ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾ-ವ್ಯಾಪಾರದ ವಿಚಾರದಲ್ಲಿ ಪಕ್ಕಾ ವ್ಯವಹಾರಸ್ಥ. ʻರಾವಣʼ ಎನ್ನುವ ಸಿನಿಮಾದ ಪಾಲುದಾರನಾಗಿ ಚಿತ್ರರಂಗಕ್ಕೆ ಬಂದು ನಂತರ ಪೂರ್ಣ ಪ್ರಮಾಣದ ನಿರ್ಮಾಪಕರಾದವರು. ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಲವ್ ಇನ್ ಮಂಡ್ಯ, ರಾಜ ರಾಜೇಂದ್ರ, ಕೃಷ್ಣ ರುಕ್ಕು, ಸಿಂಗ ಮತ್ತು ಬ್ರಹ್ಮಚಾರಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಬಹುತೇಕ ಈ ಎಲ್ಲ ಚಿತ್ರಗಳೂ ಲಾಭ ಕಂಡಿವೆ. ಇದೇ ನಂಬಿಕೆಯಲ್ಲಿ ಉದಯ್ ಮೆಹ್ತಾ ಕೈ ಇಟ್ಟ ಬಿಗ್ ಬಜೆಟ್ ಸಿನಿಮಾ ಮಾರ್ಟಿನ್. ಈ ಸಿನಿಮಾ ಬಹುಶಃ ಉದಯ್ ಮೆಹ್ತಾ ಅವರಿಗೆ ಚಿತ್ರರಂಗದ ಮತ್ತೊಂದು ಆಯಾಮವನ್ನು ಪರಿಚಯಿಸಿದೆ.
ಸಿನಿಮಾವೊಂದನ್ನು ಆರಂಭಿಸಿದರೆ ಬಜೆಟ್ಟು ಎಷ್ಟೇ ಹೆಚ್ಚಾದರೂ ಧೃತಿಗೆಡದೆ ಮುಂದುವರೆಸುವ ಧೈರ್ಯವಂತ ಮೆಹ್ತಾ. ಹತ್ತಿಪ್ಪತ್ತು ಕೋಟಿ ಬಜೆಟ್ಟಲ್ಲಿ ಶುರುವಾದ ಮಾರ್ಟಿನ್ ಎನ್ನುವ ಸಿನಿಮಾದ ಖರ್ಚು ನೂರು ಕೋಟಿ ಧಾಟಿದರೂ ಗುಂಡಿಗೆಯನ್ನು ಗಟ್ಟಿ ಮಾಡಿಕೊಂಡು ಮುಗಿಸಿದ್ದಾರೆ. ಅದೆಲ್ಲೆಲ್ಲಿ ದುಡ್ಡು ಹೊಂಚಿದರೋ, ಏನೇನು ಪಾಡು ಪಟ್ಡರೋ ಖುದ್ದು ಮೆಹ್ತಾಗೆ ಬಿಟ್ಟರೆ ಮೇಲಿರುವ ಭಗವಂತನೇ ಬಲ್ಲ!
ಕಳೆದ ನಾಲ್ಕು ವರ್ಷಗಳಲ್ಲಿ ಮಾರ್ಟಿನ್ ತಂಡದಲ್ಲಿ ಹಲವು ರೀತಿಯ ಕಾಂಟ್ರವರ್ಸಿಗಳು ತಲೆಯೆತ್ತಿವೆ. ನಿರ್ದೇಶಕ ಅರ್ಜುನ್ ಸೆಟ್ಟಲ್ಲಿ ಕೆಲಸ ಮಾಡೋ ಹುಡುಗರಿಗೆ ಜಾತಿಸೂಚಕ ಪದ ಬಳಸಿ ಬೈಯುತ್ತಾರೆ, ತಲೆ ಮೇಲೆ ಹೊಡೀತಾರೆ ಅಂತಾ ಸುದ್ದಿ ಬಂತು. ಅದಾದ ನಂತರ ನಿರ್ಮಾಪಕ ನಿರ್ದೇಶಕರ ನಡುವೆ ಕಿತ್ತಾಟಗಳಾಗಿ ಅದು ಚೇಂಬರ್ ಮೆಟ್ಟಿಲೇರಿತು. ಆದರೆ ಯಾವ ಕಿತ್ತಾಟವೂ ಹೊರಬರದಂತೆ ಗೌಪ್ಯತೆ ಕಾಪಾಡಿಕೊಂಡುಬಂದರು ಉದಯ್ ಮೆಹ್ತಾ. ಶೂಟಿಂಗ್ ಟೈಮಲ್ಲಿ ಕಾರ್ಮಿಕರಿಗೆ ಪೇಮೆಂಟು ಲೇಟಾದರೂ ಯಾರೂ ಸೊಲ್ಲೆತ್ತಲಿಲ್ಲ. ಇದೆಲ್ಲದಕ್ಕೂ ಕಾರಣ ಉದಯ್ ಮೆಹ್ತಾ ಮತ್ತು ಧೃವ ಸರ್ಜಾ ಎನ್ನುವ ಇಬ್ಬರು ವ್ಯಕ್ತಿಗಳ ಮೇಲೆ ಸಿನಿಮಾ ವಲಯ ಇಟ್ಟಿರುವ ನಂಬಿಕೆ. ಅದರಲ್ಲೂ ಉದಯ್ ಪಡುತ್ತಿರುವ ಕಷ್ಟ ಎಲ್ಲರಿಗೂ ಗೊತ್ತಿತ್ತು. ಆದರೆ, ಮೆಹ್ತಾ ಯಾರನ್ನು ನಂಬಿ ಹಣ ಹೂಡಿದರೋ, ಅವರೇ ನಿರ್ಮಾಪಕರ ಸಂಕಷ್ಟಗನ್ನು ಅರ್ಥ ಮಾಡಿಕೊಳ್ಳದೇ ಅನಾಚಾರವೆಸಗಿದ್ದು, ನಂಬಿದವರಿಂದಲೇ ಗೂಟ ಮಡಗಿಸಿಕೊಂಡಿದ್ದು ದುರಂತ!
ಡಿಜಿಟಲ್ ಟೆರೇನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಿಜಿ & ವಿಎಫ್ಎಕ್ಸ್ ಸಂಸ್ಥೆ ಮಾರ್ಟಿನ್ ಸಿನಿಮಾದ ಸಿಜಿ ಕೆಲಸ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಸಿನಿಮಾ ಬಿಡುಗಡೆ ಪದೇ ಪದೇ ಮುಂದೆ ಹೋಗಲು ಇದೇ ಸಂಸ್ಥೆ ಬಹುಮುಖ್ಯ ಕಾರಣ. ಚಿತ್ರಕ್ಕೆ ಬೇಕಿರುವ ಸಂಪೂರ್ಣ ಸಿಜಿ ಮಾಡಿಕೊಡುತ್ತೇವೆ ಅಂತಾ ಒಪ್ಪಿಕೊಂಡಿದ್ದವರು ವರ್ಷ ಉರುಳಿದರೂ ಕೆಲಸ ಮುಗಿಸಿಕೊಡದೆ ಟಕಾಯಿಸುತ್ತಿದ್ದರು. ಮಾತೆತ್ತಿದರೆ ದುಡ್ಡು ಕೇಳುತ್ತಿದ್ದರು. ʻವರ್ಕ್ ನಡೀತಿದೆ ಕೊಡ್ತೀವಿʼ ಅಂತಾ ಹೇಳುತ್ತಲೇ ಬಂದಿದ್ದರು. ಕಡೆಗೊಂದು ದಿನ ಚೆಕ್ ಮಾಡಿದರೆ ಸಾಕಷ್ಟು ಕೆಲಸ ಮುಗಿಸದೇ ಪೆಂಡಿಂಗಲ್ಲಿ ಉಳಿಸಿದ್ದರು. ಇನ್ನು ಇವರನ್ನು ನಂಬಿಕೊಂಡರೆ ಸಿನಿಮಾ ಈ ಕಾಲಕ್ಕೆ ರೆಡಿಯಾಗೋದಿಲ್ಲ ಅಂತಾ ನಿರ್ಧರಿಸಿದ ಉದಯ್ ಮೆಹ್ತಾ ಬೇರೊಂದು ಸಂಸ್ಥೆಗೆ ವಹಿಸಿ ಕೆಲಸ ಮುಗಿಯುವಂತೆ ನೋಡಿಕೊಂಡರು. ಅಲ್ಲಿಗೆ ಟೆರೇನ್ ಸಂಸ್ಥೆ ಎರಡೂವರೆ ಕೋಟಿ ರುಪಾಯಿಗಳನ್ನು ವಾಪಾಸು ಕೊಡಬೇಕಿತ್ತು. ಅದನ್ನೂ ಮರುಪಾವತಿ ಮಾಡದೆ ಆಟವಾಡಿಸುತ್ತಿದ್ದರು. ನೋಡುವ ತನಕ ನೋಡಿದ ಮೆಹ್ತಾ ಸೀದಾ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರು. ಪೊಲೀಸರು ಸಂಸ್ಥೆಯ ಮುಖ್ಯಸ್ಥರಾದ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬುವವರ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆಯ ಆರೋಪದ ಮೇಲೆ ಎಫ್ ಐ ಆರ್ ಕೂಡಾ ದಾಖಲು ಮಾಡಿ ವಿಚಾರಣೆ ಆರಂಭಿಸಿದರು. ಆಗ ಸಿನಿಮಾ ತಂಡದ ಒಳಗೇ ಇದ್ದು ಬಿಲ ಕೊರೆದಿದ್ದ ಒಬ್ಬೊಬ್ಬರ ಬಂಡವಾಳವೂ ಬಯಲಾಗುತ್ತಾ ಬಂತು.
ಸತ್ಯ ರೆಡ್ಡಿ ಯಾರ್ಯಾರಿಗೆ ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೇವೆ ಅನ್ನೋದನ್ನು ಬಾಯಿ ಬಿಟ್ಟಿದ್ದ. ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರನ್ನೂ ವಿಚಾರಿಸಿದ್ದರು. ಆ ಪ್ರಕಾರ ಎಡಿಟರ್ ಕೆ.ಎಂ. ಪ್ರಕಾಶ್ ಅವರಿಗೆ ಒಂದೂವರೆ ಲಕ್ಷ ರುಪಾಯಿ ಬೆಲೆ ಬಾಳುವ ಐಫೋನ್ ಗಿಫ್ಟ್ ಕೊಟ್ಟಿರುವುದಾಗಿ ಸುನಿಲ್ ರೆಡ್ಡಿ ಹೇಳಿಕೆ ನೀಡಿದ್ದ. ಇದಲ್ಲದೇ ನಿರ್ದೇಶಕ ಎ.ಪಿ.ಅರ್ಜುನ್ ಕೂಡಾ ಐವತ್ತು ಲಕ್ಷ ರುಪಾಯಿಯ ಕಮಿಷನ್ ತೆಗೆದುಕೊಂಡಿದ್ದರು ಎಂದು ಸತ್ಯ ರೆಡ್ಡಿ ಮತ್ತು ಸುನಿಲ್ ರೆಡ್ಡಿ ಹೇಳಿಕೊಂಡಿದ್ದರು. ಒಟ್ಟಾರೆ ಎಪ್ಪತ್ಮೂರು ಲಕ್ಷ ರುಪಾಯಿಗಳಷ್ಟು ಕಮಿಷನ್ ನೀಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರಂತೆ. ಈಗ ವಂಚನೆ ಕೇಸಲ್ಲಿ ಸಿಕ್ಕಿಬಿದ್ದಿರುವ ಸತ್ಯ ರೆಡ್ಡಿ ಮತ್ತು ಸುನಿಲ್ ಅವರೇ ಕಾಟೇರ, ಕರಟಕ ದಮನಕ ಮುಂತಾದ ಸಿನಿಮಾಗಳಿಗೂ ಅರ್ಧಂಬರ್ಧ ಕೆಲಸ ಮಾಡಿಕೊಟ್ಟು ಎಸ್ಕೇಪ್ ಆಗಿದ್ದರು.
ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯ ದಕ್ಷ ಸಬ್ ಇನ್ಸ್ ಪೆಕ್ಟರ್ ಜೆ. ಆದರ್ಶಗೌಡ ಈ ಕಮಿಷನ್ ಕರ್ಮ ಕಾಂಡದ ಬೆನ್ನುಹತ್ತಿ ವಿಚಾರಣೆ ನಡೆಸಿದ್ದಾರೆ. ಡೈರೆಕ್ಟರ್ ಎ.ಪಿ. ಅರ್ಜುನ್ ಅವರನ್ನು ಸ್ಟೇಷನ್ನಿಗೆ ಕರೆಸಿಕೊಂಡಿದ್ದಾರೆ. ಮೂರು ದಿನಗಳ ಕಾಲ ಕೂರಿಸಿಕೊಂಡು ಏನೇ ವಿಚಾರಣೆ ಮಾಡಿದರೂ ಅರ್ಜುನ್ ಮಾತ್ರ ಯಾವುದೇ ವಿಚಾರವನ್ನು ಒಪ್ಪದೇ ತನಿಖೆಗೆ ಅಸಹಕಾರ ತೋರಿದ್ದಾರೆ ಅನ್ನೋದು ಸದ್ಯದ ಮಾಹಿತಿ. ತೀವ್ರವಾದ ತನಿಖೆಗೆ ಒಳಪಡಿಸಿದರೆ ಎಂಥಾ ಪಟಿಂಗನಾದರೂ ಪೊಲೀಸರ ಮುಂದೆ ತಪ್ಪೊಪ್ಪಲೇಬೇಕು.
ಆರೋಪ ಮೊದಲೇ ಇತ್ತು
ಎ.ಪಿ. ಅರ್ಜುನ್ ಮೇಲೆ ಈ ಹಿಂದೆ ಐರಾವರ ಮತ್ತು ಕಿಸ್ ಸಿನಿಮಾ ವಿಚಾರಗಳಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು. ಐರಾವತ ಸಿನಿಮಾದ ವಿಎಫ್ ಎಕ್ಸ್ ಮತ್ತು ಸಿಜಿಗಾಗಿ ಒಂದು ಕೋಟಿಯಷ್ಟು ಕೊಟೇಷನ್ ಕೊಡಿಸಿದ್ದರು. ಇದನ್ನು ನೋಡಿ ನಿರ್ಮಾಪಕರು ಗಾಬರಿ ಬಿದ್ದಿದ್ದರು. ಖುದ್ದು ದರ್ಶನ್ ಅವರೇ ಕಂಪೆನಿಗೆ ಕಾಲ್ ಮಾಡಿ ವಿಚಾರಿಸಿದಾಗ ಆ ಕೆಲಸಕ್ಕೆ ತಗುಲುವುದು ಐವತ್ತೆಂಟು ಲಕ್ಷ ರುಪಾಯಿಗಳಷ್ಟೇ ಅನ್ನೋ ವಿಚಾರ ಬೆಳಕಿಗೆ ಬಂದಿತ್ತು. ಅರ್ಜುನ್ ಅವರನ್ನು ರೂಮಿಗೆ ಹಾಕಿಕೊಂಡು ದರ್ಶನ್ ಬಡಿದದ್ದಕ್ಕೆ ಇದೂ ಒಂದು ಕಾರಣವಾಗಿತ್ತು. ಕಿಸ್ ಸಿನಿಮಾ ನಿರ್ಮಾಪಕ ಶಂಶುದ್ದೀನ್ ಮತ್ತು ರಾಷ್ಟ್ರಕೂಟ ರವಿಕುಮಾರ್ ಇಬ್ಬರೂ ರಾಷ್ಟ್ರಕೂಟ ಲೇಔಟಿನಲ್ಲಿ ಮನೆಯಿಂದ ಹಿಡಿದು ಮಂಚ, ಬೆಡ್ಶೀಟು, ದಿಂಬಿನ ತನಕ ಎಲ್ಲವನ್ನೂ ನೀಡಿದ್ದರು. ಸಿನಿಮಾಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದರು. ಆದರೆ ಅರ್ಜುನ್ ಬಗ್ಗೆ ಅದೇನು ಅಸಮಧಾನಗಳಾದವೋ ಗೊತ್ತಿಲ್ಲ. ಸಿನಿಮಾಗೆ ಖರ್ಚಾಗಿದ್ದ ಅಷ್ಟೂ ದುಡ್ಡನ್ನು ವಾಪಾಸು ಪಡೆದು, ಅವರ ಹೆಸರಿಗೇ ಚಿತ್ರವನ್ನು ಬರೆದುಕೊಟ್ಟಿದ್ದರು. ಈಗ ಅರ್ಜುನ್ ಹಣೆಗೆ ಮಾರ್ಟಿನ್ ಸಿನಿಮಾದ ಅವ್ಯವಹಾರದ ಹೊಲಸು ಕೂಡಾ ಮೆತ್ತಿಕೊಂಡಿದೆ. ಇದಲ್ಲದೇ ಮಾರ್ಟಿನ್ ಛಾಯಾಗ್ರಾಹಕ ಸತ್ಯ ಹೆಗ್ಡೆ ಮೇಲೂ ಸಿಕ್ಕಾಪಟ್ಟೆ ಆರೋಪಗಳು ಕೇಳಿಬರುತ್ತಿವೆ.
ಅದ್ಯಾವ ಘಳಿಗೆಯಲ್ಲಿ ಮಾರ್ಟಿನ್ ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದರೋ, ಉದಯ್ ಮೆಹ್ತಾಗೆ ನೆಮ್ಮದಿ ಅನ್ನೋದೇ ಮರೆತು ಹೋಗಿದೆ. ಮೀಡಿಯಮ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ, ಬೇರೆ ಸಿನಿಮಾಗಳ ಡಬ್ಬಿಂಗ್ ವ್ಯಾಪಾರಗಳನ್ನು ಮಾಡಿಕೊಂಡು ಆರಾಮಾಗಿದ್ದ ಮೆಹ್ತಾ ತಲೆಮೇಲೆ ಕೋಟಿಗಟ್ಟಲೆ ಸಾಲದ ಭಾರ ಏರಿಕೊಂಡಿದೆ. ಕೆ.ವಿ.ಎನ್. ಸಂಸ್ಥೆಯಿಂದ ಪಡೆದಿರುವ ಸಾಲ, ಬಡ್ಡಿಗಳೆಲ್ಲಾ ಸೇರಿದರೆ ನೂರು ಕೋಟಿಗೂ ಅಧಿಕ ಮೊತ್ತವನ್ನು ಮಾರ್ಟಿನ್ ನುಂಗಿಕೊಂಡಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಗೆದ್ದರೆ ಮಾತ್ರ ಈ ಎಲ್ಲಾ ಸಿಕ್ಕುಗಳಿಂದ ಉದಯ್ ಮೆಹ್ತಾ ಹೊರಬರಲು ಸಾಧ್ಯ. ಈ ಕಾರಣಕ್ಕೇ ಎಲ್ಲ ಸಂಕಟಗಳನ್ನೂ ಹೊಟ್ಟೆಗಾಕಿಕೊಂಡು ತೆಪ್ಪಗಿದ್ದಾರೆ. ಇದೇ ತಿಂಗಳ ೨೯ಕ್ಕೆ ಬಾಂಬೆಯಲ್ಲಿ ಇಂಟರ್ನ್ಯಾಷನಲ್ ಲೆವೆಲ್ಲಿನ ಪತ್ರಿಕಾಗೋಷ್ಟಿ ನಡೆಸಲು ನಿಗಧಿ ಮಾಡಲಾಗಿತ್ತು. ಆಯ್ದ ಪತ್ರಕರ್ತರಿಗೆ ಏರ್ ಟಿಕೇಟ್ ಕೂಡಾ ಬುಕ್ ಆಗಿತ್ತು. ಈಗ ಅದು ಕೂಡಾ ಕ್ಯಾನ್ಸಲ್ ಆಗಿದೆ. ಅಕ್ಟೋಬರ್ ತಿಂಗಳಲ್ಲಿ ಮಾರ್ಟಿನ್ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಈಗ ನೋಡಿದರೆ ಚಿತ್ರತಂಡದ ಒಳಗೇ ನಡೆದ ಅವ್ಯವಹಾರ, ಪೊಲೀಸು, ವಿಚಾರಣೆಗಳೆಲ್ಲಾ ನಡೆಯುತ್ತಿವೆ. ಸಿಜಿ ಸಂಸ್ಥೆಯ ಮುಖ್ಯಸ್ಥ ಸತ್ಯ ರೆಡ್ಡಿಯನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ದಾರೆ. ಎಪಿ ಅರ್ಜುನ್ ತಮ್ಮ ಮೇಲಿನ ಆರೋಪದಿಂದ ವಿಚಲಿತರಾಗಿದಾರೆ. ಈ ಕಾರಣಕ್ಕೇ ಸಿನಿಮಾದ ಮಿಕ್ಕ ಕೆಲಸಗಳ ಕಡೆ ಗಮನ ಕೊಡುತ್ತಿಲ್ಲವಂತೆ. ಮಾರ್ಟಿನ್ ಸಿನಿಮಾದ ನಿರ್ದೇಶನಕ್ಕಾಗಿ ಅರ್ಜುನ್ ಅವರಿಗೆ ಒಂದು ಕೋಟಿ ಎಂಭತ್ತು ಲಕ್ಷ ರುಪಾಯಿ ಸಂಭಾವನೆ ಸಂದಾಯ ಮಾಡಲಾಗಿದೆಯಂತೆ. ಸಿನಿಮಾದ ಗಳಿಕೆಯಿಂದ ಬಂದ ಹಣದಲ್ಲೂ ಹದಿನೆಂಟು ಪರ್ಸೆಂಟ್ ಬರೆದುಕೊಟ್ಟಿದ್ದರಂತೆ. ಇಷ್ಟಾಗಿಯೂ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದವರು ಅರ್ಜುನ್. ಈಗ ನಡೆಯುತ್ತಿರುವ ವಿದ್ಯಾಮಾನಗಳನ್ನೆಲ್ಲಾ ನೋಡಿದರೆ ಹಳೇ ಒಡಂಬಡಿಕೆಗಳೆಲ್ಲಾ ಮುರಿದುಬೀಳುವ ಸಾಧ್ಯತೆ ಇದೆ!
ಬರೀ ಸಿಜಿ ವಿಎಫ್ ಎಕ್ಸ್ ಒಂದರಲ್ಲೇ ಎಪ್ಪತ್ತಮೂರು ಲಕ್ಷ ಅವ್ಯವಹಾರ ನಡೆದಿದೆ ಅಂದರೆ, ನೂರು ಕೋಟಿ ಬಜೆಟ್ಟಿನ ಮಾರ್ಟಿನ್ ಹೆಸರಲ್ಲಿ ಇನ್ನೂ ಎಲ್ಲೆಲ್ಲಿ, ಯಾರೆಲ್ಲಾ ಬಗೆದು ಮುಕ್ಕಿದ್ದಾರೋ ಲೆಕ್ಕ ಸಿಗೋದು ಕಷ್ಟ. ಹೀಗಿರುವಾಗ ಚೂರೇಚೂರು ಯಡವಟ್ಟಾದರೂ ಅಳತೆಗೂ ಮೀರಿ ಹಣದ ಹೊಳೆಯನ್ನೇ ಹರಿಸಿರುವ ಮೆಹ್ತಾ ಬದುಕು ಬೇರೆಯಾಗಿಬಿಡುತ್ತದೆ. ಆದರೂ ಛಲ ಬಿಡದೆ, ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಉದಯ್ ಮೆಹ್ತಾ ಅವರಿಗೆ ಒಳ್ಳೇದಾಗಲಿ ಅನ್ನೋದಷ್ಟೇ ಎಲ್ಲರ ಹಾರೈಕೆ….
ಬಜೆಟ್ ಯಾಕೆ ಹೆಚ್ಚಾಯ್ತು?
ಯಾವುದೇ ಸಿನಿಮಾ ಆಗಲಿ, ಸ್ಕ್ರೀನ್ ಪ್ಲೇ ಪೂರ್ತಿ ಲಾಕ್ ಆಗುವ ಮೊದಲು ಯಾವ ಕಾರಣಕ್ಕೂ ಚಿತ್ರೀಕರಣಕ್ಕೆ ತೆರಳಬಾರದು. ಒಂದು ಸಲ ಚಿತ್ರೀಕರಣ ಅಂತಾ ಶುರು ಮಾಡಿದ ಮೇಲೆ ಪದೇ ಪದೇ ಚಿತ್ರಕತೆಯನ್ನು ಬದಲಿಸಬಾರದು. ಆದರೆ, ಮಾರ್ಟಿನ್ ಚಿತ್ರೀಕರಣಗೊಳ್ಳುತ್ತಲೇ ಅನೇಕ ಬದಲಾವಣೆಗಳಾದವು. ಎಲ್ಲದಕ್ಕಿಂತಾ ಮುಖ್ಯವಾಗಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆಯನ್ನು ಮಾರ್ಟಿನ್ ಮಾಡಿದೆ. ಕ್ಲೈಮ್ಯಾಕ್ಸ್ ಫೈಟ್ ಅನ್ನು ಬರೋಬ್ಬರಿ ನಲವತ್ತೆಂಟು ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು. ರಾಮ್ ಲಕ್ಷ್ಮಣ್ ಥರದ ಕಾಸ್ಟ್ಲಿ ಮಾಸ್ಟರುಗಳನ್ನಿಟ್ಟಕೊಂಡು ಒಂದು ಫೈಟನ್ನು ಯಾರಾದರೂ ನಲವತ್ತೆಂಟು ದಿನ ಶೂಟ್ ಮಾಡ್ತಾರಾ? ಅದೇ ಒಂದು ಸಿನಿಮಾಗಾಗುವಷ್ಟು ಬಜೆಟ್ಟನ್ನು ನುಂಗಿ ಹಾಕಿತ್ತು. ದಿನಗಳಿಗೆ ಲೆಕ್ಕವಿಡದಂತೆ ಚಿತ್ರೀಕರಣ ಮಾಡುತ್ತಲೇ ಹೋಗಿದ್ದು ಮಾರ್ಟಿನ್ ಬಜೆಟ್ಟು ಯದ್ವಾತದ್ವಾ ಹೆಚ್ಚಾಗಲು ಕಾರಣವಾಯಿತು. ಒಂದು ಕಡೆ ನಿರ್ಮಾಪಕ ಉದಯ್ ಮೆಹ್ತಾ ಹಣ ಹೊಂಚುವ ಕಡೆ ಹೆಚ್ಚು ಗಮನಕೊಟ್ಟಿದ್ದರು. ಸಿನಿಮಾದ ಕಾರ್ಯಕಾರಿ ನಿರ್ಮಾಪಕ ದರ್ಶನ್ ಒಬ್ಬರಿಂದ ಸೋರಿಕೆಯನ್ನು ತಡೆಯಲು ಸಾಧ್ಯವೇ ಆಗಲಿಲ್ಲ!
ಪ್ರೊಡ್ಯೂಸರ್ ಬೆನ್ನಿಗೆ ನಿಂತ ಆಕ್ಷನ್ ಪ್ರಿನ್ಸ್!
ಹಾಗೆ ನೋಡಿದರೆ ಮಾರ್ಟಿನ್ ಚಿತ್ರದ ನಾಯಕನಟ ಧೃವಾ ಸರ್ಜಾ ಅವರಿಗೆ ಮೆಹ್ತಾ ಕಡೆಯಿಂದ ಐವತ್ತು ಪರ್ಸೆಂಟ್ ಸಂಭಾವನೆಯಷ್ಟೇ ಸಂದಾಯವಾಗಿದೆ. ʼʼನನಗಾಗಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಎಷ್ಟೇ ಕಷ್ಟ ಬಂದರೂ ನಿಲ್ಲಿಸಲಿಲ್ಲʼʼ ಎನ್ನುವ ಒಂದೇ ಕಾರಣಕ್ಕಾಗಿ ಧೃವಾ ಸರ್ಜಾ ಈ ಕ್ಷಣಕ್ಕೂ ನಿರ್ಮಾಪಕರಿಗೆ ಹೆಗಲು ನೀಡಿದ್ದಾರೆ. ಹಾಗೆ ನೋಡಿದರೆ ಮಾರ್ಟಿನ್ ಸಿನಿಮಾದ ಡಬ್ಬಿಂಗ್ ಹೊತ್ತಿಗೇ ನಿರ್ದೇಶಕ ಮತ್ತು ನಿರ್ಮಾಪಕರ ಸಂಬಂಧ ಹಳಸಿಕೊಂಡಿತ್ತು. ಒಳಗೊಳಗೇ ಕಿತ್ತಾಟಗಳಾಗಿದ್ದವು. ಧೃವಾ ಸರ್ಜಾ ಅವರ ಪಾತ್ರದ ಡಬ್ಬಿಂಗ್ ಸಮಯದಲ್ಲೂ ನಿರ್ದೇಶಕರ ಹಾಜರಾತಿ ಇರಲಿಲ್ಲ. ಖುದ್ದು ತಾವೇ ನಿಂತು ತಮ್ಮ ಪಾತ್ರದ ಡಬ್ಬಿಂಗ್ ಕೆಲಸವನ್ನು ಮುಗಿಸಿಕೊಟ್ಟಿದ್ದರು.
ನಾನು ಪಡೆದಿದ್ದು ಕಮಿಷನ್ ಅಲ್ಲ ಅಂದರು ಎಡಿಟರ್ ಪ್ರಕಾಶ್!
ಅದೊಂದು ದಿನ ಸುನಿಲ್ ರೆಡ್ಡಿ ಕಾಲ್ ಮಾಡಿದ್ದರು. ನಾನು ದುಬೈನಲ್ಲಿ ಇದ್ದೀನಿ. ನಿಮಗೆ ಎಡಿಟಿಂಗ್ ಸಿಸ್ಟಂ ಏನಾದ್ರೂ ಬೇಕಿದ್ರೆ ಹೇಳಿ. ಇಲ್ಲಿ ಕಡಿಮೆ ಬೆಲೆಗೆ ಸಿಗತ್ತೆ. ತಂದುಕೊಡ್ತೀನಿ ಅಂದರು. ʻಬೇಡ ಸರ್. ನನ್ನ ಬಳಿಯೇ ಎಲ್ಲವೂ ಇದೆ. ಬೇಕಿದ್ದರೆ ನನಗೊಂದು ಐಫೋನ್ ತಂದುಕೊಡಿʼ ಎಂದೆ. ಹೇಳಿದಂತೆಯೇ ನನ್ನ ಆಫೀಸಿಗೆ ಐಫೋನ್ ತಲುಪಿಸಿದರು. ʻಇದರ ಅಮೌಂಟ್ ಕೊಡ್ತೀನಿ ನಿಮ್ಮ ಗೂಗಲ್ ಪೇ ಅಥವಾ ಫೋನ್ ಪೇ ನಂಬರ್ ಕೊಡಿʼ ಅಂದೆ. ಅದಕ್ಕವರು ʻಅಷ್ಟು ಹಣ ಆನ್ ಲೈನ್ ನಲ್ಲಿ ಕೊಡೋದು ಬೇಡ. ಜಿ ಎಸ್ ಟಿ ಸಮಸ್ಯೆ ಆಗತ್ತೆ. ನಾನೇ ಬಂದು ಕ್ಯಾಷ್ ಈಸಿಕೊಳ್ತೀನಿʼ ಅಂದಿದ್ದರು. ನಂತರ ಅವರು ಬರಲೇ ಇಲ್ಲ. ಪೊಲೀಸ್ ಠಾಣೆಯಲ್ಲಿ ಇದನ್ನೇ ಹೇಳಿದೆ. ಅದಕ್ಕೆ ಪೊಲೀಸರು ಮೊಬೈಲ್ ಸರೆಂಡರ್ ಮಾಡಿ ಅಥವಾ ಆ ಮೊತ್ತವನ್ನು ಪಾವತಿಸಿ ಅಂದರು. ನಾನು ಹಣ ಕೊಟ್ಟು, ಹಿಂಬರಹವನ್ನೂ ಪಡೆದುಕೊಂಡು ಬಂದೆ. ʻಮುನ್ನೂರು ಸಿನಿಮಾಗೆ ಎಡಿಟರ್ ಆಗಿ ದುಡಿದಿರುವ ನನಗೆ ಒಂದೂವರೆ ಲಕ್ಷದ ಐಫೋನ್ ಅನ್ನು ಕಮಿಷನ್ ರೂಪದಲ್ಲಿ ಪಡೆಯುವ ಅಗತ್ಯವಿಲ್ಲ…ʼ – ಇದು ಸಂಕಲನಕಾರ ಕೆ.ಎಂ. ಪ್ರಕಾಶ್ ಅವರು cinibuzzಗೆ ನೀಡಿರುವ ಹೇಳಿಕೆ.
No Comment! Be the first one.