ಸಾಮಾನ್ಯವಾಗಿ ಸಿನಿಮಾ ರೂಪಿಸುವ ನಿರ್ದೇಶಕರಿಗೆ ಒಂದಿಷ್ಟು ಭಯಗಳಿರುತ್ತವೆ. ಸಿನಿಮಾವೊಂದು ಹೀಗೆ ಶುರುವಾಗಿ, ಹೀಗೆಲ್ಲಾ ಸಾಗಿ, ಹೀಗೆಯೇ ಮುಗಿಯಬೇಕು ಅನ್ನೋ ಅಘೋಷಿತ ಸೂತ್ರಗಳು, ಮಾಮೂಲಿ ಫಾರ್ಮುಲಾಗೆ ಒಗ್ಗದಂತೆ ಸಿನಿಮಾ ಮಾಡಿದರೆ ಜನ ನೋಡೋದಿಲ್ಲ, ಥ್ರಿಲ್ಲರ್ ಸಿನಿಮಾಗಳ ರೋಡ್ ಮ್ಯಾಪು ಹೀಗೇ ಇರಬೇಕು… ಹೀಗೆ ಸಾಕಷ್ಟು ಬಗೆಯ, ತಮಗೆ ತಾವೇ ವಿಧಿಸಿಕೊಂಡ ಕಾನೂನುಗಳು ಚಿತ್ರನಿರ್ದೇಶಕರನ್ನು ಕಟ್ಟಿಹಾಕಿರುತ್ತವೆ. ಅಂತಾ ಎಲ್ಲ ಕಟ್ಟುಗಳು, ಕಟ್ಟಳೆಗಳು, ಕಟ್ಟುಪಾಡುಗಳನ್ನೆಲ್ಲಾ ಮೀರಿದ ಸಿನಿಮಾವೊಂದು ಬಂದಿದೆ. ಹೆಸರು ಮನರೂಪ!
ಹೆಸರಿಗೆ ತಕ್ಕಂತೆ ಮನಸ್ಸಿನ ವಿವಿಧ ರೂಪಗಳನ್ನು ಬಿಚ್ಚಿಟ್ಟಿರುವ ಸಿನಿಮಾವಿದು. ಮೇಲೆ ತಿಳಿಸಿದಂತೆ ನಿರ್ದೇಶಕನೊಬ್ಬ ಯಾವ ಭಯವೂ ಇಲ್ಲದೆ, ನನ್ನಿಷ್ಟದಂತೆ ನಾನು ಕಥೆ ಹೇಳುತ್ತೇನೆ. ಇಷ್ಟ ಇದ್ದರೆ ಕೇಳಿ ಇಲ್ಲದಿದ್ದರೆ ಎದ್ದುಹೋಗಿ ಅಂತಾ ಮೊದಲೇ ತಿಳಿಸಿ, ಸ್ವತಂತ್ರ ಮನಸ್ಥಿತಿಯಲ್ಲಿ ಕಟ್ಟಿಕೊಟ್ಟಿರುವ ಹೊ ಜಗತ್ತು ಮನರೂಪ…
ಇದು ಕಿರಣ್ ಹೆಗಡೆ ನಿರ್ದೇಶನದ ಮೊದಲ ಸಿನಿಮಾ. ಆದರೆ ಸಾಹಿತ್ಯದ ಸಾಹಚರ್ಯ, ಓದುವಿಕೆ, ನಿಜಕ್ಕೂ ಹೊಸದೆನ್ನಿಸುವ ಅಭಿರುಚಿ ಇರುವ ನಿರ್ದೇಶಕ ಕಿರಣ್ ಹೆಗಡೆ ಅನ್ನೋದು ಅವರ ಮನೋರೂಪವನ್ನು ನೋಡಿದ ಯಾರಿಗೇ ಆದರೂ ಅನ್ನಿಸದೇ ಇರಲಾರದು. ಸಿನಿಮಾ ವ್ಯಾಪಾರಿ ಮಾದ್ಯಮ. ಇಷ್ಟು ಕಾಸು ಹಾಕಿ, ಜನಕ್ಕೆ ಬೇಕಾದಂತೆ ಕತೆ ಹೇಳಿ, ವಾಪಾಸು ಬರುಬವ ಕಾಸನ್ನು ಎಣಿಸುವುದಷ್ಟೇ ಇಲ್ಲಿ ಬಹುತೇಕರ ಉದ್ದೇಶ. ಆದರೆ, ಸೂತ್ರಗಳನ್ನು ಮೀರಿದ ಸಿನಿಮಾ ಮಾಡಬೇಕು ಜೊತೆಗೆ ಅದು ಜನರಿಗೆ ರುಚಿಸಲೂಬೇಕು ಅನ್ನೋ ಉದ್ದೇಶವಿರುವ ನಿರ್ದೇಶಕರಿಂದ ಮಾತ್ರ ಮನರೂಪದಂಥಾ ಸಿನಿಮಾವನ್ನು ರೂಪಿಸಲು ಸಾಧ್ಯ.
ಆರಂಭದ ಫ್ರೇಮಿನಿಂದಲೇ ನೋಡುಗರೆದೆಯನ್ನು ಅಲುಗಾಡಿಸಿದರೆ ಅದು ಥ್ರಿಲ್ಲರ್ ಸಿನಿಮಾ ಅನ್ನುವ ವಾರಾವರಣವಿದೆ. ಮನರೂಪ ಕೂಡಾ ಥ್ರಿಲ್ಲರ್ ಜಾನರಿನ ಸಿನಿಮಾವೇ. ಆದರೆ ಇಲ್ಲಿ ನಿರ್ದೇಶಕ ಕಿರಣ್ ಹೆಗಡೆ ಕಥೆಗಾರನ ತಂತ್ರವನ್ನು ಅನುಸರಿಸಿದ್ದಾರೆ. ಹಂತ ಹಂತವಾಗಿ ನೋಡುಗರಿಗೆ ಚಿತ್ರದ ಕಥೆ ಆವರಿಸಿಕೊಳ್ಳಲು ಶುರು ಮಾಡುತ್ತದೆ. ಹಾಗೆ ಸಾಗುತ್ತಾ ನೋಡುಗರು ತಾವೇ ಪಾತ್ರಧಾರಿಗಳೆಂದು ಭ್ರಮಿಸಿಕೊಳ್ಳುವ ಹಂತಕ್ಕೆ ಕೊಂಡೊಯ್ಯುತ್ತಾರೆ. ಮೇಲ್ನೋಟಕ್ಕೆ ಇದೊಂದು, ಕಾಡು, ಅಲ್ಲಿಗೆ ತೆರಳುವ ಪ್ರವಾಸಿಗರ ಕಥೆಯಂತಿದ್ದರೂ, ಮನಸ್ಸೆಂಬ ಕಾಡು, ಅದರಲ್ಲಿರುವ ದಟ್ಟಣೆ, ಒಳಿತು, ಕೆಡುಕು, ಗುಮ್ಮನ ನೆರಳುಗಳನ್ನು ಪಾತ್ರಗಳ ಮೂಲಕ ಸಾಂಕೇಂತಿಕವಾಗಿ ಹೇಳಿದಂತಿದೆ.
ಈ ಸಿನಿಮಾದಲ್ಲಿ ನಿರ್ದೇಶಕನ ಚಿಂತನೆಗೆ ತಕ್ಕಂತೆ ಸಾಥ್ ಕೊಟ್ಟಿರುವುದು ಗೋವಿಂದರಾಜ್ ಅವರ ಛಾಯಾಗ್ರಹಣ ಮತ್ತು ಮಹಾಬಲ ಸೀತಾಳಬಾವಿ ಅವರ ಸಂಭಾಷಣೆ. ಬೇಕುಬೇಕಂತಾ ಎಲ್ಲೂ ಪಾತ್ರಗಳು ಮಾತಾಡುವುದಿಲ್ಲ. ಮಾತಾಡುವ ಮಾತು ನಾಟಕೀಯವಾಗಿಲ್ಲದೆ, ಸಹಜವಾಗಿ ಪೋಣಿಸಿಕೊಂಡಂತಿವೆ. ಸಿನಿಮಾದ ಮಾಮೂಲಿ ರೀತಿಗಳನ್ನು ಮೀರಬೇಕು ಅಂತಲೇ ಬರೆದಂತಾ ಸಂಭಾಷಣೆ ಖುಷಿ ಕೊಡುತ್ತದೆ. ಆರಂಭದಲ್ಲಿ ಕತೆ ನಿಧಾನ ಅಂತಾ ಅನ್ನಿಸಿದರೂ ಅದೇ ನಿರ್ದೇಶಕರ ಉದ್ದೇಶವಾಗಿರುವುದರಿಂದ ಅದನ್ನು ಸ್ವೀಕರಿಸಲೇಬೇಕು. ಆರ್ಯನ್, ನಿಶಾ, ಅನುಷಾ, ಶಿವಪ್ರಸಾದ್ ಮುಂತಾದವರ ಪಾತ್ರ ಪೋಷಣೆ ಪರಿಣಾಮಕಾರಿಯಾಗಿದೆ. ದೃಶ್ಯಕ್ಕೆ ತಕ್ಕ ಹಿನ್ನೆಲೆ ಸಂಗೀತರದಲ್ಲಿಒ ಸಮ್ಮೋಹಕ ಗುಣವಿದೆ. ಒಟ್ಟಾರೆ ಹೇಳಬೇಕೆಂದರೆ ಇದು ನಿಜಕ್ಕೂ ಹೊಸ ಬಗೆಯ ಸಿನಿಮಾ. ಅನುಭವಿಸಿ ನೋಡಿದರೆ ಮಾತ್ರ ರುಚಿಸುವಂತಾ ಚಿತ್ರ.
No Comment! Be the first one.