ್ಮನಾಗಿ ಅವರ ಮೇಲೆ ಸವಾರಿ ಮಾಡುತ್ತದೆಯೇ? ಎಂಬುದನ್ನು ತೆರೆಯ ಮೇಲೆ ನೋಡಿ ಥ್ರಿಲ್ ಆಗಬೇಕು ಎಂಬುದು ನಿರ್ದೇಶಕರ ಅಂಬೋಣ.
ಹಲವಾರು ವರ್ಷಗಳ ಬಳಿಕ ಭೇಟಿಯಾಗಿ ಕರಡಿ ಗುಹೆಯನ್ನು ಅರಸುತ್ತಾ ಹೊರಡುವ ಮನರೂಪದ ಮುಖ್ಯ ಪಾತ್ರಗಳಾಗಿರುವ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್ ಮತ್ತು ಶಿವಪ್ರಸಾದ್ರ ಚಿತ್ರಣವಿದೆ. ಈ ಚಿತ್ರದಲ್ಲಿರುವ ಕೆಲವು ಪಾತ್ರಗಳ ಮುಖದ ಮೇಲಿರುವ ಗಾಯದ ಗುರುತುಗಳು ಮತ್ತು ಭಯಭೀತಗೊಂಡಿರುವ ಅವರ ಕಣ್ಣುಗಳು ತಮ್ಮ ಒಡಲಿನಲ್ಲಿ ಏನೋ ನಿಗೂಢವನ್ನು ಕಟ್ಟಿಕೊಂಡಿರುವಂತೆ ನೋಡುಗನಿಗೆ ಭಾಸವಾಗುವಂತೆ ಮಾಡುತ್ತವೆ. ಅವರು ನೋಡಿರುವುದಾದರು ಏನು? ಅವರು ಯಾಕೆ ಗಾಯಗೊಂಡಿದ್ದಾರೆ? ಇದು ಹೇಗಾಯ್ತು? ಹೀಗೆ ನೋಡುಗನ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸುತ್ತಾ ಹೋಗುತ್ತವೆ. `ಈ ಎಲ್ಲಾ ರಹಸ್ಯದ ಎಳೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಸಾಗುವ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ಮನರೂಪ ಕಥೆಯ ಸ್ವರೂಪಕ್ಕೆ ಅನುಗುಣವಾಗಿ ಚಲನಚಿತ್ರಕ್ಕೆ ಸರವಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೂರಿ ಮತ್ತು ಲೋಕಿ ಚಿತ್ರದ ಸಂಕಲನ ಕಾರ್ಯ ನಿರ್ವಹಿಸಿದ್ದು, ಗೋವಿಂದ್ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಧ್ವನಿ ವಿನ್ಯಾಸವನ್ನು ನಾಗರಾಜ್ ಹುಲಿವಾನ್ ಮತ್ತು ನಾಗೇಶ್ ಮಾಡಿದ್ದಾರೆ. ಸಂಭಾಷಣೆ ಜವಾಬ್ದಾರಿ ಸಾಹಿತಿ ಮಹಾಬಲ ಸೀತಾಳಭಾವಿ ಅವರದ್ದು. ಅಕ್ಟೋಬರ್ ತಿಂಗಳಲ್ಲಿ ಮನರೂಪ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದು ಎಂದು ಚಿತ್ರ ನಿರ್ಮಾಣ ಮಾಡುತ್ತಿರುವ ಸಿ.ಎಂ.ಸಿ.ಆರ್ ಮೂವೀಸ್ ತಿಳಿಸಿದೆ.