ಕರ್ನಾಟಕ ಪೊಲೀಸ್ ಇಲಾಖೆ ಎಂದೂ ಮರೆಯದೊಂದು ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಈ ಚಿತ್ರದ ಟೀಸರ್ ಬಿಡುಗಡೆಯ ನೆಪದಲ್ಲಿ ನಿರ್ದೇಶಕ ರಘುರಾಮ್ ದಕ್ಷ ಪೊಲೀಸ್ ಅಧಿಕಾರಿಗಳ ಮಾಹಾ ಸಂಗಮಕ್ಕೆ ನಾಂದಿ ಹಾಡಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲೇರೋ ಪ್ರತೀ ಪ್ರಕರಣಗಳೂ ಅಧಿಕಾರಿಗಳನ್ನು ರೋಷಾವೇಶದಿಂದ ಮುನ್ನುಗ್ಗುವಂತೆ ಮಾಡುತ್ತದಲ್ಲಾ? ಆದರೆ ರಘುರಾಮ್ ಚಿತ್ರವಾಗಿಸಿಕೊಂಡಿರೋ ಈ ಪ್ರಕರಣ ಮಾತ್ರ ತನಿಖಾಧಿಕಾರಿಗಳನ್ನೇ ಹನಿಗಣ್ಣಾಗುವಂತೆ ಮಾಡಿತ್ತು. ಇಂಥಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸೂಪ್ ಕಾಪ್ಗಳ ಸಮ್ಮಿಲನವಾದದ್ದು ನಿಜಕ್ಕೂ ಅರ್ಥಪೂರ್ಣ.
ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಮಿಸ್ಸಿಂಗ್ ಬಾಯ್ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಗೊಳಿಸಿದವರು ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್. ಮುಖ್ಯ ಅತಿಥಿಗಳಾಗಿ ಆಗಮಿಸಿ, ಟೀಸರ್ ಬಿಡುಗಡೆ ಮಾಡಿ ಈ ಚಿತ್ರಕ್ಕೆ ಶುಭ ಕೋರುತ್ತಲೇ ಪೊಲೀಸ್ ಇಲಾಖೆ ಮತ್ತು ನಾಗರಿಕರ ಸಂಬಂಧಗಳ ಸೂಕ್ಷ್ಮ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್. ಇಂಥಾದ್ದೊಂದು ಮನ ಮಿಡಿಯುವ ಕಥೆಯನ್ನು ರಘುರಾಮ್ ಅವರಿಗೆ ನೀಡಿ, ರಿಯಲ್ಲಾಗಿ ಈ ಘಟನೆಯ ತನಿಖಾಧಿಕಾರಿಯಾಗಿದ್ದ ನಿವೃತ್ತ ಡಿಸಿಪಿ ಲವಕುಮಾರ್ ಸನ್ಮಾನಿತರಾದ ಘಳಿಗೆ… ಒಟ್ಟಾರೆಯಾಗಿ ರಘುರಾಮ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ವಿಭಿನ್ನವಾಗಿಯೇ ಆಯೋಜಿಸಿದ್ದರು.
ಈ ಹಿಂದೆ ಮಿಸ್ಸಿಂಗ್ ಬಾಯ್ ಚಿತ್ರದ ಬಗ್ಗೆ ಬಿಬಿ ಅಶೋಕ್ ಕುಮಾರ್ ಸೇರಿದಂತೆ ದಕ್ಷ ಅಧಿಕಾರಿಗಳೆಲ್ಲ ಹಂಚಿಕೊಂಡಿದ್ದ ಅಭಿಪ್ರಾಯಗಳನ್ನೂ ಮತ್ತೆ ಅನಾವರಣಗೊಳಿಸಲಾಯಿತು. ಜೊತೆಗೆ ಒಂದು ಅಚ್ಚುಕಟ್ಟಾದ ಮೇಕಿಂಗ್ ವೀಡಿಯೋವನ್ನೂ ಕೂಡಾ ರಘುರಾಮ್ ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಂಥಾದದ್ದೊಂದು ಮನ ಮಿಡಿಯುವ ಪ್ರಕರಣವನ್ನು ದಕ್ಷತೆಯಿಂದಲೇ ಹ್ಯಾಂಡಲ್ ಮಾಡಿದ್ದ ನಿವೃತ್ತ ಡಿಸಿಪಿ ಲವಕುಮಾರ್ ಅವರನ್ನೂ ಕೂಡಾ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿದ ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಅವರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿಯೇ ದಿನದ ಇಪ್ಪತ್ನಾಲಕ್ಕು ಘಂಟೆ ಕಾರ್ಯಪ್ರವೃತ್ತರಾಗಿರೋ ಪೊಲೀಸರ ಬಗ್ಗೆ ಜನರಿಗೆ ಪ್ರೀತಿ ಇರಬೇಕಾಗಿತ್ತು. ಆದರೆ ಆ ಜಾಗದಲ್ಲಿ ಭಯವನ್ನು ಕೂರಿಸುವ ಪ್ರಯತ್ನಗಳೇ ಇನ್ನೂ ಇವೆ. ಅಳುವ ಮಗುವಿಗೆ ತುತ್ತು ತಿನ್ನಿಸುವಾಗ ಪೊಲೀಸರು ಬರುತ್ತಾರೆಂದು ಭಯ ಹುಟ್ಟಿಸುವ ಮೂಲಕವೇ ಇಡೀ ಸಮಾಜದಲ್ಲಿ ಪೊಲೀಸರ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಮಡಿವಂತಿಕೆಯೂ ಸೇರಿಕೊಂಡು ಅದೆಷ್ಟೋ ಪ್ರಕರಣಗಳು ಹೊರ ಬರದೇ ಉಳಿದುಕೊಂಡಿವೆ. ಪೊಲೀಸರು ದುಷ್ಟರಿಗಷ್ಟೇ ಶಿಕ್ಷೆ ನೀಡುತ್ತಾರೆ. ಸಂದರ್ಭಕ್ಕೆ ತಕ್ಕ ಹಾಗೆ ಹೃದಯದಿಂದಲೂ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅಂಥಾದ್ದೊಂದು ಭಾವುಕತೆ ಖಾಕಿಯೊಳಗೆ ಇರೋದಕ್ಕೆ ಮಿಸ್ಸಿಂಗ್ ಬಾಯ್ ಕಥೆಯೇ ಉದಾಹರಣೆ. ಇದೊಂದು ಅದ್ಭುತ ಕಥೆ ಎಂಬುದು ಸುನೀಲ್ ಕುಮಾರ್ ಅವರ ಮಾತು.
ಈ ಸಮಾರಂಭದಲ್ಲಿ ಬಾಲಾಜಿ ವೀರಾಸ್ವಾಮಿ, ನಿರ್ಮಾಪಕ ಕೊಲ್ಲ ಪ್ರವೀಣ್, ಲಹರಿ ವೇಲು, ಸೂರಪ್ಪ ಬಾಬು, ಎನ್.ಎಸ್. ರಾಜ್ ಕುಮಾರ್ ಮುಂತಾದವರೂ ಉಪಸ್ಥಿತರಿದ್ದರು. ವೇಲು ಅವರು ಮಿಸ್ಸಿಂಗ್ ಬಾಯ್ ಕಥೆಯ ತನಿಖಾಧಿಕಾರಿಯಾಗಿದ್ದ ಲವಕುಮಾರ್ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ಆದ ವಿಚಾರವನ್ನೂ ಹೊರಹಾಕಿದರು. ಲವಕುಮಾರ್ ಕರ್ನಾಟಕ ಪೊಲೀಸ್ ಇಲಾಖೆ ಕಂಡ ದಕ್ಷ ಅಧಿಕಾರಿ. ಯಾರ ಮುಲಾಜಿಗೂ ಬೀಳದ ಅವರನ್ನು ಅದೊಂದು ಕಾಲದಲ್ಲಿ ಮಂಗಳೂರಿನ ರಾಜಕಾರಣಿಯೋರ್ವರ ರಕ್ಷಣೆಗೆ ನೇಮಿಸಲಾಗಿತ್ತು. ಈ ರಾಜಕಾರಣಿ ಅದೊಂದು ದಿನ ಅನ್ನ ಬಾರದ ಮಾತನ್ನು ತಪ್ಪಿ ಮಾತಾಡಿದಾಕ್ಷಣ ಸೀದಾ ರೀವಾಲ್ವಾರಿನ ಮೊನೆಯನ್ನು ಆತನ ಬಾಯಿಗೆ ತೂರಿಸಿದ್ದ ಲವಕುಮಾರ್ ಆ ಮಾತನ್ನು ವಾಪಾಸು ತೆಗೆದುಕೊಳ್ಳುವಂತೆ ಅಬ್ಬರಿಸಿದ್ದರಂತೆ. ಇದು ಅವರೆಂಥಾ ಖಡಕ್ ಅಧಿಕಾರಿ ಎಂಬುದರ ಪ್ರತೀಕ ಅಂತ ನೆನಪು ಮಾಡಿಕೊಂಡ ವೇಲು, ಅವರೇ ತನಿಖೆ ನಡೆಸಿದ್ದ ಮಿಸ್ಸಿಂಗ್ ಬಾಯ್ ಕಥೆಯೂ ಭಿನ್ನವಾಗಿದೆ, ರಘುರಾಮ್ ಅವರಿಗೆ ದೊಡ್ಡ ಗೆಲುವು ಸಿಗಲಿ ಅಂತ ಹಾರೈಸಿದರು.
ಈಗಾಗಲೇ ಕೊಂಚ ತಡವಾದರೂ ಕುತೂಹಲವನ್ನು ಕಾಯ್ದಿಟ್ಟುಕೊಂಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಸಿನಿಮಾವನ್ನೇ ಉಸಿರಾಗಿಸಿಕೊಂಡ ರಘುರಾಮ್ ಅವರ ಮಹಾ ಕನಸಿನಂಥಾ ಚಿತ್ರವಿದು. ಸಾಕಷ್ಟು ಏಳು ಬೀಳು ಸಂಕಟಗಳನ್ನು ಕಂಡುಂಡು ಬಂದಿರೋ ರಘುರಾಮ್ ಅವರಿಗೆ ಈ ಮೂಲಕ ಅದ್ಭುತವೆಂಬಂಥಾ ಗೆಲುವು ದಕ್ಕಲೆಂಬುದು ಎಲ್ಲರ ಹಾರೈಕೆಯಾಗಿತ್ತು.
https://www.youtube.com/watch?v=1iv_-J0JEkE #
No Comment! Be the first one.