ನೋ ಡೌಟ್!
ಮನೋರಂಜನ್ ಮಾಗಿದ್ದಾರೆ. ಒಂದು ಸಿನಿಮಾದ‌ ಗೆಲುವು ಜೊತೆಗೆ ಮತ್ತೊಂದರ ಸೋಲು ಇವರಿಗೆ ಸಾಕಷ್ಟು ಪಾಠ ಕಲಿಸಿದೆ. ಸ್ಟಾರ್ ನಟನ ಮಗ ಅನ್ನೋದು ಎಷ್ಟರ ಮಟ್ಟಿಗೆ ಪ್ರಯೋಜನಕ್ಕೆ ಬರುತ್ತದೆ ಅನ್ನೋದರ ಸ್ಪಷ್ಟ ಅರಿವಾಗಿದೆ. ತಂದೆ ರವಿಚಂದ್ರನ್ ‘ಮೊದಲು ಹೋಗಿ ಜಗತ್ತು ಹೇಗಿದೆ ಅಂತಾ ತಿಳಿದುಕೊಂಡು ಬಾ’ ಅಂತಾ ಹೇಳಿ ಕಳಿಸಿದ ಮಾತು ಅಡಿಗಡಿಗೂ ಇವರಿಗೆ ನೆನಪಿಸುವಂತಾಗಿದೆ. ತನ್ನ ವೃತ್ತಿ ಮತ್ತು ಖಾಸಗೀ ಬದುಕಿನ ಬಗ್ಗೆ ಮನೋರಂಜನ್ ಮಾತಾಡಿದ್ದಾರೆ. ಆ ವಿವರದ ಮೊದಲ ಕಂತು ಇಲ್ಲಿದೆ…

ಈಗಾಗಲೇ ನಿಮ್ಮ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಅದರ ಬಗ್ಗೆ ಏನನ್ನಿಸುತ್ತದೆ?

– ಮೊದಲ ಸಿನಿಮಾ ‘ಸಾಹೇಬ’ಗೆ ನಾನು ಅಂದುಕೊಂಡಿದ್ದಕ್ಕಿಂತಾ ಒಳ್ಳೇ ಓಪನಿಂಗ್ ಸಿಕ್ತು. ಎರಡನೇ ಸಿನಿಮಾ ಬೃಹಸ್ಪತಿ ಅಂದುಕೊಂಡ ಹಾಗೆ ಆಗಲಿಲ್ಲ. ಆ ಸಿನಿಮಾ ಮಾಡುವ ಮುಂಚೆಯೇ ಅನುಮಾನ ಇತ್ತು. ಜನ ಇದನ್ನು ಸ್ವೀಕರಿಸುತ್ತಾರಾ ಅಂತ. ಯಾಕೆಂದರೆ ಅದಾಗಲೇ ಅದು ತಮಿಳಿನಲ್ಲಿ ಬಂದಿದ್ದ ಚಿತ್ರ. ಅದು ಧನುಷ್ ಅವರ ಇಪ್ಪತ್ತೈದನೇ ಸಿನಿಮಾ. ನನಗೆ ಎರಡನೇದು. ಆಲ್ ಮೋಸ್ಟ್ ಜನ ಧನುಷ್ ಅವರ ಸಿನಿಮಾವನ್ನು ನೋಡಿದ್ದರು. ಮತ್ತೆ ಅದೇ ಚಿತ್ರದಲ್ಲಿ ನೋಡಲು ಬಹುಶಃ ಅವರಿಗೆ ಸಾಧ್ಯವಾಗಲಿಲ್ಲ. ಅವರ ಕಣ್ಮುಂದೆ ಧನುಷ್ ಅವರೇ ಬರೋವಾಗ ನನ್ನನ್ನು ಸ್ವೀಕರಿಸೋಕೆ ಛಾನ್ಸೇ ಇರಲಿಲ್ಲ. ಇವತ್ತು ಸೋಷಿಯಲ್ ಮೀಡಿಯಾ ಎಷ್ಟು ಸ್ರ್ಟಾಂಗು ಅಂದರೆ ‘ಇದು ವಿಐಪಿ ವಿಐಪಿ ಅಂತ ಹಾಕ್ಕೊಂಡು ಉಗಿದರು! ಬಹುಶಃ ಅದು ನನ್ನ ಪಾಲಿಗೆ ದೊಡ್ಡ ಏಟಾಯಿತು!!

ಮತ್ತೆ ಯಾವ ಕಾರಣಕ್ಕೆ ಬೃಹಸ್ಪತಿ ಮಾಡಲು ಒಪ್ಪಿದ್ದು?

– ಅಪ್ಪ ಹೇಳಿದರು ಅನ್ನೋ ಒಂದೇ ಕಾರಣಕ್ಕೆ ನಾನು ಒಪ್ಪಿದ್ದೆ. ಒಳ್ಳೇ ಪ್ರೊಡ್ಯೂಸರು. ರಾಕ್ ಲೈನ್ ಬ್ಯಾನರ್ ಅಂದರೆ ನಮ್ಮ ಮನೆಯ ಸಂಸ್ಥೆ ಥರಾ. ಸಿನಿಮಾ ಚನ್ನಾಗಿ ಮಾಡ್ತಾರೆ ಒಪ್ಕೋ. ನನಗೇನೋ ಈ ಸಬ್ಜೆಕ್ಟು ನಿನಗೆ ಸೂಟ್ ಆಗತ್ತೆ ಅನಿಸ್ತಿದೆ ಅಂದಿದ್ದರು. ಅವರು ಸೀನಿಯರ್ ನಟ. ಅವರು ಹೇಳಿದ ಮೇಲೆ ಮುಗೀತು. ಅವರ ಮಾತಿಗೆ ಬೆಲೆ ಕೊಡಲೇಬೆಕಲ್ವಾ? ಆದರೆ ಅನ್ ಫಾರ್ಚುನೇಟ್ಲಿ ಅದು ವರ್ಕೌಟ್ ಆಗಲಿಲ್ಲ. ಆ ಚಿತ್ರ ಗೆಲ್ಲಲಿಲ್ಲವಲ್ಲಾ ಅನ್ನೋ ನೋವು ನನಗೆ ಈಗಲೂ ಇದೆ… ಈ ಕಾರಣಕ್ಕೇ ಸ್ವಲ್ಪ ಸಮಯ ಬ್ರೇಕ್ ಕೊಟ್ಟೆ. ಮತ್ತೆ ಸಿನಿಮಾ ಅಂತ ಮಾಡಿದರೆ ಕಡೇ ಪಕ್ಷ ಫಿಫ್ಟಿ ಡೇಸ್ ಆದರೂ ಹೋಗಬೇಕು ಅಂದುಕೊಂಡಿದ್ದೆ. ಆಗ ಚಿಲ್ಲಂ ಕತೆಗೆ ಅಟ್ರಾಕ್ಟ್ ಆದೆ. ಆದರೆ ಪ್ರೊಡ್ಯೂಸರ್ ಕಾರಣಕ್ಕೆ ಅದು ಕಂಪ್ಲೀಟ್ ಆಗಲಿಲ್ಲ. ಅದೇ ಹೊತ್ತಿಗೆ ಪ್ರಾರಂಭ ಸಬ್ಜೆಕ್ಟ್ ಬಂತು. ನಾನು ಕತೆ ಕೇಳಿದೆ. ನನಗಿಂತಾ ಮೊದಲು ನನ್ನ ತಮ್ಮ ಕತೆ ಕೇಳಿ ಓಕೆ ಮಾಡಿದ. ಅದು ಬೇರೆಯದ್ದೇ ರೀತಿಯ ಆಬ್ಜೆಕ್ಟ್. ಲವ್ ಫೇಲ್ಯೂರ್ ಆದಮೇಲೆ ಕುಡಿತ, ಡ್ರಗ್ಸು ಅಂತಾ ಅಡಿಕ್ಟ್ ಆಗ್ತಾರೆ. ಅವರನ್ನು ರೀಹ್ಯಾಬ್ ಗೆ ಸೇರಿಸ್ತಾರೆ. ಅಲ್ಲಿನ ಜಗತ್ತು ಹೇಗಿರತ್ತೆ ಎನ್ನುವ, ಈ ವರೆಗೆ ಯಾರೂ ಮುಟ್ಟಿರದ ಚಿತ್ರಣ ಅದರಲ್ಲಿದೆ. ಈ ನಡುವೆ ಎರಡು ವರ್ಷಕ್ಕೆ ಮುಂಚೆಯೇ ಕೇಳಿದ್ದ ಕತೆ ಮುಗಿಲ್ ಪೇಟೆಯದ್ದು. ವಾರಕ್ಕೆ ಎರಡು ಕಥೆಯನ್ನಾದರೂ ಕೇಳ್ತೀನಿ. ಅದರಲ್ಲಿ ಬಹುತೇಕರು ತರೋದು ಲವ್ ಸಬ್ಜೆಕ್ಟನ್ನ. ಆದರೆ ಮುಗಿಲ್ ಪೇಟೆಯಲ್ಲಿ ಡೈರೆಕ್ಟರ್ ಭರತ್ ನನ್ನನ್ನು ಬೇರೆಯದ್ದೇ ಥರದಲ್ಲಿ ಇಮ್ಯಾಜಿನ್ ಮಾಡಿದ್ದರು. ನಿಮ್ಮೊಳಗೂ ಒಂದು ಮಾಸ್ ಇದೆ. ಅದನ್ನು ನಾನು ಅಚೆ ತರ್ತೀನಿ ಅಂತಾ ಪ್ಲಾನ್ ಮಾಡಿ ಮಡುತ್ತಿದ್ದಾರೆ. ಇದು ಎಲ್ಲ ರೀತಿಯ ಅಂಶಗಳಿರುವ, ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ.

ನೀವು ನಟಿಸುವ ಸಿನಿಮಾಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ?

– ನಾನು ಕತೆ ಕೇಳುವ ಮುಂಚೆ ನನ್ನ ತಮ್ಮ ಕೇಳುತ್ತಾನೆ. ನಂತರ ಇಬ್ಬರೂ ಸೇರಿ ಡಿಸ್ಕಸ್ ಮಾಡಿ ಫೈನಲ್ ಮಾಡ್ತೀವಿ. ಅವನ ಸಿನಿಮಾ ಕೂಡಾ ಶೂಟ್ ಆಗ್ತಿದೆ. ಅದರ ಮಧ್ಯೆ ಕೂಡಾ ನನ್ನ ಸಿನಿಮಾ ಕೆಲಸಗಳಿಗೆ ಓಡೋಡಿ ಬರ್ತಾನೆ. ನಿಂತು ನೋಡಿಕೊಳ್ತಾನೆ. ಮೊನ್ನೆ ದಿನ ಸಂಜೆ ಆರರಿಂದ ಮಾರನೇ ದಿನ ಬೆಳಗಿನ ತನಕ ನೈಸ್ ರೋಡಲ್ಲಿ ಅವನ ಚಿತ್ರದ ರೈನ್ ಎಫೆಕ್ಟ್ ಶೂಟ್ ಮುಗಿಸಿ ಎಂಟು ಗಂಟೆ ಹೊತ್ತಿಗೆ ಸಕಲೇಶಪುರದ ನಮ್ಮ ಸೆಟ್’ಗೆ ಹಾಜರಾಗಿದ್ದ. ಅವನು ಸಿನಿಮಾ ವಿಚಾರದಲ್ಲಿ ನಮ್ಮಪ್ಪನ ಹಾಗೆ… ಅವನೊಳಗೊಬ್ಬ ಡೈರೆಕ್ಟರ್ ಇದ್ದಾನೆ. ಪ್ರತಿಯೊಂದು ಸರಿ ತಪ್ಪುಗಳು ಅವನಿಗೆ ಗೊತ್ತು. ಅದರೆ ನನಗೆ ಅದ್ಯಾವುದೂ ಅರ್ಥವಾಗಲ್ಲ. ನಟನೆ ಮಾಡ್ತೀನಿ. ಬೇಕಿದ್ರೆ ಪ್ರೊಡ್ಯೂಸ್ ಕೂಡಾ ಮಾಡ್ತೀನಿ. ಬಟ್.. ಕ್ರಿಯೇಟೀವ್ ವಿಚಾರಕ್ಕೆ ನಾನು ತಲೆ ಹಾಕೋದಿಲ್ಲ. ಅಷ್ಟು ಬುದ್ದಿವಂತನೂ ಅಲ್ಲ. ಸಿನಿಮಾ ನೋಡೋದು, ಪಾಪ್ ಕಾರ್ನ್ ತಿನ್ನೋದು, ಬ್ಯಾಡ್ಮಿಂಟನ್ ಆಡೋದು, ಫ್ರೆಂಡ್ಸ್ ಜೊತೆ ಓಡಾಡೋದು, ಸಿನಿಮಾದಲ್ಲಿ ನಟಿಸೋದು ಮಾತ್ರ ನನಗೆ ಗೊತ್ತಿರೋದು. ನಾನು ನನ್ನ ತಾತನ ಥರಾ ಖಂಡಿತಾ ಒಳ್ಳೆ ಪ್ರೊಡ್ಯೂಸರ್ ಆಗ್ತೀನಿ. ನನ್ನ ತಂದೆ ಥರಾ ಆಗೋಕೆ ನನ್ನಿಂದ ಸಾಧ್ಯವಿಲ್ಲ..!

ನಿಮ್ಮ ತಮ್ಮ ವಿಕ್ಕಿ ಕಥೆ, ಡೈರೆಕ್ಷನ್ ಏನಾದ್ರೂ ಮಾಡೋ ಸಾಧ್ಯತೆ ಇದ್ಯಾ?

– ಖಂಡಿತಾ ಮಾಡ್ತಾನೆ. ಎಷ್ಟೋ ಲೈನ್ಸ್ ಮಾಡಿಟ್ಟಿದಾನೆ. ಆದರೆ ಅವನು ಮಾಡೋ ಕತೆಗಳನ್ನೆಲ್ಲಾ ನನ್ನನ್ನೇ ಗಮನದಲ್ಲಿಟ್ಟುಕೊ‌ಂಡೇ ರೂಪಿಸಿದ್ದಾನೆ. ನಮ್ಮ ಅಪ್ಪನಂತೆ ಅವನೊಳಗೊಬ್ಬ ಅದ್ಭುತ ನಿರ್ದೇಶಕ ಇದ್ದಾನೆ. ಅಪ್ಪನ ನಗು, ಹಾವ ಭಾವಗಳು ನನಗೆ ಬಂದರೆ, ಅವರ ಕ್ರಿಯಾಶೀಲತೆಗಳೆಲ್ಲಾ ಅವನಲ್ಲಿ ಸೇರಿಕೊಂಡಿದೆ.

ನಿಮ್ಮ ಸಿನಿಮಾಗಳ ವಿಚಾರದಲ್ಲಿ ನಿಮ್ಮ ತಂದೆಯ ಪಾತ್ರವೇನು? ಅವರು ಎಷ್ಟರ ಮಟ್ಟಿಗೆ ಸಹಕರಿಸುತ್ತಾರೆ?

– ಒಂದು ವೇಳೆ ರಣಧೀರ ನನ್ನ ಮೊದಲ ಸಿನಿಮಾ ಆಗಿದ್ದಿದ್ದರೆ ಈ ಹೊತ್ತಿಗೆ ನಾನು ಕೂಡಾ ಒನ್ ಆಫ್ ದಿ ಸ್ಟಾರ್ ಆಗಿಬಿಡುತ್ತಿದ್ದೆ. ಆದರೆ ಅಪ್ಪ ಹೇಳಿದ್ದು ಒಂದೇ ಮಾತು ‘ಮೊದಲು ಹೋಗಿ ಚಿತ್ರರಂಗ ಹೇಗಿದೆ ಅಂತಾ ತಿಳ್ಕೋ… ಎಷ್ಟೆಲ್ಲಾ ಕಷ್ಟ ಇದೆ ಅಂತಾ ತಿಳ್ಕೋ. ಸಿನಿಮಾ ಅಂದರೆ ಏನು ಅಂತಾ ಮೊದಲು ಕಲಿತುಕೋ… ಒಂದು ವೇಳೆ ನೀನು ಸೋತರೆ ಎದ್ದು ನಿಲ್ಲಿಸೋಕೆ ನಾನು ಇದ್ದೇ ಇದ್ದೀನಿ’ ಅಂದಿದ್ದರು. ಈಗ ನನ್ನ ತಮ್ಮನಿಗೂ ಅವರು ಅದನ್ನೇ ಹೇಳಿರೋದು. ಅವನು ಕೂಡಾ ಅಪ್ಪನ ಗೈಡೆನ್ಸ್ ತೆಗೆದುಕೊಂಡೇ ಕೆಲಸ ಶುರು ಮಾಡಿರೋದು. ಅಪ್ಪ ಹೇಳಿದಂತೇ ನನಗೆ ಒಂದೊಂದೂ ಅನುಭವಕ್ಕೆ ಬರುತ್ತಿದೆ. ಜಯಣ್ಣ ಸರ್ ಹೇಗೆ? ರಾಕ್ ಲೈನ್ ಸರ್ ಏನು? ಉಳಿದ ನಿರ್ಮಾಪಕರು ಯಾವ ರೀತಿ ಇದ್ದಾರೆ? ಸಿನಿಮಾಗಳು ಹೇಗೆಲ್ಲಾ ತಯಾರಾಗ್ತವೆ ಅನ್ನೋದು ಹಂತ ಹಂತವಾಗಿ ತಿಳೀತಾ ಹೋಗ್ತಿದೆ..

ಈ ಎಲ್ಲ ಅನುಭವದಿಂದ ನೀವು ತಿಳಿದ ಸತ್ಯ ಯಾವುದು?
ಬರೀ ಹೆಸರಿನಿಂದ ಇಲ್ಲಿ ಏನೂ ವರ್ಕೌಟ್ ಆಗಲ್ಲ ಅನ್ನೋದು ಗೊತ್ತಾಗಿದೆ. ರವಿಚಂದ್ರನ್ ಮಗ ಅನ್ನೋ ಕಾರಣಕ್ಕೆ ಜನ ನನ್ನನ್ನು ಒಳ್ಳೇ ರೀತಿ ಟ್ರೀಟ್ ಮಾಡ್ತಾರೆ ನಿಜ. ಆದರೆ ಇಲ್ಲಿ ಸಕ್ಸಸ್ ಅನ್ನೋದಷ್ಟೇ ಮುಖ್ಯ. ರವಿಚಂದ್ರನ್ ಮಗ ಅನ್ನೋದು ನನ್ನ ಹೆಗಲಿಗಿರುವ ಬಲ ಅಷ್ಟೇ. ಉಳಿದಂತೆ ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಬೇಕು. ನಾನು ಕಷ್ಟಪಟ್ಟು ಗೆಲುವು ದಕ್ಕಿಸಿಕೊಂಡರಷ್ಟೇ ನಾನಿಲ್ಲಿ ಉಳಿಯಲು ಸಾಧ್ಯ. ರವಿಚಂದ್ರನ್ ಮಗ ಅನ್ನೋ ಕಾರಣಕ್ಕೆ ಮೊದಲ ಸಿನಿಮಾಗೆ ಬಂದು ಜನ ನನ್ನನ್ನು ಕೈ ಹಿಡಿದು ನಡೆಸಿದರು. ಅದೇ ರೀತಿ ಎರಡನೇ ಸಿನಿಮಾಗೂ ಜನ ಬರಬೇಕಿತ್ತು.. ಅದು ಸುಮಾರಾಗಿ ಹೋಯ್ತು. ಎರಡನೇ ಸಲಾನೂ ಯಾಕೆ ಜನ ಬರಲಿಲ್ಲ? ಯಾಕೆಂದರೆ, ಒಂದು ಸಲ ಮಾತ್ರ ನಮ್ಮಪ್ಪನ ಕಾರಣಕ್ಕೆ ಎಲ್ಲರೂ ಬಂದು ಪುಷ್ ಮಾಡಿದರು. ಒಮ್ಮೆ ಮಾತ್ರ ಅದು ಸಾಧ್ಯವಷ್ಟೇ. ಪ್ರತೀ ಬಾರಿ ನಾನದನ್ನು ಬಯಸೋದೇ ತಪ್ಪಾಗುತ್ತದೆ…

ತಂಗಿ ಮದುವೆಗೆ ನೀವು ಕೂಡಾ ಕಾಂಟ್ರಿಬ್ಯೂಟ್ ಮಾಡಿದ್ದೀರಿ ಅಂತಾ ನಿಮ್ಮ ತಂದೆ ರವಿಚಂದ್ರನ್ ಅವರೇ ಹೇಳಿಕೊಂಡಿದ್ದರಲ್ಲಾ?

– ಅಯ್ಯೋ ಅಂಥಾ ದೊಡ್ಡ ಮಟ್ಡದ್ದೆಲ್ಲಾ ಏನೂ ಇಲ್ಲ. ಕಾರು ಕೊಡಿಸಿದ್ದರಲ್ಲಿ ನನ್ನದೂ ಒಂದು ಸಣ್ಣ ಪಾಲಿದೆ ಅಷ್ಟೇ. ಅವಳು ಇಷ್ಟಪಟ್ಟ ಬ್ಯಾಂಗಲ್ ಒಂದು ಅವಳು ತೆಗೆದುಕೊಳ್ಳಲು ಆಗಿರಲಿಲ್ಲ. ಅಪ್ಪ ಬೇರೊಂದನ್ನು ಸೆಲೆಕ್ಟ್ ಮಾಡಿದ್ದರು. ಹೀಗಾಗಿ ಸರ್ಪೈಸ್ ಆಗಿ ನಾನದನ್ನು ತಂದುಕೊಟ್ಟಿದ್ದೆ. ಅಷ್ಟು ಬಿಟ್ಟು ಬೇರೇನೂ ಇಲ್ಲ…

ಈಗ ಒಂದರ ಹಿಂದೆ ಒಂದು ಸಿನಿಮಾ ಮಾಡ್ತಿದ್ದೀರ. ಸಂಪಾದನೆ ಕೂಡಾ ಶುರುವಾಗಿದೆ. ನಿಮ್ಮ ಹಣಕಾಸಿನ ವ್ಯವಹಾರಗಳನ್ನೆಲ್ಲಾ ಯಾರು ನಿಭಾಯಿಸ್ತಾರೆ?

– ಸದಾ ನನ್ನ ಜೊತೆಗೇ ಇರುವ ನನ್ನ ಸ್ನೇಹಿತ ಸಿಲ್ಜು ಅದನ್ನೆಲ್ಲಾ ಮೆಂಟೇನ್ ಮಾಡ್ತಾನೆ. ಏಳನೇ ಕ್ಲಾಸಿನಿಂದ ಇಬ್ಬರೂ ಒಟ್ಟಿಗೇ ಓದಿ ಬೆಳೆದವರು. ನನ್ನ ಪ್ರತಿಯೊಂದು ಜವಬ್ದಾರಿ ಕೂಡಾ ಅವನದ್ದೇ. ನಾನು ಚನ್ನಾಗಿ‌ ಕಾಣಿಸಿದರೂ ಹೇಳ್ತಾನೆ. ಸರಿ ಅನ್ನಿಸದಿದ್ರೆ ಡಬ್ಬಾ ಥರಾ ಕಾಣ್ತಿದ್ದೀಯಾ ಅಂತಾನೆ. ಈಗ ಮನೆಗೆ ಬಂದಿರುವ ಕಾರು ಕೊಡಿಸಿರೋದೂ ಅವನೇ…

CG ARUN

ಪ್ರತಿಯೊಬ್ಬ ಹುಡುಗರನ್ನೂ ಕಮಾಲು ಮಾಡುತ್ತಿದೆ ಖಾಕಿ ಸಾಂಗು!

Previous article

ಮೀನಾ ಬಾಯಲ್ಲಿ ಇಂಥಾ ಮಾತಾ?

Next article

You may also like

Comments

Leave a reply

Your email address will not be published. Required fields are marked *