ಕನ್ನಡದಲ್ಲಿ ಅಪಾರ ಅವಕಾಶಗಳನ್ನು ಗಳಿಸಿಕೊಳ್ಳುತ್ತಲೇ ಪರಭಾಷೆಗೂ ಜಿಗಿದ ಖುಷಿಯಲ್ಲಿರುವವಳು ಮಾನ್ವಿತಾ ಕಾಮತ್. ಇದೀಗ ಮಾನ್ವಿತಾ ಡಾ ರಾಜ್ಕುಮಾರ್ ಮೊಮ್ಮಗ ಧೀರೇನ್ ನಾಯಕನಾಗಿರೋ ದಾರಿ ತಪ್ಪಿದ ಮಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
ಧೀರೇನ್ ಎಂಟ್ರಿ ಕೊಡುತ್ತಿರೋ ದಾರಿ ತಪ್ಪಿದ ಮಗನ ಬಗ್ಗೆ ಈ ಹಿಂದಿನಿಂದಲೂ ವ್ಯಾಪಕವಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರ ಅಧಿಕೃತವಾಗಿ ಜಾಹೀರಾದರೂ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇಲ್ಲಿ ನಾಯಕಿಯದ್ದು ಲವ ಲವಿಕೆಯಿಂದಿರೋ ಮುದ್ದಾದ ಪಾತ್ರ. ಅದಕ್ಕೆ ಹುಡುಕಾಟ ನಡೆಸಿದ ನಿರ್ದೇಶಕರು ಕಡೆಗೂ ಮಾನ್ವಿತಾಳನ್ನು ಆಯ್ಕೆ ಮಾಡಿದ್ದಾರೆ.
ರಾಜ್ ಮೊಮ್ಮಗ ಧೀರೇನ್ ಈಗಾಗಲೇ ಈ ಚಿತ್ರದ ಪಾತ್ರಕ್ಕಾಗಿ ಪಟ್ಟು ಹಿಡಿದು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಟನೆಯಲ್ಲಿ ತರಬೇತಿ ಪಡೆದು ಡ್ಯಾನ್ಸ್, ಫೈಟ್ಗಳಲ್ಲಿಯೂ ಪಳಗಿಕೊಂಡಿದ್ದಾರೆ. ನಿರ್ದೇಶಾಕ ಅನಿಲ್ ಕುಮಾರ್ ಕೂಡಾ ಎಲ್ಲ ಸಿದ್ಧತೆಗಳನ್ನೂ ಮುಗಿಸಿಕೊಂಡು ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.
ನಟಿ ಮಾನ್ವಿತಾ ಕೆಂಡ ಸಂಪಿಗೆ ಮೂಲಕ ಎಂಟ್ರಿ ಕೊಟ್ಟು ಆ ನಂತರ ಟಗರು ಚಿತ್ರದ ಮೂಲಕ ಹೆಚ್ಚಿನ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಈ ಸಮಯದಲ್ಲಿಯೇ ಮರಾಠಿ ಚಿತ್ರಕ್ಕೆ ನಾಯಕಿಯಾಗೋ ಅವಕಾಶವೂ ಒಲಿದು ಬಂದಿದೆ. ಅದನ್ನೊಪ್ಪಿಕೊಂಡು ಮರಾಠಿಯಲ್ಲಿಯೂ ಸಕ್ರಿಯವಾಗಿರೋ ಮಾನ್ವಿತಾ ದಾರಿ ತಪ್ಪಿದ ಮಗನಿಗೂ ಸಾಥ್ ಕೊಡಲು ಮುಂದಾಗಿದ್ದಾಳೆ.
#