ಮಿಸ್ಟರಿ ಆಫ್ ಮಂಜುಳಾ ಹೆಸರಿನ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಶೀರ್ಷಿಕೆ ನೋಡುತ್ತಿದ್ದರೆ, ಇದು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ, ಈ ಹೊತ್ತಿಗೂ ಯಾರೂ ಅರಗಿಸಿಕೊಳ್ಳಲಾರದ ದುರಂತ ಸಾವು ಕಂಡ ಲೇಡಿ ಸೂಪರ್ ಸ್ಟಾರ್ ಮಂಜುಳಾ ಕುರಿತಾಗಿ ಮೂಡಿಬರುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಮಂಜುಳಾ ಬೆಳೆದುಬಂದ ಹಾದಿ ಮತ್ತು ಅಂತ್ಯ ಕೂಡಾ ಒಂದು ರೀತಿಯಲ್ಲಿ ಮಿಸ್ಟರಿಯಾಗೇ ಉಳಿದುಹೋಗಿದೆ.
ಯುವ ನಿರ್ದೇಶಕ ಪ್ರವೀಣ್ ಜಯಣ್ಣ ನಿರ್ದೇಶನದ ‘ಮಿಸ್ಟರಿ ಆಫ್ ಮಂಜುಳಾ’ ಚಿತ್ರ ನಿಜಕ್ಕೂ ಈ ನಟಿಯ ಬದುಕು, ಬವಣೆಯ ಸುತ್ತ ಇರಲಿದೆಯೋ ಏನೋ ಗೊತ್ತಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ನಿರ್ದೇಶಕ ಪ್ರವೀಣ್ ಚಿತ್ರದ ಒಳಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಏನೇ ಕೇಳಿದರೂ ಟೀಸರ್ ಬಂದಮೇಲೆ ನಿಮಗೇ ಗೊತ್ತಾಗುತ್ತದೆ ಅಂದಷ್ಟೇ ಹೇಳುತ್ತಿದ್ದಾರೆ. ಆದರೆ ಮಂಜುಳಾ ಎನ್ನುವ ಮೇರು ನಟಿಯನ್ನು ನೆನಪಿಸಿಕೊಳ್ಳಲು ಇದು ನೆಪವಾಗಿರೋದು ನಿಜ. ಈ ಸಂದರ್ಭದಲ್ಲಿ ಬೆಳ್ಳಿತೆರೆ ಬಜಾರಿಯ ಕಳೆದುಹೋದ ಜೀವನದ ಸಣ್ಣ ಪರಿಚಯ ಇಲ್ಲಿದೆ…
‘ಸಂಪತ್ತಿಗೆ ಸವಾಲ್’ನಲ್ಲಿ ಹಳ್ಳಿಯ ಬಜಾರಿಯಾಗಿ, ‘ಎರಡು ಕನಸು’ ಚಿತ್ರದಲ್ಲಿ ಹದಿಹರೆಯದ ಪ್ರೇಮಿಯಾಗಿ, ‘ನಿನಗಾಗಿ ನಾನು’ ಚಿತ್ರದಲ್ಲಿ ಉನ್ಮತ್ತ ಚೆಲುವೆಯಾಗಿ, ‘ಮಯೂರ’ದಲ್ಲಿ ರಾಜಕುಮಾರಿಯಾಗಿ ಚಿತ್ರರಸಿಕರ ಹೃದಯದಲ್ಲಿ ಮೋಹಕ ತರಂಗಗಳನ್ನೆಬ್ಬಿಸಿದ್ದ ಮಂಜುಳಾ ಸರಿಸುಮಾರು ಒಂದು ದಶಕದ ಕಾಲ ಕನ್ನಡ ಚಿತ್ರರಂಗದ ಮುಖ್ಯ ನಟಿಯಾಗಿ, ಜನಪ್ರಿಯ ತಾರೆಯಾಗಿ ಮೆರೆದವರು. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದು ಸಿ.ವಿ. ಶಿವಶಂಕರ್ ನಿರ್ದೇಶನದ ‘ಮನೆ ಕಟ್ಟಿ ನೋಡು’ ಚಿತ್ರದ ಮೂಲಕ. ಅದು ೧೯೬೪-೬೫ನೇ ಇಸವಿ. ಮಂಜುಳಾರ ಚಿಕ್ಕಪ್ಪ ಸಿದ್ದಲಿಂಗಯ್ಯ ‘ಮನೆ ಕಟ್ಟಿ ನೋಡು’ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ಮಾಡುತ್ತಿದ್ದರು. ಒಮ್ಮೆ ಸಿ.ವಿ. ಶಿವಶಂಕರ್ ಸಿದ್ದಲಿಂಗಯ್ಯನವರೊಂದಿಗೆ ಅವರ ಅಣ್ಣ ಶಿವಣ್ಣನ ಮನೆಗೆ ಬಂದರು. ಅಲ್ಲಿ ೧೧-೧೨ ವರ್ಷ ವಯಸ್ಸಿನ ಬಾಲಕಿಯೊಬ್ಬಳು ನೃತ್ಯಾಭ್ಯಾಸ ಮಾಡುತ್ತಿದ್ದುದನ್ನು ಶಿವಶಂಕರ್ ಕಂಡರು. ಆ ಹುಡುಗಿಯ ಮುಖದಲ್ಲಿನ ಕಳೆ, ಕಣ್ಣಿನ ಹೊಳಪು, ಕೈಕಾಲು ಆಡಿಸುತ್ತಿದ್ದ ಪರಿಯನ್ನು ಕಂಡು ಈಕೆಗೆ ತಮ್ಮ ಚಿತ್ರದಲ್ಲಿ ಪಾತ್ರವೊಂದನ್ನು ಕೊಡಬೇಕೆಂದು ಅಲ್ಲಿಯೇ ನಿಶ್ಚಯಿಸಿಬಿಟ್ಟರು. ಮಂಜುಳಾ ಬಣ್ಣದ ಬದುಕಿಗೆ ಅಡಿಯಿಟ್ಟಿದ್ದು ಹಾಗೆ. ‘ಮನೆ ಕಟ್ಟಿ ನೋಡು’ ಚಿತ್ರದಲ್ಲಿ ಮಂಜುಳಾರ ಜೊತೆ ಅವರ ತಂಗಿ ಉಮಾ ಕೂಡ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ೧೯೬೬ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಗುವುದರೊಂದಿಗೆ ಮಂಜುಳಾರಿಗೂ ಒಂದಿಷ್ಟು ಹೆಸರು ಬಂತು. ಸಿ.ವಿ. ಶಿವಶಂಕರ್ ತಮ್ಮ ಮುಂದಿನ ಚಿತ್ರ ‘ಪದವೀಧರ’ದಲ್ಲಿಯೂ ಮಂಜುಳಾರಿಗೆ ಸಣ್ಣ ಪಾತ್ರವೊಂದನ್ನು ಕೊಟ್ಟರು.
ಮಂಜುಳಾ ರಾಜ್ಕುಮಾರ್ರೊಂದಿಗೆ ಮೊದಲು ಕಾಣಿಸಿಕೊಂಡಿದ್ದು ‘ಮೂರುವರೆ ವಜ್ರಗಳು’ ಚಿತ್ರದಲ್ಲಾದರೂ ಅವರನ್ನು ಜನ ಗುರುತಿಸಿದ್ದು ೧೯೭೪ರಲ್ಲಿ ಬಿಡುಗಡೆಯಾದ ‘ಭಕ್ತ ಕುಂಬಾರ’ ಚಿತ್ರದ ಮೂಲಕ. ಆದರೆ, ಮಂಜುಳಾರ ಹೆಸರನ್ನು ಚಿರಂತನಗೊಳಿಸಿದ ಚಿತ್ರ ‘ಸಂಪತ್ತಿಗೆ ಸವಾಲ್’. ಈ ಚಿತ್ರ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ್ದೇ ಅಲ್ಲದೆ, ಅವರ ಹೆಸರು ಕನ್ನಡ ಚಿತ್ರರಸಿಕರ ನಡುವೆ ನಲಿದಾಡುವಂತೆ ಮಾಡಿತು. ಕನ್ನಡ ವೃತ್ತಿರಂಗಭೂಮಿಯ ಖ್ಯಾತ ನಾಟಕಕಾರ ಬಿ.ಪಿ. ಧುತ್ತರಗಿಯವರ ಪ್ರಸಿದ್ಧ ನಾಟಕವೊಂದನ್ನು ಆಧರಿಸಿ ಎ.ವಿ. ಶೇಷಗಿರಿರಾವ್ ನಿರ್ದೇಶಿಸಿದ ಈ ಚಿತ್ರದಲ್ಲಿ ಮಂಜುಳಾ ರಾಜ್ಕುಮಾರ್ರವರಿಗೆ ಸರಿಸಮನಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮಂಜುಳಾ ಬೆಳ್ಳಿತೆರೆಯ ಮೇಲೆ ಮೊಟ್ಟ ಮೊದಲನೆಯದಾಗಿ ಬಜಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲಿ. ಮುಂದೆ ಕನ್ನಡದಲ್ಲಿ “ಬೆಳ್ಳಿತೆರೆಯ ಬಜಾರಿ” ಎಂದೇ ಮಂಜುಳಾ ಮನೆಮಾತಾದರು. ಒಂದರ ಹಿಂದೆ ಒಂದರಂತೆ ಅಂಥವೇ ಪಾತ್ರಗಳು ಆಕೆಯನ್ನು ಹುಡುಕಿಬಂದವು. ಆ ಚಿತ್ರದ ನಂತರ ಮಂಜುಳಾ ಹತ್ತಾರು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಇಂದಿಗೂ ಅವರನ್ನು ದುರ್ಗಿಯ ಪಾತ್ರದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದಿಲ್ಲ.
ಮಂಜುಳಾ ಒಂದು ದಶಕಕ್ಕೂ ಮೀರಿದ ಸಿನಿಮಾ ಬದುಕಿನಲ್ಲಿ ಸುಮಾರು ನೂರು ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ ಸಿಕ್ಕಿದ್ದು ಒಂದೇ ಒಂದು ಪ್ರಶಸ್ತಿ. ಅದೇ ‘ಎರಡು ಕನಸು’ ಚಿತ್ರದ ಅಭಿನಯಕ್ಕಾಗಿ ದೊರೆತ ಫಿಲಂಫೇರ್ ಪ್ರಶಸ್ತಿ. ಅವರಿಗೆ ರಾಜ್ಯ ಪ್ರಶಸ್ತಿ ಪಡೆಯಬೇಕೆನ್ನುವ ಹಂಬಲ ತೀವ್ರವಾಗಿತ್ತು. ತಾನು ಉತ್ತಮವಾಗಿ ನಟಿಸಿದ್ದೇನೆ ಎಂದು ಪ್ರತೀಬಾರಿ ಪ್ರಶಂಸೆ ಬಂದಾಗಲೂ ಈ ಬಾರಿ ಪ್ರಶಸ್ತಿ ಬರಬಹುದೆಂದು ಆಸೆ ಪಡುತ್ತಿದ್ದರು; ನಿರಾಸೆಗೊಳ್ಳುತ್ತಿದ್ದರು. ಬರುಬರುತ್ತಾ ಅವರಿಗೆ ಸರ್ಕಾರಗಳು ಕೊಡುವ ಪ್ರಶಸ್ತಿಗಳ ಬಗ್ಗೆ ಆಸಕ್ತಿ, ಗೌರವ ಸಂಪೂರ್ಣವಾಗಿ ಹೋಗಿಬಿಟ್ಟಿತ್ತು. ಅದೇ ಹೊತ್ತಿಗೆ ಕನ್ನಡ ಪ್ರೇಕ್ಷಕರು ಮಂಜುಳಾರನ್ನು ನೆತ್ತಿಯ ಮೇಲೆ ಕೂರಿಸಿಕೊಂಡು ತಿರುಗುತ್ತಿದ್ದರು. ಅವರ ಸಮಕಾಲೀನರಾಗಿದ್ದ ಯಾವ ನಟಿಗೂ ಸಿಗದಿದ್ದಷ್ಟು ಜನಪ್ರಿಯತೆ ಅವರಿಗೆ ಸಿಕ್ಕಿತ್ತು. ವೃತ್ತಿರಂಗಭೂಮಿಯ ನಾಟಕಗಳನ್ನು ಆಧರಿಸಿದ ಚಿತ್ರಗಳಲ್ಲಿ ನಟಿಸುತ್ತಿದ್ದುದರಿಂದಲೋ ಏನೋ ಉತ್ತರ ಕರ್ನಾಟಕದಲ್ಲಿ ಮಂಜುಳಾ ತುಂಬಾ ಜನಪ್ರಿಯರಾಗಿದ್ದರು. ೧೯೮೨ರ ಏಪ್ರಿಲ್ನಲ್ಲಿ ಐದಾರು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿ ನವಲಗುಂದಲ್ಲಿ ಅವರ ದೊಡ್ಡ ಮೆರವಣಿಗೆ ಮಾಡಿ ಅವರಿಗೆ ‘ಕಲಾಮಯೂರಿ’ ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು
ಕೃತಜ್ಞತೆ-ಮಂಜುಳಾರ ವ್ಯಕ್ತಿತ್ವದ ಮತ್ತೊಂದು ಗುಣ. ತನ್ನ ಬದುಕಿನ ವಿವಿಧ ಘಟ್ಟಗಳಲ್ಲಿ ನೆರವಾದ ಸಂಸ್ಥೆಗಳು, ವ್ಯಕ್ತಿಗಳ ಬಗ್ಗೆ ಅವರು ಯಾವತ್ತೂ ಒಂದೇ ರೀತಿಯ ಪ್ರೀತಿ ತೋರುತ್ತಿದ್ದರು. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಮೇಲೂ ಪ್ರಭಾತ್ ಕಲಾವಿದರ ಸಂಸ್ಥೆ ಕರೆದಾಗ ಬಾಗಲಕೋಟೆ, ಕುಶಾಲನಗರಗಳಿಗೆಲ್ಲಾ ಹೋಗಿ ಅವರ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸೆಟ್ನ ಹುಡುಗರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದ ಮಂಜುಳಾ ಸುತ್ತಲಿನ ಜನರ ನೋವಿಗೆ ಸ್ಪಂದಿಸಬಲ್ಲವರಾಗಿದ್ದರು.
ಮಂಜುಳಾರನ್ನು ತುಂಬಾ ಕಾಡಿದ್ದು, ನೋವು ಕೊಟ್ಟಿದ್ದು ಚೀಟಿ ಹಗರಣ. ಅವರ ತಾಯಿ ಮತ್ತು ತಮ್ಮಂದಿರು ನಡೆಸುತ್ತಿದ್ದ ಚೀಟಿ ವ್ಯವಹಾರವು ನಂತರ ಹಗರಣವಾಗಿ, ಜನಪ್ರಿಯರಾಗಿದ್ದ ಕಾರಣಕ್ಕೆ ಅದು ಮಂಜುಳಾರಿಗೆ ತಗುಲಿಕೊಂಡಿತ್ತು. ಇದು ಅನೇಕ ಜಗಳಗಳಿಗೆ ಕಾರಣವಾಗಿ ಪತ್ರಕರ್ತರನ್ನು, ಜನರನ್ನು ಕಂಡರೆ ಮಂಜುಳಾ ಹೆದರುವಂತಾಗಿತ್ತು. ಅವರ ವೃತ್ತಿಬದುಕಿನ ಕುಸಿತಕ್ಕೂ ಇದು ಕಾರಣವಾಯಿತೆನ್ನುವವರಿದ್ದಾರೆ.
ಮಹಾ ನೇರವಂತಿಕೆಯ ದಿಟ್ಟೆಯಾಗಿದ್ದ ಮಂಜುಳಾ ಅಷ್ಟೇ ಸುಕೋಮಲ ಮನಸ್ಸಿನ ಸೂಕ್ಷ್ಮಮತಿ ಆಗಿದ್ದರು. ಬಾಹ್ಯದಲ್ಲಿ ಬಜಾರಿಯಂತೆ ಕಾಣುತ್ತಿದ್ದ ಮಂಜುಳಾ ಆಳದಲ್ಲಿ ಅತಿಭಾವುಕತೆಯ ದುರ್ಬಲ ಮನಸ್ಸಿನವರಾಗಿದ್ದರು. ಹಾಗಾಗಿ ಬದುಕನ್ನು ಸಮಚಿತ್ತದಿಂದ ಸ್ವೀಕರಿಸುವುದು ಅವರಿಂದಾಗುತ್ತಿರಲಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪ್ರಬುದ್ಧತೆಯಾಗಲಿ, ಧೈರ್ಯವಾಗಲಿ ಅವರಿಗೆ ಇರಲಿಲ್ಲ. ಅವರ ಅಂತರಂಗವನ್ನು ಅರಿತಿದ್ದವರು ತೀರಾ ವಿರಳ. ಚಿತ್ರರಂಗದಲ್ಲಾಗಲಿ, ಹೊರಗಾಗಲಿ ಅವರಿಗೆ ಮನಸ್ಸು ಬಿಚ್ಚಿ ಮಾತನಾಡುವಂಥ ಗೆಳೆಯ/ಗೆಳತಿಯರಿರಲಿಲ್ಲ. ಗಂಡ ಅಮೃತಂ ಮದ್ರಾಸ್ನಿಂದ ಆಗೊಮ್ಮೆ ಈಗೊಮ್ಮೆ ಬಂದುಹೋಗುತ್ತಿದ್ದರು. ಮಂಜುಳಾರ ತಂಗಿಯರು, ತಮ್ಮಂದಿರು ಮದುವೆಯಾಗಿ ಅವರವರ ಬದುಕಿನ ದಾರಿ ಹಿಡಿದಿದ್ದರೆ, ಅವರ ತಂದೆ-ತಾಯಿ ಹೊನ್ನೇನಹಳ್ಳಿ ಸೇರಿಕೊಂಡಿದ್ದರು. ಮಂಜುಳಾರ ಸುತ್ತ ಇದ್ದವರು ಅವರ ಖ್ಯಾತಿಯನ್ನು, ಹಣವನ್ನು ಕಂಡು ಇರುತ್ತಿದ್ದಂಥವರು. ನಿಜವಾದ ಪ್ರೀತಿ, ಸ್ನೇಹಗಳು ಮಂಜುಳಾರ ಪಾಲಿಗೆ ಕನಸಾಗಿದ್ದವು. ಜೀವನಪ್ರೀತಿಯ ಬುಗ್ಗೆಯಾಗಿದ್ದ ಮಂಜುಳಾ ಒಂದು ಹಿಡಿ ಪ್ರೀತಿಗಾಗಿ, ಸಾಂತ್ವನದ ನುಡಿಗಾಗಿ ಹಪಹಪಿಸುತ್ತಿದ್ದರು. ಆ ಪರಿಸ್ಥಿತಿಯನ್ನು ಮೀರಲೆಂದೋ ಏನೋ ಅವರು ಹೊನ್ನೇನಹಳ್ಳಿಯ ಬಳಿ ೨೦ ಎಕರೆ ಜಮೀನು ಕೊಂಡಿದ್ದರು. ಊರಿನಲ್ಲಿ ಈಶ್ವರನ ದೇವಸ್ಥಾನ ಕಟ್ಟಿಸಿದ್ದರು.
ಅಂಥ ಸಂದರ್ಭದಲ್ಲಿಯೇ ಅವರಿಗೆ ಮಗ ಹುಟ್ಟಿದ್ದು. ಮಂಜುಳಾರ ಮಗ ಅಭಿಷೇಕ್ ಹುಟ್ಟಿದ್ದು ಜೂನ್ ಐದು, ೧೯೮೪ರಂದು. ಮಗ ಅವರ ಬಾಳಿಗೆ ಹೊಸ ಅರ್ಥವನ್ನು, ಕನಸುಗಳನ್ನು ತಂದುಕೊಟ್ಟಿದ್ದ. ಸಿದ್ಧಗಂಗೆಯ ಗೌರಿಶಂಕರ ಸ್ವಾಮೀಜಿಯನ್ನು ಕರೆಸಿ ಊರಿನಲ್ಲಿ ಅದ್ಧೂರಿ ನಾಮಕರಣ ಸಮಾರಂಭವನ್ನೂ ಮಾಡಿದ್ದರು ಮಂಜುಳಾ. ಬದುಕಿಗೊಂದು ಊರುಗೋಲು ಸಿಕ್ಕಿ ಬಾಳಿನಲ್ಲಿ ಹಸಿರು ಮೂಡತೊಡಗಿತ್ತು. ಆಗಲೇ ದುರಂತ ಸಂಭವಿಸಿದ್ದು. ಅದು ೧೯೮೬ರ ಸೆಪ್ಟೆಂಬರ್ ತಿಂಗಳ ಐದನೇ ತಾರೀಖಿನ ದಿನ. ಮಗುವಿಗಾಗಿ ಹಾಲು ಕಾಯಿಸಲು ಅಡುಗೆ ಮನೆಗೆ ಹೋದರು ಮಂಜುಳಾ. ಸ್ವಲ್ಪ ಹೊತ್ತಿನಲ್ಲಿಯೇ ಒಳಗಿನಿಂದ ಚೀತ್ಕಾರ ಕೇಳಿಸಿತು. ಅಡುಗೆ ಅನಿಲದ ಸಿಲಿಂಡರ್ ಸ್ಫೋಟಿಸಿ ಮಂಜುಳಾ ತೀವ್ರವಾಗಿ ಸುಟ್ಟುಹೋಗಿದ್ದರು. ಮೊದಲು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ನಂತರ ಸೇಂಟ್ಜಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ತನ್ನ ಸುಂದರ ದೇಹ, ಮೋಹಕ ಮಾತಿನಿಂದ ಕನ್ನಡ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸಿದ್ದ ಮಂಜುಳಾ ದೇಹ ಸುಟ್ಟುಕೊಂಡು ಪ್ರಜ್ಞಾಶೂನ್ಯರಾಗಿ ಒಂದು ವಾರ ಕಾಲ ಬದುಕು-ಸಾವಿನ ಹೋರಾಟ ನಡೆಸಿದ್ದರು. ತನ್ನ ಬಜಾರಿತನದಿಂದ ಎಂಥವರನ್ನೂ ಹೆದರಿಸುತ್ತಿದ್ದ ಮಂಜುಳಾ ಸಾವಿನ ವಿರುದ್ಧ ಸೆಣೆಸಲಾಗದೆ ಕೊನೆಗೆ ಸೆಪ್ಟೆಂಬರ್ ೧೨ರಂದು ಸೋಲೊಪ್ಪಿಕೊಂಡರು. ಹೊನ್ನೇನಹಳ್ಳಿಯ ಅವರ ಪ್ರೀತಿಯ ತೋಟದಲ್ಲಿಯೇ ಅವರನ್ನು ಮಣ್ಣು ಮಾಡಲಾಯಿತು. ಅಜ್ಜಿ ಪಾರ್ಟ್ ಮಾಡಿಕೊಂಡಾದರೂ ಕೊನೆಯವರೆಗೆ ಚಿತ್ರರಂಗದಲ್ಲಿರುತ್ತೇನೆ ಎಂದಿದ್ದ ಮಂಜುಳಾ ಸತ್ತ ನಂತರವೂ ಚಿತ್ರರಂಗದ ನಂಟನ್ನು ಬಿಟ್ಟಿಲ್ಲ. ಅವರ ಹೊನ್ನೇನಹಳ್ಳಿಯ ಮನೆಯಲ್ಲಿ ಇಂದಿಗೂ ಅವರ ಒಂದು ದೊಡ್ಡ ಫೋಟೋ ಇದೆ. ಅದು ‘ದೀಪ’ ಚಿತ್ರದಲ್ಲಿ ಮಂಜುಳಾ ಕ್ಯಾನ್ಸರ್ ರೋಗಿಯಾಗಿ ಸತ್ತ ನಂತರದ ದೃಶ್ಯಕ್ಕಾಗಿ ಬಳಸಿದ್ದ ಫೋಟೋ! ಮಂಜುಳಾ ಬಗ್ಗೆ ಹೇಳುತ್ತಾ ಹೋದರೆ ಅದು ಮುಗಿಯದ ಕತೆ. ಮಂಜುಳಾ ಬದುಕಿನ ಈ ಎಲ್ಲ ವಿವರಗಳನ್ನು ‘ಮಿಸ್ಟರಿ ಆಫ್ ಮಂಜುಳಾ’ ತೆರೆದಿಡಲಿದೆಯಾ ? ನಿಜಕ್ಕೂ ಇದು ಮಂಜುಳಾ ಲೈಫ್ ಸ್ಟೋರಿ ಆಧರಿಸಿದ ಸಿನಿಮಾವಾ ? ಹಾಗೊಮ್ಮೆ ನಿಜವಾಗಿದ್ದರೆ, ಈ ಚಿತ್ರ ಹೇಗೆ ಮೂಡಿಬರಬಹುದು ? ಹೀಗೆ ಸಾಕಷ್ಟು ಅನುಮಾನಗಳು, ಪ್ರಶ್ನೆಗಳೆಲ್ಲಾ ಈ ಚಿತ್ರದ ಸುತ್ತ ಸುತ್ತಿಕೊಂಡಿದೆ.
ಈ ಚಿತ್ರವು “ಶ್ರೀ ಚೌಡೇಶ್ವರಿ ಸಿನಿ ಆರ್ಟ್ ಕ್ರಿಯೇಷನ್ಸ್” ಮತ್ತು “ರವಿ ಶಾಮನೂರು ಫಿಲ್ಮ್ಸ್” ಸಂಸ್ಥೆಯ ಅಡಿಯಲ್ಲಿ ಡಾ॥ರವಿ ಶಾಮನೂರ್ ಮತ್ತು ಡಾ॥ನಾಗರಾಜ್ ಮುರುಡೇಶ್ವರ ರವರು ನಿರ್ಮಾಪಕರಾಗಿದ್ದು , ABCD Film Factory ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದೆ. ಪ್ರವೀಣ್ ಜಯಣ್ಣ ಅವರ ಚೊಚ್ಚಲ ನಿರ್ದೇಶನ ಚಿತ್ರ ಇದಾಗಿದೆ. ಹಾಲೇಶ್.ಎಸ್. ಛಾಯಾಗ್ರಾಹಣ, ಸಾಯಿ ಕಿರಣ್ ಸಂಗೀತ ಹಾಗು ವೆಂಕಟೇಶ್ ಯು. ಡಿ.ವಿ ಅವರ ಸಂಕಲನ ಈ ಚಿತ್ರಕ್ಕೆ ಇದೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣವನ್ನು ಮುಗಿಸಿ ಧ್ವನಿ ಮುದ್ರಣ ಕಾರ್ಯ ನಡೆಯುತ್ತಿದೆ. ಮಾರ್ಚ್ನಲ್ಲಿ ‘ಮಿಸ್ಟರಿ ಆಫ್ ಮಂಜುಳ’ ಚಿತ್ರದ ಫಸ್ಟ್ ಲುಕ್ /ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ!
ಮಂಜುಳಾ ಕುರಿತ ಮಾಹಿತಿ : ಬೆಳಚಿಕ್ಕನಹಳ್ಳಿ ಶ್ರೀನಾಥ್