ಸಾವಿರದೊಂಭೈನೂರ ತೊಂಭತ್ತನೇ ಇಸವಿಯಲ್ಲಿ ತೆರೆಗೆ ಬಂದು ಇಪ್ಪತ್ತೈದು ವಾರಗಳ ಕಾಲ ಪ್ರದರ್ಶನ ಕಂಡಿದ್ದ ಸಿನಿಮಾ ಉದ್ಭವ. ಆ ಸಿನಿಮಾವನ್ನು ನಿರ್ದೇಶಿಸಿದ್ದ ಕೋಡ್ಲು ರಾಮಕೃಷ್ಣ ಈಗ ಅದೇ ಕಥೆಯನ್ನು ವೃದ್ಧಿಸಿ ಇವತ್ತಿನ ಕಾಲಕ್ಕೆ ಹೊಂದುವಂತೆ ರೂಪಿಸಿದ್ದಾರೆ.

ಜನರ ನಂಬಿಕೆ, ಆಚರಣೆಗಳನ್ನೇ ಬಂಡವಾಳ ಮಾಡಿಕೊಂಡರೆ ಅನಾಮತ್ತಾಗಿ ಎಷ್ಟು ಬೇಕಾದರೂ ಕಾಸು ಮಾಡಬಹುದು ಅನ್ನೋದು ಚಿತ್ರದ ಪ್ರಧಾನ ಎಳೆ. ರಸ್ತೆಯಲ್ಲಿ ಗಣೇಶನ ಉದ್ಭವವಾಗಿದೆ ಅಂತಾ ಜನರನ್ನು ನಂಬಿಸಿ, ಅದೇ ಜಾಗದಲ್ಲಿ ದೇವಸ್ಥಾನ ಕಟ್ಟಿ, ಅದರ ಟ್ರಸ್ಟಿಯೂ ಆಗಿ ಅಪ್ಪ ಸರಿಯಾಗೇ ದುಡಿಮೆ ಮಾಡಿರುತ್ತಾನೆ. ಮತ್ತೊಬ್ಬ ಕಪಟಿಯ ಉಪಟಳದಿಂದ ದೇವಸ್ಥಾನಕ್ಕೆ ಭಕ್ತರು ಬರದೇ ಹೋಗಿರುತ್ತಾರೆ. ಇಂಥ ಗುಡಿಗೆ ಮತ್ತೆ ಹೇಗೆ ಜನ ನುಗ್ಗುವಂತಾಗುತ್ತದೆ? ಭಕ್ತಮಹಾಶಯರ ಮುಗ್ಧತೆ, ಮೀಡಿಯಾದವರ ಪರಚಾರ ವೈಖರಿ, ಸೆಂಟಿಮೆಂಟುಗಳಿದ ಜನರ ದಂಧೆ – ಇವೆಲ್ಲಾ ಸೇರಿದರೆ ಏನೇನಾಗುತ್ತದೆ ಅನ್ನೋದನ್ನು ಬಿಡಿಬಿಡಿಯಾಗಿ ಉದ್ಭವ ಮಾಡಿಸಿದ್ದಾರೆ ನಿರ್ದೇಶಕ ಕೋಡ್ಲು ರಾಮಕೃಷ್ಣ.

ಇದು ಉದ್ಭವ ಗಣಪತಿ ಅಂತಾ ಜನರನ್ನು ನಂಬಿಸಿ ಅಪ್ಪ ಹೇಗೆ ದುಡ್ಡು ಮಾಡಿದನೋ ಅದೇ ಗಣಪತಿ ಉದ್ಭವ ಮೂರ್ತಿಯಲ್ಲ, ನಮ್ಮಪ್ಪ ಹೂತಿಟ್ಟಿದ್ದು ಅನ್ನೋ ಹೇಳಿಕೆ ಕೊಟ್ಟು ಮಗ ಎಷ್ಟು ಸಂಪಾದನೆ ಮಾಡುತ್ತಾನೆ? ಎಲ್ಲೆಲ್ಲಿ ವಸೂಲಿ ಮಾಡುತ್ತಾನೆ? ಅನ್ನೋದು ಸಿನಿಮಾದ ಅಂತಿಮ ಗುಟ್ಟು!

ಬಿಗಿಯಾದ ಕತೆ, ಎಲ್ಲೂ ಅಲುಗಾಡದ ಚಿತ್ರಕತೆ ಎಲ್ಲವೂ ಇರುವ ಮತ್ತೆ ಉದ್ಭವ ಚಿತ್ರದಲ್ಲಿ ಒಂದಷ್ಟು ವೀಕ್ ಪಾಯಿಂಟುಗಳೂ ಇವೆ. ಅದೇನೆಂದರೆ, ನಿರ್ದೇಶಕ ಕೋಡ್ಲು ತಾಂತ್ರಿಕವಾಗಿ ಇನ್ನೂ ಮೂವತ್ತು ವರ್ಷಗಳ ಹಿಂದೆಯೇ ಇದ್ದಂತಿದೆ. ತೀರಾ ಹಳಸಲು ಶಾಟ್ಸ್’ಗಳು ಬೋರಿಡಿಸುತ್ತವೆ. ಕ್ರಿಯಾಶೀಲ ಛಾಯಾಗ್ರಾಹಕ ಎನಿಸಿಕೊಂಡಿರುವ ಮೋಹನ್ ಅವರ ಕ್ಯಾಮೆರಾ ಕೆಲಸಕ್ಕೆ ಬಹುಶಃ ನಿರ್ದೇಶಕರು ಜಾಗ ಕೊಟ್ಟಂತಿಲ್ಲ. ಇನ್ನು ವಿ. ಮನೋಹರ್ ದಿನ ಕಳೆದಂತೆ ಹಿಂದಿದಕ್ಕೆ ಸಾಗುತ್ತಿದ್ದಾರೆ. ಮೂರು ದಶಕಗಳ ಹಿಂದೆಯೇ ರೆಕಾರ್ಡು ಮಾಡಿಟ್ಟಷ್ಟು ಸವೆದುಹೋದ ಟ್ಯೂನುಗಳು ಯಾರಿಗೂ ಇಷ್ಟವಾಗುವುದಿಲ್ಲ. ಹಿನ್ನೆಲೆ ಸಂಗೀತ ಕೂಡಾ ಹಳೇ ಪ್ಯಾಟ್ರನ್ನಿನಲ್ಲೇ ಉಳಿದುಹೋಗಿದೆ. ಸಂಭಾಷಣೆಯನ್ನು ಬರೆದು ನಟಿಸಿರುವ ಮೋಹನ್ ಅವರ ಮಾತುಗಳು ಸಿನಿಮಾಗೆ ವರವಾಗಿರುವುದರ ಜೊತೆಗೆ ಶಾಪವೂ ಆಗಿದೆ. ಸಿನಿಮಾ ಶುರುವಿನಿಂದ ಕೊನೆಯ ತನಕ ಎಲ್ಲೂ ಸೈಲೆಂಟಿಗೆ ಸ್ಥಳಾವಕಾಶವನ್ನೇ ಕೊಡದಷ್ಟು ಮಾತುಗಳನ್ನು ತುಂಬಿದ್ದಾರೆ.

ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವುದು ರಂಗಾಯಣ ರಘು, ಪರಮೋದ್, ಮೋಹನ್, ಅವಿನಾಶ್ ನಟನೆ. ಅಲ್ಲಲ್ಲಿ ಬಂದು ಹೋಗುವ ಐಸ್ ಕ್ಯಾಂಡಿ ಗಲ್ಲದ ಮಿಲನ ನಾಗರಾಜ್ ಚೆಂದಗೆ ಪಾತ್ರ ನಿರ್ವಹಿಸಿದ್ದಾರೆ. ನಟ ಪ್ರಮೋದ್ ಖಂಡಿತವಾಗಿಯೂ ಅತ್ಯುತ್ತಮ ಕಲಾವಿದ ಅನ್ನೋದನ್ನು ಮತ್ತೆ ನಿರೂಪಿಸಿದ್ದಾರೆ. ಆದರೆ, ಈ ಹುಡುಗ ಸೀರಿಯಲ್ ನಟನೆಯಿಂದ ಇನ್ನೂ ಒಂಚೂರು ಹೊರಬರುವ ಅಗತ್ಯವಿದೆ.

ಇಷ್ಟೆಲ್ಲದರ ನಡುವೆ ಕೋಡ್ಲುವನ್ನು ಮೆಚ್ಚಲೇಬೇಕಾದ ಅಂಶವೂ ಇದೆ. ಪ್ರಸ್ತುತ ಸಮಾಜಕ್ಕೆ ಕಂಟಕವಾಗಿರುವ ಮಠಾಧೀಶರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ದೇವರ ಹೆಸರಿನಲ್ಲಿ ವ್ಯಾಪಾರಕ್ಕೆ ಕುಂತವರನ್ನೇ ತಮ್ಮ ಸಿನಿಮಾದ ಕ್ಯಾರೆಕ್ಟರುಗಳನ್ನಾಗಿಸಿದ್ದಾರೆ. ಮಠದೊಳಗೆ ಹೋರಿಯಂತೆ ಕೆಲಸ ಮಾಡಿದ ಹಸುವಿನಂತಾ ಸ್ವಾಮಿ, ನೂರುಸಲ ರೇಪ್ ಆಯಿತು ಎಂದು ನೂರಾರು ಸಲ ಹೇಳಿದ ವಯ್ಯಾರಿ, ಮೀನು ತಿಂದು ದೇವಸ್ಥಾನಕ್ಕೆ ಹೋದ ಮುಖ್ಯಮಂತ್ರಿ, ಧೂಳಿನಿಂದ ದುಡಿದ ಹಣವನ್ನು ಎಲ್ಲೆಲ್ಲೋ ಕಳೆದುಕೊಂಡ ರೆಡ್ಡಿಗಾರು… ಹೀಗೆ ಕಣ್ಣೆದುರೇ ಇರುವ ಸಾಕಷ್ಟು ಜನರನ್ನು ಹೋಲುವ ಪಾತ್ರಗಳನ್ನು ‘ಮತ್ತೆ ಉದ್ಭವ’ ಚಿತ್ರದಲ್ಲಿ ಧೈರ್ಯವಾಗಿ ರೂಪಿಸಿದ್ದಾರೆ. ಸಿನಿಮಾ ನೋಡುವ ಪ್ರತಿಯೊಬ್ಬರೂ ಈ ಪಾತ್ರಗಳೊಂದಿಗೆ ಕನೆಕ್ಟ್ ಆಗುತ್ತಾರೆ. ಫೋರ್‌ಟ್ವೆಂಟಿ ಅಪ್ಪ-ಫಟಿಂಗ ಮಗ ಇಬ್ಬರೂ ಸೇರಿ ಜನರನ್ನು ಮತ್ತೆ ಮತ್ತೆ ಯಾಮಾರಿಸುವ, ಮತ್ತೆ ಉದ್ಭವವನ್ನು ಮನೆಯವರೆಲ್ಲಾ ಕುಂತು ನೋಡಿ ಎಂಜಾಯ್ ಮಾಡಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಖುಷಿಯಾಗಿ ಬಂದು ಗೆಳೆಯನಾಗಿದ್ದವನು ಗೋವಾದಲ್ಲಿ ಕಳೆದುಹೋದ!

Previous article

ಮತ್ತೆ ಎದ್ದು ನಿಂತರು ಪ್ರಜ್ವಲ್ ದೇವರಾಜ್…

Next article

You may also like

Comments

Leave a reply

Your email address will not be published.