ವರ್ಷದಿಂದೀಚೆಗೆ ರಾಜಕಾರಣ, ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದ ಕಮಲ್ ಈಗ ಮರುದನಾಯಗಂಗೆ ಜೀವ ಕೊಡುವ ಮನಸ್ಸು ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ಕಂಪೆನಿಗಳು ಕಮಲ್ ಕೈಹಿಡಿಯಲು ಮುಂದಾಗಿವೆ. ಎಲ್ಲಾ ಅಂದುಕೊಂಡಂತೇ ಆದರೆ ನಮ್ಮ ಸಾಹಸ ಸಿಂಹ ಮತ್ತೆ ತೆರೆಮೇಲೆ ಜೀವಂತವಾಗಿ ಎದ್ದುಬರೋದು ಗ್ಯಾರೆಂಟಿ!
ಸಾಹಸಸಿಂಹ ಡಾ. ವಿಷ್ಣುವರ್ಧನ್ ಕಣ್ಮರೆಯಾಗಿ ಹತ್ತು ವರ್ಷಗಳು ಘಟಿಸಿದರೂ ಅವರ ಅಧ್ಯಾಯವಿನ್ನೂ ಕೊನೆಯಾಗಿಲ್ಲ. ವಿಷ್ಣು ಎಂಬ ಹೆಸರಿಗೆ ಅಂತ್ಯವೂ ಇಲ್ಲ. ಇದಕ್ಕೆ ನಿದರ್ಶನವೆನ್ನುವಂತೆ ವಿಷ್ಣು ನಟಿಸಿದ್ದ ಸಿನಿಮಾವೊಂದು ತೆರೆಗೆ ಬರುವ ತಯಾರಿಯಲ್ಲಿದೆ. ೧೯೯೭ರಲ್ಲಿ ಶುರುವಾಗಿದ್ದ ಸಿನಿಮಾ ಮರುದನಾಯಗಂ. ಕಮಲಹಾಸನ್ ನಾಯಕನಾಗಿ ನಟಿಸಿ, ನಿರ್ದೇಶಿಸಿದ್ದ ‘ಮರುದನಾಯಗಂ’ ಸಿನಿಮಾದಲ್ಲಿ ಮುಸ್ಲಿಂ ದೊರೆಯ ಪಾತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ವಿಷ್ಣು ಅವರ ಭಾಗದ ಚಿತ್ರೀಕರಣ ಕೂಡಾ ಮುಗಿದಿತ್ತು. ವಿಷ್ಣು ಕುದುರೆಯ ಮೇಲೆ ಕೂತು ರಾಜಠೀವಿಯಿಂದ ಬರುವ ದೃಷ್ಯಗಳಿಗೆ ಆ ಕಾಲಕ್ಕೇ ಕೋಟಿಗಟ್ಟಲೆ ಖರ್ಚು ಮಾಡಲಾಗಿತ್ತು. ದುರದೃಷ್ಟಕ್ಕೆ ಆ ಸಿನಿಮಾ ಹಣಕಾಸಿನ ಕಾರಣಕ್ಕೆ ಅರ್ಧಕ್ಕೇ ನಿಂತುಹೋಯಿತು. ವಿಷ್ಣುಗೆ ಆ ಚಿತ್ರ ಕಂಪ್ಲೀಟ್ ಆಗಲಿಲ್ಲವಲ್ಲಾ ಅನ್ನೋ ಕೊರಗು ಕಡೇತನಕ ಇತ್ತು. ಕಮಲ್ ಸಿಕ್ಕಾಗೆಲ್ಲಾ ಆ ಚಿತ್ರದ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು.
ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿದ್ದ ಸ್ವಾತಂತ್ರ ಪೂರ್ವ ಕಥಾವಸ್ತು ಹೊಂದಿದ್ದ ಸಿನಿಮಾ ಮರುದನಾಯಗಂ. ಇಂಗ್ಲೆಡ್ನ ರಾಣಿ ಕ್ವೀನ್ ಎರಡನೇ ಎಲಿಜೆಬೆತ್ ಅವರೇ ಬಂದು ಈ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಿಹೋಗಿದ್ದರು. ಆ ಮೂಲಕ ಕಮಲ್ ಇಡೀ ವಿಶ್ವ ಚಿತ್ರರಂಗದ ಗಮನವನ್ನು ತನ್ನತ್ತ ಸೆಳೆದಿದ್ದರು. ಆದರೆ ಈ ಚಿತ್ರ ಸಂಪೂರ್ಣಗೊಳ್ಳಲು ಇನ್ನೂ ಇನ್ನೂರೈವತ್ತು ಕೋಟಿ ಬೇಕಂತೆ. ಅಲ್ಲಿಗೆ ಆ ಚಿತ್ರ ಮುಂದುವರೆಯಲು ಸಾಧ್ಯವೇ ಇಲ್ಲ ಎಂಬುದು ಉದ್ಯಮದವರ ಅನಿಸಿಕೆಯಾಗಿತ್ತು.
೨೦೧೦ರ ಸಂದರ್ಭದಲ್ಲಿ ಮತ್ತೆ ಈ ಸಿನಿಮಾಗೆ ಚಾಲನೆ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತಾದರೂ ಅದು ಹಾಗೇ ತಣ್ಣಗಾಗಿತ್ತು. ೧೯೯೭ರಲ್ಲಿ ಭಾರತೀಯ ಚಿತ್ರರಂಗ ಇವತ್ತಿನಷ್ಟು ಬೆಳೆದಿರಲಿಲ್ಲ. ಮಾರುಕಟ್ಟೆ ವೃದ್ಧಿಸಿರಲಿಲ್ಲ. ಪ್ಯಾನ್ ಇಂಡಿಯಾ ಅನ್ನೋ ಕಾನ್ಸೆಪ್ಟೇ ಇಲ್ಲದ ಹೊತ್ತಲ್ಲೇ ಕಮಲ್ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಈಗ ಸಿನಿಮಾರಂಗ ಬೆಳೆದಿದೆ. ಅದರಲ್ಲೂ ತಮಿಳು ಇಂಡಸ್ಟ್ರಿಯವರು ಇನ್ನೂ ಇಪ್ಪತ್ತು ವರ್ಷ ಮುಂದಿದ್ದಾರೆ. ಅವರಿಗೆ ನೂರಿನ್ನೂರು ಕೋಟಿಗಳ ಸಿನಿಮಾ ದೊಡ್ಡ ವಿಷಯವೇ ಅಲ್ಲ ಎನ್ನುವಂತಾಗಿದೆ. ಇಂಥಾ ಸಂದರ್ಭದಲ್ಲಿ ಮರುದನಾಯಗಂಗೆ ಮರು ಜೀವ ಸಿಗುವ ಎಲ್ಲ ಸಾಧ್ಯತೆಗಳೂ ಇವೆ.
ವರ್ಷದಿಂದೀಚೆಗೆ ರಾಜಕಾರಣ, ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದ ಕಮಲ್ ಈಗ ಮರುದನಾಯಗಂಗೆ ಜೀವ ಕೊಡುವ ಮನಸ್ಸು ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ಕಂಪೆನಿಗಳು ಕಮಲ್ ಕೈಹಿಡಿಯಲು ಮುಂದಾಗಿವೆ. ಎಲ್ಲಾ ಅಂದುಕೊಂಡಂತೇ ಆದರೆ ನಮ್ಮ ಸಾಹಸ ಸಿಂಹ ಮತ್ತೆ ತೆರೆಮೇಲೆ ಜೀವಂತವಾಗಿ ಎದ್ದುಬರೋದು ಗ್ಯಾರೆಂಟಿ!