ಸಾಮಾನ್ಯವಾಗಿ ಸಿನಿಮಾ ಮಂದಿ ನಮ್ಮದು ಡಿಫರೆಂಟು ಸಿನಿಮಾ ಅಂತಾ ಮಾತಿಗೊಮ್ಮೆ ಹೇಳಿಕೊಳ್ಳುತ್ತಿರುತ್ತಾರೆ. ಇಲ್ಲೊಂದು ಸಿನಿಮಾ ರಿಲೀಸಾಗಿದೆ. ಈ ಚಿತ್ರ ನಿಜಕ್ಕೂ ಡಿಫರೆಂಟು. ಅದ್ಯಾವ ಮಟ್ಟಿಗೆ ಅಂದರೆ, ಇಡೀ ಇಂಡಿಯಾದಲ್ಲೇ ಇಂಥದ್ದೊಂದು ಸಬ್ಜೆಕ್ಟಿನ ಸಿನಿಮಾ ಬಂದಿರಲಿಕ್ಕಿಲ್ಲ!

ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ ಮಗು, ಮತ್ತೊಬ್ಬಳು ಬಂದರೆ ಎಲ್ಲಿ ಅದರ ನೆಮ್ಮದಿ ಕೆಡುತ್ತದೋ ಅಂತಾ ತಾನೇ ತಾಯಿಯಾಗಿ, ತಂದೆಯಾಗಿ ಪೊರೆಯುವ ಅಪ್ಪ. ಮಗನಿಗೆ ಕೂಡಾ ಅಪ್ಪ ಅಂದರೆ ಸಿಕ್ಕಾಪಟ್ಟೆ ಪ್ರೀತಿ. ಅಪ್ಪನ ಶ್ರೀಮಂತಿಕೆ, ಹಿರಿಮೆಗಳನ್ನೆಲ್ಲಾ ಮೆರವಣಿಗೆ ಮಾಡಿಕೊಳ್ಳದ ಹುಡುಗ ಸಾಮಾನ್ಯನಂತೆ ಬದುಕುತ್ತಿರುತ್ತಾನೆ. ಎಲ್ಲೆಡೆ ಒಳ್ಳೇ ಹೆಸರು ಪಡೆದಿರುತ್ತಾನೆ. ಅಪ್ಪನಿಗೆ ಮಗ ತನ್ನ ಆಜ್ಞೆ ಮೀರುವುದಿಲ್ಲವೆನ್ನುವ ನಂಬಿಕೆ. ಮಗ ಕೂಡಾ ಅಪ್ಪನ ತೋರುಬೆರಳನ್ನೆ ಫಾಲೋ ಮಾಡುತ್ತಿರುತ್ತಾನೆ. ಇಂಥ ಅಪ್ಪ ಮತ್ತು ಮಗನ ಮಧ್ಯೆ ಹುಡುಗಿಯೊಬ್ಬಳ ಎಂಟ್ರಿಯಾಗುತ್ತದೆ. ಹುಡುಗ ಹುಡುಗಿ ಇಬ್ಬರೂ ಕಾಲೇಜಲ್ಲಿ ಭೇಟಿಯಾಗಿ ಅದು ಪ್ರೀತಿಗೆ ತಿರುಗಿಕೊಂಡಿರುತ್ತದೆ. ವಿಚಾರವನ್ನು ಹುಡುಗನ ಅಪ್ಪನಿಗೆ ತಿಳಿಸೋ ಜವಾಬ್ದಾರಿ ಅವಳದ್ದು. ಆ ಕಾರಣಕ್ಕೇ ಭಾವೀ ಮಾವನನ್ನು ಎದುರಾಗುವ ಹುಡುಗಿಯ ಮೇಲೆ ಹುಡುಗನ ಅಪ್ಪನಿಗೇ ಲವ್ವಾಗಿಬಿಡುತ್ತದೆ!

ಇಪ್ಪತ್ನಾಲ್ಕು ವರ್ಷ ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದ ಅಪ್ಪನಿಗೆ ಇದ್ದಕ್ಕಿದ್ದಂತೆ ಹುಡುಗಿಯ ಮೇಲೆ ಹುಟ್ಟಿಕೊಳ್ಳುವ ವ್ಯಾಮೋಹ ಮುಂದೆ ಯಾವೆಲ್ಲಾ ತಿರುವುಗಳನ್ನು ಪಡೆಯುತ್ತದೆ? ವಯೋವೃದ್ಧ ಹುಡುಗಿಯ ಮುಂದೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಾನಾ? ಇದರಿಂದ ಅಪ್ಪ ಮಗನ ನಡುವೆ ಕಲಹವೇರ್ಪಡುತ್ತದಾ? ಕೊಲೆಗಳಾಗುತ್ತವಾ? ಹಾಗೊಮ್ಮೆ ಸತ್ತರೆ ಯಾರೆಲ್ಲಾ ಸಾಯಬಹುದು? ಅಸಲಿಗೆ ಅಪ್ಪನಿಗೆ ಆ ವಯಸ್ಸಿನಲ್ಲಿ ಪ್ರೀತಿ ಹುಟ್ಟಿದ್ದು ತಪ್ಪಾ?

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರದಂತಿರುವ ಸಿನಿಮಾ ಮೌನಂ. ಇಂಥದ್ದೊಂದು ಕಥೆಯನ್ನು ಚಿತ್ರವಾಗಿಸಿರುವ ನಿರ್ದೇಶಕ ರಾಜ್ ಪಂಡಿತ್ ಧೈರ್ಯವನ್ನು ಮೆಚ್ಚಲೇಬೇಕು. ರಂಗನಾಯಕಿ ಚಿತ್ರದ ನಂತರ ಆ ಮಟ್ಟಿಗಿನ ಬೋಲ್ಡ್ ಕಥೆ ಬೇರೆ ಯಾವ ಚಿತ್ರಗಳಲ್ಲೂ ಬಳಕೆಯಾಗಿರಲಿಲ್ಲ. ಸಿನಿಮಾದ ಮೊದಲ ಭಾಗದಲ್ಲಿ ಅನವಶ್ಯಕ ಎಳೆತ, ಹಳಸಲು ದೃಶ್ಯಗಳಿವೆ. ಆದರೆ ದ್ವಿತೀಯಾರ್ಧ ಯಾರೂ ಊಹಿಸಲು ಸಾಧ್ಯವಾಗದ ತಿರುವುಗಳಿಂದ ಕುತೂಹಲ ಕೆರಳಿಸುತ್ತದೆ.

ಈ ಪಾತ್ರವನ್ನು ಅವಿನಾಶ್ ಅದೆಷ್ಟು ಚೆಂದಗೆ ನಿಭಾಯಿಸಿದ್ದಾರೆಂದರೆ, ಆ ಪಾತ್ರವೇ ತಾವಾಗಿ, ಅನುಭವಿಸಿ ನಟಿಸಿದ್ದಾರೆ. ಮಯೂರಿ ನಟನೆ ಎಂದಿನಂತೆ ಲವಲವಿಕೆಯಿಂದ ಕೂಡಿದೆ. ಫೈಟ್ ಕೂಡಾ ಮಾಡಬಲ್ಲೆ ಅನ್ನೋದನ್ನು ತೋರಿಸಿದ್ದಾರೆ. ಬಾಲಾಜಿ ಶರ್ಮ ನಟನೆ ದ್ವಿತೀಯಾರ್ಧದಲ್ಲಿ ಆಪ್ತವೆನಿಸುತ್ತದೆ. ರಿತೇಶ್ ಮತ್ತು ಕೆಂಪೇಗೌಡ ತಮ್ಮ ಎಂದಿನ ಶೈಲಿಯನ್ನೇ ಇಲ್ಲೂ ಮುಂದುವರೆಸಿದ್ದಾರೆ. ಗುಣವಂತ ಮಂಜು ಸೀರಿಯಸ್ ಸೀನುಗಳಲ್ಲೂ ನಗಿಸುವ ಶಕ್ತಿ ಹೊಂದಿದ್ದಾರೆ. ಕಾಮಿಡಿ ಕಿಲಾಡಿ ನಯನ ಸ್ಟೇಜ್ ಶೋಗೂ, ಸಿನಿಮಾಗೂ ಇರುವ ವ್ಯತ್ಯಾಸವನ್ನು ಆದಷ್ಟು ಬೇಗ ತಿಳಿದುಕೊಳ್ಳಬೇಕಿದೆ. ಆರವ್ ರಿಶಿಕ್ ಹಿನ್ನೆಲೆ ಸಂಗೀತ ಸಿನಿಮಾದ ತೀವ್ರತೆಯನ್ನು ಹೆಚ್ಚಿಸಿದೆ. ಒಮ್ಮೆ ನೋಡಬಹುದಾದ ವಿನೂತನ ಬಗೆಯ ಸಿನಿಮಾ ಇದಾಗಿದೆ.

CG ARUN

ಕೊಲೆ ಮಾಡಿದ್ದು ಯಾರು?

Previous article

You may also like

Comments

Leave a reply

Your email address will not be published. Required fields are marked *