ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇತ್ತೀಚಿನ ದಿನಗಳಲ್ಲಿ ಗಾಯಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅವರು ಹಾಡಿದ ಹಾಡುಗಳು ಮಾತ್ರವಲ್ಲದೇ ಚಿತ್ರಗಳೂ ಗೆಲ್ಲುತ್ತವೆ ಎಂಬ ನಂಬಿಕೆಯೂ ಚಿತ್ರರಂಗದಲ್ಲಿ ಮನೆ ಮಾಡಿದೆ. ಇದೀಗ ಪುನೀತ್ ಅತ್ಯಂತ ಅಪರೂಪದ ಹಾಡೊಂದನ್ನು ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರಕ್ಕಾಗಿ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ ಹರಡಿರುವ ಹವಾ ಸಣ್ಣದ್ದೇನಲ್ಲ!
ಪುನೀತ್ ರಾಜ್ ಕುಮಾರ್ ಇದುವರೆಗೂ ನಾನಾ ಹಾಡುಗಳನ್ನು ಹಾಡಿದ್ದಾರೆ. ಆದರೆ ಉತ್ತರ ಕರ್ನಾಟಕ ಸೀಮೆಯ ಜವಾರಿ ಹಾಡನ್ನು ಹಾಡಿರಲಿಲ್ಲ. ಆದರೆ ಅವರೀಗ ಉತ್ತರ ಕರ್ನಾಟಕ ಸೀಮೆಯ ಜಾನಪದ ಮಿಳಿತವಾಗುಇರುವಂಥಾ `ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಎಂಬ ಹಾಡನ್ನು ಪುನೀತ್ ಹಾಡಿದ್ದಾರೆ. ಉತ್ತರ ಕರ್ನಾಟಕದವರೇ ಆದ ಸುನೀಲ್ ಕುಮಾರ್ ಸುಧಾಕರ ಬರೆದಿರೋ ಈ ಹಾಡಿಗೆ ಜಾನಪದ ಘಮಲಿನ ಸಂಗೀತವನ್ನು ಸ್ವತಃ ಅರವಿಂದ್ ಅವರೇ ಸಂಯೋಜನೆ ಮಾಡಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ ಮುಂತಾದ ಭಾಗಗಳ ಜಾನಪದ ಸ್ಪರ್ಶದೊಂದಿಗೆ ಮೂಡಿ ಬಂಣದಿರೋ ಈ ಹಾಡು ಚಿತ್ರದ ಪಾತ್ರಗಳನ್ನು ಪರಿಚಯಿಸೋ ಧಾಟಿಯಲ್ಲಿಯೂ ಇದೆ. ಈ ಹಾಡಿಗೆ ಈಗಾಗಲೇ ವ್ಯಾಪಕ ಪ್ರತಿಕ್ರಿಯೆಗಳೂ ಹರಿದು ಬರಲಾರಂಭಿಸಿವೆ. ಯೂ ಟ್ಯೂಬಿನಲ್ಲಿಯೂ ಈಗ ಈ ಹಾಡಿನ ಜವಾರಿ ಖದರು ಜೋರಾಗಿಯೇ ಇದೆ.
ಹೊಸಬರ ಚಿತ್ರಗಳಿಗೆ ಹಾಡಲು ಮನವಿ ಮಾಡಿದರೂ ಹೋಗಿ ಹಾಡೋ ಔದಾರ್ಯವನ್ನು ಪುನೀತ್ ರೂಢಿಸಿಕೊಂಡಿದ್ದಾರೆ. ಅರವಿಂದ್ ಇಂಥಾದ್ದೊಂದು ಬೇಡಿಕೆ ಇಟ್ಟಾಗಲಂತೂ ಅವರು ಮರು ಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಅದೇ ರೀತಿ ಇಡೀ ಹಾಡನ್ನು, ಸಾಹಿತ್ಯವನ್ನು ಎಂಜಾಯ್ ಮಾಡುತ್ತಲೇ ಪುನೀತ್ ಹಾಡಿದ್ದಾರೆ. ಈ ವರೆಗೂ ಪುನೀತ್ ಕುಂದಾಪುರ ಕನ್ನಡದ ಹಾಡನ್ನೂ ಹಾಡಿದ್ದಾರೆ. ಆದರೆ ಪಕ್ಕಾ ಉತ್ತರಕರ್ನಾಟಕ ಶೈಲಿಯ ಹಾಡೊಂದನ್ನು ಅವರು ಹಾಡಿರೋದು ಇದೇ ಮೊದಲು.
ಈ ಮೂಲಕ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರ ಮತ್ತೊಂದು ಸುತ್ತಿನ ಪ್ರಚಾರ ಪಡೆದುಕೊಂಡಿದೆ. ಈ ಹಾಡಿನಿಂದಾಗಿಯೇ ಮತ್ತಷ್ಟು ಪ್ರೇಕ್ಷಕರು ಮಟಾಶ್ ಚಿತ್ರದತ್ತ ಕುತೂಹಲಗೊಂಡಿದ್ದಾರೆ.
#
No Comment! Be the first one.