ಬಣ್ಣದ ಲೋಕಕ್ಕೆ ಕಾಲಿಡಬೇಕು ಅಂತಾ ಎಷ್ಟೋ ಜನ ಪಡಬಾರದ ಪಾಡು ಪಡುತ್ತಿರುತ್ತಾರೆ. ಆದರೆ ಅವಕಾಶ ಅವರ ಕೈಗೆಟುಕೋದೇ ಇಲ್ಲ. ಇನ್ನು ಕೆಲವರು ಯಾವ ನಿರೀಕ್ಷೆ, ಪ್ರಯತ್ನಗಳೂ ಇಲ್ಲದೆ, ತಮಗೇ ಗೊತ್ತಿಲ್ಲದಂಥೆ ಈ ಜಗತ್ತಿನ ಭಾಗವಾಗಿರುತ್ತಾರೆ. ಇಲ್ಲೊಬ್ಬ ಕಲಾವಿದೆಯಿದ್ದಾರೆ. ಸರಿಸುಮಾರು ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳು, ನೂರ ನಲವತ್ತಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ತಂಗಿ, ಅಕ್ಕ, ತಾಯಿ ಹೀಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಲೇ ಹೆಸರು ಮಾಡಿರೋ ಕಲಾವಿದೆ ಮಂಜುಳಾ ರೆಡ್ಡಿ.

ಅದೊಂದು ದಿನ ಮಂಜುಳಾ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರಂತೆ. ಆಗ ಎದುರಿಗೆ ಬಂದ ವ್ಯಕ್ತಿಯೊಬ್ಬರು ‘ಏನಮ್ಮಾ ನೀನು ಸಿನಿಮಾದಲ್ಲಿ ಮಾಡ್ತಿಯಾ? ನಿನ್ನ ಕಣ್ಣುಗಳು, ನಿನ್ನ ಲುಕ್ಕು ನೋಡಿದರೆ ಹಳ್ಳಿ ಹುಡುಗಿ ಗೆಟಪ್ಪಲ್ಲಿ ಕಾಣಿಸಿಕೊಳ್ಳಲು ಹೇಳಿಮಾಡಿಸಿದಂತಿದ್ದೀಯ ಅಂದಿದ್ದರಂತೆ. ಬೆಚ್ಚಿಬಿದ್ದವರಂತೆ ‘ಅಯ್ಯಯ್ಯೋ ನನಗೆ ಅದೆಲ್ಲ ಆಗಲ್ಲ ಅಂದವರೇ ಸೀದಾ ಮನೆಗೆ ಬಂದು ತಮ್ಮ ಮನೆಯ ಓನರ್ ಆಂಟಿ ಬಳಿ ‘ಹೀಗೊಬ್ಬರು ಸಿಕ್ಕು ಸಿನಿಮಾದಲ್ಲಿ ಮಾಡ್ತೀಯಾ ಅಂದರು ಅಂದಾಗ, ಅವರು ‘ಹೌದು ಅವರು ಹೇಳಿರೋದೂ ಸರೀನೇ. ಅವಕಾಶ ತಾನಾಗಿಯೇ ಒಲಿದುಬಂದಾಗ ಬಿಡಬೇಡ. ನೀನು ನಮ್ಮ ಹತ್ತಾ ಎಲ್ಲಾ ಹೇಗೆ ಮಾತಾಡ್ತಿಯೋ ಹಾಗೇ ಹೋಗಿ ಆಕ್ಟ್ ಮಾಡಿಬಿಡು ಅಂದಿದ್ದರಂತೆ. ಹಾಗೆ ಶುರುವಾದ ನಟನೆಯ ಗೀಳು ಮಂಜುಳಾರನ್ನು ಮುಂದಕ್ಕೆ ಧಾರಾವಾಹಿ ಮತ್ತು ಸಿನಿಮಾರಂಗ ಗುರುತಿಸುವ ಹಾಗೆ, ನಟನೆಯನ್ನೇ ನಂಬಿ ಬದುಕುವ ಮಟ್ಟಿಗೆ ಬೆಳೆಸಿದೆ. ಅಂದಹಾಗೆ ಆವತ್ತು ನಡೆದುಕೊಂಡು ಹೋಗುತ್ತಿದ್ದ ಮಂಜುಳಾರನ್ನು ನಿಲ್ಲಿಸಿ ‘ನಟಿಸ್ತೀಯಾ ಅಂತಾ ಕೇಳಿದ್ದವರು ಹಿರಿಯ ನಟ ಸರಿಗಮ ವಿಜಿ!

ಮಂಜುಳಾ ಓದಿದ್ದು ಬರೀ ಏಳನೇ ಕ್ಲಾಸಷ್ಟೇ. ವಿದ್ಯೆಯನ್ನು ಉದಾಸೀನ ಮಾಡಿದ ಮಂಜುಳಾಗೆ ಆ ಕಾಲಕ್ಕೇ ತಾನು ಡ್ಯಾನ್ಸರ್ ಆಗಬೇಕು ಅನ್ನೋ ಬಯಕೆಯಿತ್ತಂತೆ. ಕುಣಿಯಲು ಬಯಸಿದ ಹುಡುಗಿ ನೋಡನೋಡುತ್ತಲೇ ನಟಿಯಾಗಿ ಬೆಳೆದು ತನ್ನ ವಯಸ್ಸಿಗೂ ಮೀರಿದ ಪಾತ್ರಗಳಿಗೆ ಬಣ್ಣ ಹಚ್ಚುವಂತಾಗಿತ್ತು. ಲಕ್ಷ್ಮೀ ಎನ್ನುವ ಧಾರಾವಾಹಿಯ ಮೂಲಕ ನಟನೆಯನ್ನು ಆರಂಭಿಸಿ ನಂತರ ರಾಘವೇಂದ್ರ ವೈಭವ, ಬದುಕು, ಶಿರಡಿ ಸಾಯಿಬಾಬಾ, ರಾಧಾಕಲ್ಯಾಣ ಸೇರಿದಂತೆ ಸಾಕಷ್ಟು ಸೀರಿಯಲ್ಲುಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಲೇ ‘ಗುಬ್ಬಿ ಸಿನಿಮಾದ ಮೂಲಕ ಸಿನಿಮಾ ನಟನೆಯನ್ನೂ ಆರಂಭಿಸಿದರು. ದೇವರು ಕೊಟ್ಟ ತಂಗಿ, ಪರಮಾತ್ಮ, ಡ್ರಾಮಾ, ಚೌಕ, ಅಮ್ಮ ಐ ಲವ್ ಯೂ, ಒಂದ್ ಕಥೆ ಹೇಳ್ಲಾ?, ಕವಚ, ಸೀತಾರಾಮ ಕಲ್ಯಾಣ, ಸ್ಟ್ರೈಕರ್ ಮುಂತಾದ ಸಿನಿಮಾಗಳಲ್ಲಿ ಮಂಜುಳಾ ಪಾತ್ರ ನಿರ್ವಹಿಸಿದ್ದಾರೆ.

“ಒಂದೊಂದು ಬ್ಯಾನರುಗಳು ಒಂದೊಂದು ತೀರಿಯಲ್ಲಿ ಸಂಭಾವನೆ ನೀಡುತ್ತಾರೆ. ಹದಿಮೂರು ವರ್ಷದಿಂದ ನಟಿಸುತ್ತಾ ಬಂದಿದ್ದೀನಿ. ಎಷ್ಟೋ ಸಾರಿ ಹೊಸಬರಿಗೆ ಕೊಟ್ಟ ಪೇಮೆಂಟನ್ನೇ ನಮಗೂ ಕೊಡ್ತಾರೆ. ಆಗ ಒಂಚೂರು ಬೇಸರವಾಗುತ್ತದೆ. ದೊಡ್ಡ ಸಿನಿಮಾಗಳಲ್ಲಿ ತುಂಬಾ ದೃಶ್ಯಗಳಲ್ಲಿ ನಟಿಸಿ ಬಂದಿರುತ್ತೀನಿ. ಅದು ತೆರೆ ಮೇಲೆ ಬರೋ ಹೊತ್ತಿಗೆ ನನ್ನಂಥ ಕಲಾವಿದರ ಸೀನುಗಳಿಗೆ ಕತ್ತರಿ ಬಿದ್ದಿರುತ್ತದೆ. ಇನ್ನು ಹೊಸಬರ ಸಿನಿಮಾಗಳಲ್ಲಿ ತುಂಬಾ ಅಚ್ಚುಕಟ್ಟಾದ ದೊಡ್ಡ ಪಾತ್ರಗಳು ಸಿಕ್ಕಿರುತ್ತವೆ. ದುರಾದೃಷ್ಟಕ್ಕೆ ಆ ಸಿನಿಮಾಗಳು ಥಿಯೇಟರಿನಲ್ಲಿ ನಿಲ್ಲೋದೇ ಇಲ್ಲ ಅನ್ನೋದು ಮಂಜುಳಾ ಅವರ ಬೇಸರ. ಇವೆಲ್ಲದರ ನಡುವೆಯೂ ಒಂದಲ್ಲಾ ಒಂದು ಸಿನಿಮಾಗಳಲ್ಲಿ ಕರೆದು ಅವಕಾಶ ಕೊಡುತ್ತಲೇ ಇರುತ್ತಾರೆ. ಬಿಡುಗಡೆಯಾಗುವ ಸಿನಿಮಾಗಳಲ್ಲಿ ತಿಂಗಳಿಗೆ ಒಂದು ಎರಡರಲ್ಲಾದರೂ ನಾನಿದ್ದೇ ಇರುತ್ತೀನಿ ಅನ್ನೋ ಖುಷಿಯಷ್ಟೇ ಎನ್ನುವ ಮಂಜುಳಾಗೆ ಮದರ್ ರೋಲು ಅಂದರೆ ತುಂಬಾ ಇಷ್ಟವಂತೆ…

ಕಳೆದ ಎಂಟು ವರ್ಷಗಳಿಂದ ಧಾರಾವಾಹಿಯಲ್ಲಿ ನಟಿಸೋದನ್ನು ಬಿಟ್ಟಿದ್ದರೂ ತೀರಾ ಒಳ್ಳೇ ಪಾತ್ರ ಬಂದರೆ ಮತ್ತೆ ಸೀರಿಯಲ್ ನಂಟಿಗೆ ಬರಬೇಕೆನ್ನುವುದು ಮಂಜುಳಾ ಬಯಕೆ. ಇನ್ನೇನು ಬಿಡುಗಡೆಯಾಗಬೇಕಿರುವ ನಮ್ ಗಣಿ ಬಿಕಾಂ ಪಾಸ್, ಗರುಡ, ಲಡ್ಡು, ಸಲಗ ಮುಂತಾದ ಸಿನಿಮಾಗಳಲ್ಲಿ ಮಂಜುಳಾ ಡಿಫರೆಂಟಾದ ಪಾತ್ರದಲ್ಲಿ ನಟಿಸಿದ್ದಾರಂತೆ. ನಮ್ ಗಣಿ ಬಿಕಾಂ ಪಾಸ್ ಸಿನಿಮಾದಲ್ಲಿ ಅತ್ಯುತ್ತಮ ಪಾತ್ರ ಸಿಕ್ಕಿದೆ ಎನ್ನುವ ಮಂಜುಳಾ ರೆಡ್ಡಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ನಟನೆಯನ್ನು ನಂಬಿ ಬದುಕು ಸಾಗಿಸುತ್ತಿರುವ ಮಂಜುಳಾ ರೆಡ್ಡಿಯವರಂತಾ ಪೋಷಕ ಕಲಾವಿದರ ಬದುಕು ಸುಂದರವಾಗಿರಬೇಕೆಂದರೆ, ಅವಕಾಶಗಳು ನಿರಂತರವಾಗಿ ಅವರ ಕೈ ಹಿಡಿಯುತ್ತಿರಬೇಕು. ಅದು ಸಾಧ್ಯವಾಗಲಿ…

CG ARUN

ಆಯುಷ್‌ಮಾನ್‌ಭವ ಅಂದರು ಆಪ್ತಮಿತ್ರ ನಿರ್ದೇಶಕ…

Previous article

ಪ್ರಸೆಂಟ್ ಪ್ರಪಂಚದಲ್ಲಿ ಯಾವ್ಯಾವುದು ಎಷ್ಟೆಷ್ಟು ಪರ್ಸೆಂಟ್ ಇದೆ?

Next article

You may also like

Comments

Leave a reply

Your email address will not be published. Required fields are marked *