ಹುಲಿರಾಯ ಸಿನಿಮಾದ ನಂತರ ನಾಗೇಶ್ ಕೋಗಿಲು ನಿರ್ಮಾಣದಲ್ಲಿ ಎಸ್.ಎಲ್.ಎನ್ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಎರಡನೇ ಚಿತ್ರ ಟಕ್ಕರ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಳಿಯ ಮನೋಜ್ ಮೊದಲ ಚಿತ್ರ ಟಕ್ಕರ್. ನಾಗೇಶ್ ಕೋಗಿಲು ನಿರ್ಮಾಣ ಮಾಡಿರೋ ಈ ಚಿತ್ರವೀಗ ಬಿಡುಗಡೆಯ ಸಿದ್ದತೆಯಲ್ಲಿದೆ. ಇಂದು ಮನೋಜ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮನೋಜ್ ಒಂದಿಷ್ಟು ಮಾತಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ…
ಮನೋಜ್ ಪಾಲಿಗಿದು ಮಹತ್ವದ ಘಟ್ಟ. ಈ ಹಿಂದೆ ದರ್ಶನ್ ಅಭಿನಯದ ಅಂಬರೀಶ, ಚಕ್ರವರ್ತಿ ಮುಂತಾದ ಚಿತ್ರಗಳಲ್ಲಿ ನೆನಪಲ್ಲುಳಿಯುವಂತ ಪಾತ್ರಗಳಿಗೆ ಜೀವ ತುಂಬಿದ್ದವರು ಮನೋಜ್. ಈ ಮೂಲಕವೇ ಪ್ರೇಕ್ಷಕರ ಮನಸಲ್ಲಿಯೂ ರಿಜಿಸ್ಟರ್ ಆಗಿರೋ ಅವರು ಟಕ್ಕರ್ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಒಂದೊಳ್ಳೆ ಕಥೆ, ಉತ್ಸಾಹಿಗಳ ತಂಡ ಮತ್ತು ನಿರ್ಮಾಪಕ ನಾಗೇಶ್ ಕೋಗಿಲು ಅವರ ಸಹಕಾರದಿಂದಲೇ ಟಕ್ಕರ್ ಚಿತ್ರೀಕರಣದ ಹಂತದಲ್ಲಿಯೇ ದೊಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಈ ಮೂಲಕ ಹೀರೋಗಿರಿಗೆ ಬೇಕಾಗಿರೋ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರೋ ಮನೋಜ್ ನಾಯಕ ನಟನಾಗಿ ನೆಲೆಗಾಣೋ ಸೂಚನೆಗಳೂ ಕೂಡಾ ಸ್ಪಷ್ಟವಾಗಿಯೇ ಸಿಗುತ್ತಿದೆ.
ರಘು ಶಾಸ್ತ್ರಿ ನಿರ್ದೇಶನ ಮಾಡಿರೋ ಟಕ್ಕರ್ನಲ್ಲಿ ಕಲಾವಿದರದ್ದೊಂದು ದೊಡ್ಡ ದಂಡೇ ಇದೆ. ಪುಟ್ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿರುವ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಭಜರಂಗಿ ಲೋಕಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸುಮಿತ್ರಾ, ಸಾಧುಕೋಕಿಲಾ ಮುಂತಾದವರ ಬೃಹತ್ ತಾರಾಗಣವೂ ಈ ಚಿತ್ರಕ್ಕಿದೆ. ಮಾಸ್ ಕಥಾನಕ ಹೊಂದಿರೋ ಟಕ್ಕರ್ಗೆ ಸಾಹಸ ನಿರ್ದೇಶನ ಮಾಡಿರುವವರು ಡಿಫರೆಂಟ್ ಡ್ಯಾನಿ. ಇವರ ಕ್ಲಿಷ್ಟಕರವಾದ ಸಾಹಸ ಪಟ್ಟುಗಳನ್ನು ಮನೋಜ್ ಲೀಲಾಜಾಲವಾಗಿ ನಿರ್ವಹಿಸಿದ್ದಾರೆಂಬ ಮೆಚ್ಚುಗೆ ಈಗಾಗಲೇ ಚಿತ್ರತಂಡದ ಕಡೆಯಿಂದ ಕೇಳಿ ಬರುತ್ತಿದೆ. ಈಗಾಗಲೇ ರಿಲೀಸಾಗಿರುವ ಟೀಸರ್ ಟಕ್ಕರ್ ಸಿನಿಮಾ ಮತ್ತು ಮನೋಜ್ ಅವರ ಬಗ್ಗೆ ಭರವಸೆ ಮೂಡಿಸಿದೆ. ಟಕ್ಕರ್ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಬರೆದಿರೋ ರೊಮ್ಯಾಂಟಿಕ್ ಹಾಡೊಂದಕ್ಕೆ ಮಲೇಶಿಯಾದ ಅದ್ಭುತ ಲೊಕೇಷನ್ನುಗಳಲ್ಲಿ ಚಿತ್ರೀಕರಣ ನಡೆದಿದೆ. ಟಕ್ಕರ್ ಸಿನಿಮಾದ ಹೆಚ್ಚು ಭಾಗ ಅರಮನೆ ನಗರಿ ಮೈಸೂರಿನಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ.
ತೂಗುದೀಪ ಕುಟುಂಬದ ಹುಡುಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೀರ? ಏನನ್ನಿಸುತ್ತಿದೆ.
ನಾನು ನಾಯಕನಟನಾಗಿ ಪರಿಚಯಗೊಳ್ಳುತ್ತಿದ್ದೇನೆ ಹೊರತು ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಾಕಷ್ಟು ಸಮಯವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಂಬರೀಶ ಮತ್ತು ಚಕ್ರವರ್ತಿ ಚಿತ್ರಗಳಲ್ಲಿ ನಟಿಸಿದ್ದೇನೆ. ಅದಕ್ಕೂ ಮುಂಚೆ ಧಾರಾವಾಹಿ ಕ್ಷೇತ್ರದ ಪರಿಚಯವೂ ಆಗಿದೆ. ಆದರೆ ಸಹ ಕಲಾವಿದನಾಗಿ ಕೆಲಸ ಮಾಡಿದ್ದಕ್ಕೂ ಈಗ ನಾಯಕನಟ ಅನ್ನಿಸಿಕೊಂಡಿರೋದಕ್ಕೂ ಸಾಕಷ್ಟು ವ್ಯತ್ಯಾಸವಂತೂ ಇದೆ. ಅಲ್ಲಿಗಿಂತಾ ಇಲ್ಲಿ ಜವಾಬ್ದಾರಿ ಹೆಚ್ಚಾಗಿದೆ ಅಷ್ಟೇ!
ನಿಮ್ಮ ವೃತ್ತಿ ಬದುಕಿಗೆ ದರ್ಶನ್ ಅವರು ಯಾವ ರೀತಿ ಸ್ಫೂರ್ತಿಯಾಗಿದ್ದಾರೆ?
ನನ್ನ ಮಾವಂದಿರಾದ ದರ್ಶನ್ ಮತ್ತು ದಿನಕರ್ ತೂಗುದೀಪ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಪ್ರಜ್ವಲಿಸುತ್ತಿರುವ ಬೆಳಕುಗಳು. ಆ ಬೆಳಕಿನ ಕಿರಣವೇ ನನ್ನನ್ನು ಇವತ್ತು ಚಿತ್ರರಂಗದಲ್ಲಿ ಹೆಜ್ಜೆಯಿಡುವಂತೆ ಮಾಡಿದೆ. ದರ್ಶನ್ ಅವರು ಬರೀ ಸ್ಫೂರ್ತಿ ಮಾತ್ರ ಅಲ್ಲ, ನನ್ನ ಬದುಕಿನ ಭಾಗ ಕೂಡಾ ಹೌದು. ಸಿನಿಮಾ ಆಗಲಿ ಖಾಸಗಿ ಬದುಕಿನಲ್ಲಾಗಲಿ ಅವರ ಮಾರ್ಗದರ್ಶನವಿಲ್ಲದೆ ಯಾವುದೇ ಕೆಲಸಕ್ಕೂ ನಾನು ಕೈ ಹಾಕೋದಿಲ್ಲ. ಯಾವುದು ಸರಿ ಯಾವುದು ತಪ್ಪು ಅನ್ನೋದರ ಪಾಠ ಹೇಳಿ ನನ್ನನ್ನು ಮುನ್ನಡೆಸುತ್ತಿದ್ದಾರೆ. ಇಂಥಾ ಕುಟುಂಬ, ಮಾವಂದಿರು ದಕ್ಕಿರೋದು ನನ್ನ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ದರ್ಶನ್ ಸರ್ ತೂಗುದೀಪ ಶ್ರೀನಿವಾಸ್ ಅವರ ಮಗ ಅನ್ನೋದು ಬಿಟ್ಟರೆ ಚಿತ್ರರಂಗದಲ್ಲಿ ಅವರಿಗೆ ಯಾರೂ ಗಾಡ್ ಫಾದರ್ ಇರಲಿಲ್ಲ. ಆದರೆ ನನ್ನ ಬದುಕಿಗೆ ದರ್ಶನ್ ಅವರೇ ಗಾಡ್ ಮತ್ತು ಗಾಡ್ ಫಾದರ್ ಎಲ್ಲವೂ ಆಗಿದ್ದಾರೆ. ಜೊತೆಗೆ ಮೀನಮ್ಮ ಅವರ ಆಶೀರ್ವಾದ ಕೂಡಾ ನನ್ನ ಮೇಲಿರುವುದು ನನ್ನ ಪಾಲಿನ ಹೆಮ್ಮೆಯ ಸಂಗತಿ.
ಟಕ್ಕರ್ ಈಗ ಬಿಡುಗಡೆಗೆ ಸಿದ್ಧವಾಗಿದೆ. ನಂತರದ ಪ್ಲಾನುಗಳೇನು?
ಮೊದಲಿಗೆ, ನನ್ನನ್ನು ನಂಬಿ ಸಿನಿಮಾ ಮಾಡುತ್ತಿರುವ ನಿರ್ಮಾಪಕ ನಾಗೇಶ್ ಕೋಗಿಲು ಅವರಿಗೆ ನಿಜಕ್ಕೂ ನಾನು ಕೃತಜ್ಞತೆ ಅರ್ಪಿಸಬೇಕು. ಯಾಕೆಂದರೆ, ನನ್ನ ಮೊದಲ ಸಿನಿಮಾ ರಿಲೀಸಾಗುವ ಮುಂಚೆಯೇ, ಟೀಸರು ನೋಡಿಯೇ ಸಾಕಷ್ಟು ಜನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಒಂದಷ್ಟು ಕತೆಗಳು ಇಷ್ಟವೂ ಆಗಿದೆ. ಅದೆಲ್ಲವೂ ಟಕ್ಕರ್ ರಿಲೀಸ್ ನಂತರ ತಿಳಿಸುತ್ತೇನೆ.