ಇದೆಂತಾ ವಿಚಿತ್ರ… ಇಂಥದ್ದೊಂದು ವಿಚಾರವನ್ನು ನಂಬುವುದಾದರೂ ಹೇಗೆ? ಬೆಳಕು ಹರಿಯುತ್ತಿದ್ದಂತೆ ನಡೆಯಬೇಕಿದ್ದ ಮಗನ ಮದುವೆ.. ಅದರ ಆ ಖುಷಿ, ತಯಾರಿಯಲ್ಲಿದ್ದ ತಂದೆ ದಿಢೀರ್ ಅಂತಾ ಕಣ್ಣುಮುಚ್ಚಿದರೆ…? ಏನಾಗಬೇಡ ಆ ಕುಟುಂಬಕ್ಕೆ..? ಈ ಆಘಾತವನ್ನು ತಡೆಯುವುದಾದರೂ ಹೇಗೆ?
ಮೊನ್ನೆಯಷ್ಟೇ ನಟಿ ಕಾವ್ಯ ಮತ್ತು ವರುಣ್ ಅವರ ಮದುವೆ ವಿಚಾರದ ಬಗ್ಗೆ ಪ್ರಕಟಿಸಿದ್ದೆವು.
18.04.2022ರ ಬೆಳಿಗ್ಗೆ ಮದುವೆ ಕಾರ್ಯ ನಡೆಯಬೇಕಿತ್ತು. ತಡರಾತ್ರಿ 1.30ರ ಹೊತ್ತಿಗೆ ವರುಣ್ ಅವರ ತಂದೆ ಮಂಜುನಾಥ್ ಮದುವೆ ಕಾರ್ಯಕ್ಕೆ ತೆರಳಲು ತಮ್ಮ ಮನೆ ಕೆಳಗಿನ ಪಾರ್ಕಿಗಿನಲ್ಲಿ ನಿಂತು ಇರುವ ಕಾರುಗಳನ್ನೆಲ್ಲಾ ತೊಳೆದು ಸಿದ್ದಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಏಕಾ ಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಮಂಜುನಾಥ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಗೋಕುಲ್ ದಾಸ್ ಎಕ್ಸ್ ಪೋರ್ಟ್ ಸಂಸ್ಥೆಯ ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು ಮಂಜುನಾಥ್. ಕಳೆದ ಒಂದು ವರ್ಷದ ಹಿಂದಷ್ಟೇ ನಿವೃತ್ತರಾಗಿದ್ದರು. ಮಂಜುನಾಥ್ ಅವರ ಹಿರಿಯ ಮಗ ವರುಣ್ ಗೌಡ. ಮತ್ತೊಬ್ಬ ಪುತ್ರ ನಿತಿನ್, ಪತ್ನಿ ನಾಗರತ್ನ. ವರುಣ್ ಸಾಕಷ್ಟು ವರ್ಷಗಳಿಂದ ಕಿರುತೆರೆ ಮನರಂಜನಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವವರು. ಸದ್ಯ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ನಿರ್ಮಾಣ ಕೂಡಾ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಆತ್ಮೀಯ ಬಳಗದಲ್ಲಿದ್ದ ವರುಣ್ ಚಿತ್ರರಂಗದಲ್ಲಿ ಸಾಕಷ್ಟು ಸಂಪರ್ಕ ಮತ್ತು ಹೆಸರು ಗಳಿಸಿದ್ದಾರೆ. ಹಿರಿಯ ನಟ ನಾಗೇಂದ್ರ ಶಾ ಅವರ ಪುತ್ರಿ ಕಾವ್ಯ ಶಾ ಅವರೊಂದಿಗೆ ಇಂದು ವರುಣ್ ಕುಮಾರ್ ಮದುವೆ ನೆರವೇರಬೇಕಿತ್ತು.
ನೆನ್ನೆ ಇಡೀ ದಿನ ಮಗನ ಮದುವೆ ಸಂಭ್ರಮದಲ್ಲಿ ಓಡಾಡಿಕೊಂಡಿದ್ದ ಮಂಜುನಾಥ್ ಹೀಗೆ ಯಾವ ಸೂಚನೆಯನ್ನೂ ನೀಡದೆ ಎದ್ದು ನಡೆದಿದ್ದಾರೆ. ಬೆಳಗೆದ್ದು ಯಾರೆಲ್ಲಾ ವರುಣ್ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತೋ ಅದೇ ಸ್ನೇಹಿತರು, ಬಂಧುಗಳೆಲ್ಲಾ ಅವರ ತಂದೆಯ ಅಂತಿಮ ದರ್ಶನಕ್ಕೆ ಬರುವಂತಾಗಿದೆ…
ಕ್ರೂರ ವಿಧಿಯೇ ನಿನಗೆಲ್ಲಿದೆ ಕರುಣೆ?
- ಮಂಜುನಾಥ್ ಅವರ ಮೃತ ದೇಹವನ್ನು ನಾಗರಬಾವಿಯ, ಮುದ್ದಿನಪಾಳ್ಯ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಇರಿಸಲಾಗಿದೆ. ಮಂಜುನಾಥ್ ಅವರ ನಿಧನದ ಕಾರಣ ಮದುವೆ ಮುಂದೂಡಲಾಗಿದೆ.
Comments