ಕಿರುತೆರೆ ಲೋಕದಲ್ಲಿ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದವರು ರಾಣಾ ಸುನೀಲ್ ಕುಮಾರ್ ಸಿಂಗ್. ಅದಕ್ಕೂ ಮುಂಚೆ ರಂಗಭೂಮಿಯಲ್ಲೂ ದೊಡ್ಡ ಮಟ್ಟದ ಹೆಸರು ಮಾಡಿದ್ದವರು. ಹೀಗೆ ರಂಗಭೂಮಿ, ಕಿರುತೆರೆಯಲ್ಲಿ ನಟ ನಿರ್ದೇಶಕನಾಗಿ ಸಾಕಷ್ಟು ಬ್ಯುಸಿಯಾಗಿದ್ದ ಸಂದರ್ಭದಲ್ಲೇ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟ ಸುನೀಲ್ ಕುಮಾರ್ ಸಿಂಗ್ ಕೆಲ ವರ್ಷಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ‘ಮದುವೆ ಮನೆ’ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ನಂತರ ಮತ್ತೆ ಸಿನಿಮಾ ಮಾಡಿದರೆ ಟ್ರೆಂಡ್ ಸೆಟ್ ಮಾಡುವಂಥದ್ದೇನಾದರೂ ಮಾಡಬೇಕು ಎಂದು ಕಾದು ಕುಳಿತಿದ್ದ ಸುನೀಲ್ ಕುಮಾರ್ ಅವರೀಗ ಸಿಕ್ಕಾಪಟ್ಟೆ ಪ್ಲಾನ್ ಮಾಡಿ www.ಮೀನಾ ಬಜಾರ್ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಿರುವ ಚಿತ್ರ ಇದಾಗಿದೆ. ತೆಲುಗಿನ ಪ್ರತಿ ಈಗಾಗಲೇ ಸಿದ್ದವಾಗಿದ್ದು ಅಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದು ಡಬ್ಬಿಂಗ್ ಸಿನಿಮಾವಲ್ಲ. ಒಬ್ಬ ಕಲಾವಿದ ಒಂದು ಡೈಲಾಗನ್ನು ಕನ್ನಡದಲ್ಲಿ ಹೇಳುವ ಜತೆಗೆ ಅದೇ ಡೈಲಾಗನ್ನು ಮತ್ತೆ ತೆಲುಗಿನಲ್ಲಿ ಹೇಳಬೇಕು. ಈ ರೀತಿ ತೆಗೆದುಕೊಂಡ ಶಾಟ್’ಗಳನ್ನು ಎಡಿಟಿಂಗ್ ಸ್ಟುಡಿಯೋದಲ್ಲಿ ಆಯಾ ಭಾಷೆಗಳಿಗೆ ತಕ್ಕಂತೆ ಬೇರ್ಪಡಿಸಿ ಎಡಿಟ್ ಮಾಡಲಾಗುವುದು. ಆಗ ಕನ್ನಡದ್ದೇ ಒಂದು ಸಿನಿಮಾ. ತೆಲುಗಿನದ್ದೇ ಇನ್ನೊಂದು ಸಿನಿಮಾ ಎಡಿಟಿಂಗ್ ಸ್ಟುಡಿಯೋದಿಂದ ಹೊರಬರುತ್ತದೆ. ನಂತರ ಕನ್ನಡದ ಚಿತ್ರಕ್ಕೆ ಬೆಂಗಳೂರಿನಲ್ಲಿ ಡಬ್ಬಿಂಗ್ ನಡೆದರೆ, ಹೈದರಾಬಾದ್ ನಲ್ಲಿ ತೆಲುಗು ವರ್ಷನ್ ಡಬ್ಬಿಂಗ್ ನಡೆಯುತ್ತದೆ. ಸೌಂಡ್ ಎಫೆಕ್ಟ್ ಮಾಡುವವರು ಸಹ ಕನ್ನಡಕ್ಕೆ ಒಂದು ಬಾರಿ ತೆಲುಗಿಗೆ ಇನ್ನೊಂದು ಬಾರಿ ಮಾಡಬೇಕು. ಇದೇ ರೀತಿ ಆರ್ ಆರ್, ಡಿ.ಟಿ.ಎಸ್, ಡಿ.ಐ ಎಲ್ಲ ವಿಭಾಗಗಳಿಗೂ ಅನ್ವಯವಾಗುತ್ತದೆ. ಈಗಾಗಲೇ ಎಲ್ಲ ತಾಂಥ್ರಿಕ ಕೆಲಸಗಳನ್ನೂ ಪೂರೈಸಿಕೊಂಡು www.ಮೀನಾ ಬಜಾರ್ ಚಿತ್ರದ ತೆಲುಗು ಆವೃತ್ತಿ ತಯಾರಾಗಿದೆ. ಅತಿ ಶೀಘ್ರದಲ್ಲೇ ಕನ್ನಡದ ಮೊದಲ ಪ್ರತಿ ಕೂಡಾ ಸಿದ್ಧಗೊಳ್ಳಲಿದೆ ಎಂದು ರಾಣಾ ಸುನೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
www.ಮೀನಾ ಬಜಾರ್ ಎರಡು ವರ್ಷನ್ ಗಳನ್ನೂ ರಾಣಾ ಸುನೀಲ್ ಕುಮಾರ್ ಅವರೇ ರಚಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಸಿ.ಎನ್. ಬಂಡವಾಳ ಹೂಡಿದ್ದಾರೆ. ಉಳಿದಂತೆ ಮ್ಯಾಥ್ಯೂ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ ಚಿತ್ರಕ್ಕಿದೆ. ರಾಣಾ ಸುನೀಲ್ ಕುಮಾರ್ ಸಿಂಗ್, ರಾಜೇಶ್ ನಟರಂಗ, ವೈಭವಿ ಜೋಶಿ, ಶ್ರೀಜಿತ ಘೋಷ್, ಮಧುಸೂದನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.