ಸಿನಿಮಾದುದ್ದಕ್ಕೂ ಹಾಕಿ, ಎತ್ತಿ, ಮಾಡಿ, ತೂರಿಸುವ ಮಾತುಗಳು ಹೇರಳವಾಗಿವೆ. ಅದನ್ನು ಡಬಲ್ ಮೀನಿಂಗ್ ಅಂದುಕೊಂಡರೆ, ಅದಕ್ಕೆ ಯಾರೂ ಹೊಣೆಯಲ್ಲ! ನಿರ್ದೇಶಕ ಯುವಿನ್ ಗೆ ನೋಡುಗರನ್ನು ನಗಿಸುವುದು ಹೇಗೆ ಎನ್ನುವ ಕಲೆ ಕರಗತವಾಗಿದೆ. ನಟ ಚಂದನ್ʼಗೆ ಹೇಳಿ ಮಾಡಿಸಿದಂತಾ ಪಾತ್ರ ಇಲ್ಲಿ ಸಿಕ್ಕಿದೆ!!
ಚಂದನ್ ಆಚಾರ್ ನಟನೆಯ, ಯುವಿನ್ ನಿರ್ದೇಶಿಸಿರುವ ಚಿತ್ರ ಮಂಗಳವಾರ ರಜಾ ದಿನ ಈ ವಾರ ರಿಲೀಸಾಗಿದೆ. ಮಂಗಳವಾರ ರಜಾ ದಿನ ಎನ್ನುವ ಶೀರ್ಷಿಕೆ ಯಾವತ್ತು ಜಾಹೀರಾಯಿತೋ? ಆವತ್ತಿನಿಂದಲೇ ಈ ಚಿತ್ರದ ಕುರಿತಾಗಿ ಎಲ್ಲರಲ್ಲೂ ಕ್ಯೂರಿಯಾಸಿಟಿ ಹುಟ್ಟಿಕೊಂಡಿತ್ತು. ಸಿನಿಮಾದ ಮುಖ್ಯ ಪಾತ್ರಗಳೊಂದಿಗೆ ಕತ್ತರಿ ಕೊಟ್ಟು, ಮಂಗಳವಾರ ರಜಾ ಅಂದಕೂಡಲೇ ಇದು ಪವಿತ್ರವಾದ ಕ್ಷೌರಿಕ ವೃತ್ತಿ ಮಾಡುವವರ ಸುತ್ತ ಹೆಣೆಯಲಾದ ಕಥೆ ಅನ್ನೋದು ಎಂಥವರಿಗೂ ಗೊತ್ತಾಗಿತ್ತು. ʻಕೂಳೆʼ ಸಾಂಗ್ ಬಿಡುಗಡೆಯಾದಮೇಲಂತೂ ಈ ಚಿತ್ರ ಎಲ್ಲರನ್ನೂ ಆಕರ್ಷಿಸಿತ್ತು. ಅಂತಿಮವಾಗಿ ಈಗ ಮಂಗಳ ವಾರ ರಜಾ ದಿನ ಥೇಟರಲ್ಲಿ ಬಿಡುಗಡೆಗೊಂಡಿದೆ.
ಓದಲಿ ಅಂತಾ ಶಾಲೆಗೆ ಕಳಿಸಿದರೆ ಮಗನಿಗೆ ವಿದ್ಯೆ ತಲೆಗೆ ಹತ್ತೋದಿಲ್ಲ. ಪೇಪರಲ್ಲಿ ಬಂದ ಕಿಚ್ಚ ಸುದೀಪ್ ಫೋಟೋವನ್ನು ಕಟ್ ಮಾಡಿಟ್ಟುಳ್ಳೋದು ಅಂದರೆ ಹುಡುಗನಿಗೆ ಬಲು ಪ್ರೀತಿ. ಬೆಳೆದು ದೊಡ್ಡವನಾಗುತ್ತಿದ್ದಂತೇ ಕಿಚ್ಚನ ಮೇಲಿನ ಅಭಿಮಾನ ಕೂಡಾ ಮತ್ತಷ್ಟು ಎತ್ತರಕ್ಕೆ ಬೆಳೆದಿರುತ್ತದೆ. ತಾನು ಪೇಪರಿನಲ್ಲಿ ಬಂದ ಸುದೀಪ್ ಫೋಟೋವನ್ನು ಕತ್ತರಿಸಲು ಬಳಸುತ್ತಿದ್ದ ಕತ್ತರಿಯಲ್ಲಿ ಎಂದಾದರೊಂದು ದಿನ ಸುದೀಪ್ ಅವರ ಹೇರ್ ಸ್ಟೈಲ್ ಮಾಡಬೇಕು ಅನ್ನೋದು ಹೀರೋ ಕಟಿಂಗ್ ಕುಮಾರನ ಕನಸು. ಕಿಚ್ಚನ ಕೂದಲು ಕತ್ತರಿಸಲು ಬಯಸುವ ಈತನ ಬದುಕು ಅಡಕತ್ತರಿಗೆ ಸಿಲುಕಿ ಹೇಗೆಲ್ಲಾ ಹೆಣಗಾಡಿಸುತ್ತದೆ ಅನ್ನೋದು ಸಿನಿಮಾದ ಪ್ರಧಾನ ಅಂಶ. ಎಲ್ಲ ಯಾತನೆಯನ್ನು ದಾಟಿದ ನಂತರ ಸುದೀಪ್ ಗೆ ಕೇಶವಿನ್ಯಾಸ ಮಾಡುವ ಅವಕಾಶ ಕುಮಾರನ ಪಾಲಿಗೆ ಸಿಗುತ್ತದಾ ಅನ್ನೋ ಕ್ಯೂರಿಯಾಸಿಟಿ ಇದ್ದರೆ ʻಮಂಗಳವಾರ ರಜಾ ದಿನʼ ಚಿತ್ರವನ್ನು ನೋಡಲೇಬೇಕು.
ಕ್ಷೌರಿಕ ವೃತ್ತಿ ನಡೆಸುವ ಸವಿತಾ ಸಮಾಜದ ಬಾಂಧವರು ಪ್ರತಿಯೊಬ್ಬರಿಗೂ ಪರಿಚಯವಿದ್ದೇ ಇರುತ್ತಾರೆ. ಯಾವೂರ ದೊರೆಯೇ ಆದರೂ ಅವರ ಮುಂದೆ ತಲೆ ಬಗ್ಗಿಸಿ ಕೂರಲೇಬೇಕು. ಸಣ್ಣ ಗೂಡಂಗಡಿಯಿಂದ ಒಂಚೂರು ದೊಡ್ಡ ಮಟ್ಟಕ್ಕೆ ಬದುಕು ಮತ್ತು ವೃತ್ತಿಯನ್ನು ವಿಸ್ತರಿಸಿಕೊಳ್ಳಲು ಅವರು ಪಡುವ ಪಾಡನ್ನು ಕಣ್ಣಾರೆ ಕಂಡಿರುತ್ತೇವೆ. ಕೆಲವೊಮ್ಮೆ ಓದು ಮುಂದುವರೆಸದ ಮಕ್ಕಳನ್ನೂ ತಮ್ಮೊಟ್ಟಿಗೇ ಇರಿಸಿಕೊಂಡು, ಕೆಲಸ ಕಲಿಸಿ, ಅವರಿಗೊಂದು ಸಲೂನು ಹಾಕಿಕೊಡುವುದು ಈ ಸಮಾಜದ ಹಿರಿಯರ ಪರಮ ಗುರಿಯಾಗಿರುತ್ತದೆ.
ಈ ಚಿತ್ರದಲ್ಲಿ ಕೂಡಾ ಒಬ್ಬ ತಂದೆ ಮಗನ ಬದುಕನ್ನು ಹಸನು ಮಾಡಲು ಶ್ರಮಿಸುತ್ತಾನೆ. ಬಡ್ಡಿ ಸಾಲ ಮಾಡಿ ದೊಡ್ಡ ಅಂಗಡಿ ಮಾಡುತ್ತಾನೆ. ಇಡೀ ದಿನ ಕತ್ತರಿ ಹಿಡಿದು, ಕನ್ನಡಿಗಳ ಮಧ್ಯೆ ಬದುಕು ಸವೆಸುತ್ತಾ ಮಗನಿಗಾಗಿ ಸಣ್ಣ ಮಟ್ಟದ ಉಳಿತಾಯವನ್ನೂ ಮಾಡುತ್ತಾನೆ. ಮಗ ಕೂಡಾ ದುಷ್ಟನಲ್ಲ. ಆದರೆ, ತನ್ನ ಕನಸನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಪ್ಪನೊಂದಿಗೆ ವಾದಕ್ಕಿಳಿಯುತ್ತಾನೆ. ಗುರಿ ಮುಟ್ಟಿಸುವ ಭರವಸೆ ಕೊಟ್ಟವನೊಬ್ಬ ಮಂಕುಬೂದಿ ಎರಚುತ್ತಾನೆ. ಗೆಳೆಯ ಎಳತಿ ಜೊತೆಯಾಗುತ್ತಾರೆ. ಅಪ್ಪನ ಅನಾರೋಗ್ಯ, ವಂಚಕನ ಖೆಡ್ಡಾ, ಗೆಣೆಕಾರರ ಸಹಕಾರ, ಅಮ್ಮನ ಕಕ್ಕುಲಾತಿಗಳೆಲ್ಲಾ ʻಮಂಗಳವಾರʼದಲ್ಲಿ ಚೆಂದಗೆ ಬೆಸೆದುಕೊಂಡಿದೆ. ಫೈನಾನ್ಸ್ ದಂಧೆಯ ಕ್ರೌರ್ಯ, ಲೋಕಲ್ ರೌಡಿಗಳ ಧಿಮಾಕು, ಪ್ರೀತಿಯ ಜೀವವನ್ನು ಉಳಿಸಿಕೊಳ್ಳಲು ಮನುಷ್ಯ ಮತ್ತೊಂದು ಜೀವವನ್ನೂ ಲೆಕ್ಕಿಸದ ವಿಚಿತ್ರ ಸನ್ನಿವೇಶಗಳೆಲ್ಲಾ ಈ ಚಿತ್ರದಲ್ಲಿ ತಣ್ಣಗೆ ಅನಾವರಣಗೊಂಡಿದೆ.
ಸಿನಿಮಾದುದ್ದಕ್ಕೂ ಹಾಕಿ, ಎತ್ತಿ, ಮಾಡಿ, ತೂರಿಸುವ ಮಾತುಗಳು ಹೇರಳವಾಗಿವೆ. ಅದನ್ನು ಡಬಲ್ ಮೀನಿಂಗ್ ಅಂದುಕೊಂಡರೆ, ಅದಕ್ಕೆ ಯಾರೂ ಹೊಣೆಯಲ್ಲ! ನಿರ್ದೇಶಕ ಯುವಿನ್ ಗೆ ನೋಡುಗರನ್ನು ನಗಿಸುವುದು ಹೇಗೆ ಎನ್ನುವ ಕಲೆ ಕರಗತವಾಗಿದೆ. ನಟ ಚಂದನ್ʼಗೆ ಹೇಳಿ ಮಾಡಿಸಿದಂತಾ ಪಾತ್ರ ಇಲ್ಲಿ ಸಿಕ್ಕಿದೆ. ಅಪ್ಪನ ಪಾತ್ರದಲ್ಲಿ ಗೋಪಾಲ ದೇಶಪಾಂಡೆ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರದಲ್ಲಿ ಹೆಚ್ಚು ಕಾಡುವುದು ಇವರೇ. ಲಾಸ್ಯ ನಾಗರಾಜ್ ಅಭಿನಯ ಕೂಡಾ ಅವಳಂತೆಯೇ ಮುದ್ದಾಗಿದೆ. ಜಹಾಂಗೀರ್ ತಮ್ಮ ಎಂದಿನ ಓವರ್ ಆಕ್ಟಿಂಗ್ʼನಿಂದ ಹೊರಬಂದು ಆಪ್ತವಾಗುವಂತೆ ಸಹಜವಾಗಿ ನಟಿಸಿದ್ದಾರೆ. ಹಾಸ್ಯ ನಟ ರಜನೀಕಾಂತ್ ಕೂಡಾ ಈ ಚಿತ್ರದಲ್ಲಿ ಗಮನ ಸೆಳೆಯುತ್ತಾನೆ.
ಕಥೆಯನ್ನು ಎಲ್ಲೆಂದರಲ್ಲಿ ಎಳೆದಾಡದೆ, ಸಿಕ್ಕ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ರೂಪುಗೊಂಡಿದೆ. ಪ್ರಜೋತ್ ಡೇಸಾ ಸಂಗೀತ ಇಷ್ಟವಾಗುತ್ತದೆ. ಉದಯ್ ಲೀಲಾ ಛಾಯಾಗ್ರಹಣ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಮಧು ತುಂಬಕೆರೆ ಕಟಿಂಗ್ ಕೆಲಸ ಚಿತ್ರವನ್ನು ಸರಳಗೊಳಿಸಿದೆ. ಒಟ್ಟಾರೆಯಾಗಿ ಮಂಗಳವಾರ ರಜಾ ದಿನ ನೋಡುಗರಿಗೆ ಖಂಡಿತಾ ಮಜಾ ಕೊಡುತ್ತದೆ.
No Comment! Be the first one.