ತಮಿಳಿನಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್. ಈ ಚಿತ್ರದಲ್ಲಿ ಇಬ್ಬರು ಸ್ಟಾರ್ಗಳು ಒಟ್ಟಿಗೇ ಪಾತ್ರ ನಿರ್ವಹಿಸಿದ್ದಾರೆ. ಇಳಯದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಜೊತೆಯಾಗಿರುವ ಸಿನಿಮಾ ಇದು. ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆದ, ಕಾರ್ತಿ ನಟನೆಯ Khaidi ಸಿನಿಮಾವನ್ನು ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಮಾಸ್ಟರ್ ಚಿತ್ರವನ್ನು ಡೈರೆಕ್ಟ್ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ತಮಿಳು ಪ್ರೇಕ್ಷಕರು ಕರೋನಾ ಕಾಟ ಕೊನೆಯಾಗಿ, ಚಿತ್ರ ತೆರೆಗೆ ಬರಲೆಂದು ಕಾದಿದ್ದಾರೆ. ಈ ಸಿನಿಮಾದಲ್ಲಿ ಬರುವ ಜೈಲಿನ ಎಪಿಸೋಡು ಪೂರ್ತಿ ಚಿತ್ರೀಕರಣವಾಗಿದ್ದು ಶಿವಮೊಗ್ಗ ಕಾರಾ ಗೃಹದಲ್ಲಿ ಅನ್ನೋದು ಕನ್ನಡಿಗರ ಪಾಲಿಗೆ ವಿಶೇಷ.
ವಿಜಯ್ ಸೇತುಪತಿ ಇನ್ನೂ ನಾಯಕನಟನಾಗಿ ತಮಿಳಿಗರಿಗೆ ಪರಿಚಯವಾಗಿರಲೇ ಇಲ್ಲ. ಆ ಸಂದರ್ಭದಲ್ಲೇ ಅವರನ್ನು ಕನ್ನಡಕ್ಕೆ ಕರೆತಂದು ವಿಲನ್ ಆಗಿಸಿದ್ದವರು ನಿರ್ದೇಶಕ ಶಿವಗಣಪತಿ. ಅಖಾಡ ಎನ್ನುವ ಸಿನಿಮಾದಲ್ಲಿ ವಿಜಯ್ ಸೇತುಪತಿ ಖಳನಟನಾಗಿ ನಟಿಸಿದ್ದರು. ದುರಾದೃಷ್ಟಕ್ಕೆ ಆ ಸಿನಿಮಾ ರಿಲೀಸೇ ಆಗಲಿಲ್ಲ. ಆದರಲ್ಲಿ ಸೇದುಪತಿ ದೊಡ್ಡ ಹೀರೋ ಆಗಿ ಅವತಾರವೆತ್ತಿದರು. ಈಗ ಮಾಸ್ಟರ್ ಸಿನಿಮಾದ ಮೂಲಕ ಈ ಇಬ್ಬರು ಜನಪ್ರಿಯ ನಟರು ಕನ್ನಡಕ್ಕೆ ಬರುವಂತಾಗಿದೆ. ತಮಿಳಿನಲ್ಲಿ ತಯಾರಾಗಿರುವ ಮಾಸ್ಟರ್ ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ.
ಕಳೆದ ಒಂದು ವರ್ಷದಿಂದೀಚೆಗೆ ಹಿಂದಿ, ತೆಲುಗು ಮತ್ತು ತಮಿಳಿನ ಸಾಕಷ್ಟು ಸಿನಿಮಾಗಳು ಡಬ್ ಆಗಿ ಬಿಡುಗಡೆಯಾಗಿವೆ. ಸುದೀಪ್ ಕಾರಣಕ್ಕೆ ಸೈರಾ ನರಸಿಂಹ ರೆಡ್ಡಿ ಚಿತ್ರವೊಂದು ಥೇಟರು ತುಂಬಿಸಿಕೊಂಡಿತ್ತು. ಸ್ವತಃ ಕಿಚ್ಚನ ಅಭಿಮಾನಿಗಳೂ ಮುಖ ಕಿವುಚುವಂತಿದ್ದ ದಬಾಂಗು ದಬ್ಬಾಕಿಕೊಂಡಿತು. ಮಿಕ್ಕಂತೆ ತಲಾ ಅಜಿತ್ ನಟನೆಯ ಚಿತ್ರಗಳೂ ಸೇರಿ ಡಬ್ಬಿಂಗ್ ಸಿನಿಮಾಗಳಿಲ್ಲಿ ಬದುಕುಳಿಯುತ್ತಲೇ ಇಲ್ಲ. ಈಗ ಮಾಸ್ಟರ್ ಕತೆ ಏನಾಗಲಿದೆ ಅನ್ನೋದೂ ಸ್ವಲ್ಪವೇ ದಿನಗಳಲ್ಲಿ ಗೊತ್ತಾಗಲಿದೆ!