ಇತ್ತೀಚಿಗೆ ಜಮ್ಮು -ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪಾಕಿಸ್ತಾನ, ಭಾರತದೊಂದಿಗಿನ ಹಲವು ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತ-ಪಾಕ್ ಸಂಬಂಧ ಮೊದಲಿನಂತಿಲ್ಲ. ಭಾರತೀಯ ಸಿನಿಮಾಗಳನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಕೂಡದೆಂದು ಪಾಕಿಸ್ತಾನವೇ ಸಂಬಂಧಪಟ್ಟವರಿಗೆ ಆದೇಶಿಸಿದೆ. ಈ ಮಧ್ಯೆ ಭಾರತದ ಖ್ಯಾತ ಗಾಯಕ ಮಿಕಾ ಸಿಂಗ್ ಕರಾಚಿಯಲ್ಲಿ ಇವೆಂಟ್ವೊಂದರಲ್ಲಿ ಭಾಗಿಯಾಗಿ ನಿಷೇಧಕ್ಕೆ ಒಳಗಾಗಿದ್ದಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಸಂಬಂಧಿಯೊಬ್ಬರು ಕರಾಚಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಮಿಕಾ ಸಿಂಗ್ ಭಾಗವಹಿಸಿದ್ದರು. ಹೀಗಾಗಿ ಆಲ್ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್ ಮಿಕಾ ಸಿಂಗ್ರನ್ನು ಬಾಲಿವುಡ್ ಚಿತ್ರರಂಗದಿಂದ ಬ್ಯಾನ್ ಮಾಡಿದೆ. ಉಭಯ ದೇಶಗಳ ಮಧ್ಯೆ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಮಿಕಾ ಸಿಂಗ್ ಕೇವಲ ದುಡ್ಡಿಗಾಗಿ ರಾಷ್ಟ್ರಪ್ರೇಮ ಮರೆತು ಅಲ್ಲಿ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮಿಕಾ ಸಿಂಗ್ ಯಾವುದೇ ರೀತಿಯ ಪ್ರೊಡಕ್ಷನ್ ಹೌಸ್ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಸಂಗೀತ ಸಂಸ್ಥೆಗಳು ಮತ್ತು ಆನ್ಲೈನ್ ಸಂಗೀತ ಸಂಸ್ಥೆಗಳು, ಎಲ್ಲಾ ರೀತಿಯ ಎಂಟರ್ಟೈನ್ಮೆಂಟ್ ಕಂಪನಿಗಳು, ಸಿನಿಮಾಗಳು, ಮ್ಯೂಸಿಕ್ ಕಾಂಟ್ರ್ಯಾಕ್ಟ್ ಕಂಪನಿಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎಂದು ಎಐಸಿಡಬ್ಲ್ಯೂಎ ಆದೇಶ ಹೊರಡಿಸಿದೆ. ಒಂದು ವೇಳೆ ಎಐಸಿಡಬ್ಲ್ಯೂಎ ಆದೇಶವನ್ನು ಉಲ್ಲಂಘಿಸಿ ಯಾರಾದರೂ ಅವರೊಂದಿಗೆ ಕೆಲಸ ಮಾಡಿದ್ದೇ ಆದಲ್ಲಿ ಅವರ ವಿರುದ್ಧವೂ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ತಿಳಿಸಿದ್ದಾರೆ. ಬೇಕಂತಲೇ ಕೆರೆದು ಗಾಯ ಮಾಡಿಕೊಳ್ಳುವುದೆಂದರೆ ಮೋಸ್ಟ್ ಲೀ ಇದೇ ಇರಬೇಕು.