ಸೂಕ್ಷ್ಮ ಸಂವೇದನೆಯ ನಿರ್ದೇಶಕ ಎಂದೇ ಹೆಸರಾದವರು ಮಣಿರತ್ನಂ. ಸಾಮಾಜಿಕ ಆಗುಹೋಗುಗಳನ್ನು ತಮ್ಮ ಕತೆಯಲ್ಲಿ ಬೆರೆಸಿದವರು. ಆ ಮೂಲಕ ಸಮಾಜ ದ್ರೋಹಿಗಳನ್ನು ತಿವಿದವರು. ಈ ದೇಶ ಕಂಡ ಕ್ರಿಯಾಶೈಲ ಡೈರೆಕ್ಟರ್, ಕನ್ನಡದ ಪಲ್ಲವಿ ಅನುಪಲ್ಲವಿ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದವರು. ನಟಿ ಸುಹಾಸಿನಿ ಪತಿ…

ಜನಕ್ಕೆ ಹೀಗೆಲ್ಲಾ ಪರಿಚಯವಿದ್ದ ಮಣಿರತ್ನಂ ಮುಡಿಗೆ ಮತ್ತೊಂದು ಗರಿ ತಗುಲಿಕೊಂಡಿದೆ. ಅದು ‘ದೇಶದ್ರೋಹಿ ಅನ್ನೋ ಪಟ್ಟ!
ಭಾರತದಲ್ಲಿ ಕೋಮು ಗಲಭೆ, ಸಾಮೂಹಿಕ ಹತ್ಯೆಗಳು ಹೆಚ್ಚಾಗಿವೆ. ಅವು ನಿಲ್ಲಬೇಕು ಎಂದು ಕೋರಿ ಮಣಿರತ್ನಂ, ರಾಮಚಂದ್ರಗುಹಾ, ಅನುರಾಗ್ ಕಶ್ಯಪ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಅದರಲ್ಲಿ ಮಣಿರ್ನಂ ಕೂಡಾ ಸೇರಿದ್ದರು. ಈಗ ಈ ನಲವತ್ತೊಂಬತ್ತು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬಿಹಾರದ ಮುಜ಼ಾಫರ್ಪುರದಲ್ಲಿ ನ್ಯಾಯಾಲಯದಲ್ಲಿ, ಸುಧೀರ್ ಕುಮಾರ್ ಓಝಾ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ ತಿವಾರಿ ನಲವತ್ತೊಂಬತ್ತು ಜನರ ಮೇಲೆ ಎಫ್.ಐ.ಆರ್. ದಾಖಲಿಸಲು ಸೂಚಿಸಿದ್ದಾರೆ.
“ಈ ರಾಷ್ಟ್ರದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಾಡಿನ ಸಮಗ್ರತೆ ಮತ್ತು ಏಕತೆಗೆ ದಕ್ಕೆ ತರುವುದನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಇವರೆಲ್ಲಾ ಪತ್ರ ಬರೆದಿದ್ದಾರೆ. ದೇಶದ ಶಾಂತಿಯನ್ನು ಕದಡಿ, ಜನರ ನೆಮ್ಮದಿಗೆ ಭಂಗ ತರುವುದು ಇವರ ಆಶಯವಾಗಿದೆ ಎಂದು ಓಝಾ ದೂರಿದ್ದಾರೆ.

ಕಳೆದ ಜುಲೈನಲ್ಲಿ ಪತ್ರ ಬರೆದಿದ್ದ ಮಣಿರತ್ನಂ ‘ಜೈ ಶ್ರೀರಾಂ ಎನ್ನುವ ಹಿಂದೂ ಘೋಷದ ವಿರುದ್ಧ ತಕರಾರು ತೆಗೆದಿದ್ದರು. ‘ಇದು ಭಕ್ತಿಯ ಮಂತ್ರವಾಗದೆ, ಹಿಂಸಾಚಾರ ಮತ್ತು ಶೋಕ ಸೃಷ್ಟಿಸುವ ಮೂಲಮಂತ್ರವಾಗಿದೆ ಎಂದು ಠೀಕಿಸಿದ್ದರು. ದೇಶದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ನಡೆಯುತ್ತಿರುವ ಕೋಮು ಗಲಭೆ, ಕೇಸರೀ ಭಯೋತ್ಪಾದನೆ, ಜಾತಿ ದೌರ್ಜನ್ಯಗಳ ಹಿಂದೆ ಪ್ರಧಾನವಾಗಿ ಕೆಲಸ ಮಾಡುತ್ತಿರುವುದು ಇದೇ ಜೈ ಶ್ರೀರಾಂ ಎನ್ನುವ ಘೋಷವಾಕ್ಯ ಅನ್ನೋದು ಮಣಿರತ್ನಂ ದೂರಿನ ಸಾರಾಂಶವಾಗಿತ್ತು.
ಈಗ ಮಣಿರತ್ನಂ ಮತ್ತಿತರರ ಮೇಲೆ ಎಫ್ ಐ ಆರ್ ದಾಖಲಾಗಿರುವುದು ಸಂವಿಧಾನದ ಪ್ರಶ್ನಿಸುವ ಹಕ್ಕನ್ನೇ ಪ್ರಶ್ನಿಸುವಂತಿದೆ. ಆಳುವ ಪಕ್ಷ, ಅದರ ಬೆಂಬಲಿಗರು, ದೇಶದ ದೊರೆಯ ವಿರುದ್ಧ ಯಾರಾದರೂ ಸೊಲ್ಲೆತ್ತಿದರೆ ಅವರಿಗೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಲಾಗುತ್ತದೆ ಅನ್ನೋದು ಈ ಪ್ರಕರಣದಿಂದ ಸಾಬೀತಾಗಿದೆ.
