ಕರ್ನಾಟಕದ ಮಾಧ್ಯಮಗಳ ಪಾಲಿಗೆ ಇಡೀ ಇಂಡಿಯಾದಲ್ಲಿ ಎಲೆಕ್ಷನ್ ನಡೆಯುತ್ತಿರೋದು ಮಂಡ್ಯದಲ್ಲಿ ಮಾತ್ರ. ಈ ಕಣದಲ್ಲಿ ಎದುರಾಳಿಗಳು ಕೆಮ್ಮಿದ್ದು, ಕ್ಯಾಕರಿಸಿದ್ದೆಲ್ಲವೂ ರೋಚಕ ಸುದ್ದಿಯೆಂಬಂತೆ ಬಿಂಬಿಸುತ್ತಾ ಜನರ ತಲೆಚಿಟ್ಟು ಹಿಡಿಸಿ ಬಿಟ್ಟಿವೆ. ಅತ್ತ ಸಿ ಎಂ ಕುಮಾರಸ್ವಾಮಿ ಪುತ್ರ ನಿಖಿಲ್, ಇತ್ತ ದರ್ಶನ್ ಮತ್ತು ಯಶ್ ಎಂಬ ಜೋಡೆತ್ತುಗಳ ನಡುವೆ ಬಾತುಮುಖ ಹೊತ್ತ ಅಂಬಿಯಣ್ಣನ ಮಡದಿ ಸುಮಕ್ಕ… ಈ ಎರಡು ಬಣಗಳ ಬಹಿರಂಗ ಕದನಕ್ಕೀಗ ತೆರೆ ಬೀಳುವ ಸಮಯ ಬಂದಿದೆ.
ಆದರೆ, ಜನಸಾಮಾನ್ಯರ ತಲೆಯಲ್ಲಿ ನಾನಾ ಪ್ರಶ್ನೆಗಳು ಮಾತ್ರ ಈ ಕ್ಷಣಕ್ಕೂ ಗಿರಕಿ ಹೊಡೆಯುತ್ತಿವೆ. ಸುಮಲತಾ ಅಂಬರೀಶ್ ಆಸು ಪಾಸಲ್ಲಿ ನಿಂತು ದರ್ಶನ್ ಮತ್ತು ಯಶ್ ಪ್ರಚಾರ ನಡೆಸುತ್ತಿರೋದರ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ, ಈ ಜೋಡೆತ್ತುಗಳ ಸಿಎಂ ಕುಮಾರಸ್ವಾಮಿ ವಿರುದ್ಧ ಯಾಕೆ ಈ ಪಾಟಿ ಗುಟುರು ಹಾಕೋ ರಿಸ್ಕು ತೆಗೆದುಕೊಳ್ಳುತ್ತಿವೆ? ಇದರ ಹಿಂದಿರೋದು ಕೇವಲ ಅಂಬಿ ಮೇಲಿನ ಸೆಂಟಿಮೆಂಟ್ ಮಾತ್ರವಾ? ಅಂತೆಲ್ಲ ಒಂದಷ್ಟು ಪ್ರಶ್ನೆಗಳಿವೆ. ಈ ಬಗ್ಗೆ ಹುಡುಕಾಟಕ್ಕಿಳಿದರೆ ಎದುರಾಗೋರು ಮಜವಾದ ರಿವೇಂಜ್ ಸ್ಟೋರಿ!
ಕಿಚ್ ಆಫ್ ಕುರುಕ್ಷೇತ್ರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೇಳೋದಾದರೆ, ಅವರೊಳಗೆ ಅಂಬರೀಶ್ ಮೇಲೆ ಆಳವಾದ ಪ್ರೀತಿ ಅಭಿಮಾನ ಇರೋದು ಸುಳ್ಳಲ್ಲ. ಅದೇನೇ ಒರಟೊರಟಾಗಿ ಕಂಡರೂ ಎದೆಯಲ್ಲಿ ಪ್ರೀತಿಯ ಒರತೆಯಿಟ್ಟುಕೊಂಡವರು ದರ್ಶನ್. ಸಾಮಾನ್ಯವಾಗಿ ಅದೆಂಥಾ ಅಸಹನೆ, ಸಿಟ್ಟಿದ್ದರೂ ಜಿದ್ದು ಸಾಧಿಸುವ ಮಟ್ಟಕ್ಕೆ ದರ್ಶನ್ ಹಚ್ಚಿಕೊಳ್ಳುವವರಲ್ಲ. ಇಂಥಾ ದರ್ಶನ್ ಬರಬರುತ್ತಾ ಪಕ್ಕಾ ರಾಜಕಾರಣಿಯ ವರಸೆ ಪ್ರದರ್ಶಿಸುತ್ತಿರೋದರ ಹಿಂದೆ ಖಂಡಿತಾ ಸಿಎಂ ಕುಮಾರಸ್ವಾಮಿ ವಿರುದ್ಧದ ದ್ವೇಷವೇನಿಲ್ಲ. ಅವರಲ್ಲಿರೋದು ಕುರುಕ್ಷೇತ್ರದ ಕಣದಲ್ಲಿ ಹೊತ್ತಿಕೊಂಡ ಅಸಮಾಧಾನದ ಕಿಚ್ಚು!
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ನಟಿಸಿರೋದು ಗೊತ್ತೇ ಇದೆ. ಆ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ದರ್ಶನ್ ಇದ್ದಾರೆಂದರೆ ಯಾರೂ ಕೂಡಾ ಅವರನ್ನು ಓವರ್ ಟೇಕ್ ಮಾಡೋ ಸಾಹಸಕ್ಕೆ ಕೈ ಹಾಕೋದಿಲ್ಲ. ಆದರೆ ಅದೇಕೋ ನಿಖಿಲ್ ಅಭಿಮನ್ಯುವಾಗಿ ದರ್ಶನ್ ಅವರನ್ನೇ ಮೀರಿಸುವಂತೆ ಸ್ಕೋಪ್ ತೆಗೆದುಕೊಂಡರೆಂಬ ಮಾತಿದೆ. ಕುರುಕ್ಷೇತ್ರದಲ್ಲಿ ದರ್ಶನ್ ಅರ್ಧ ಗಂಟೆ ಕಣ್ಮರೆಯಾಗಿಬಿಟ್ಟಿರುತ್ತಾರಂತೆ. ಆ ಹೊತ್ತಿನಲ್ಲಿ ನಿಖಿಲ್ ರಾರಾಜಿಸುತ್ತಾರಂತೆ. ಮೊದಲು ಅಂದುಕೊಂಡಿದ್ದಕ್ಕಿಂತಾ ಹೆಚ್ಚು ಹೊತ್ತು ನಿಖಿಲ್ ಕುರುಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಮುನಿರತ್ನ ಕೂಡಾ ನಮ್ಮ ಚಿತ್ರದ ನಾಯಕನಟರಲ್ಲಿ ನಿಖಿಲ್ ಕೂಡಾ ಒಬ್ಬರು ಅಂತಾ ಜಾಹೀರಾತು ನೀಡಿದ್ದರು. ಇವೆಲ್ಲದರ ವಿರುದ್ಧ ಸೆಟ್ಟಲ್ಲಿಯೇ ದರ್ಶನ್ ಕುದ್ದು ಹೋಗಿದ್ದರು. ಈ ಬಗ್ಗೆ ಒಂದಷ್ಟು ಶೀತಲ ಸಮರಕ್ಕೂ ಕುರುಕ್ಷೇತ್ರ ಟೀಮು ಸಾಕ್ಷಿಯಾಗಿತ್ತು. ಆದರೆ ದರ್ಶನ್ ವಯಾವತ್ತೂ ಬಹಿರಂಗವಾಗಿ ಈ ಬಗ್ಗೆ ಮಾತಾಡಿದ್ದಿಲ್ಲ. ಇದೀಗ ನಿಖಿಲ್ ಮೇಲಿನ ದರ್ಶನ್ ಕುದಿತಕ್ಕೆ ಮಂಡ್ಯ ಚುನಾವಣಾ ಕಣ ವೇದಿಕೆಯಾದಂತಿದೆ. ದರ್ಶನ್ ಪಾಲಿಗೆ ಸುಮಲತಾ ಗೆಲ್ಲೋದರಷ್ಟೇ ನಿಖಿಲ್ ಸೋಲೋದೂ ಮುಖ್ಯವಾದಂತಿದೆ!
ಕಪಾಳ ಮೋಕ್ಷ ಪ್ರಸಂಗ
ಇದು ದರ್ಶನ್ ರಿವೇಂಜಿನ ಸ್ಟೋರಿಯಾದರೆ, ರಾಕಿಂಗ್ ಸ್ಟಾರ್ ಯಶ್ ನಿಜವಾದ ಟಾರ್ಗೆಟ್ ಸಿಎಂ ಕುಮಾರಸ್ವಾಮಿ. ಯಶ್ ಕುಮಾರಣ್ಣನ ವಿರುದ್ಧ ಸುಮಲತಾ ಪಕ್ಕದಲ್ಲಿ ನಿಂತು ತಿರುಗಿ ಬಿದ್ದಿರೋದರ ಹಿಂದೆ ವರ್ಷಾಂತರಗಳ ಹಿಂದೆ ನಡೆದಿದ್ದೊಂದು ಕಪಾಳಮೋಕ್ಷದ ಕಥೆಯಿದೆ. ಅದರ ಮೂಲವಿರೋದು ನಟಿ ರಾಧಿಕಾ ನಿರ್ಮಾಣ ಮಾಡಿ, ರಮ್ಯ ನಟಿಸಿದ್ದ ಲಕ್ಕಿ ಎಂಬ ಚಿತ್ರ. ಈ ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸಿದ್ದರು. ಚಿತ್ರೀಕರಣದ ಹಂತದಲ್ಲಿಯೇ ಆ ಕಾಲಕ್ಕೆ ದೊಡ್ಡ ರೂಮರ್ ಒಂದು ಆಸ್ಫೋಟಗೊಂಡಿತ್ತು. ಕುಮಾರಸ್ವಾಮಿಗಳು ಯಶ್ ಕಪಾಳಕ್ಕೆ ಬಾರಿಸಿದ್ದಾರೆಂಬುದು ಆ ರೂಮರಿನ ಸಾರಾಂಶ.
ಆ ಕಾಲಕ್ಕೆ ಮಾಧ್ಯಮಗಳಲ್ಲಿಯೂ ಸಣ್ಣಗೆ ಸುದ್ದಿಯಾಗಿದ್ದ ಈ ಕಪಾಳ ಮೋಕ್ಷ ಪ್ರಕರಣ ಆ ನಂತರ ತಣ್ಣಗಾಗಿತ್ತು. ಆದರೆ ಈ ಘಟನೆಯ ಸುತ್ತಾ ಸಾಕಷ್ಟು ರೂಮರುಗಳೂ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಿದ್ದವು. ಕುಮಾರಣ್ಣ ಯಶ್‌ಗೆ ಕಪಾಳಕ್ಕೆ ಬಾರಿಸಿದ್ದು ನಿಜವೆಂದೇ ಸುದ್ದಿಯಾಗಿತ್ತು. ಈವತ್ತಿಗೆ ಯಶ್ ಕೆಜಿಎಫ್ ಮೂಲಕ ಮಿರುಗಿದ್ದಾರೆ. ಈ ಹೊತ್ತಿನಲ್ಲಿಯೇ ಅವರಿಗೆ ಕುಮಾರಣ್ಣನ ವಿರುದ್ಧ ಸೇಡು ತೀರಿಸಿಕೊಳ್ಳೋ ಅವಕಾಶವೂ ಸಿಕ್ಕಿದೆ. ಸಾಮಾನ್ಯವಾಗಿ ಒಂದು ಹೆಜ್ಜೆ ಮುಂದಿಡಬೇಕೆಂದರೂ ಸಾವಿರ ಬಾರಿ ಯೋಚಿಸೋ ಯಶ್ ಲೆಕ್ಕಾಚಾರದ ಮನುಷ್ಯ. ಚುನಾವಣಾ ಕಣಕ್ಕಿಳಿದು ಪ್ರಚಾರ ಮಾಡಿದರೆ ವಿನಾ ಕಾರಣ ಡ್ಯಾಮೇಜುಗಳಾಗುತ್ತವೆಂಬ ಕಾರಣದಿಂದ ದೂರವೇ ಉಳಿಯುತ್ತಿದ್ದರೇನೋ. ಆದರೀಗ ಅಂಬಿ ಮೇಲಿನ ಅಭಿಮಾನದ ತುತ್ತೂರಿಯೊಂದಿಗೆ ಸಿಎಂ ವಿರುದ್ಧ ಹಳೇ ಸೇಡು ತೀರಿಸಿಕೊಳ್ಳುತ್ತಿದ್ದಾರೆಂಬ ಮಾತನ್ನು ಹಿಸ್ಟರಿ ಬಲ್ಲವರು ಆಡುತ್ತಿದ್ದಾರೆ..!
ಸಿಡುಕಿ ಸುಮಕ್ಕ
ಸರಿ… ಇದೆಲ್ಲವೂ ಸುಮಲತಾ ಆಸು ಪಾಸಲ್ಲಿ ನಿಂತಿರೋ ಜೋಡೆತ್ತುಗಳ ಕಥೆ. ಇನ್ನು ಅಂಬಿ ಹೆಸರು ಹೇಳಿಕೊಂಡು ಮಂಡ್ಯವನ್ನು ಉದ್ಧಾರ ಮಾಡಲು ಬಂದ ದೇವತೆಯಂತೆ ಪೋಸು ಕೊಡುತ್ತಿರೋ ಸುಮಕ್ಕನ ಕಥೆ ಏನು ಅಂತ ನೋಡ ಹೋದರೆ ಅಲ್ಲಿಯೂ ಕೂಡಾ ವೈರುಧ್ಯಗಳೇ ಎದುರು ನಿಲ್ಲುತ್ತವೆ. ಮುಖದಲ್ಲಿ ನಗುವಿನ ಪಸೆಯೂ ಕಾಣಿಸದಂತೆ, ಅಗೋಚರ ದುಃಖವನ್ನು ಮುಖದ ನೆರಿಗೆಯಲ್ಲಿ ಜೋಲು ಬಿಟ್ಟುಕೊಂಡವರಂತೆ ಸುಮಕ್ಕ ಪ್ಯಾಥೋ ಮೂಡಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅವರ ಸುತ್ತಾ ಅಂಬಿ ಅಭಿಮಾನದ ಪ್ರಭೆ ಮತ್ತು ಜೋಡೆತ್ತುಗಳ ಪ್ರಭಾವಳಿ ಇರೋದರಿಂದ ಒಂದಷ್ಟು ಜನರೂ ಇದ್ದಾರೆ. ಅಂಬರೀಶ್ ಅವರನ್ನು ಜೀವದಂತೆ ಪ್ರೀತಿಸುತ್ತಿದ್ದ ಅಭಿಮಾನಿಗಳೂ ಕೂಡಾ ಸೆಂಟಿಮೆಂಟಿನಿಂದ ಸುಮಲತಾ ಬೆನ್ನ ಹಿಂದಿದ್ದಾರೆ. ಆದರೆ ಈ ಸುಮಲತಾ ಮೇಡಮ್ಮು ಮಂಡ್ಯಾದ ಅಂಬಿ ಅಭಿಮಾನಿಗಳ ಮುಗ್ಧ ಕಣ್ಣುಗಳಿಗೆ ಗೋಚರಿಸುತ್ತಿರುವಷ್ಟು ಸಲೀಸಾದ ಜಾಯಮಾನದವರಲ್ಲ…!
ಅಕಸ್ಮಾತಾಗಿ ಅಂಬಿ ಅಭಿಮಾನದ ಅಲೆಯಲ್ಲಿ ಸುಮಲತಾ ಗೆದ್ದರೂ ಆಕೆ ಆ ನಂತರದಲ್ಲಿ ಕೈಗೆ ಸಿಕ್ಕುವ ಆಸಾಮಿಯಲ್ಲ. ಅಷ್ಟಕ್ಕೂ ಕಾಸು ತೆಗೆದುಕೊಂಡು ನಟಿಸಲು ಒಪ್ಪಿಕೊಂಡ ಚಿತ್ರಗಳಿಗೇ ಕಾಟ ಕೊಟ್ಟ ಘನ ಗಂಭೀರ ಆರೋಪಗಳೂ ಸುಮಲತಾರ ಮೇಲಿದೆ. ಅಹೋರಾತ್ರಿ ವರೆಗೂ ಎಣ್ಣೆ ಅಭ್ಯಂಜನ ನಡೆಸಿ ಮಾರನೇದಿನ ಹನ್ನೆರಡು ಘಂಟೆ ಮೇಲೆ ಎದ್ದು ಶೂಟಿಂಗ್ ಸ್ಪಾಟಿನತ್ತ ಹೊರಡುತ್ತಾರೆಂಬ ಅಸಹನೆ ಸುಮಲತಾ ಮೇಲೆ ಇದ್ದೇ ಇದೆ. ತೀರಾ ಚಿತ್ರೀಕರಣದ ಕಥೆಯೇ ಹೀಗಾದರೆ ಇನ್ನು ಮಂಡ್ಯ ಕ್ಷೇತ್ರವನ್ನು ಈಕೆ ಯಾವ ರೇಂಜಿಗೆ ಉದ್ಧಾರ ಮಾಡಬಹುದೆಂಬ ಅಂದಾಜು ಯಾರಿಗಾದರೂ ಸಿಕ್ಕು ಬಿಡುತ್ತದೆ. ಈ ಬಗ್ಗೆ ಅಂಬಿ ಆಪ್ತ ವಲಯದಲ್ಲಿದ್ದವರೆಲ್ಲರಿಗೂ ಅಸಹನೆ ಇದ್ದೇ ಇದೆ. ಅದುವೇ ಇವರಿಗೆ ಸೋಲಾಗಿ ಸುತ್ತಿಕೊಂಡರೂ ಅಚ್ಚರಿಯೇನಿಲ್ಲ. ಯಾಕೆಂದರೆ ಅದೆಷ್ಟೋ ಅಂಬಿ ಅಭಿಮಾನಿಗಳು ರೆಬೆಲ್ ಸ್ಟಾರ್‌ಗೆ ಅವಮಾನ ಮಾಡಬಾರದೆಂಬ ಕಾರಣಕ್ಕಷ್ಟೇ ಸುಮಕ್ಕನ ಹಿಂದಿದ್ದಾರೆ. ಅವರ ಓಟೇನಿದ್ದರೂ ನಿಖಿಲ್ ಗೆ ಎಂಬಂಥಾ ವಾತಾವರಣವಿದೆ.
ಅಭಿಮಾನಿಗಳಿಗೂ ಅವಮಾನ
ಮಂಡ್ಯದಲ್ಲೀಗ ಅಂಬಿ ಹೆಸರು ಹೇಳಿಕೊಂಡೇ ಸುಮಲತಾ ಸುತ್ತಾಡುತ್ತಿದ್ದಾರೆ. ಕೆಲ ವಯಸ್ಸಾದ ಅಂಬಿ ಅಭಿಮಾನಿಗಳು ಈ ಸುಮಲತಾರ ಹಳೇ ಮುಖವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕೆಲ ಅಭಿಮಾನಿಗಳ ಮಾತಾಡಿರೋ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಸುಮಕ್ಕನಿಗೆ ಪೀಕಲಾಟ ಶುರುವಾಗಿದೆ. ಕಡೇ ಘಳಿಗೆಯವರೆಗೂ ಅಂಬರೀಶ್ ಅವರ ಮನೆ ಜನಸಂದಣಿ ಇಲ್ಲದೇ ಖಾಲಿಯಿದ್ದ ಉದಾಹರಣೆಗಳೇ ಇಲ್ಲ. ಸದಾ ಅಭಿಮಾನಿಗಳಿಂದ ಕಿಕ್ಕಿರಿದಿರುತ್ತಿತ್ತು. ಮಂಡ್ಯಾ ಸೀಮೆಯಿಂದಂತೂ ಅಂಬಿಯನ್ನು ನೋಡಲು ದಿನಕ್ಕೊಂದು ಅಭಿಮಾನಿಗಳ ಬ್ಯಾಚು ಸೇರುತ್ತಿತ್ತು. ಹಾಗೆ ಹೋದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಮೈದಡವಿ ಮಾತಾಡಿಸುವ ಔದಾರ್ಯವೂ ಅಂಬರೀಶ್ ಅವರಿಗಿತ್ತು. ಆದರೆ ಅದೇ ಮನೆಯೊಳಗಿನ ಮನಸೊಂದು ಈ ಜನಸಂದಣಿಯನ್ನು ಕಂಡು ಕಿರಿಕಿರಿ ಅನುಭವಿಸುತ್ತಿತ್ತು. ಅದು ಈವತ್ತಿಗೆ ಮಂಡ್ಯ ಕಣದಲ್ಲಿ ಬಾತುಮೋರೆ ಹಾಕಿಕೊಂಡು ಅಡ್ಡಾಡುತ್ತಿರೋ ಸುಮಲತಾ ಮೇಡಮ್ಮು!
ಅದೆಷ್ಟೋ ಸಂದರ್ಭಗಳಲ್ಲಿ ಸುಮಲತಾ ಅಭಿಮಾನಿಗಳ ಮುಂದೆಯೇ ಕೆಟ್ಟದಾಗಿ ಸಿಡುಕಿದ್ದೂ ಇದೆ. ನಾಯಿನರಿಗಳನ್ನೆಲ್ಲ ಸೇರಿಸಿಕೊಳ್ತೀರಲ್ಲ ಅಂತ ಹೀನಾಯವಾಗಿ ಮಾತಾಡಿದ್ದೂ ಇದೆಯಂತೆ. ಈ ಬಗ್ಗೆ ಮಂಡ್ಯದ ಅಭಿಮಾನಿಯೊಬ್ಬರು ಮಾತಾಡಿದ್ದ ವೀಡಿಯೋ ವೈರಲ್ ಆಗಿ ಬಿಟ್ಟಿದೆ. ಇಂಥಾ ಸಂದರ್ಭದಲ್ಲೆಲ್ಲ ಅಂಬಿ ಒಂದು ಪೆಗ್ ಜಾಸ್ತಿಯೇ ಏರಿಸಿಕೊಂಡು ಅವಮಾನಿತರಾಗಿ ನಿಂತಿದ್ದ ಅಭಿಮಾನಿಗಳನ್ನು ಹನಿಗಣ್ಣಾಗಿ ದಿಟ್ಟಿಸಿದ್ದೂ ಇದೆ. ಕರ್ಣನ ಈ ಅಂತಃಕರಣದ ಅರಿವಿದ್ದ ಅಭಿಮಾನಿಗಳ ಅವಮಾನಗಳನ್ನು ತೋರಿಸಿಕೊಳ್ಳದೆ ವಾಪಾಸಾಗಿದ್ದೂ ಇದೆ.
ತಾಯಿಗೆ ತಕ್ಕ ಮಗ
ಇನ್ನು ಅಂಬರೀಶ್ ಪುತ್ರ ಅಭಿಷೇಕ್ ವಿಚಾರಕ್ಕೆ ಬರೋದಾದರೆ, ಈತ ನಿಜಕ್ಕೂ ತಾಯಿಗೆ ತಕ್ಕ ಮಗ. ಅಮರ್ ಎಂಬ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಈತ ಸಕಲಗುಣ ಸಂಪನ್ನನಂತೆ ಪೋಸು ಕೊಡುತ್ತಾ ಮುಂದುವರೆಯುತ್ತಿದ್ದಾನೆ. ಆದರೆ ಒಂದಷ್ಟು ಮಂದಿಗಾದರೂ ಬಿಳಿ ಅಕ್ಕಿ ಮೂಟೆಯಂತಿದ್ದ ಅಭಿಷೇಕನ ಬಾಲಲೀಲೆಗಳು ನೆನಪಿದ್ದೇ ಇರುತ್ತವೆ. ಆ ಲೀಲೆಗಳೆಲ್ಲವೂ ಅಭಿ ಅಂಬಿಗೆ ತಕ್ಕ ಮಗನಾಗಿರಲಿಲ್ಲವೆಂಬ ಸತ್ಯವನ್ನೇ ಸಾಬೀತು ಪಡಿಸುವಂತಿವೆ..!
ಅಂಬಿ ತುಂಬಾ ಮುದ್ದು ಮಾಡಿ ಸಾಕಿದ್ದ ಹುಡುಗ ಅಭಿಷೇಕ್. ಇಂಥಾ ಪ್ರೀತಿಯ ಜೊತೆಗೆ ಗದರಿಕೆಯ ಭಯವನ್ನೂ ಅಂಬಿ ಇಟ್ಟಿದ್ದರು. ಅಷ್ಟೇ ಆಗಿದ್ದರೆ ಅಭಿ ಕರ್ಣನ ಗುಣಗಳನ್ನೇ ಹೊದ್ದು ರೂಪುಗೊಳ್ಳುತ್ತಿದ್ದನೇನೋ. ಆದರೆ ಸುಮಲತಾ ಗಂಡನ ಮೇಲಿನ ಸಣ್ಣ ಸಣ್ಣ ಅಸಹನೆಗಳನ್ನು ಮಗನಿಗೆ ಬಿಟ್ಟಿ ಸ್ವಾತಂತ್ರ್ಯ ಕೊಡೋ ಮೂಲಕ ತೀರಿಸಿಕೊಳ್ಳಲಾರಂಭಿಸಿದ್ದರೆಂಬ ಮಾತುಗಳಿವೆ. ಇದರಿಂದಾಗಿಯೇ ಅಭಿ ಅನಾಹುತಕಾರಿಯಾಗಿ ಬೆಳೆದಿದ್ದ. ಆತನ ಚೇಷ್ಟೆಗಳೇನು ಒಂದೆರಡಲ್ಲ. ಮನೆಕೆಲಸದವರಿಗೆ ನಾಯಿ ಛೂ ಬಿಟ್ಟು ಕಚ್ಚಿಸುವುದರಿಂದ ಮೊದಲ್ಗೊಂಡು ಈತನ ಚಿಲ್ಲರೆ ತೀಟೆಗಳೇನು ಒಂದೆರಡಲ್ಲ. ಅದನ್ನು ಕಣ್ಣಾರೆ ಕಂಡ ಅಭಿಮಾನಿಗಳು ಇಂದಿಗೂ ಮಂಡ್ಯದಲ್ಲಿದ್ದಾರೆ ಮತ್ತು ಅವರೆಲ್ಲರೂ ಅಮ್ಮ ಮಗನ ಹೊಸಾ ಅವತಾರಗಳನ್ನೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಂಥವರಿಗೆಲ್ಲ ಜ್ಯೂನಿಯರ್ ರೆಬೆಲ್ ಸ್ಟಾರ್ ಅವತಾರದ ಅಭಿಯ ಅಸಲೀಯತ್ತು ಗೊತ್ತಿದೆ.
ಸುಮಕ್ಕ ಗೆಲುವು ಡೌಟು ಕನ
ಇದೆಲ್ಲವೂ ಕೂಡಾ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಗೆಲುವಾಗಿ ರೂಪಾಂತರಗೊಳ್ಳೋದು ಸ್ಪಷ್ಟ. ಇಂದು ತಾನು ಮಂಡ್ಯದ ಸೊಸೆ ಅಂತ ಅಬ್ಬರಿಸುತ್ತಿರೋ ಸುಮಲತಾಗೆ ಒಂದು ಕಾಲಕ್ಕೆ ಮಂಡ್ಯ ಅಂದರೆ ಅಷ್ಟಕ್ಕಷ್ಟೆ. ಆದರೆ ಕುಮಾರಸ್ವಾಮಿ ಹಾಸನದವರಾದರೂ ಮಂಡ್ಯಕ್ಕೆ ಪ್ರಾಮಾಣಿಕವಾದ ಪ್ರೀತಿ ಕೊಟ್ಟಿದ್ದಾರೆ. ಸಿಎಂ ಆದ ನಂತರವೂ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ರೈತರ ಸಂಕಟಕ್ಕೆ ಧ್ವನಿಯಾಗೋ ಪ್ರಯತ್ನವನ್ನಾದರೂ ಮಾಡಿದ್ದಾರೆ. ತೆರೆ ಮೇಲೆ ಅಬ್ಬರಿಸೋ ಜೋಡೆತ್ತುಗಳಿಂದ ಹೊಲ ಊಳಲಾಗೋದಿಲ್ಲ, ಘಾಟಿ ಸುಮಕ್ಕ ನಾಟಿ ಮಾಡಲು ಬರೋದಿಲ್ಲ ಎಂಬ ಸತ್ಯ ಮಂಡ್ಯ ಮಂದಿಗೆ ಗೊತ್ತಿದೆ. ಇನ್ನೇನು ಸುಮಲತಾ ಸುತ್ತಲಿರೋ ಭ್ರಮೆಯ ಕೋಟೆ ಕರಗೋ ಸಮಯ ಹತ್ತಿರದಲ್ಲಿದೆ. ಅಂಬರೀಶ್ ಹೃದಯದಿಂದ ಜನರನ್ನು ಪ್ರೀತಿಸಿದವರು. ಮಂಡ್ಯ ಜನ ಅದರಲ್ಲಿ ಮಿಂದೆದ್ದಿದ್ದಾರೆ. ಅವರನ್ನು ಸುಮಕ್ಕನ ತುದಿನಾಲಗೆಯ ಪ್ರೀತಿ ಮರುಳು ಮಾಡಲು ಸಾಧ್ಯವೇ?
Leave a Reply
You must be logged in to post a comment.