ಹಿರಿಯ ಹಾಸ್ಯ ನಟ ಮೈಕಲ್ ಮಧು ತೀರಿಕೊಂಡಿದ್ದಾರೆ. ತಮ್ಮ ಆಕರ್ಷಕ ಶೈಲಿಯ ಮಾತುಗಾರಿಕೆ ಮತ್ತು ನಟನೆಯಿಂದ ಎಲ್ಲರನ್ನೂ ಸೆಳೆದಿದ್ದ ಮಧು ಒಂದಷ್ಟು ನೆನಪುಗಳನ್ನು ಉಳಿಸಿ ಎದ್ದು ನಡೆದಿದ್ದಾರೆ. ಚಿತ್ರರಂಗದಲ್ಲಿ ಪ್ರತಿಭೆಯಿದ್ದವರು ಹೇಗೆಲ್ಲಾ ಇರಬಾರದು ಅನ್ನೋದಕ್ಕೆ ಮೈಕಲ್ ಮಧು ಮಾಡಲ್ ಆಗಿದ್ದು ಮಾತ್ರ ನಿಜಕ್ಕೂ ಬೇಸರದ ವಿಚಾರ. ನಾಳೆಗೆ ಓಂ ಸಿನಿಮಾ ರಿಲೀಸ್ ಆಗಿ ಇಪ್ಪತ್ತೈದು ವರ್ಷವಾಗುತ್ತಿದೆ. ಈ ಸಿನಿಮಾದಲ್ಲಿ ನಟಿಸಿ, ಕೆಲಸ ಮಾಡಿದ್ದ ಮಧು ಇವತ್ತು ಮಣ್ಣಲ್ಲಿ ಮಲಗಿದ್ದಾರೆ…
ಮೈಕಲ್ ಮಧು ಎನ್ನುವ ಕಾಮಿಡಿ ನಟನ ಅಧ್ಯಾಯ ಮುಗಿದಿದೆ!
ತಮ್ಮ ವಿಲಕ್ಷಣ ಬಟ್ಟೆ, ವಿಚಿತ್ರ ಕ್ಯಾರೆಕ್ಟರು, ಬಾಡಿ ಲಾಂಗ್ವೇಜಿನಿಂದಲೇ ಫೇಮಸ್ಸಾದ ನಟ ಮೈಕಲ್ ಮಧು. ಕನ್ನಡ ಚಿತ್ರರಂಗದಲ್ಲಿ ಈವರೆಗೂ ಯಾರೂ ಮಾಡದ ಸಾಹಸ, ಸಾಧನೆಗಳನ್ನು ಮಾಡಿ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದವರು ಕೆ.ವಿ. ರಾಜು. ಇವರು ಪರಿಚಯಿಸಿದ ಎಷ್ಟೋ ಜನ ಕಲಾವಿದರು ಸ್ಟಾರ್ಗಳಾದರು. ಜೊತೆಗಿದ್ದ ಸಹಾಯಕರು ದೊಡ್ಡ ಮಟ್ಟದ ಡೈರೆಕ್ಟರುಗಳಾದರು. ಇದೇ ಕೆ.ವಿ. ರಾಜು ಅವರ ಸುಂದರಕಾಂಡ ಸಿನಿಮಾದ ಮೂಲಕ ಪರದೆ ಮೇಲೆ ಕಾಣಿಸಿಕೊಂಡ ಮೈಕಲ್ ಮಧು ಮಾತ್ರ ಮೇಲೇಳಲೇ ಇಲ್ಲ!
ಮಧು ಬೆಂಗಳೂರಿನ ಚಾಮರಾಜಪೇಟೆಯ ಒಂದನೇ ಬೀದಿಯಲ್ಲಿ ಬೆಳೆದವರು. ಅದೇ ಚಾಮರಾಜಪೇಟೆಯಲ್ಲೇ ಡ್ಯಾನ್ಸ್ ಸ್ಕೂಲ್ ನಡೆಸಿಕೊಂಡಿದ್ದರು. ಆ ಕಾಲಕ್ಕೆ ಸಿನಿಮಾರಂಗಕ್ಕೆ ಬರಬೇಕು ಅಂತಾ ಬಯಸುವ ಜನ ಮೈಕಲ್ ಬಳಿ ಹೋಗಿ ಡ್ಯಾನ್ಸ್ ಕಲಿಯುತ್ತಿದ್ದರು. ವಿಶ್ವಪ್ರಿಸಿದ್ಧಿ ಪಡೆದಿದ್ದ ಜಾಕ್ಸನ್ನಂತೆ ಮಧು ಸ್ಟೆಪ್ಪು ಹಾಕುತ್ತಿದ್ದ, ಅವನಂತೆಯೇ ಟೋಪಿ ಧರಿಸಿ ಪೋಸು ಕೊಡುತ್ತಿದ್ದ, ಜಾಕ್ಸನ್ನ ಅಭಿಮಾನಿಯಾಗಿದ್ದ ಕಾರಣಕ್ಕೆ ಜನ ಮಧು ಜೊತೆಗೆ ಮೈಕಲ್ ಸೇರಿಸಿದ್ದರು. ಹಾಗೇ ಫೇಮಸ್ಸೂ ಆದ. 1990ರಲ್ಲಿ ಕೆ.ವಿ. ರಾಜು ಈತನ ಪ್ರತಿಭೆಯನ್ನು ಕಂಡು ಶಂಕರ್ ನಾಗ್ ನಟನೆಯ ಸುಂದರ ಕಾಂಡ ಚಿತ್ರದಲ್ಲಿ ಛಾನ್ಸು ಕೊಟ್ಟರು. ಕೆ.ವಿ. ರಾಜು ಸಿನಿಮಾದಲ್ಲಿ ಮಾಡಿದ್ದಾರೆ ಅಂದರೆ ಅದೊಂಥರಾ ಸರ್ಟಿಫಿಕೇಟ್ ಇದ್ದಂತೆ. ಹೀಗಾಗಿ ಕಾಶೀನಾಥ್ ಮುಂತಾದವರೂ ಅವಕಾಶ ಕೊಟ್ಟರು. ತಿಕ್ಕಲುತಿಕ್ಕಲಾಗಿ ಯಾವುದಾದರೂ ಕ್ಯಾರೆಕ್ಟರ್ ಇದ್ದರೆ, ಅದು ಮೈಕಲ್ ಮಧುಗಾಗಿ ಮೀಸಲಾಗುತ್ತಿತ್ತು!
ಇಂಥಾ ಮೈಕಲ್ ಮಧು ಕ್ರಮೇಣ ಡ್ಯಾನ್ಸ್ ಕ್ಲಾಸಿನ ಬಾಗಿಲು ಮುಚ್ಚಿ ಫುಲ್ ಟೈಂ ಗಾಂಧೀನಗರದಲ್ಲೇ ಬಿಡಾರ ಹೂಡಿದ. ಅಷ್ಟರಲ್ಲಿ ಉಪೇಂದ್ರ ಸ್ವತಂತ್ರ ನಿರ್ದೇಶಕರಾದರಲ್ಲಾ… ಅವರೊಟ್ಟಿಗೆ ನಿರ್ದೇಶನದ ವಿಭಾಗದಲ್ಲೂ ಮಧು ತೊಡಗಿಸಿಕೊಂಡ. ಕಣಿಯರ ಸಮುದಾಯದ ಹುಡುಗ ಚಿತ್ರರಂಗಕ್ಕೆ ಬಂದು ಹಂತ ಹಂತವಾಗಿ ಹೆಸರು ಮಾಡಲು ಶುರುಮಾಡಿದ್ದ. ಗೆಳೆಯರೆಲ್ಲಾ ಸೇರಿ ಸವಿತಾ ಸಮಾಜದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಮನೆಯ ಹುಡುಗಿಯನ್ನು ನೋಡಿ ಮದುವೆಯನ್ನೂ ಮಾಡಿಸಿದರು.
ಮೈಕಲ್ ಮಧು ಅದ್ಭುತ ಮಾತುಗಾರ. ಎದುರಿಗೆ ಯಾರೇ ಸಿಕ್ಕರೂ ಅವರ ಸ್ನೇಹ ಸಂಪಾದಿಸುತ್ತಿದ್ದರು. ಕಾನಿಷ್ಕಾ ಅಂಗಳದಲ್ಲೇ ಹೆಚ್ಚಾಗಿ ಅಡ್ಡಾಡುತ್ತಿದ್ದ ಮೈಕಲ್ಗೆ ಸಿನಿಮಾ ರಂಗಕ್ಕೆ ಬರುವ ಎಲ್ಲರ ಪರಿಚಯವಿರುತ್ತಿತ್ತು. ಸದಾ ಹೊಸಬರಿಗೆ ಮಾರ್ಗದರ್ಶನ ನೀಡುತ್ತಿದ್ದ ಮಧು ಸ್ವತಃ ತಾನು ಒಳ್ಳೇ ಮಾರ್ಗ ಅನುಸರಿಸದೇ ಹೋಗಿದ್ದು ದುರಂತ. ಕುಡಿತವನ್ನು ಚಟವಾಗಿಸಿಕೊಳ್ಳದಿದ್ದರೆ ಮೈಕಲ್ ಮಧು ಕನ್ನಡ ಚಿತ್ರರಂಗದ ಗೌರವಾನ್ವಿತ ಕಲಾವಿದನಾಗಿ ನಿಲ್ಲುತ್ತಿದ್ದ ಅನ್ನೋದರಲ್ಲಿ ಡೌಟೇ ಇಲ್ಲ. ಕುಡಿಯದೇ ಇದ್ದರೆ ದೇವರಂತಿರುತ್ತಿದ್ದ ಮಧು ನಾಲಿಗೆ ಅಮಲೇರುತ್ತಿದ್ದಂತೇ ನೇತಾಡಲು ಆರಂಭಿಸುತ್ತಿತ್ತು. ʼಉಪೇಂದ್ರನ್ನ ಚಾಮರಾಜಪೇಟೆಯಿಂದ ಗಾಂಧಿನಗರಕ್ಕೆ ಕರಕೊಂಡು ಬಂದಿದ್ದೇ ನಾನು. ನಾನಿಲ್ಲದಿದ್ದರೆ ಅವನು ಉದ್ದಾರ ಆಗುತ್ತಿರಲಿಲ್ಲʼ ಅಂತಾ ಮಾತು ಶುರುಮಾಡಿಬಿಡುತ್ತಿದ್ದ. ನೋಡ ನೋಡುತ್ತಿದ್ದಂತೇ ಈತನ ಮುಂದೆ ಬಂದ ಸಣ್ಣ ಹುಡುಗರೆಲ್ಲಾ ದೊಡ್ಡ ಮಟ್ಟಕ್ಕೆ ಏರಿದರು. ಓಂ ಸಿನಿಮಾದಿಂದ ನಟನೆ ಆರಂಭಿಸಿದ ಸಾಧು ಕೋಕಿಲಾಗೆ ಸ್ಟಾರ್ ವರ್ಚಸ್ಸು ಸಿಕ್ಕಿತು. ಅವಕಾಶ ಕೊಡಿಸು ಅಂತಾ ಮಧುಗೆ ಮಸ್ಕಾ ಹೊಡೆಯುತ್ತಿದ್ದ ಬುಲೆಟ್ ಪ್ರಕಾಶ ಕನ್ನಡ ಚಿತ್ರರಂಗದ ಸ್ಟಾರ್ ಕಮಿಡಿಯನ್ ಆದ. ಜೊತೆಗೇ ನಟಿಸುತ್ತಿದ್ದ ಶರಣ್ ಹೀರೋ ಅನ್ನಿಸಿಕೊಂಡರು. ಮಧು ಪಾಲಿಗೆ ಯಾವಾಗ ಕುಡಿತ, ಮಾತು, ಶೋಕಿ ಅನ್ನೋದು ವ್ಯಸನವಾಯ್ತೋ ಸಿನಿಮಾದ ಮಂದಿ ಸೈಲೆಂಟಾಗಿ ದೂರವಿಟ್ಟರು. ಸಿನಿಮಾ ಡೈರೆಕ್ಷನ್ ಮಾಡ್ತೀನಿ ಅಂತೆಲ್ಲಾ ಓಡಾಡಿದರೂ ಅದು ಸಾಧ್ಯವಾಗಲೇ ಇಲ್ಲ. ಇಷ್ಟೆಲ್ಲದರ ನಡುವೆಯೂ ಮೈಕಲ್ ಮಧು ಒಳಗಿದ್ದ ಪ್ರತಿಭೆಯ ಕಾರಣಕ್ಕೆ ಸಾಕಷ್ಟು ಜನ ಗೌರವಿಸುತ್ತಿದ್ದರು.
ಸಿನಿಮಾರಂಗದ ಯಾರೇ ತೀರಿಕೊಂಡರೂ ಮಧು ಅಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಣ್ಣೀರು ಮಿಡಿದು, ʼಒಬ್ಬೊಬ್ಬರೇ ಹೋಗುತ್ತಿದ್ದಾರಲ್ಲಾʼ ಅಂತಾ ಸಂಕಟ ಪಡುತ್ತಿದ್ದರು. ಚಿತ್ರರಂಗಕ್ಕೆ ಬಂದು, ಪ್ರತಿಭೆಯಿದ್ದೂ ತಾನೇನೂ ಸಾಧಿಸಲು ಆಗಲಿಲ್ಲವಲ್ಲಾ ಅನ್ನೋ ನೋವು ಮಧು ಮನಸ್ಸಲ್ಲಿ ಬೇರೂರಿತ್ತು. ಬದುಕಬೇಕು ಅನ್ನೋ ಆಶಾಭಾವನೆಯನ್ನೂ ಈತ ಕಳೆದುಕೊಂಡಿದ್ದರು. ಚಕ್ರವರ್ತಿ ಚಿತ್ರದ ನಿರ್ದೇಶಕ ಚಿಂತನ್ ಅವರಿಗೆ ನಿನ್ನೆ ಮಧ್ಯಾಹ್ನ ಕರೆ ಮಾಡಿದ ಮಧು ಹಳೆಯದನ್ನೆಲ್ಲಾ ನೆನಪಿಸಿಕೊಂಡು ಮುಕ್ಕಾಲು ಗಂಟೆ ಮಾತಾಡಿದ್ದಾರೆ. ಮಧು ಅವರ ಹಳೇ ಗೆಳೆಯರೆಲ್ಲಾ ಯಾರೇ ಸಿಕ್ಕರೂ ʼಹಮ್ ಹೋಂಗೇ ಕಾಮ್ ಯಾಬ್ ಏಕ್ ದಿನ್ (ನಾವು ಗೆದ್ದೇ ಗೆಲ್ತೀವಿ ಒಂದು ದಿನ)ʼ ಅಂತಾ ಪರಸ್ಪರ ಹೇಳಿಕೊಳ್ಳುವುದು ರೂಢಿ. ಚಿಂತನ್ ಅವರೊಟ್ಟಿಗೆ ಖುಷಿಯಿಂದ ಮಾತಾಡಿದ ಮಧು ʼನಾವು ಗೆದ್ದೇ ಗೆಲ್ತೀವಿ ಒಂದು ದಿನʼ ಅಂತಾ ಹೇಳಿ ಫೋನ್ ಕಟ್ ಮಾಡಿದ್ದರು. ಮಗಳನ್ನು ಕರೆದು ʼನಾನು ಸತ್ತರೆ ನನಗೆ ಹೂ ಹಾಕ್ತೀರಾ? ಸ್ಮಶಾನದ ತನಕ ಬಂದು ಕಳಿಸಿಕೊಡ್ತೀರಾ?ʼ ಅಂತಾ ಬಡಬಡಿಸಿದ್ದರು. ಮೂರು ದಿನದಿಂದ ವಿಪರೀತ ಕುಡಿದಿರುವ ಅಪ್ಪ ತಮಾಷೆಗೆ ಹಾಗನ್ನುತ್ತಿರಬೇಕು ಅಂತಾ ಮನೆಯವರು ಅಂದುಕೊಂಡಿದ್ದರು. ಖುರ್ಚಿಯಲ್ಲಿ ಕುಳಿತಿದ್ದ ಮಧು ಹಾಗೇ ನೆಲಕ್ಕೆ ಒರಗಿದ್ದರು. ಎಬ್ಬಿಸಿ ನೋಡಿದರೆ ಮೈ ತಣ್ಣಗಾಗಿತ್ತು. ಬಿದ್ದ ರಭಸಕ್ಕೆ ಗೋಡೆಗೆ ತಲೆ ಬಡಿದಿತ್ತಾ? ಅಥವಾ ಕುಂತಲ್ಲೇ ಹೃದಯಾಘಾತವಾಗಿ ಕೆಳಗೆ ಬಿದ್ದರಾ ಗೊತ್ತಿಲ್ಲ. ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೈಕಲ್ ಮಧು ಪ್ರಾಣ ಪಕ್ಷಿ ಹಾರಿಹೋಗಿತ್ತು. ʼಗೆದ್ದೇ ಗೆಲ್ಲುವೆ ಒಂದು ದಿನʼ ಅಂತಾ ಹೇಳುತ್ತಿದ್ದ ಮಧು ದೇಹ ಸೋತು ಮಲಗಿತ್ತು…