ಎರಡು ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಟಿ.ಎನ್ ಸೀತಾರಾಮ್ ನಿರ್ದೇಶನದ “ಮಾಯಾಮೃಗ” ಧಾರಾವಾಹಿ ವಿಶ್ವದಾದ್ಯಂತ ಹೆಸರು ಮಾಡಿತ್ತು. ಈಗ ಆ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” ಎಂಬ ಹೆಸರಿನಿಂದ ಇದೇ ಅಕ್ಟೋಬರ್ 31 ರ ಸೋಮವಾರ ರಾತ್ರಿ 9 ಗಂಟೆಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ.
ನನ್ನನ್ನು ಸಂಪರ್ಕಿಸಿದ ಸಿರಿ ಕನ್ನಡ ವಾಹಿನಿಯ ಸಂಜಯ್ ಶಿಂಧೆ, ತಮ್ಮ ವಾಹಿನಿಗಾಗಿ ಧಾರಾವಾಹಿಯೊಂದನ್ನು ನಿರ್ದೇಶಿಸುವಂತೆ ಕೇಳಿದರು. ನಾನು “ಮಾಯಾಮೃಗ” ಧಾರಾವಾಹಿ ಮುಂದುವರೆಸೋಣ “ಮತ್ತೆ ಮಾಯಾಮೃಗ” ಹೆಸರಿನಿಂದ ಎಂದು ಹೇಳಿದೆ. ಅವರು ಸಂತೋಷದಿಂದ ಒಪ್ಪಿಕೊಂಡರು. ಆಗ ನಿರ್ದೇಶನ ವಿಭಾಗದಲ್ಲಿ ನಾನು, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇದ್ದೆವು. ಈಗಲೂ ನಾವು ಮೂವರು ಸೇರಿ “ಮತ್ತೆ ಮಾಯಾಮೃಗ” ನಿರ್ದೇಶಿಸುತ್ತಿದ್ದೇವೆ. ಕಥಾ ವಿಸ್ತರಣೆಯಲ್ಲಿ ನನ್ನ ಮಗಳು ಅಶ್ವಿನಿ ಹಾಗೂ ಪ್ರಹ್ಲಾದ್ ನಮ್ಮೊಂದಿಗಿದ್ದಾರೆ. ೨೩ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ನಾನು ಸೇರಿದಂತೆ ಹಲವರಿಗೆ ವಯಸ್ಸಾಗಿದೆ. “ಮಾಯಾಮೃಗ” ದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ ಹಾಗೂ ಅನೇಕ ಕಲಾವಿದರು ನಮ್ಮೊಂದಿಗಿಲ್ಲ. ಹಳೆಯ ಕಲಾವಿದರು ಹಾಗೂ ಈಗಿನ ಹೊಸ ಕಲಾವಿದರ ಸಮಾಗಮದಲ್ಲಿ “ಮತ್ತೆ ಮಾಯಾಮೃಗ” ಮೂಡಿಬರಲಿದೆ. “ಬದುಕು ಬದಲಾಗಬಹುದು ಆದರೆ ಭಾವಗಳಲ್ಲ” ಎಂಬ ವಾಕ್ಯದೊಂದಿಗೆ ಎಂದು ಟಿ.ಎನ್ ಸೀತಾರಾಮ್ ವಿವರಣೆ ನೀಡಿದರು.
ಆಗ “ಮಾಯಾಮೃಗ” ಮಾಡುತ್ತಿದ್ದಾಗ ನಮಗೆ ಅಂತ ಪೈಪೋಟಿ ಇರಲಿಲ್ಲ. ಧಾರಾವಾಹಿ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಈಗ ಎಲ್ಲಾ ವಾಹಿನಿಗಳಿಂದ ಸುಮಾರು ಅರವತ್ತಕ್ಕೂ ಅಧಿಕ ಧಾರಾವಾಹಿಗಳು ದಿನ ಪ್ರಸಾರವಾಗುತ್ತಿದೆ. ಇವುಗಳ ಮಧ್ಯೆ ನಾವು ಪ್ರೇಕ್ಷಕರನ್ನು ನಮ್ಮ ಧಾರಾವಾಹಿಯತ್ತ ಸೆಳೆಯುವ ದೊಡ್ಡ ಸವಾಲು ನಮ್ಮ ಮುಂದಿದೆ. ಜನ “ಮತ್ತೆ ಮಾಯಾಮೃಗ” ವನ್ನು ಮೆಚ್ಚಿಕೊಳ್ಳುವ ವಿಶ್ವಾಸವೂ ಇದೆ ಎಂದರು ಪಿ.ಶೇಷಾದ್ರಿ. ನಾಗೇಂದ್ರ ಶಾ ಸಹ ಧಾರಾವಾಹಿ ಕುರಿತು ಮಾತನಾಡಿದರು.
ನಾವು ದುಡ್ಡಿಗಾಗಿ ಈ ಧಾರಾವಾಹಿ ಮಾಡುತ್ತಿಲ್ಲ. ಟಿ.ಎನ್ ಸೀತಾರಾಮ್ ಅವರಂತಹ ಉತ್ತಮ ನಿರ್ದೇಶಕರು ನಮ್ಮ ವಾಹಿನಿಗಾಗಿ ಧಾರಾವಾಹಿ ನಿರ್ದೇಶಿಸುತ್ತಿರುವುದೇ ನಮಗೆ ಹೆಮ್ಮೆ ಎನ್ನುತ್ತಾರೆ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ. ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿದ್ದರು.
No Comment! Be the first one.