ಕೆಲ ಚಿತ್ರಗಳು ತೆರೆಗೆ ಬರುವುದು ಕೊಂಚ ತಡವಾದರೂ ಜನರ ಮನಸಿಂದ ಮರೆಯಾಗಿ ಬಿಡುತ್ತವೆ. ಮತ್ತೆ ಕೆಲ ಸಿನಿಮಾಗಳು ಚಿತ್ರೀಕರಣದ ಸಂದರ್ಭದಲ್ಲೇ ಅದೆಂಥಾ ಕ್ರೇಜ಼್ ಹುಟ್ಟು ಹಾಕುತ್ತವೆಂದರೆ, ತಡವಾದಷ್ಟೂ ತಡೆದುಕೊಳ್ಳಲಾರದಂಥಾ ಕುತೂಹಲಕ್ಕೆ ಕಾರಣವಾಗುತ್ತವೆ. ಅಂಥಾದ್ದೇ ನಿರೀಕ್ಷೆ ಮೂಡಿಸಿದ್ದ ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರವೀಗ ತೆರೆ ಕಂಡಿದೆ. ಸುದೀರ್ಘವಾದ ಅವಧಿಯೊಂದರಲ್ಲಿ ಅದೆಂಥಾ ಆರ್ದ್ರ ವಾತಾವರಣ ಹರಡಿಕೊಂಡಿತ್ತೋ ಅದನ್ನು ಹಸಿ ಹಸಿಯಾಗಿಯೇ ಪ್ರೇಕ್ಷಕರ ಬೊಗಸೆಗಿಡುವಲ್ಲಿ ಮಿಸ್ಸಿಂಗ್ ಬಾಯ್ ಗೆದ್ದಿದ್ದಾನೆ.


ಮಿಸ್ಸಿಂಗ್ ಬಾಯ್ ತೊಂಬತ್ತರ ದಶಕದಲ್ಲಿ ನಡೆದಿದ್ದ ಸತ್ಯಘಟನೆಯಾಧಾರಿತ ಚಿತ್ರ. ಇಂಥಾ ಕಥೆಯ ಮೂಲಕ ಭಾವನೆಗಳು ಮುಕ್ಕಾಗದಂತೆ ಕಮರ್ಷಿಯಲ್ ಚೌಕಟ್ಟಿಗೆ ಒಗ್ಗಿಸೋದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕ ಒರಿಜಿನಲ್ ಕಥೆಯೊಳಗೆ ಪರಕಾಯ ಪ್ರವೇಶ ಮಾಡದಿದ್ದರೆ ಖಂಡಿತಾ ಅದು ಸಾಧ್ಯವಾಗುವುದಿಲ್ಲ. ರಘುರಾಮ್ ಮೂಲ ಕಥೆಯ ಆಳಕ್ಕಿಳಿದು ಅದರ ಭಾವಗಳನ್ನೇ ಕ್ಯಾನ್ವಾಸಿಗೆ ಮೆತ್ತಿದಂತೆ ಇಡೀ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ನಿರ್ದೇಶಕನಾಗಿ ಅವರು ಮತ್ತೆ ಗೆದ್ದಿದ್ದಾರೆ.

ನಡೆದ ಘಟನೆಗಳಿಗೆ ತಕ್ಕುದಾಗಿಯೇ ವಿದೇಶದಿಂದ ಕಥೆ ತೆರೆದುಕೊಳ್ಳುತ್ತೆ. ನಂತರ ಕನಸಿನಂಥಾ ದೃಶ್ಯಗಳೊಂದಿಗೆ ಹೆತ್ತವರಿಂದ ತಪ್ಪಿಸಿಕೊಂಡು ರೈಲುಪಾಲಾಗೋ ಪುಟ್ಟ ಹುಡುಗನ ಕಂಗಾಲು ಸ್ಥಿತಿ, ಪೋಷಕರ ಸಂಕಟದೊಂದಿಗೇ ಬಿಚ್ಚಿಕೊಳ್ಳೋ ಕಥೆ ನಂತರ ಕರ್ನಾಟಕದ ಊರೂರು, ಕೇರಿ, ಗಲ್ಲಿಗಳ ನಡುವೆ ಕಲ್ಪಿಸಿಕೊಳ್ಳಲಾಗದಂಥಾ ತಿರುವುಗಳೊಂದಿಗೆ ಪಯಣ ಆರಂಭಿಸುತ್ತೆ. ಈ ಯಾನದಗುಂಟ ಎಲ್ಲಿಯೂ ಪ್ರೇಕ್ಷಕರಿಗೆ ಬೋರು ಹೊಡೆಸೋದಿಲ್ಲ. ಅಷ್ಟಕ್ಕೂ ಪ್ರೇಕ್ಷಕರು ತಾವೊಂದು ಚಿತ್ರವನ್ನ ನೋಡುತ್ತಿದ್ದೇವೆಂಬುದನ್ನೂ ಮರೆತಂತೆ ಅದರ ಭಾವಗಳಲ್ಲಿ ಕಳೆದು ಹೋಗಿ ಬಿಟ್ಟಿರುತ್ತಾರೆ. ಇದು ಮಾಮೂಲಿ ಚಿತ್ರಗಳಿಂದ ಸಾಧ್ಯವಾಗದ ಜಾದೂ.


ಫಸ್ಟ್ ರ‍್ಯಾಂಕ್ ರಾಜು ಚಿತ್ರದ ಅಗಾಧ ಗೆಲುವಿನ ನಂತರದಲ್ಲಿ ಅಂಥಾದ್ದೇ ಪಾತ್ರಗಳಲ್ಲಿ ನಟಿಸುತ್ತಾ ಬಂದವರು ಗುರುನಂದನ್. ಆದರೆ ಮಿಸ್ಸಿಂಗ್ ಬಾಯ್ ಆಗಿ ಅವರು ನಾನಾ ಥರದ ಶೇಡುಗಳಲ್ಲಿ ಆಪ್ತವಾಗಿ ನಟಿಸಿದ್ದಾರೆ. ಗುರುನಂದನ್ ಇಲ್ಲಿ ಬೇರೆಯದ್ದೇ ಥರದಲ್ಲಿ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾರೆ. ರಂಗಾಯಣ ರಘು ಮತ್ತು ರವಿಶಂಕರ್ ಗೌಡ ಇಡೀ ಸಿನಿಮಾಗೆ ಜೀವಕಳೆ ತಂದುಕೊಟ್ಟಿದ್ದಾರೆ. ಕಡೆಯ ಒಂದೆರಡು ದೃಶ್ಯಗಳಲ್ಲಿ ಬರುವ ತಾಯಿಯ ಪಾತ್ರವಿದೆಯಲ್ಲಾ? ಭಾಗೀರಥಿ ಬಾಯಿ ಕದಂ ಅನ್ನೋ ಹೆಣ್ಣುಮಗಳಿಗೆ ನಟನೆಯಲ್ಲಿ ಅದೇನು ಶಕ್ತಿಯೋ ಏನೋ… ನಿಜಕ್ಕೂ ಮಗನನ್ನು ಕಳೆದುಕೊಂಡ ತಾಯಿಯಂತೆ ಭಾವನೆಗಳನ್ನು ಹೊಮ್ಮಿಸಿ ಎಂಥಾ ಗಟ್ಟಿಗರ ಕಣ್ಣಲ್ಲೂ ನೀರುಕ್ಕುವಂತೆ ಮಾಡುತ್ತಾರೆ. ಆ ಮೂಲಕ ಕಡೇ ಹತ್ತು ನಿಮಿಷದಲ್ಲಿ ಬಂದರೂ ಅಮ್ಮನಂತೆ ಅಮ್ಮನಂತೆ ಬಿಗಿದಪ್ಪಿಬಿಡುತ್ತಾರೆ. ಪೊಲೀಸ್ ಇಲಾಖೆಯೊಳಗೂ ಮಾನವೀಯತೆಯೆಂಬುದು ಯಾವ ಪ್ರಮಾಣದಲ್ಲಿರುತ್ತೆ ಅನ್ನೋದನ್ನೂ ಈ ಚಿತ್ರ ಅನಾವರಣಗೊಳಿಸುತ್ತೆ. ಕ್ಯಾಮೆರಾ ಕೆಲಸ ನಿಭಾಯಿಸಿರುವ ಜಗದೀಶ್ ವಾಲಿ ವಿದೇಶವಿರಲಿ, ಇಂಡಿಯಾ ಆಗಲಿ ಕಣ್ಣಮುಂದೆ ತಂದು ಕೂರಿಸುತ್ತಾರೆ. ಹರಿಕೃಷ್ಣ ಸಂಗೀತದ ಜೋಪಾನ ಜೋಪಾನ ನನ್ನ ಮಗುವೇ ಹಾಡಂತೂ ಯಾವತ್ತಿಗೂ ಮನಸ್ಸಿನಲ್ಲುಳಿಯಲಿದೆ.


ನಿರ್ದೇಶಕ ರಘುರಾಮ್ ಬಗ್ಗೆ ಇನ್ನೊಂದಿಷ್ಟು ಹೇಳೋದಾದರೆ, ಇವರ ಸಿನಿಮಾಗಳಲ್ಲಿ ಜರ್ನಿ ಗ್ಯಾರೆಂಟಿ ಅನ್ನೋದನ್ನು ಈ ಸಿನಿಮಾ ಕೂಡಾ ಸಾಬೀತು ಮಾಡಿದೆ. ಜಗತ್ತಿನ ಏಳು ಅದ್ಭುತಗಳನ್ನು ಮೊದಲ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿದ್ದ ರಘುರಾಮ್ ವಿದೇಶದಿಂದ ಬಂದವರಿಗೆ ಕರ್ನಾಟಕದ ಒಳಗೇ ಸಂಚಾರ ಮಾಡಿಸಿ, ಒಂದೊಂದು ಊರಿನ ಘಮವನ್ನೂ ನೋಡುಗರೆದೆಗೆ ತಲುಪಿಸಿದ್ದಾರೆ.
ಒಟ್ಟಾರೆಯಾಗಿ ವಿಭಿನ್ನವಾದ, ಸದಭಿರುಚಿಯ ಚಿತ್ರವೊಂದನ್ನು ನೋಡಿದ ತೃಪ್ತಿ ಮಿಸ್ಸಿಂಗ್ ಬಾಯ್ ಕಡೆಯಿಂದ ಖಂಡಿತಾ ಮಿಸ್ ಆಗೋದಿಲ್ಲ.

CG ARUN

ಸಿನಿಬಜ್ ವರದಿಯ ಫಲಶ್ರುತಿ : ಹಳೆಯ ಗೆಳೆಯ ಅನಿಲ್ ಸಮಸ್ಯೆಗೆ ಸ್ಪಂದಿಸಿದರು ದರ್ಶನ್

Previous article

ನಡು ಬೇಸಗೆಯಲ್ಲೂ ನಡುಕ ಹುಟ್ಟಿಸೋ ಉದ್ಘರ್ಷ!

Next article

You may also like

Comments

Leave a reply

Your email address will not be published. Required fields are marked *