ದುರ್ಗಮ ಅರಣ್ಯದ ಯಾರೂ ಕಾಲಿಡದ ಜಾಗದಲ್ಲಿ ಈ ತಲೆಮಾರಿನ ಹುಡುಗರು ತಮ್ಮ ಭಾವನೆಗಳನ್ನು ಶೋಧಿಸಲು ಹೊರಟಾಗ ಎದುರಾಗುವ ತಲ್ಲಣಗಳನ್ನು ಸೆರೆಹಿಡಿಯುವ ಪ್ರಯತ್ನವೇ ಹೊಸ ಕಾಲದ ಸೈಕಾಲಜಿಕಲ್ ಥ್ರಿಲ್ಲರ್ – ಮನರೂಪ. ನಮ್ಮ ಮನದಾಳದ ಕನ್ನಡಿಯಲ್ಲಿ ಪ್ರತಿಫಲಿಸುವ ವಿಚ್ಛಿದ್ರ ಭಾವನೆಗಳ ಕತೆಯಿದು. ಅಜ್ಞಾತ ಪ್ರದೇಶದಲ್ಲಿ ಅನಿರೀಕ್ಷಿತ ಸಂದರ್ಭಗಳಿಗೆ ಸಿಲುಕಿ ಸಾಗುವ ಹೊಸ ತಲೆಮಾರಿನ ಹುಡುಗರು ಕೊನೆಗೆ ಪ್ರೇಕ್ಷಕರನ್ನು ತಮ್ಮ ಜೊತೆಗೇ ಕರಡಿ ಗುಹೆಗೆ ಕರೆದೊಯ್ದುತ್ತಾರೆ ಎಂಬ ನಂಬಿಕೆ ಚಿತ್ರತಂಡದ್ದು. ಮನರೂಪದಲ್ಲಿ ಹಿಂದೆಂದೂ ಮುಟ್ಟಿರದ ಸಬ್ಜೆಕ್ಟ್ ಇದೆಯಂತೆ. ಅದು ಗುಮ್ಮ ಎಂಬ ಥೀಮ್. ಕಾಡು ಎಂಬ ಕನ್ನಡಿಯಲ್ಲಿ ಗುಮ್ಮನ ರೂಪ ಪ್ರೇಕ್ಷಕರನ್ನು ರಂಜಿಸಲಿದೆ ಎಂಬುದು ಚಿತ್ರ ನಿರ್ಮಾಣ ಮಾಡುತ್ತಿರುವ ಸಿ.ಎಂ.ಸಿ.ಆರ್ ಮೂವೀಸ್‌ನ ನಂಬಿಕೆ.

ದುರ್ಗಮ ಕಣಿವೆ, ಇಳಿಜಾರು, ಪೊದೆಗಳು, ಬೆಟ್ಟದ ತುದಿಗಳು ಮತ್ತು ನದಿ ದಂಡೆಯಲ್ಲಿ ಕಾಡಿನ ನಿಗೂಢ ಲೋಕ ಮನರೂಪ ಚಿತ್ರದ ಪ್ಲಸ್ ಪಾಯಿಂಟ್ ಎಂದು ನಿರ್ದೇಶಕ ಕಿರಣ್ ಹೆಗಡೆ ಅಭಿಪ್ರಾಯ. ಅವರಿಗೆ ಇದು ಮೊದಲ ಚಿತ್ರ. ಸಿನಿಮಾದ ಶೇ.೯೦ರಷ್ಟು ಚಿತ್ರೀಕರಣ ಹೊರಾಂಗಣದ ದಟ್ಟ ಕಾಡಿನಲ್ಲಿ ನಡೆದಿದ್ದು, ನಗರ ಪ್ರದೇಶದ ವೀಕ್ಷಕರಿಗೆ ಪ್ರಕೃತಿಯ ವಿಸ್ಮಯಗಳನ್ನು ಆಸ್ವಾದಿಸುವ ಅದ್ಭುತ ಅವಕಾಶವಿದು. ಅದೇ ವೇಳೆ, ಚಾರಣಿಗರು ಯಾವುದೇ ಸಿದ್ಧತೆಯಿಲ್ಲದೆ ಅಥವಾ ಸೂಕ್ತ ತಯಾರಿಯಿಲ್ಲದೆ ಹೊರಟರೆ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗಳ ಮೇಲೂ ಇದು ಬೆಳಕು ಚೆಲ್ಲುತ್ತದೆ.

ಮನರೂಪ ಸಿನಿಮಾ ಕತೆಯ ಏಳೆಯೇ ಆಕರ್ಷಣೀಯವಾಗಿದೆ. ಕಾಲೇಜು ದಿನಗಳ ನಂತರ ತಮ್ಮದೇ ಬದುಕಿನಲ್ಲಿ ವ್ಯಸ್ತರಾಗಿ ಬೇರೆ ಬೇರೆ ಕಡೆ ಹಂಚಿಹೋಗಿದ್ದ ಸ್ನೇಹಿತರು ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತೆ ಒಂದೆಡೆ ಕಲೆಯುತ್ತಾರೆ. ಪಶ್ಚಿಮ ಘಟ್ಟದ ದಟ್ಟ ಕಾಡಿಗೆ ಚಾರಣ ಹೋಗುವುದು ಅವರ ಪ್ಲಾನ್. ಹೀಗೆ ಐವರು ಸ್ನೇಹಿತರು ಕರಡಿ ಗುಹೆ ಹುಡುಕಲು ಹೋಗುವಾಗ ಹಳೆಯ ನೆನಪು, ಸ್ನೇಹ, ಪ್ರೀತಿ, ಕೀಟಲೆ, ದ್ವೇಷ ಇತ್ಯಾದಿಗಳ ಜೊತೆಗೇ ಭವಿಷ್ಯದ ಕನಸುಗಳನ್ನೂ ಹಂಚಿಕೊಳ್ಳುತ್ತಾರೆ.

ಪ್ರಯಾಣದ ವೇಳೆ ಸ್ನೇಹಿತರು ತಾವು ಹೇಗೆ ಹಳೆಯ ಸುಂದರ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಹೇಗೆ ಅದ್ಭುತ ಅವಕಾಶಗಳನ್ನು ಕಳೆದುಕೊಂಡಿದ್ದೇವೆ ಎಂದು ಮಾತನಾಡಿಕೊಳ್ಳುತ್ತಾರೆ. ಅವರಲ್ಲೇ ಕೆಲವರಿಗೆ ಹಳೆಯ ಸಂಬಂಧಗಳು ಹೇಗೆ ಇನ್ನೂ ತಮ್ಮಲ್ಲಿ ಜೀವಂತವಾಗಿವೆ ಎಂಬುದು ಕಾಡುತ್ತದೆ. ಆದರೆ, ನೈತಿಕತೆಯ ಪ್ರಶ್ನೆ ಧುತ್ತೆಂದು ಎದ್ದು ನಿಲ್ಲುತ್ತದೆ. ಇವುಗಳ ನಡುವೆಯೇ ಅವರಲ್ಲಿ ಕರಡಿ ಗುಹೆಗೆ ಹೋಗುವ ತೀವ್ರ ಕಾತುರ. ಕಾಡಿನ ದಟ್ಟ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಂತೆ ದುರ್ಗಮ ಕಣಿವೆಯೂ ಸೇರಿದಂತೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ ಎಂದು ಕತೆಯ ಒಳಗುಟ್ಟನ್ನು ಬಿಡದೇ ಕಿರಣ್ ಹೆಗಡೆ ಇನ್ನಷ್ಟು ಕುತೂಹಲ ಮೂಡಿಸುತ್ತಾರೆ.

ಕರಡಿ ಗುಹೆಯಲ್ಲಿ ತೀವ್ರತರ ನಾರ್ಸಿಸಿಸ್ಟಿಕ್ ಮನಸ್ಸಿನ ಅನೂಹ್ಯ ಹಾಗೂ ವಿಚಿತ್ರ ಬಲೆಯೊಂದರ ರಹಸ್ಯವಿದೆ ಎಂಬುದು ನಿರ್ದೇಶಕರ ಹೇಳಿಕೆ. ಅದರಿಂದ ಹೊರಬರಲು ಈ ಸ್ನೇಹಿತರು ಹೇಗೆ ಪರದಾಡುತ್ತಾರೆ ಎಂಬುದೇ ಸಿನಿಮಾದ ಅಂತರಾಳ. ಇಡೀ ಕತೆ ಎರಡು ದಿನದಲ್ಲಿ ನಡೆಯುತ್ತದೆ. ಪ್ರೇಕ್ಷಕರಿಗೆ ಇಲ್ಲಿ ಎಂಜಾಯ್ ಮಾಡಲು ವಿಚಿತ್ರ ಅನುಭವಗಳ ಸರಮಾಲೆಯೇ ಇದೆ. ಸಾಧ್ಯವಾದರೆ ಸೆಲ್ಫ್ ಅಬ್ಸೆಷನ್ ಜೊತೆ ಪ್ರೇಕ್ಷಕರು ತಮ್ಮನ್ನೇ ಲಿಂಕ್ ಮಾಡಿಕೊಂಡು ತಳಮಳ ಅನುಭವಿಸಬಹುದು!
ಹೊಸ ಪ್ರತಿಭೆ ದಿಲೀಪ್ ಕುಮಾರ್, ಅನೂಷಾರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಗೋವಿಂದ್ ರಾಜ್ ಛಾಯಾಗ್ರಹಣ, ಸರ್ವಣ ಅವರ ಸಂಗೀತ, ಕಾಡಿನ ಶಬ್ಧಗ್ರಹಣ ಹುಲಿವಾನ್ ನಾಗರಾಜ್ ಮತ್ತು ಸಂಬಾಷಣೆ ಮಹಾಬಲ ಸೀತಾಳಭಾವಿ ಅವರದ್ದು.
ಮನರೂಪ ಚಿತ್ರ ನವೆಂಬರ್ ಕೊನೆಯಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಕರಡಿ ಗುಹೆ, ಗುಮ್ಮ ಮತ್ತು ಅಡ್ವೆಂಚರಸ್ ಥ್ರಿಲ್ಲರ್‌ನ್ನು ಪ್ರೇಕ್ಷಕ ಸಧ್ಯದಲ್ಲೇ ಕಣ್ತುಂಬಿಸಿಕೊಳ್ಳಬಹುದು.

CG ARUN

ಇದು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೌರವ!

Previous article

ಬಿದ್ದರೂ ಎದ್ದು ನಿಂತ ಬೆಳಗೆರೆ ನಾನೇ ಬಾಸು ಅಂದ್ರು!

Next article

You may also like

Comments

Leave a reply

Your email address will not be published. Required fields are marked *