ಆಟೋ ಚಾಲಕರೊಬ್ಬರು ಬರೆದ ಹಾಡಿನ ಲಿರಿಕಲ್ ವಿಡಿಯೋವನ್ನು ಆಟೋ ಚಾಲಕರೇ ಲೋಕಾರ್ಪಣೆ ಮಾಡಿದ ಅಪರೂಪದ ಕಾರ್ಯಕ್ರಮ ಗಣರಾಜ್ಯೋತ್ಸವ ದಿನದಂದು ನೆರವೇರಿದೆ.


ಯುವ ನಿರ್ದೇಶಕ ರಾಜ್ ಪಂಡಿತ್ ‘ಮೌನಂ’ ಸಿನಿಮಾವನ್ನು ಆರಂಭಿಸುವ ತಯಾರಿಯಲ್ಲಿದ್ದರು. ಸಿನಿಮಾದಲ್ಲಿ ಬರುವ ಮೂರು ಹಾಡುಗಳಿಗೆ ಟ್ಯೂನ್ ಕೂಡಾ ಕಪೋಸ್ ಆಗಿತ್ತು. ಯಾರದ್ದೋ ಮೂಲಕ ನಂಬರ್ ಪಡೆದು ಬಂದ ಹುಡುಗನೊಬ್ಬ ‘ನಾನು ಹಾಡು ಬರೀತೀನಿ ಅವಕಾಶ ಕೊಡಿ. ಕಳೆದ ಐದು ವರ್ಷಗಳಿಂದಾ ಎಲ್ಲರ ಬಳಿ ಅಲೆಯುತ್ತಿದ್ದೀನಿ. ಪ್ರತಿಯೊಬ್ಬರೂ ‘ಬರೆದಿರೋದನ್ನು ಕೊಟ್ಟು ಹೋಗಿರು. ನಂಬರ್ ಕೂಡಾ ಬರೆದು ಕೊಡು ಬೇಕಿದ್ದರೆ ಕರೀತೀವಿ’ ಅಂತಲೇ ಹೇಳುತ್ತಾರೆ. ಆದರೆ ಈ ವರೆಗೆ ಯಾವೊಬ್ಬರೂ ಛಾನ್ಸು ಕೊಟ್ಟಿಲ್ಲ’ ಅಂತಾ ಕೇಳಿದ್ದ. ಮೌನಂ ಸಿನಿಮಾ ಶುರುವಾಗುವ ಮುಂಚೆ ನಿರ್ದೇಶಕನಾಗಬೇಕೆಂದು ಓಡಾಡುತ್ತಿದ್ದ ಸಂದರ್ಭದಲ್ಲಿ ಸ್ವತಃ ನಿರ್ದೇಶಕ ರಾಜ್ ಕೂಡಾ ಇಂತಾ ಎಷ್ಟೋ ಸಂದರ್ಭಗಳನ್ನು ಎದುರಿಸಿದ್ದರು. ನಿರ್ದೇಶನ ವಿಭಾಗಕ್ಕೆ ಸೇರಲು ಸತತ ಎರಡು ವರ್ಷ ಓಡಾಡಿದ್ದರು. ಅದನ್ನೆಲ್ಲಾ ನೆನಪಿಸಿಕೊಂಡ ರಾಜ್ ತಕ್ಷಣ ಆ ಹುಡುಗನನ್ನ ಕರೆಸಿಕೊಂಡು ಹೇಳಿದ್ದಿಷ್ಟೆ. ನಾನು ಅವಕಾಶ ಕೊಡ್ತೀನಿ, ನಿನ್ನ ತಪ್ಪುಗಳನ್ನೂ ತಿದ್ದುತ್ತೀನಿ. ಆದರೆ ನನ್ನೊಟ್ಟಿಗೆ ಹತ್ತು ದಿನ ಇದ್ದು ಕೆಲಸ ಮಾಡಬೇಕು ಅಂತಾ. ಆಯ್ತು ಎಂದು ಒಪ್ಪಿಕೊಂಡ ಆ ಹುಡುಗ ಆಕಾಶ್ ಜೊತೆಗಿದ್ದು ಬರೆದಿದು ಬರೀ ಒಂದು ಹಾಡನ್ನಲ್ಲ. ಈ ಚಿತ್ರದಲ್ಲಿರುವ ಮೂರೂ ಹಾಡುಗಳಿಗೆ ಆಕಾಶ್ ಹಾಡು ಬರೆಯುವಂತಾಯಿತು.

ನಿನ್ನ ಉಸಿರಲ್ಲಿಯೇ ನಾನು ಉಸಿರಾಗಲೇ – ಎಂಬ ಸಾಲಿನ ಹಾಡನ್ನು ಆಕಾಶ್ ರಚಿಸಿದ್ದಾರೆ. ಅನಿರುಧ್ ಶಾಸ್ತ್ರಿ ಮತ್ತು ಶ್ವೇತಾ ದೇವನಹಳ್ಳಿ ಹಾಡಿದ್ದಾರೆ. ಲಾಲ್ ಬಾಗ್ ಗೇಟ್ ಬಳಿ ಆಟೋ ಚಾಲಕರೆಲ್ಲ ಸೇರಿ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.  ಈ ಸಿನಿಮಾದ ಮೂಲಕ ’ಅಮೃತವರ್ಷಿಣಿ’ ಧಾರವಾಹಿ ಖ್ಯಾತಿಯ ಬಾಲಾಜಿ ಶರ್ಮ ಹಿರಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಮಯೂರಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಗುಣವಂತ ಮಂಜು, ಕನ್ನಡಿಗ ಬಲರಾಂ, ರಿತೇಶ್, ನಯನ, ಹನುಮಂತೇಗೌಡ, ಜಯಲಕ್ಷ್ಮೀ ಮುಂತಾದವರ ನಟನೆ ಇದೆ.


ಈ ಹಿಂದೆ ’ದೇವರಿಗೆ ಪಾಠ’ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿದ್ದ, ಬೀದರ್ ಮೂಲದ ರಾಜ್ ಪಂಡಿತ್ ರಚನೆ, ಚಿತ್ರಕತೆ, ಸಂಭಾಷಣೆ ಬರೆದು ಮೌನಂ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಕಾಶ್.ಎಸ್ ಸಾಹಿತ್ಯದ ಮೂರು ಹಾಡುಗಳಿಗೆ ಆರವ್ ರುಷಿಕ್ ರಾಗ ಒದಗಿಸಿದ್ದಾರೆ. ಛಾಯಾಗ್ರಹಣ ಶಂಕರ್, ಸಂಕಲನ ಗುರುಮೂರ್ತಿ ಹೆಗಡೆ-ಹೆಚ್.ಆರ್.ಅನುರಂಜನ್, ಕಲೆ ಇಸ್ಮಾಯಿಲ್, ಸಾಹಸ ಅಲ್ಟಿಮೇಟ್ ಶಿವು-ಕೌರವ ವೆಂಕಟೇಶ್, ನೃತ್ಯ ನಿರ್ದೇಶನದ ಜವಾಬ್ದಾರಿ ಸ್ಟಾರ್ ನಾಗಿ ನಿರ್ವಹಿಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹನ್ನೊಂದು ವರ್ಷಗಳ ಹಿಂದೆ ಸಿನಿಮಾಕ್ಕೆ ಪಾಲುದಾರರಾಗಿದ್ದ ಆಂಧ್ರದ ಕನ್ನಡಿಗ ಶ್ರೀಹರಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರ ಇಷ್ಟರಲ್ಲೇ ತೆರೆಗೆ ಬರಲಿದೆ.

CG ARUN

2009ರಲ್ಲಿ ಸಾಹಸಸಿಂಹ ವಿಷ್ಣು ಬರೆದ ಕವಿತೆ ಈಗ ಹಾಡಾಯಿತು!

Previous article

ಸಂಚಾರಿ ವಿಜಯ್ ಸಂದರ್ಶನ

Next article

You may also like

Comments

Leave a reply

Your email address will not be published. Required fields are marked *