‘ಮಟಾಶ್’ ಸಿನಿಮಾದ ’ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ ದೈನಂದಿನ ತೊಳಲಾಟಗಳನ್ನೂ ಎತ್ತಿ ತೋರಿಸುತ್ತದೆ. ಚಿತ್ರಕತೆಗೆ ಹೊಂದಿಕೊಂಡಂತೆ ಬರೆದಿರುವ ಕಾರಣದಿಂದ, ರೊಕ್ಕ ಮಾಡಲು ಹೊರಟ ನಿರುದ್ಯೋಗಿ ಉಡಾಳರ ದೈನಿಕ ಬದುಕಿನ ವಿವರಗಳನ್ನು ಕಟ್ಟಿ ಕೊಡುವಲ್ಲಿ ಸಫಲವಾಗಿದೆ.
ಬಿಜಾಪುರ ನೆಲದ ಶೈಲಿಯ ಭಾಷೆ, ಅದರಲ್ಲಿ ಉರ್ದು, ಲಂಬಾಣಿ ಪದಗಳ ಬಳಕೆಯನ್ನು ತೂಕ ಹಾಕಿದಂತೆ ಪ್ರಯೋಗ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿರುವೀ ಆಡಿಯೋಕ್ಕೆ ’ಚಜ್ಜಿರೊಟ್ಟಿ ಚವಳಿಕಾಯಿ’ ಸಾಂಗ್ ಎಂದೇ ಕರೆಯಲಾಗುತ್ತಿದೆ. ’ಚಜ್ಜಿರೊಟ್ಟಿ ಚವಳಿಕಾಯಿ, ರೂಪಾಯ್ಗೆ ಸೇರ್ ಬದನೆಕಾಯಿ’ ಎಂಬ ಸಾಲುಗಳ ಜೊತೆಗೆ ಇಲ್ಲಿನ ಪೆನಪೆಟಿಗಿ (ಹಾರ್ಮೊನಿಯಂ), ತಬಲಾ ಇತ್ಯಾದಿ ಸ್ಥಳೀಯ ಸಂಗೀತ ವಾದ್ಯಗಳ ಇಂಪೂ ಕಿವಿ ತುಂಬುತ್ತದೆ.
ಬೀರೋ ಬ್ರ್ಯಾಂಡಿ ಕುಡಿಯೋವಾಗ ಉಪ್ಪಿನಕಾಯಿ ನೆಕ್ತಾರ
ಮಾವಾ, ಗುಟ್ಕಾ ಇಲ್ಲಾರದಾಗ ಸುಣ್ಣ, ತಂಬಾಕು ತಿಕ್ತಾರ….
ಹಗಲು ಕ್ರಿಕೆಟ್ಟು ಬೆಟ್ಟಿಂಗ್, ಇಸ್ಪೀಟ್ ಆಟ
ರಾತ್ರಿಯಾದರೆ ಡಾಬಾದೊಳಗ ಊಟ…..
-ಇಂತಹ ಸಾಲುಗಳು ಪಡ್ಡೆಗಳಿಗೆ, ಉಡಾಳರಿಗೆ ಇಷ್ಟವಾದಂತಿವೆ. ವಿಜಾಯಪುರದ ಮೂಲ ಆಹಾರ ಸಂಸ್ಕೃತಿ, ಭಾಷಾ ಸೊಗಡನ್ನು ರಂಜನೆಯ ರೂಪದಲ್ಲಿ ಉಣಬಡಿಸಲಾಗಿದೆ. ’ಉಡಾಳರ’ ಈ ಹಾಡು ರಚಿಸಿದವರು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕ ಸುನೀಲಕುಮಾರ್ ಸುಧಾಕರ್. ಪುನೀತ್ ಧ್ವನಿ ಇದಕ್ಕೆ ಇನ್ನಷ್ಟು ರಂಗು ನೀಡಿದೆ. ’ರೊಕ್ಕಕ್ಕಾಗಿ ಕೈ ಕೊಡಬ್ಯಾಡ, ರೊಕ್ಕಕ್ಕಾಗಿ ಬಾಯಿ ಬಿಡಬೇಡ’ ಎಂಬ ಉಪದೇಶವೂ ಈ ಸಾಂಗಿನಲ್ಲಿದೆ!
ನಿರ್ದೇಶಕ ಎಸ್.ಡಿ. ಅರವಿಂದ ’ಅಮಾನ್ಯೀಕರಣದ ೫೦ ದಿನಗಳ ತೊಳಲಾಟದ ಹಿನ್ನೆಲೆ ಇಟ್ಟುಕೊಂಡು, ಕಾಮಿಡಿ ಥ್ರಿಲ್ಲರ್ ರೂಪಿಸಿದ್ದೇವೆ’ ಎಂದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
#
No Comment! Be the first one.