ಬಣ್ಣದ ಲೋಕದಲ್ಲಿ ಮದುವೆಗೂ ಮುನ್ನವಿದ್ದ ಬೇಡಿಕೆ, ಹುರುಪು, ಮದುವೆಯಾದ ಮೇಲೆ ಇರುವುದು ನಾಯಕಿಯರ ವಿಚಾರದಲ್ಲಿ ತೀರಾ ಕಡಿಮೆ. ಕೆಲವರು ನಟನೆಗೆ ಪೂರ್ಣ ವಿರಾಮವನ್ನಿಟ್ಟು ಪುಲ್ ಟೈಮ್ ಗೃಹಿಣಿಯಾಗಿಬಿಡುತ್ತಾರೆ. ಆದರೆ ಮತ್ತೂ ಕೆಲವರು ಧೈರ್ಯ ಮಾಡಿ ಮದುವೆಯಾದ ಮೇಲೂ ನಟಿಯಾಗಿ ಅಲ್ಲದೇ ಮತ್ತಷ್ಟು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಅಂತಹ ಕನ್ನಡದ ಪ್ರಮುಖ ನಟಿಯರ ಪೈಕಿ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಪ್ರಮುಖರು. ಮದುವೆಯಾದ ಬಳಿಕ ಸೃಜನ್ ಲೋಕೇಶ್ ಜತೆಯಾಗಿ ಸಿನಿಮಾವನ್ನು ಒಪ್ಪಿಕೊಂಡಿದ್ದ ಮೇಘನಾ, ಗಂಡನ ಸಿಂಗ ಚಿತ್ರಕ್ಕೂ ಹಾಡೊಂದನ್ನು ಹಾಡಿದ್ದರು. ಪ್ರಸ್ತುತ ನಿರ್ಮಾಣದ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿದ್ದಾರಂತೆ. ಹೌದು. ಮಜಾ ಟಾಕೀಸ್ ಖ್ಯಾತಿಯ ಪವನ್ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಪುಟಾಣಿ ಪಂಟರ್’ ಎಂಬ ಮಕ್ಕಳ ಚಿತ್ರಕ್ಕೆ ಮೇಘನಾ ರಾಜ್ ಹಣ ಹೂಡುತ್ತಿದ್ದಾರೆ.
ಈ ಕುರಿತು ಖುಷಿಯಿಂದ ಮಾತನಾಡಿರುವ ಮೇಘನಾ, ‘ಮೊದಲು ನಟಿ, ಬಳಿಕ ಗಾಯಕಿ ಹಾಗೂ ಈಗ ನಿರ್ಮಾಪಕಿಯಾಗಿ ವಿವಿಧ ಜವಾಬ್ದಾರಿ ಗಳನ್ನು ನಿಭಾಯಿಸುತ್ತಿರುವುದು ಖುಷಿ ನೀಡಿದೆ. ನಿರ್ಮಾಪಕಿಯಾದದ್ದು ಆಕಸ್ಮಿಕ. ಈ ಬಗ್ಗೆ ಮೊದಲು ನಾನು ಯೋಚಿಸಿರಲಿಲ್ಲ. ಆದರೆ ಮದುವೆಯಾದ ಬಳಿಕ ಬಿಡುವಾಗಿದ್ದೇನೆ ಎಂಬ ಕಾರಣಕ್ಕಾಗಿ ನಿರ್ಮಾಪಕಿಯಾದದ್ದು ಅಲ್ಲ. ಈಗಾಗಲೇ ನಟಿಯಾಗಿ ಹಾಗೂ ಗಾಯಕಿಯಾಗಿ ಒಂದು ಕೈ ನೋಡಿದ್ದಾಗಿದೆ ಈಗ ನಿರ್ಮಾಪಕಿಯಾಗಿ ಇದೊಂದು ಹೊಸ ಅನುಭವ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಮೇಘನಾ..
“ಒಂದು ಹೊಸತನವಿರುವ ಕಥಾವಸ್ತುವಿಗಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ಪವನ್ ತಮ್ಮ ಕಥೆಯೊಂದಿಗೆ ಭೇಟಿಯಾದರು. ಕಥೆ ಅತ್ಯುತ್ತಮವಾಗಿದೆ ಎಲ್ಲರೂ ಇಷ್ಟಪಡುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ಇದಾಗುತ್ತದೆ ಎನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ. ಖಂಡಿತವಾಗಿ ಇದು ಕಲಾತ್ಮಕ ಚಿತ್ರ ಅಥವಾ ಪ್ರಶಸ್ತಿಗಾಗಿ ನಿರ್ಮಿಸುತ್ತಿರುವ ಚಿತ್ರವಲ್ಲ. ಸಂಪೂರ್ಣ ಮನರಂಜನೆಯನ್ನು ಕೊಡುವಂತಹ ಚಿತ್ರ ಇದಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ. “ಚಿತ್ರದಲ್ಲಿ 3 ಸ್ಲಮ್ ಹುಡುಗರು ಬದಲಾವಣೆಗೆ ಕಾರಣವಾಗುವ ವಿಶಿಷ್ಟ ಕಥಾವಸ್ತುವನ್ನು ನವಿರಾಗಿ ನಿರೂಪಿಸಲಾಗಿದೆ. ಈ ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೆ ಮುನ್ನವೇ ಮಕ್ಕಳಿಗೆ ರಿಹರ್ಸಲ್ ವರ್ಕ್ ಶಾಪ್ ನಡೆಸಿದ್ದೇವೆ” ಎಂದರು.
ಮೇಘನಾ ರಾಜ್, ಸೃಜನ್ ಲೋಕೇಶ್ ಅವರೊಂದಿಗೆ ಅಭಿನಯಿಸುತ್ತಿರುವ ಹೊಸ ಚಿತ್ರ ಇದೇ ಏಪ್ರಿಲ್ 26ರಂದು ಪ್ರಾರಂಭವಾಗಲಿದ್ದು ಅದೇ ವೇಳೆಯಲ್ಲಿ ನಿರ್ಮಾಪಕಿಯಾಗಿ ‘ಪುಟಾಣಿ ಪಂಟರ್’ ಚಿತ್ರವನ್ನು ನೋಡಿಕೊಳ್ಳುವುದರಿಂದ ಜವಾಬ್ದಾರಿ ಹೆಚ್ಚಿದೆ ಎನ್ನುತ್ತಾರೆ. ಚಿತ್ರರಂಗದಲ್ಲಿ ಒಬ್ಬ ನಾಯಕಿಯ ಕಾಲಾವಧಿ ಹೆಚ್ಚೆಂದರೆ ಐದು ವರ್ಷ ಎನ್ನುವ ಮಾತೊಂದಿದೆ. ಈ ಬಗ್ಗೆ ಕೇಳಿದಾಗ, “ನನ್ನ ತಾಯಿ ಪ್ರಮೀಳಾ ಜೋಷಾಯ್ ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಮದುವೆಯಾದ ನಂತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಭಾರತಿ ಅಮ್ಮ, ಸುಮಲತಾ ಆಂಟಿ ಮುಂತಾದವರು ಕೌಟುಂಬಿಕ ಜವಾಬ್ದಾರಿಯ ಜೊತೆಗೆ ನಿರಂತರವಾಗಿ ಅಭಿನಯಿಸುತ್ತಿದ್ದಾರೆ. ಮದುವೆಯಾದೊಡನೆ ಎಲ್ಲವೂ ಮುಗಿಯಿತು ಎಂಬುದನ್ನು ನಾನು ಒಪ್ಪುವುದಿಲ್ಲ” ಎನ್ನುತ್ತಾರೆ ಮೇಘನಾ. “ನಾನು ಮದುವೆಗೂ ಮುನ್ನ ಮಾಡಿಕೊಂಡ ಕಮಿಟ್ ಮೆಂಟ್ಸ್ ಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ತೆಗೆದುಕೊಂಡೆ. ಬಳಿಕ ಹೊಸ ಸಬ್ಜೆಕ್ಟ್ ಗಾಗಿ ಕಾಯುತ್ತಿದ್ದೆ ಹಾಗಾಗಿ ಸ್ವಲ್ಪ ತಡವಾಯಿತು. ನನ್ನ ಚಟುವಟಿಕೆಗಳಿಗೆ ನನ್ನ ಕುಟುಂಬದ ಸಹಕಾರ ಬಹಳ ದೊಡ್ಡದು” ಅಂತಾರೆ ಮೇಘನಾ ರಾಜ್.
No Comment! Be the first one.