ಮದುವೆ ಬಳಿಕ ನಟಿ ಮೇಘನಾ ರಾಜ್ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಚಿರು ಸರ್ಜಾ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದ ನಟಿ ಮುಂದೆ ಸಿನಿಮಾ ಮಾಡ್ತಾರಾ ಇಲ್ವಾ ಎಂಬ ಕುತೂಹಲ ಇತ್ತು. ಅದಕ್ಕೀಗ ಅಧಿಕೃತವಾಗಿ ಮೇಘನಾ ಉತ್ತರ ನೀಡಿದ್ದಾರೆ. ಸೃಜನ್ ಲೋಕೇಶ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಮೇಘನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮೇ 6 ರಂದು ಈ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಸದ್ಯಕ್ಕೆ ಹೆಸರಿಟ್ಟಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಮೇಘನಾ ”ಎಲ್ಲರಿಗೂ ಹಲೋ….ಮದುವೆ ಆದ ಬಳಿಕ ಸಿನಿಮಾ ಮಾಡ್ತೀರಾ ಎಂದು ಕೇಳುತ್ತಿದ್ದ ಎಲ್ಲರಿಗೂ ನಾನು ಸಿನಿಮಾದಲ್ಲಿ ಮುಂದುವರಿಯುತ್ತಿದ್ದೇನೆ ಎಂದು ತಿಳಿಸುತ್ತಿದ್ದೇನೆ. ನನ್ನ ಮುಂದಿನ ಸಿನಿಮಾ ಘೋಷಿಸಲು ತುಂಬಾ ಖುಷಿ ಆಗ್ತಿದೆ. ನಿನ್ನೆಯೇ ಚಿತ್ರೀಕರಣ ಆರಂಭವಾಗಿದೆ” ಎಂದು ತಿಳಿಸಿದ್ದಾರೆ. ರವಿ ಹಿಸ್ಟರಿ ಖ್ಯಾತಿಯ ಮಧುಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮದುವೆ ಆದ ಬಳಿಕ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ತೆರೆಕಂಡಿತ್ತು. ಅದಾದ ನಂತರ ಮೇಘನಾ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಮತ್ತೊಂದೆಡೆ ತಮ್ಮದೇ ಬ್ಯಾನರ್ ನಲ್ಲಿ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಮಾಡುತ್ತಿರುವ ಸೃಜನ್ ಲೋಕೇಶ್, ಮೇಘನಾ ಜೊತೆಯೂ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದಲ್ಲಿ ಭಾನುಮತಿ ಪಾತ್ರ ನಿರ್ವಹಿಸಿದ್ದಾರೆ ಮೇಘನಾ ರಾಜ್.