ಪತ್ರಕರ್ತರಾದ ಬಿ.ನವೀನ್ಕೃಷ್ಣ `ಮೇಲೊಬ್ಬ ಮಾಯಾವಿ’ ಎಂಬ ಚಿತ್ರ ನಿರ್ದೇಶಿಸಿರೋದು ನಿಮ್ಗೆ ಗೊತ್ತೇ ಇದೆ. ಇತ್ತೀಚೆಗೆ `ಹೆಚ್.ಎಸ್.ಆರ್ ಕ್ಲಬ್’, ಅನಿಲ್ ರೆಡ್ಡಿಯವರ ನೇತೃತ್ವದಲ್ಲಿ `ಹೆಚ್.ಎಸ್.ಆರ್ ನಾಟ್ಯ ರತ್ನ’ ಎಂಬ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಐವತ್ತಿಕ್ಕಿಂತಲೂ ಹೆಚ್ಚು ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆಮಾಡಿ, ಚಿತ್ರದ ಬಿಡುಗಡೆಯ ತಯಾರಿಯನ್ನೂ ನಡೆಸಿದೆ ಚಿತ್ರತಂಡ. ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ವಿಜೇತ ಮತ್ತು ಸಮಾಜಮುಖಿ ಕೆಲಸಗಳಿಂದ ಮನೆಮಾತಾಗಿರುವ ಪೋಲಿಸ್ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ ಟೀಸರ್ ಬಿಡುಗಡೆಮಾಡಿ, “ಟೀಸರ್ನಲ್ಲಿ ಒಂದು ಫ್ರೆಶ್ನೆಸ್ ಇದೆ, ಎಲ್ಲರ ಬದುಕಿನಲ್ಲೂ ಹಾದು ಹೋಗುವ ಕತ್ತಲು-ಬೆಳಕಿನಾಟವನ್ನು ದೃಶ್ಯಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಟೀಸರ್ ನೋಡಿದ ಮೇಲೆ ..ಇನ್ನೂ ಏನೋ ಇರಬೆಕಿತ್ತು ಎಂದೆನಿಸುತ್ತದೆ.. ಅದೇ ಟೀಸರ್ನ ತಾಕತ್ತು. ಮಣಿಕಾಂತ್ ಕದ್ರಿಯವರ ಹಿನ್ನೆಲೆ ಸಂಗೀತ ಚಿತ್ರದ ಬಗ್ಗೆ ಕುತೂಹಲ ಕೆರಳಿಸುತ್ತದೆ. ಕನ್ನಡದಲ್ಲಿ ಇತ್ತೀಚಿಗೆ ಹೊಸ ಪ್ರತಿಭೆಗಳು ಕೊಸತನದ ಚಿತ್ರಗಳೊಂದಿಗೆ ಬರುತ್ತಿದ್ದಾರೆ. `ಮೇಲೊಬ್ಬ ಮಾಯಾವಿ’ ಚಿತ್ರಕೂಡ ಆ ಸಾಲಿನ ಚಿತ್ರವಾಗಲಿ’’ ಎಂದು ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ನವೀನ್ಕೃಷ್ಣ..“ಕರಾವಳಿಭಾಗದ ದಂಧೆಯೊಂದರ ಬಗ್ಗೆ ಕಥೆಮಾಡಿಕೊಂಡು ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದಾಗ, ಧೈರ್ಯ ಮಾಡಿ ಚಿತ್ರಕ್ಕೆ ಬಂಡವಾಳ ಹೂಡಿದವರು ಪುತ್ತೂರು ಭರತ್. ಅವರ ಸಹಕಾರ ಮತ್ತು ಸಿನ್ಮಾ ಮೇಲಿನ ಒಲವಿನಿಂದಾಗಿ `ಮೇಲೊಬ್ಬ ಮಾಯಾವಿ’ ರೆಡಿಯಾಗಲು ಸಾಧ್ಯವಾಗಿದೆ. ಅಕ್ಟೋಬರ್ ಮೊದಲನೇ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡಿ, ನವೆಂಬರ್ನಲ್ಲಿ ಚಿತ್ರ ಬಿಡುಗಡೆಮಾಡುವ ಸಿದ್ಧತೆಯಲ್ಲಿದ್ದೇವೆ. ಟೀಸರ್ನಲ್ಲಿ ಕಂಟೆಂಟ್ನ್ನು ಬಿಟ್ಟುಕೊಡದೆ ಕೇವಲ ಚಿತ್ರದ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಟ್ರೈಲರ್ನಲ್ಲಿ ಚಿತ್ರದಲ್ಲಿರುವ ಮಾಫಿಯಾ ಯಾವುದು.. ನಾಯಕ ನಟನಿಗೆ ಇರುವ ಸೈಕಾಲಿಜಿಕಲ್ ಡಿಸಾರ್ಡರ್ ಎನು.. ನಾಯಕಿ ನಾಯಕನನ್ನು ಆ ಸೈಕಾಲಿಜಿಕಲ್ ಡಿಸಾರ್ಡರ್ನ್ನು ವಾಸಿ ಮಾಡಲು ನಾಯಕಿ ಏನು ಮಾಡುತ್ತಾಳೆ.. ಅನ್ನುವುದನ್ನು ಪ್ರೇಕ್ಷಕರ ಮುಂದಿಡಲಿದ್ದೇವೆ’’ ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದರು. ಚಿತ್ರದ ನಿರ್ಮಾಪಕರಾದ ಭರತ್ ಕುಮಾರ್ ಮಾತನಾಡಿ “ನಾವಂದುಕೊಂಡತೆ ಚಿತ್ರ ಮೂಡಿಬಂದಿದೆ, ನಿರ್ದೇಶಕರ ಉತ್ಸಾಹ ಮತ್ತು ಡೆಡಿಕೇಶನ್ ಚಿತ್ರವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಸೇರಿರುವ ಈ ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಯುತ ರಾಜೀಶ್ ಅವರು ಟೀಸರ್ ರಿಲೀಸ್ ಮಾಡಿದ್ದು ಖುಷಿತಂದಿದೆ’’ ಅಂತಂದರು. ಕಾರ್ಯಕ್ರಮದಲ್ಲಿ ಕಾಲೇಜ್ ವಿಧ್ಯಾರ್ಥಿಗಳು ಇದೇ ಚಿತ್ರದ್ದೇ ಹಾಡಿಗೆ ತಮ್ಮದೇ ರೀತಿಯಲ್ಲಿ ಕೋರಿಯೋಗ್ರಫಿ ಮಾಡಿ ನೃತ್ಯಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ರಾಜೇಶ್ ಅವರು ಚಿತ್ರತಂಡದ ಸದಸ್ಯರನ್ನು ಸನ್ಮಾನಿಸಿದರು. ಇನ್ನು, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಾಯಕ ನಟನಾಗಿರುವ `ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ, ಉಡುಪಿ ಮೂಲದ ರಂಗಪ್ರತಿಭೆ ಅನನ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಇಲ್ಲಿ ನಾಯಕ `ಇರುವೆ’ಯಾದರೆ, ನಾಯಕಿ `ಸಕ್ಕರೆ’. ಈ ಇರುವೆ-ಸಕ್ಕರೆ ನಡುವೆ ಸುಲೈಮಾನ್ ಅನ್ನುವ ಖಳನಾಯಕ. ಪತ್ರಕರ್ತರಾದ ಚಕ್ರವರ್ತಿ ಚಂದ್ರಚೂಡ್ ಚಿತ್ರದ ಪ್ರಮುಖ ಖಳನಾಯಕನಾದ `ಸುಲೈಮಾನ್’ ಅನ್ನುವ ಪಾತ್ರಕ್ಕೆ ಬಣ್ಣ ಹಚ್ಚಿರೋದು ಚಿತ್ರದ ಇನ್ನೊಂದು ಹೈಲೈಟ್. ದಂಧೆ ಎಲ್ಲಿ ನಡೆಯುತ್ತಿದೆಯೋ ಅದೇ ಜಾಗದಲ್ಲಿ ಚಿತ್ರೀಕರಣನಡೆದಿರುವ ಈ ಚಿತ್ರಕ್ಕೆ, ಎಲ್.ಎನ್.ಶಾಸ್ತ್ರೀಯವರು ಸಂಗೀತ ನೀಡಿದ್ದಾರೆ. ಇದು ಅವರ ಕೊನೆಯ ಚಿತ್ರವಾಗಿದ್ದು, ಅವರು ಕಂಪೋಸ್ ಮಾಡಿ ಹಾಡಿರುವ `ನಿಂತುಹೋಯಿತೇ.. ಜೀವಗಾನ’ ಅನ್ನುವ ಹಾಡು ಈಗಾಗಲೇ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಟೀಸರ್ ಮೂಲಕ ಗಮನಸೆಳೆದಿರುವ `ಮಾಯಾವಿ’, ಟ್ರೈಲರ್ ಮೂಲಕ ಏನು ಹೇಳಲು ಹೊರಟಿದಿಯೋ ಕಾದು ನೋಡಬೇಕಿದೆ.