ಸವಿತಾ ಸಮಾಜದ ಜನರ ಒಳ ವೇದನೆಗಳನ್ನು ಎತ್ತಿ ಹಿಡಿಯುತ್ತಲೇ ಪ್ರೇಕ್ಷಕರನ್ನು ರಂಜಿಸುವ ಮಜವಾದ ಸಿನಿಮಾ ʻಮಂಗಳವಾರ ರಜಾ ದಿನʼ. ಕಳೆದ ಶುಕ್ರವಾರ ತೆರೆಗೆಬಂದ ʻಮಂಗಳವಾರʼಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
ಕನ್ನಡದ ಸಿನಿಮಾಗಳನ್ನು ನಿಜಕ್ಕೂ ಗೆಲ್ಲಿಸುವ ವರ್ಗದಲ್ಲಿ ಸವಿತಾ ಸಮಾಜದ ಬಾಂಧವರದ್ದು ಪ್ರಧಾನ ಪಾತ್ರ. ಹೊಟೇಲ್ ಹುಡುಗರು, ಆಟೋ , ಕ್ಯಾಬ್ ಡ್ರೈವರ್ಗಳ ಜೊತೆಗೆ ಕ್ಷೌರಿಕ ವೃತ್ತಿ ನಡೆಸುವ ಜನ ವಾರಕ್ಕೆ ಒಂದು ಸಿನಿಮಾವನ್ನಾದರೂ ನೋಡುವ ಪ್ರತೀತಿ ಇರಿಸಿಕೊಂಡು ಬಂದಿದ್ದಾರೆ. ಈಗ ಅವರದ್ದೇ ಬದುಕನ್ನು ಕಣ್ಣಿಗೆ ಕಟ್ಟಿದಂತೆ ಬಿಚ್ಚಿಟ್ಟಿರುವ ಸಿನಿಮಾವೊಂದು ತೆರೆಗೆ ಬಂದಿದೆ ಅಂದರೆ ಸುಮ್ಮನೇ ಕೂರುತ್ತಾರಾ? ಕರ್ನಾಟಕದಲ್ಲಿರುವ ಸವಿತಾ ಸಮಾಜದ ಜನ ʻಇದು ನಮ್ಮದೇ ಲೈಫ್ ಸ್ಟೋರಿʼ ಎನ್ನುವಷ್ಟರ ಮಟ್ಟಿಗೆ ʻಮಂಗಳವಾರʼದ ಜೊತೆಗೆ ಕನೆಕ್ಟ್ ಆಗಿದ್ದಾರೆ. ಬಿಡುವುಮಾಡಿಕೊಂಡು ಥೇಟರಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಇದರ ಜೊತೆಗೆ ಕಾಲೇಜು ಹುಡುಗ ಹುಡುಗಿಯರು ʻಮಂಗಳವಾರ ರಜಾ ದಿನವನ್ನುʼ ಮುಗಿಬಿದ್ದು ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಇವೆಲ್ಲದರ ಪ್ರತಿಫಲ ಎನ್ನುವಂತೆ ʻಮಂಗಳವಾರʼ ಈಗ ಬೆಂಗಳೂರು, ಮೈಸೂರು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ತುಮಕೂರು, ಭದ್ರಾವತಿಯಂತಾ ಸ್ಥಳಗಳಲ್ಲೂ ಶೇ. ಎಪ್ಪತ್ತಕ್ಕಿಂತಾ ಅಧಿಕವಾಗಿ ಭರ್ತಿಯಾಗುತ್ತಿದೆ. ಸ್ನೇಹಿತರೇ ಸೇರಿ ‘ಟೀಂ ತ್ರಿವರ್ಗʼ ಅಂತಾ ತಂಡ ಕಟ್ಟಿಕೊಂಡು ಬಂಡವಾಳ ಹೂಡಿದ್ದರು. ಈಗ ಮಂಗಳವಾರವನ್ನು ಜನ ಮುಕ್ತಮನಸ್ಸಿನಿಂದ ಸ್ವೀಕರಿಸಿದ್ದಾರೆ. ಹಾಕಿದ ಬಂಡವಾಳ ವಾಪಾಸು ಬಂದು ಲಾಭ ಕೈಸೇರೋದು ಗ್ಯಾರೆಂಟಿಯಾಗಿದೆ. ಮಂಗಳವಾರ ರಜಾದಿನದ ಗೆಲುವು ತ್ರಿವರ್ಗ ತಂಡ ಮತ್ತು ನಿರ್ದೇಶಕ ಯುವಿನ್ ಪಾಲಿಗೆ ವರವಾಗಿದೆ.
ಕೆಮೆಸ್ಟ್ರಿ ಆಫ್ ಕರಿಯಪ್ಪ ನಂತರ ಚಂದನ್ ಆಚಾರ್ಯ ನಟನೆಯ ಹಿಟ್ ಸಿನಿಮಾ ಇದಾಗಿದೆ. ಗೋಪಾಲದೇಶಪಾಂಡೆಯವರ ಕಾಡುವ ನಟನೆ ನೋಡುಗರನ್ನು ಭಾವನಾತ್ಮಕವಾಗಿ ಬೆಸೆಯುತ್ತಿದೆ. ಹಾಸ್ಯ ನಟ ಜನೀಕಾಂತ್ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿ ನಟಿಸಿದ್ದಾರೆ. ಆ ಕಾರಣಕ್ಕೇ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಈ ಸಿನಿಮಾದಿಂದ ರಜನಿಕಾಂತ್ಗೆ ಕನ್ನಡ ಚಿತ್ರರಂಗದಲ್ಲಿ ಬ್ರೇಕ್ ಸಿಗೋದು ಗ್ಯಾರೆಂಟಿ. ನಾಯಕಿ ಲಾಸ್ನಯ ಕೂಡಾ ಎಲ್ಲರಿಗೂ ಇಷ್ಟವಾಗಿದ್ದಾರೆ. ಸಿನಿಮಾವೊಂದು ಗೆಲ್ಲಲು ಇಷ್ಟು ಸಾಕಲ್ಲವಾ?