ಸಿನಿಮಾರಂಗದ ಯಾವ ಹಿನ್ನೆಲೆಯೂ ಇಲ್ಲದೇ, ಕಾಶೀನಾಥ್ ಅನ್ನೋ ಕಲಾಕಾರ್ ನಿರ್ದೇಶಕನ ಮನವೊಲಿಸಿ, ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭಿಸಿ, ಸಹ ನಿರ್ದೇಶಕನಾಗಿಯೂ ಬಡ್ತಿ ಪಡೆದು, ತರ್ಲೆ ನನ್ ಮಗ ಸಿನಿಮಾ ಮೂಲಕ ನಿರ್ದೇಶಕನೂ ಆಗಿ, ಓಂ ಅನ್ನೋ ಸಿನಿಮಾದಿಂದ ಟ್ರೆಂಡ್ ಸೆಟ್ ಮಾಡಿ, ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದವರು, ‘ಎ’ ಚಿತ್ರದಲ್ಲಿ ಹೀರೋ ಕೂಡಾ ಆಗಿ ಸೂಪರ್ ಸ್ಟಾರ್ ಅನ್ನಿಸಿಕೊಂಡವರು ಉಪೇಂದ್ರ!
ತಮಿಳು ಸಿನಿಮಾಗಳನ್ನು ನಿರ್ದೇಶಿಸುತ್ತಲೇ ಜಗದ್ವಿಖ್ಯಾತರಾಗಿರುವ ಶಂಕರ್ ಆದಿಯಾಗಿ ಕಳೆದ ಎರಡೂವರೆ ದಶಕಗಳಲ್ಲಿ ನಿರ್ದೇಶಕರಾದ ಅನೇಕರು ಇವತ್ತಿಗೂ ‘ನಮಗೆ ಉಪೇಂದ್ರ ಅವರೇ ಸ್ಫೂರ್ತಿ’ ಅನ್ನುತ್ತಾರೆ. ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಯಶ್ ಅಭಿನಯದ ಮೊದಲ ಸೂಪರ್ ಹಿಟ್ ಸಿನಿಮಾ ರಾಜಾ ಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದವರು ಮಂಜು ಮಾಂಡವ್ಯ. ಆ ಚಿತ್ರದಲ್ಲಿ ಪಾತ್ರ ಕೂಡಾ ನಿರ್ವಹಿಸಿದ್ದ ಮಂಜು ನಂತರ ಅದೇ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾದ ನಿರ್ದೇಶನವನ್ನೂ ಮಾಡಿದರು.
ಮಂಜು ಮಾಂಡವ್ಯ ಕಾಲೇಜು ದಿನಗಳಲ್ಲಿದ್ದಾಗಲೇ ಉಪೇಂದ್ರ ಮತ್ತವರ ಸಿನಿಮಾಗಳನ್ನು ಆರಾಧಿಸುತ್ತಿದ್ದರಂತೆ. ಅವರಂತೇ ಡೈಲಾಗು ಬರೆಯಬೇಕು, ಅವರ ಥರಾ ನಿರ್ದೇಶಕನಾಗಬೇಕು… ಹೀಗೆ ಉಪೇಂದ್ರ ಅವರನ್ನು ಅಪಾರವಾಗಿ ಅನುಕರಿಸುತ್ತಾ, ಅನುಸರಿಸುತ್ತಲೇ ಬಂದಿದ್ದರಂತೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಉಪ್ಪಿಯನ್ನು ಹಿಂಬಾಲಿಸಿಕೊಂಡು ಬಂದು ಚಿತ್ರರಂಗ ಸೇರಿದವರಲ್ಲಿ ಮಂಜು ಮಾಂಡವ್ಯ ಕೂಡಾ ಒಬ್ಬರು. ಅದು ಯಾವ ಮಟ್ಟಕ್ಕೆ ಅಂದರೆ, ಎಲ್ಲವೂ ಅಂದುಕೊಂಡಂತೇ ಆಗಿದ್ದಿದ್ದರೆ ಮಾಸ್ಟರ್ ಪೀಸ್ ನಂತರ ಮಂಜು ಉಪೇಂದ್ರ ಅವರಿಗಾಗಿ ಸಿನಿಮಾವೊಂದನ್ನು ನಿರ್ದೇಶಿಸಬೇಕಿತ್ತು. ಸಿನಿಮಾದ ಪೂರ್ವ ತಯ್ಯಾರಿಗಳೆಲ್ಲಾ ಮುಗಿದು, ಇನ್ನೇನು ಶೂಟಿಂಗ್ ಶುರುವಾಗಬೇಕೆನ್ನುವಷ್ಟರಲ್ಲಿ ನೋಟ್ ಬ್ಯಾನ್ ಆಗಿ ಎಲ್ಲವೂ ಬುಡಮೇಲಾಗಿತ್ತು. ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೀಡಾಗಿ ಸಿನಿಮಾವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟರು. ತಮ್ಮದಲ್ಲದ ತಪ್ಪಿಗೆ ಸಿನಿಮಾ ನಿಂತರೈ ಉಪ್ಪಿಯ ಅಭಿಮಾನಿಯಾಗಿ ಚಿತ್ರರಂಗಕ್ಕೆ ಬಂದು ಅವರ ಸಿನಿಮಾವನ್ನೇ ನಿರ್ದೇಶಿಸುವ ಹಂತಕ್ಕೆ ಬೆಳೆದವರು ಮಂಜು ಮಾಂಡವ್ಯ.
ತಮ್ಮ ಆರಾಧ್ಯ ನಟ ಉಪ್ಪಿಯ ಸಿನಿಮಾ ನಿರ್ದೇಶಿಸುವ ಛಾನ್ಸು ಕೈತಪ್ಪಿಹೋದ ಸಂದರ್ಭದಲ್ಲೇ ಮಂಜುಗೆ ಹೊಳೆದ ಐಡಿಯಾ ತಾವೇ ಹೀರೋ ಆಗಿ ನಟಿಸುವುದು. ಆ ಹೊತ್ತಿನಲ್ಲಿ ಶುರುವಾದ ಸಿನಿಮಾ ‘ಶ್ರೀ ಭರತ ಬಾಹುಬಲಿ’. ಐಶ್ವರ್ಯ ಡೆವಲಪರ್ಸ್’ನ ಶಿವಕುಮಾರ್ ನಿರ್ಮಾಣದ ಸಿನಿಮಾ ಇದೇ ತಿಂಗಳ ೧೭ರಂದು ತೆರೆಗೆ ಬರುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಒಂದು ಕೋಟಿ ಬಂಪರ್ ಬಹುಮಾನ ಕೂಡಾ ಈಗಾಗಲೇ ಘೋಷಣೆಯಾಗಿದೆ. ಹತ್ತು ಕಾರು ಮತ್ತು ಚಿನ್ನಾಭರಣದ ಆಸೆ ಮತ್ತು ಮಂಜು ಮಾಂಡವ್ಯ ರೂಪಿಸಿರುವ ರಂಜನೀಯ ಸಿನಿಮಾ ಎರಡೂ ಸೇರಿ ಚಿತ್ರರಂಗದಲ್ಲಿ ದಾಖಲೆ ನಿರ್ಮಾಣವಾಗುವ ದಿನಗಳು ಹತ್ತಿರಾಗುತ್ತಿದೆ.
‘ಸಾರ್ ನಾನೇ ಸರ್ ನಿಮ್ಮ ರಿಯಲ್ ಫ್ಯಾನು’ ಅಂತಾ ಸ್ವತಃ ಮಂಜು ಉಪ್ಪಿ ಅವರ ಬಳಿ ಬಹಳಷ್ಟು ಸಲ ಹೇಳಿಕೊಂಡಿದ್ದಾರಂತೆ. ಪರಮಗುರು ಉಪೇಂದ್ರರನ್ನು ಫಾಲೋ ಮಾಡಿಕೊಂಡು ಒಂದೊಂದೇ ಹಜ್ಜೆಯಿರಿಸಿ, ಅದರಲ್ಲಿ ಗೆಲುವು ಕಂಡಿರುವ ಮಂಜು ಮಾಂಡವ್ಯ ಈಗ ನಟನೆಯಲ್ಲೂ ಅವರಂತೆಯೇ ಯಶಸ್ಸು ಗಳಿಸಬೇಕಿದೆ.