ಎಸ್.ಡಿ ಅರುಣ್ ಕುಮಾರ್ ನಿರ್ಮಿಸಿ ನಿರ್ದೇಶನ ಮಾಡಿರುವ ಚಿತ್ರ ದಿವಂಗತ ಮಂಜುನಾಥನ ಗೆಳೆಯರು. ಇನ್ನೆಷ್ಟೇ ವರ್ಷ ನೋಡಿದರೂ ಈ ಚಿತ್ರದ ಪಾತ್ರಗಳು ಹಳತಾಗೋದೇ ಇಲ್ಲ ಎಂಬಂಥಾ ಭರವಸೆ ಹೊಂದಿರೋ ಅರುಣ್, ಸಹಜತೆ ಬೆರೆತ ತಾಜಾ ಕಥೆಯೊಂದನ್ನು ಈ ಮೂಲಕ ಚಿತ್ರವಾಗಿಸಿದ ಖುಷಿಯಲ್ಲಿದ್ದಾರೆ.
ಕಿರುಚಿತ್ರಗಳೆಂದರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲ ಹೆಜ್ಜೆ ಎಂದೇ ಪರಿಗಣಿಸಲ್ಪಟ್ಟಿದೆ. ಅರುಣ್ ಕುಮಾರ್ ಅವರ ವಿಚಾರದಲ್ಲಿಯೂ ಇದು ನಿಜ. ಯಾಕೆಂದರೆ, ಅವರೂ ಕೂಡಾ ಮೊದಲು ಗುರುತಿಸಿಕೊಂಡಿದ್ದೇ ಕಿರುಚಿತ್ರದ ಮೂಲಕ. ನಿರ್ದೇಶಕನಾಗಬೇಕೆಂಬ ಕನಸು ಹೊಂದಿದ್ದ ಇವರು ಅದಕ್ಕಾಗಿ ಪ್ರಯತ್ನ ಪಡುತ್ತಲೇ ವರ್ಷಗಳ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರಂತೆ. ಅದರಲ್ಲುಇನ ಭಿನ್ನವಾದ ಆಲೋಚನೆ, ಕಥನ ಶೈಲಿ ಎಲ್ಲರ ಗಮನ ಸೆಳೆದಿತ್ತು. ಅದರಿಂದ ಉತ್ತೇಜಿತರಾದ ಅರುಣ್ ಆಗಲೇ ಚಿತ್ರವೊಂದಕ್ಕೆ ತಯಾರಿ ಮಾಡಿಕೊಂಡು ಕಥೆಗೆ ಕಾವು ಕೊಡಲಾರಂಭಿಸಿದ್ದರು. ಅದರ ಫಲವಾಗಿ ಹುಟ್ಟಿಕೊಂಡಿದ್ದು ದಿವಂಗತ ಮಂಜುನಾಥನ ಗೆಳೆಯರು!
ನಿರಂತರವಾಗಿ ಆರು ತಿಂಗಳ ಕಾಲ ಕಥೆ ಸಿದ್ಧಪಡಿಸಿದ್ದ ಅರುಣ್ ಅವರಿಗೆ ಈ ಚಿತ್ರಕ್ಕಾಗಿ ಹೊಸಬರೇ ಬೇಕೆಂಬುದು ಪಕ್ಕಾ ಆಗಿತ್ತು. ಆದ್ದರಿಂದಲೇ ಆಡಿಷನ್ ನಡೆಸಿದಾಗ ಈ ಐವರು ಆಯ್ಕೆಯಾಗಿದ್ದಾರೆ. ಹಾಗಂತ ನಾಯಕರು ಸಿಕ್ಕಾಕ್ಷಣವೇ ನಟನೆಗಿಳಿಸದೇ ತಿಂಗಳ ಕಾಲ ಅವರಿಗೆ ತರಬೇತಿಯನ್ನೂ ಕೊಡಿಸಲಾಗಿದೆಯಂತೆ. ನಟರಾಗಬೇಕೆಂಬ ಆಳದ ಹಸಿವಿದ್ದ ಇವರೆಲ್ಲರೂ ಹೊಸಬರೆಂಬ ಸುಳಿವೂ ಸಿಗದಂತೆ ಚೆಂದಗೆ ನಟಿಸಿದ್ದಾರೆಂಬ ಮೆಚ್ಚುಗೆಯೂ ನಿರ್ದೇಶಕರಲ್ಲಿದೆ.
ಗೆಳೆಯನ ಸಾವಿನ ಸಂದರ್ಭದಲ್ಲಿ ಒಟ್ಟು ಸೇರುವ ಐವರು ಸ್ನೇಹಿತರು, ಅಲ್ಲಿಂದ ಬಿಚ್ಚಿಕೊಳ್ಳೋ ಕಥಾನಕ ದಿವಂಗತ ಮಂಜುನಾಥನ ಗೆಳೆಯರು ಚಿತ್ರದ್ದು. ಪ್ರೇಕ್ಷಕರಿಗೆ ಎಲ್ಲಿಯೂ ತಾವೊಂದು ಚಿತ್ರ ನೋಡುತ್ತಿದ್ದೇವೆಂಬ ಭಾವನೆ ಉಂಟಾಗದೆ ತಮ್ಮ ಸುತ್ತಲ ಪಾತ್ರಗಳೇ ತೆರೆ ಮೇಲೆ ಸರಿಯುತ್ತಿವೆ ಎಂಬ ಫೀಲು ಹುಟ್ಟಿಸಬೇಕೆಂಬುದು ಅರುಣ್ ಅವರ ಆಸೆಯಾಗಿತ್ತಂತೆ. ಆದ್ದರಿಂದಲೇ ಸಂಭಾಷಣೆಯಿಂದ ಹಿಡಿದು ಪ್ರತಿಯೊಂದೂ ಸಹಜವಾಗಿ ಮೂಡಿ ಬಂದಿದೆಯಂತೆ. ಅಂತೂ ಮಂಜುನಾಥನ ಗೆಳೆಯರ ಅಸಲೀ ಕಥೆ ವಾರದೊಪ್ಪತ್ತಿನಲ್ಲಿಯೇ ಬಿಚ್ಚಿಕೊಳ್ಳಲಿದೆ!
#
Comments